ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪಿಂಕ್ ಟಾಯ್ಲೆಟ್ ಕಾರ್ಯಾರಂಭ; ಇದು ಕೇವಲ ಶೌಚಗೃಹವಲ್ಲ, ಇಲ್ಲಿದೆ ಹಲವು ಸೌಕರ್ಯ
Mar 19, 2024 01:25 PM IST
ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪಿಂಕ್ ಟಾಯ್ಲೆಟ್
- ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ‘ಪಿಂಕ್ ಟಾಯ್ಲೆಟ್’ ಬಿ.ಸಿ.ರೋಡಿನ ಆಡಳಿತ ಸೌಧದ ಪಕ್ಕ ಕಾರ್ಯಾರಂಭಗೊಂಡಿದೆ. ಇದು ಕೇವಲ ಶೌಚಗೃಹವಷ್ಟೇ ಅಲ್ಲ, ಇಲ್ಲಿ ಮಹಿಳೆಯರಿಗೆ ಹಲವು ಸೌಕರ್ಯಗಳಿವೆ. ಇಲ್ಲಿದೆ ಏನೆಲ್ಲಾ ಇದೆ ಎಂಬುದರ ವಿಸ್ಕೃತ ವರದಿ ಇಲ್ಲಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ನಿರ್ಮಾಣಗೊಂಡು ಸುಮಾರು ಆರು ತಿಂಗಳ ಬಳಿಕ ಕೊನೆಗೂ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪಿಂಕ್ ಟಾಯ್ಲೆಟ್ ಬಂಟ್ವಾಳದ ಕೇಂದ್ರಭಾಗವಾದ ಬಿ.ಸಿ.ರೋಡಿನ ಆಡಳಿತ ಸೌಧದ ಪಕ್ಕ ಕಾರ್ಯಾರಂಭಗೊಂಡಿದೆ.
ಜನನಿಬಿಡ ಪ್ರದೇಶ, ಮಾರುಕಟ್ಟೆ ಹಾಗೂ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಸೇರುವ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಗುಲಾಬಿ ಶೌಚಾಲಯಗಳ ನಿರ್ಮಾಣದ ಭಾಗವಾಗಿ ಮೈಸೂರಿನಲ್ಲಿ ಮೊದಲ ಪಿಂಕ್ ಟಾಯ್ಲೆಟ್ ನಿರ್ಮಾಣವಾಗಿತ್ತು. ಅಮೃತ ನಿರ್ಮಲ ನಗರ ಯೋಜನೆಯಲ್ಲಿ ಪಿಂಕ್ ಟಾಯ್ಲೆಟ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಬಂಟ್ವಾಳ ಪುರಸಭೆಗೆ ಅಮೃತ ನಿರ್ಮಲ ನಗರ ಯೋಜನೆಯ ಮೂಲಕ ಬಂಟ್ವಾಳ ಪುರಸಭೆಗೆ ಬಂದ 1 ಕೋಟಿ ಅನುದಾನದಲ್ಲಿ 25.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ದಕ್ಷಿಣ ಕನ್ನಡದ ಮೊದಲ ಪಿಂಕ್ ಟಾಯ್ಲೆಟ್‌ನಲ್ಲಿ ಏನೇನಿದೆ?
ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿರುವ ಈ ಪಿಂಕ್ ಟಾಯ್ಲೆಟ್ ಕೇವಲ ಶೌಚಾಲಯವಲ್ಲ. ಬಿ.ಸಿ.ರೋಡಿಗೆ ಹತ್ತಾರು ಕೆಲಸಗಳಿಗೆ ಆಗಮಿಸುವ ಮಹಿಳೆಯರಿಗೆ ಇದರಿಂದ ಅನುಕೂಲವೂ ಆಗುತ್ತಿದೆ. ಹಾಲುಣಿಸುವ ಮಕ್ಕಳಿರುವ ತಾಯಂದಿರು ಆಗಮಿಸಿದ ಸಂದರ್ಭ ಅವರಿಗೆ ಸರಿಯಾದ ಫೀಡಿಂಗ್ ಏರಿಯಾಗಳು ದೊರಕುವುದಿಲ್ಲ. ಸದ್ಯಕ್ಕೆ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಒಂದು ಫೀಡಿಂಗ್ ಏರಿಯಾ ಇದ್ದರೂ ಎಲ್ಲರಿಗೂ ಅಲ್ಲಿಗೆ ಹೋಗಲು ಅನಾನುಕೂಲ. ಪೇಟೆಗೆ ಪುಟ್ಟ ಮಗುವಿನೊಂದಿಗೆ ಕೋರ್ಟು, ಕಚೇರಿ, ಬ್ಯಾಂಕುಗಳಿಗೆ ಬಂದ ತಾಯಂದಿರಿಗೆ ಇಲ್ಲಿ ಹಾಲುಣಿಸುವುದಕ್ಕೆ ಪ್ರತ್ಯೇಕ ಜಾಗ ಮೀಸಲಾಗಿದೆ. ಅಲ್ಲದೆ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ನ್ಯಾಪ್‌ಕಿನ್ ವ್ಯವಸ್ಥೆಯೂ ಇದೆ. ಸುಸಜ್ಜಿತ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ದೂರದೂರಿನಿಂದ ಮಕ್ಕಳೊಂದಿಗೆ ಬರುವವರು ಇಲ್ಲಿ ಹಾಲುಣಿಸಬಹುದು. ಅಲ್ಲದೇ ಇಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಇಡಲಾಗಿರುತ್ತದೆ. ಜೊತೆಗೆ ಬಟ್ಟೆ ಬದಲಾಯಿಸಿಕೊಳ್ಳಲು ಡ್ರೆಸಿಂಗ್ ರೂಂ ಇದೆ. ಇದು ಸಂಪೂರ್ಣ ಹವಾನಿಯಂತ್ರಿತ. ಗರಿಷ್ಠ ಶುಲ್ಕ 10 ರೂ.
ಸಾರ್ವಜನಿಕ ಶೌಚಗೃಹವೂ ಬಳಕೆಗೆ, ಖಾಸಗಿಗೆ ಗುತ್ತಿಗೆ
ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿರುವ ಸಾರ್ವಜನಿಕ ಶೌಚಗೃಹವೂ ಬಳಕೆಗೆ ತೆರೆದುಕೊಂಡಿದೆ. ಬಿ.ಸಿ.ರೋಡ್ ಬಸ್ ನಿಲ್ದಾಣದ ಪಕ್ಕ, ಫ್ಲೈಓವರ್ ಅಡಿಯಲ್ಲಿ ಸಾರ್ವಜನಿಕರಿಗೆ ಶೌಚಗೃಹವಿದ್ದರೆ, ಪಿಂಕ್ ಟಾಯ್ಲೆಟ್ ಕೇವಲ ಮಹಿಳೆಯರ ಬಳಕೆಗೆ ಇರುವಂಥದ್ದು. ಇವುಗಳ ಗುತ್ತಿಗೆಯನ್ನು ಶುಚಿ ಇಂಟರ್‌ನ್ಯಾಷನಲ್ ವಹಿಸಿಕೊಂಡಿದ್ದು, ಬಳಕೆಗೆ ಸೇವಾಶುಲ್ಕವನ್ನೂ ನಿಗದಿಪಡಿಸಲಾಗಿದೆ.
ಪಿಂಕ್ ಟಾಯ್ಲೆಟ್ ಅನ್ನು ಮಹಿಳೆಯರ ಬಳಕೆಗೆಂದೇ ಆರಂಭಿಸಲಾಗಿದ್ದು, ಇದೀಗ ಬಳಕೆಗೆ ಲಭ್ಯ. ಇದರಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನವಾಗಿದೆ. ಗುತ್ತಿಗೆಯನ್ನು ಖಾಸಗಿ ಸಂಸ್ಥೆ ಪಡೆದುಕೊಂಡಿದ್ದು, ನಿರ್ವಹಣೆಯನ್ನು ಮಾಡುತ್ತಿದೆ ಎನ್ನುತ್ತಾರೆ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ.
ʼಬಿ.ಸಿ. ರೋಡಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಕಟ್ಟಡದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಸರಿಯಾದ ಶೌಚಗೃಹವೂ ಇರುವುದಿಲ್ಲ. ಮಕ್ಕಳನ್ನು ಕರೆದುಕೊಂಡು ಬರುವವರಿಗೂ ಸರಿಯಾದ ರೆಸ್ಟ್ ರೂಮ್ ಇಲ್ಲ. ಪಿಂಕ್ ಟಾಯ್ಲೆಟ್ ಈ ಕೊರತೆಯನ್ನು ನೀಗಿಸಿದ್ದು, ಇದರ ಬಳಕೆ ಮೊತ್ತವೂ ಸೌಲಭ್ಯವನ್ನು ಗಮನಿಸಿದರೆ ಅತ್ಯಲ್ಪʼ ಎಂದು ಬಳಕೆದಾರರಾದ ಜಲಜಾಕ್ಷಿ ಹೇಳುತ್ತಾರೆ.