Karnataka Weather: ಬೆಂಗಳೂರು ಸೇರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂದು ಚಳಿ ಮತ್ತು ಒಣಹವೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಬೆಂಗಳೂರು ಸೇರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂದು ಚಳಿ ಮತ್ತು ಒಣಹವೆ

Karnataka Weather: ಬೆಂಗಳೂರು ಸೇರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂದು ಚಳಿ ಮತ್ತು ಒಣಹವೆ

ಬೆಂಗಳೂರು ಸೇರಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇಂದು ಮಳೆ ಇಲ್ಲ. ರಾತ್ರಿ ಮತ್ತು ಬೆಳಗ್ಗಿನ ಹೊತ್ತು ಚಳಿ ಮತ್ತು ಹಗಲು ಒಣಹವೆ ಮುಂದುವರಿಯಲಿದೆ. ಕೆಲವೆಡೆ ಬಾಗಶಃ ಮೋಡಕವಿದ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಇಂದಿನ ಹವಾಮಾನ (ಜ.11) ಸಾಂಕೇತಿಕ ಚಿತ್ರ
ಕರ್ನಾಟಕದಲ್ಲಿ ಇಂದಿನ ಹವಾಮಾನ (ಜ.11) ಸಾಂಕೇತಿಕ ಚಿತ್ರ (PTI/Pixels)

ಕರ್ನಾಟಕದಲ್ಲಿ ಮಳೆಯ ವಾತಾವರಣ ಮರೆಯಾಗಿದ್ದು, ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಚಳಿಗಾಲದ ಅನುಭವ. ಕರಾವಳಿಯ ಮೂರು ಜಿಲ್ಲೆಗಳ ಒಂದೆರಡು ಕಡೆ ಇಂದು (ಜ.11) ಬೆಳಗ್ಗೆ 8.30ರ ತನಕ ಮಳೆ ಬೀಳಬಹುದು. ಆದರೆ, ನಂತರ ಮಳೆ ಇಲ್ಲ. ಮುಂದಿನ ಏಳು ದಿನಗಳ ಹವಾಮಾನ ಮುನ್ಸೂಚನೆಯನ್ನು ಭಾರತದ ಹವಾಮಾನ ಇಲಾಖೆ ನೀಡಿದ್ದು, ಚಳಿಗಾಲದ ಅನುಭವ ನಿರೀಕ್ಷಿಸಬಹುದು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿಯ ಮೂರು ಜಿಲ್ಲೆಗಳ ಕೆಲವೆಡೆ ಮತ್ತು ಬಹುಪಾಲು ಜಿಲ್ಲೆಗಳ ಕೆಲವೆಡೆ ಕಳೆದ ಕೆಲವು ದಿನಗಳಿಂದ ಸಾಧಾರಣ ಅಥವಾ ಚದುರಿದ ಮಳೆಯಾಗಿತ್ತು. ಒಂದು ರೀತಿ ಮಳೆಗಾಲದ ಅನುಭವ ನೀಡಿದ್ದ ಮಳೆ ಇನ್ನು ಒಂದು ವಾರದ ಮಟ್ಟಿಗೆ ಇಲ್ಲ. ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣದ ಅನುಭವ ಇರಬಹುದು. ರಾತ್ರಿ ಮತ್ತು ಬೆಳಗ್ಗೆ ಸೂರ್ಯೋದಯದ ಆಸುಪಾಸಿನಲ್ಲಿ ಚಳಿ ಅನುಭವ ನೀಡಿದರೆ, ಬಳಿಕ ಬಿಸಿಲು ಮತ್ತು ಒಣ ಹವೆ ಇರಲಿದೆ.

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು (ಜ.11) ಮುಂಜಾನೆ, ಬೆಳಗ್ಗಿನ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ. ಸಹಜವಾಗಿಯೇ ಕೆಲವು ಕಡೆಗಳಲ್ಲಿ ಸಂಜೆಯಾಗುತ್ತಿದ್ದಂತೆ ಚಳಿ ಆಗಲಿದ್ದು, ತಡರಾತ್ರಿಯಾಗುತ್ತಿದ್ದಂತೆ ಚಳಿಯ ತೀವ್ರತೆ ಹೆಚ್ಚಾಗಬಹುದು. ಬಹುತೇಕ ಕಡೆಗಳಲ್ಲಿ ಮುಂದಿನ 48 ಗಂಟೆ ಅವಧಿಯಲ್ಲಿ ವಾತಾವರಣದ ಉಷ್ಣಾಂಶವು 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಗುರುವಾರ (ಜ.11) ಬೆಳಗ್ಗೆ 8.30ರಿಂದ ಜನವರಿ 12 ರ ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಚಳಿ ಮತ್ತು ಒಣ ಹವೆ ಇರಲಿದೆ. ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದು ಎಂದು ವರದಿ ಹೇಳಿದೆ.

ಕರಾವಳಿ ಕರ್ನಾಟಕದ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ನಾಲ್ಕಾರು ದಿನಗಳಲ್ಲಿ ಕೆಲವು ಕಡೆ ಸಾಧಾರಣದಿಂದ ಭಾರಿ ಮಳೆಯಾಗಿತ್ತು. ಈ ವಾತಾವರಣದ ನಡುವೆ, ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಿತ್ತು. ಈ ಅನುಭವ ಇನ್ನೂ ಎರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ ಗದಗ, ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಚಳಿ ಮತ್ತು ಒಣಹವೆ ಇರಲಿದೆ. ಇದೇ ರೀತಿ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಕೋಲಾರ, ರಾಮನಗರ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರುಗಳಲ್ಲಿ ಚಳಿಯ ವಾತಾವರಣ ಇರಲಿದೆ. ಬಹುತೇಕ ಜಿಲ್ಲೆಗಳಲ್ಲಿ ವಾತಾವರಣದ ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಿರಲಿದೆ ಎಂದು ವರದಿ ಹೇಳಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ಹವಾಮಾನ ಇಂದು (ಜ.11)

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ಜ.11) ಮಳೆ ಇರಲ್ಲ. ಆದರೆ ಕೆಲವು ಕಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಚಳಿ ಮತ್ತು ಒಣಹವೆ ಮುಂದುವರಿಯಲಿದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆ ಹೊತ್ತು ಮಂಜುಕವಿದ ವಾತಾವರಣ ಇರಲಿದೆ.

ಈ ಎರಡೂ ಜಿಲ್ಲೆಗಳಲ್ಲಿ ವಾತಾವರಣದ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ. ನಿನ್ನೆ (ಜ.10) ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 25.4 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17.5 ಡಿಗ್ರಿ ಸೆಲ್ಶಿಯಸ್ ಇತ್ತು. ಅದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 27.5 ಮತ್ತು ಕನಿಷ್ಠ ತಾಪಮಾನ 17.6 ಡಿಗ್ರಿ ಸೆಲ್ಶಿಯಸ್ ಇತ್ತು. ಎಂದು ಬೆಂಗಳೂರ ಹವಾಮಾನ ಕೇಂದ್ರದ ವಿಜ್ಞಾನಿ ಡಾ.ರಾಜವೇಲ್‌ ಮಣಿಕ್ಕಮ್‌ ತಿಳಿಸಿದ್ದಾರೆ.

Whats_app_banner