ಮೋರಿಗೆ ಬೈಕ್ ಡಿಕ್ಕಿ, ಮೈಸೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವು: ಕೊಡಗು ಸಂಪಾಜೆ ಬಳಿ ದುರಂತ
Aug 05, 2024 02:55 PM IST
ಮೋರಿಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ
ರಸ್ತೆ ಬದಿಯ ಮೋರಿಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಸಂಪಾಜೆ ಅರಣ್ಯ ಇಲಾಖೆ ಕಚೇರಿ ಬಳಿ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳ ನಗ್ನ ಫೋಟೋಗಳನ್ನು ವಾಟ್ಸಾಪ್ ಮೂಲಕ ಶೇರ್ ಮಾಡಲಾದ ಘಟನೆ ನಡೆದಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ನಿಯಂತ್ರಣ ತಪ್ಪಿದ ಬೈಕ್‌ವೊಂದು ಮೋರಿಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಸಂಪಾಜೆ ಅರಣ್ಯ ಇಲಾಖಾ ಕಚೇರಿ ಬಳಿ ಸಂಭವಿಸಿದೆ. ಮೈಸೂರು ಮೂಲದ ಪವನ್ ಹಾಗೂ ಮನೋಜ್ ಮೃತ ದುರ್ದೈವಿಗಳು. ಯುವಕರು ಮೈಸೂರಿನಿಂದ ಧರ್ಮಸ್ಥಳಕ್ಕೆ ಬೈಕ್‍ನಲ್ಲಿ ತೆರಳುತ್ತಿದ್ದರು. ರಾತ್ರಿ ವೇಳೆ ಕೊಯನಾಡಿನ ಫಾರೆಸ್ಟ್ ಐಬಿ ಬಳಿ ಮುಖ್ಯರಸ್ತೆ ಬದಿಯಲ್ಲಿದ್ದ ಮೋರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ದುರದೃಷ್ಟವಶಾತ್ ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದಾರೆ. ಭಾನುವಾರ (ಆಗಸ್ಟ್ 4) ರಾತ್ರಿ ಸುಮಾರು 9 ರಿಂದ 10 ಗಂಟೆಯ ನಡುವೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಸೋಮವಾರ ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ಈ ಸಂಬಂಧ ಕೊಡಗು ಸಂಪಾಜೆ ಪೊಲೀಸ್ ಉಪಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸಾಪ್ ಮೂಲಕ ನಗ್ನ ಫೋಟೋ ಹಂಚಿಕೆ: ದೂರು ದಾಖಲು
ಬಾಲಕಿಯೊಬ್ಬಳ ನಗ್ನ ಫೋಟೋಗಳನ್ನು ಪಡೆದುಕೊಂಡು ಅದನ್ನು ವಾಟ್ಸಾಪ್ ಮೂಲಕ ಶೇರ್ ಮಾಡಿರುವ ಅಮಾನವೀಯ ಮತ್ತು ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸವಣಾಲು ನಿವಾಸಿ ನಾಗೇಶ್ ಎಂಬಾತ ಈ ದುಷ್ಕೃತ್ಯ ನಡೆಸಿದ್ದು, ಆತನ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ನಾಗೇಶ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈತ ಸ್ನಾಪ್ ಚಾಟ್ ಮೂಲಕ ಬಾಲಕಿ ಜೊತೆ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದ ಎಂದು ಹೇಳಲಾಗಿದ್ದು, ಆಕೆಯನ್ನು ಯಾಮಾರಿಸಿ ನಗ್ನ ಫೋಟೋಗಳನ್ನು ವಾಟ್ಸಾಪ್ ಮೂಲಕ ಪಡೆದುಕೊಂಡಿದ್ದಾನೆ. ಇದಾದ ನಂತರ ಬಾಲಕಿಯನ್ನು ಸಂಶಯದ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದ್ದಾನೆ. ಇದರಿಂದ ನೊಂದ ಬಾಲಕಿ ನಾಗೇಶ್ ಜೊತೆಗಿನ ಸಂಪರ್ಕ ಕಡಿದುಕೊಳ್ಳಲು ಪ್ರಯತ್ನಿಸಿದ್ದಾಳೆ.
ಬಾಲಕಿ ತನ್ನ ಜೊತೆ ಸಂಪರ್ಕ ಕಡಿದುಕೊಳ್ಳಲು ಪ್ರಯತ್ನ ಪಡುತ್ತಿದ್ದಾಳೆ ಎಂಬುದನ್ನು ತಿಳಿದ ನಾಗೇಶ, ಬಾಲಕಿಯ ನಗ್ನ ಫೋಟೋಗಳನ್ನು ಎಲ್ಲರಿಗೂ ಶೇರ್ ಮಾಡುವುದಾಗಿ ಬೆದರಿಸಿದ್ದ. ಇದರಿಂದ ಹೆದರಿದ ಬಾಲಕಿ ದಯವಿಟ್ಟು ಆ ಫೋಟೋಗಳನ್ನು ಹಂಚಿಕೊಳ್ಳದಂತೆ ಮನವಿ ಮಾಡಿದ್ದಾಳೆ. ಇದನ್ನೇ ದುರುಪಯೋಗ ಪಡಿಸಿಕೊಂಡ ನಾಗೇಶ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ. ಬಾಲಕಿ ಹಣ ನೀಡದ್ದಕ್ಕೆ ಆಕೆಯ ನಗ್ನ ಫೋಟೋಗಳನ್ನು ತನ್ನ ಗೆಳೆಯರಿಗೆ ಶೇರ್ ಮಾಡಿದ್ದಲ್ಲದೆ, ಎಲ್ಲೆಡೆ ವೈರಲ್ ಮಾಡಿಸಿದ್ದಾನೆ ಎಂದು ನೊಂದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇನ್ನು ಅಪ್ರಾಪ್ತೆ ನೀಡಿದ ದೂರಿನನ್ವಯ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಕ್ಕಿಲದಲ್ಲಿ ಗುಡ್ಡೆ ಕುಸಿತ, ಎರಡು ಮನೆಗಳಿಗೆ ಹಾನಿ
ಕುಕ್ಕಿಲ ಎಂಬಲ್ಲಿ ಗುಡ್ಡ ಕುಸಿದು ಎರಡು ಮನೆಗಳಿಗೆ ಭಾಗಶಃ: ಹಾನಿಯಾಗಿದೆ. ಮನೆಯವರೆಲ್ಲ ಅದೃಷ್ಟವಶಾತ್ಪಾರಾಗಿದ್ದಾರೆ. ವಿಟ್ಲದ ಪಡ್ನೂರು ಗ್ರಾಮದ ಕುಕ್ಕಿಲದಲ್ಲಿ ಗುಡ್ಡ ಕುಸಿದಿದೆ. ಕುಕ್ಕಿಲ ನಿವಾಸಿ ಕಟ್ಟಪುಣಿ ಅಬ್ದುಲ್ಲ ಹಾಜಿ ಎಂಬುವವರ ಮನೆ ಬಳಿಯ ಗುಡ್ಡ ಕುಸಿದಿದೆ. ಅದೇ ರೀತಿ ಅಬ್ದುಲ್ ರಹಿಮಾನ್ ಎಂಬುವವರ ಮನೆ ಹಿಂಬದಿಯ ಎತ್ತರದ ಗುಡ್ಡ ಕುಸಿದು ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ದುರ್ಘಟನೆ ವೇಳೆ ದೊಡ್ಡ ಶಬ್ಧ ಕೇಳಿ ಬಂದಿದ್ದರಿಂದ ಮನೆಯವರೆಲ್ಲ ಹೊರಗಡೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಭಾಗ