ಕಿಕ್ಕಿರಿದು ತುಂಬಿದ್ದ ಬಸ್ನೊಳಗೆ ರೌಡಿಗಳಂತೆ ಬಡಿದಾಡಿಕೊಂಡ ಖಾಸಗಿ ಬಸ್ ಸಿಬಂದಿ: ಸ್ಕ್ರೂಡ್ರೈವರ್ನಿಂದ ಹಲ್ಲೆಗೆ ಯತ್ನಿಸಿದ ವ್ಯಕ್ತಿ
Oct 13, 2024 06:35 PM IST
ಕಿಕ್ಕಿರಿದು ತುಂಬಿದ್ದ ಬಸ್ನೊಳಗೆ ರೌಡಿಗಳಂತೆ ಬಡಿದಾಡಿಕೊಂಡ ಖಾಸಗಿ ಬಸ್ ಸಿಬಂದಿ
- Mangalore News: ಬಸ್‌ನೊಳಗಡೆ ಪ್ರಯಾಣಿಕರು ಇದ್ದಾಗಲೇ ಖಾಸಗಿ ಬಸ್‌ಗಳ ಚಾಲಕ ಮತ್ತು ನಿರ್ವಾಹಕರು ಹೊಡೆದಾಡಿಕೊಂಡಿರುವ ಘಟನೆ ಮಂಗಳೂರಿನ ಬಲ್ಮಠದ ಬಳಿ ನಡೆದಿದೆ.
ಮಂಗಳೂರು: ಬಸ್‌ನೊಳಗಡೆ ಪ್ರಯಾಣಿಕರು ಇದ್ದಾಗಲೇ ಖಾಸಗಿ ಬಸ್‌ಗಳ ಚಾಲಕ ಮತ್ತು ನಿರ್ವಾಹಕರು ಹೊಡೆದಾಡಿಕೊಂಡಿರುವ ಘಟನೆ ಮಂಗಳೂರಿನ ಬಲ್ಮಠದ ಬಳಿ ನಡೆದಿದೆ. ಬಸ್‌ನೊಳಗಡೆ ಇದ್ದ ವಿಡಿಯೋದಲ್ಲಿ ಇವರ ಹೊಡೆದಾಟದ ದೃಶ್ಯ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಓರ್ವ ಬಸ್ ಚಾಲಕ ಉಗುಳಿದ್ದು, ಮತ್ತೊಂದು ಬಸ್ನ ನಿರ್ವಾಹಕನ ಮೇಲೆ ಬಿದ್ದಿದೆ ಎಂದು ಆರೋಪಿಸಿ ವಿಟ್ಲ-ಮಂಗಳೂರಿಗೆ ಬರುವ ಖಾಸಗಿ ಬಸ್ ಚಾಲಕ-ನಿರ್ವಾಹಕರ ನಡುವೆ ಈ ಹೊಡೆದಾಟ ನಡೆದಿದೆ. ಉಗುಳಿದ್ದು ತನ್ನ ಮೈಮೇಲೆ ಬಿದ್ದಿದೆ ಎಂದು ನಿರ್ವಾಹಕ ಮತ್ತೊಂದು ಬಸ್‌ನೊಳಗಡೆ ನುಗ್ಗಿ ಬಸ್ ಡ್ರೈವರ್ ಅನ್ನು ಎಳೆದು ಹಾಕಿದ್ದಾನೆ. ಇದರಿಂದ ಇಬ್ಬರು ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವೇಳೆ ಓರ್ವ ಸ್ಕೂ ಡ್ರೈವರ್‌ನಲ್ಲಿ ಚುಚ್ಚಿ ಹಲ್ಲೆಗೆ ಯತ್ನ ನಡೆಸಿದ್ದಾನೆ. ಬಸ್‌ನೊಳಗಡೆ ಪ್ರಯಾಣಿಕರಿದ್ದಾಗಲೇ ಚಾಲಕ-ನಿರ್ವಾಹಕರು ರೌಡಿ ಕಾಳಗ ನಡೆಸಿದ್ದರಿಂದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೇ ಪ್ರಯಾಣಿಕರೊಂದಿಗೂ ರೌಡಿಗಳ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಡಿಸಿಪಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಅಂದರ್
ಧಾರವಾಡ: ಇತ್ತೀಚೆಗೆ ಈ ಹನಿಟ್ರ್ಯಾಪ್ ಎನ್ನುವ ವಂಚನೆ ಜೋರಾಗಿಯೇ ನಡೆಯುತ್ತಿದೆ. ಹೆಣ್ಣು ಮಕ್ಕಳನ್ನು ಮುಂದೆ ಬಿಟ್ಟು ಹಣ ಪೀಕುವ ದಂಧೆ ಇದಾಗಿದ್ದು, ಇಂತದ್ದೇ ಕೆಲಸ ಮಾಡುತ್ತಿದ್ದ ತಂಡವೊಂದನ್ನು ನಗರದ ವಿದ್ಯಾಗಿರಿ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹೀಗೆ ಪೊಲೀಸ್ ವಶದಲ್ಲಿರುವ ಇವರೇ ಬಂಧಿತ ಆರೋಪಿಗಳು. ಇದರಲ್ಲಿ ಒಬ್ಬ ಸ್ವತಃ ತನ್ನ ಪತ್ನಿಯನ್ನೇ ಬಳಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಎಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅನ್ಯ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ದೂರವಾಣಿ ಮೂಲಕವೇ ಸಂಪರ್ಕಿಸಿ ಆತನೊಂದಿಗೆ ಮಹಿಳೆಯರು ಸ್ನೇಹ ಬೆಳೆಸಿದ್ದರು. ಆ ಹೆಣ್ಣು ಮಕ್ಕಳೊಂದಿಗೆ ಆ ವ್ಯಕ್ತಿ ಇದ್ದಿದ್ದನ್ನು ವೀಡಿಯೋ ಮಾಡಿಕೊಂಡು ಈ ಇಡೀ ತಂಡ ಆತನ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿತ್ತು. ಆಗಾಗ ವೀಡಿಯೋ ರಿಲೀಸ್ ಮಾಡುವುದಾಗಿ ಹೇಳಿ ಆತನಿಂದ ಲಕ್ಷಗಟ್ಟಲೇ ಹಣ ಪೀಕಿದ್ದರು.
ಸದ್ಯ ಇಲ್ಲಿನ ವಿದ್ಯಾಗಿರಿ ಠಾಣೆ ಪೊಲೀಸರು, ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಇರುವ ತಂಡವನ್ನು ವಶಕ್ಕೆ ಪಡೆದಿದ್ದಾರೆ. ಮೊದಲು ಸಾಮಾಜಿಕ ಜಾಲತಾಣದ ಮೂಲಕ ಸ್ನೇಹ ಮಾಡಿ, ಬಳಿಕ ಅವರನ್ನು ಪುಸಲಾಯಿಸಿ ಒಂದೆಡೆ ಭೇಟಿ ಮಾಡುತ್ತಿದ್ದರು. ಭೇಟಿ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಿಸಿ ಅದನ್ನು ಬಿಡುಗಡೆ ಮಾಡುವ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ನಗರದ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆಕಾಶ ಉಪ್ಪಾರ, ರೇಣುಕಾ ಉಪ್ಪಾರ, ಮಲ್ಲಿಕ್ ಜಾನ್ ನದಾಫ್ ಹಾಗೂ ಗಜಾಲಾಬಾನು ನಗರಿ ಎಂಬವರನ್ನು ಹೆಡೆಮುರಿ ಕಟ್ಟಿದ್ದಾರೆ. ಇದರಲ್ಲಿ ಆಕಾಶ ಮತ್ತು ರೇಣುಕಾ ಪತಿ, ಪತ್ನಿಯಾಗಿದ್ದಾರೆ. ಸದ್ಯ ಬಂಧಿತರಿಂದ ಚಿನ್ನದ ಆಭರಣ, ಬೆಳ್ಳಿ, ನಗದು, ಕಾರು ಸೇರಿದಂತೆ ಒಟ್ಟು 14.73 ಲಕ್ಷ ಮೌಲ್ಯದ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ.
ಈ ಗ್ಯಾಂಗ್‌ನವರಿಂದ ಬೇರೆ ಬೇರೆ ಜಿಲ್ಲೆಗಳ ಅನೇಕರು ಕೂಡ ಮೋಸಕ್ಕೆ ಒಳಗಾಗಿದ್ದಾರೆ. ಆ ಪೈಕಿ ವಿದ್ಯಾಗಿರಿ ಠಾಣೆಯಲ್ಲೂ ದೂರು ದಾಖಲಾಗಿತ್ತು. ಇವರ ವಿರುದ್ಧ 4 ಪ್ರಕರಣಗಳು ದಾಖಲಾಗಿವೆ. ಸದ್ಯ ಬಂಧಿತರಾಗಿರುವ ಈ ಗ್ಯಾಂಗ್‌ನಿಂದ ಮತ್ತಷ್ಟು ಜನ ವಂಚನೆಗೆ ಒಳಗಾಗಿರುವ ಸಾಧ್ಯತೆ ಇದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.