ಕಳೆದ ನಾಲ್ಕು ದಿನಗಳಲ್ಲಿ ಹೃದಯಾಘಾತದಿಂದ ನಾಲ್ವರು ಸಾವು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಪ್ರಕರಣಗಳು
Mangalore News: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಹೃದಯಾಘಾತದಿಂದ ಮೃತಪಟ್ಟಿರುವ ಪ್ರಕರಣಗಳು ದಾಖಲಾಗಿವೆ.
ಮಂಗಳೂರು: ಕಳೆದ ನಾಲ್ಕು ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ನಾಲ್ಕು ಪ್ರತ್ಯೇಕ ಪ್ರಕರಣಗಳು ದಕ್ಣಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದೆ. ಇದಲ್ಲದೆ, ಕಳೆದ ವಾರ ಮಹಿಳೆಯೊಬ್ಬರು ಹಠಾತ್ ಕುಸಿದು ಹೃದಯಾಘಾತದಿಂದ ಮೃತಪಟ್ಟ ಘಟನೆ ಅರ್ಕುಳ ಎಂಬಲ್ಲಿ ನಡೆದಿತ್ತು. ಉಜಿರೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದಿತ್ಯ ಶುಕ್ರವಾರ (ಅಕ್ಟೋಬರ್ 11) ಸಂಜೆ ನಡೆದ ಘಟನೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಹಾಗೂ ಉದ್ಯಮಿ, ಕೃಷಿಕ ರಮೇಶ್ ಭಟ್ ಅವರ ಪುತ್ರ ಆದಿತ್ಯ ಭಟ್ (30) ಮೃತ ಯುವಕ. ಶುಕ್ರವಾರ ಮನೆಯಲ್ಲಿ ನಡೆದ ಆಯುಧ ಪೂಜೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿತು. ಅಸ್ವಸ್ಥರಾದ ಹಿನ್ನೆಲೆ ತಕ್ಷಣ ಮನೆಯವರು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆದಿತ್ಯ ಭಟ್ ಪ್ರತಿಭಾನ್ವಿತರಾಗಿದ್ದು, ಜರ್ಮನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ತಂದೆ, ತಾಯಿ, ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದೇವರ ದರ್ಶನ ಪಡೆದು ಬಂದ ಕೂಡಲೇ ಹೃದಯಾಘಾತ ಬಿಸಿ ರೋಡಿನಲ್ಲಿ ಹಾಲು, ಪೇಪರ್ ಮಾರುವ ಅಂಗಡಿ ಹೊಂದಿರುವ ವಸಂತ ಆಚಾರ್ಯ (56) ಅವರಿಗೆ ಅಂಥದ್ದೇನೂ ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ. ಶುಕ್ರವಾರ (ಅಕ್ಟೋಬರ್ 11) ದೇವಸ್ಥಾನಕ್ಕೆ ಹೋಗಿ ಹೊರ ಬಂದ ಮೇಲೆ ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಜೀವ ಉಳಿಯಲಿಲ್ಲ.
ಬಂಟ್ವಾಳದ ಪತ್ರಿಕಾ ಏಜೆಂಟ್, ನಂದಿನಿ ಮಿಲ್ಕ್ ಪಾರ್ಲರ್ ಮಾಲಕ ವಸಂತ ಆಚಾರ್ಯ ಕೊಡುಗೈ ದಾನಿ ಮತ್ತು ವಿಶ್ವಕರ್ಮ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿ ವಾಪಾಸ್ ಮನೆಗೆ ಬರುವ ವೇಳೆ ಹಠಾತ್ ಆಗಿ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಸ್ನೇಹಿತನ ಸಾವು ನೋಡಿ ಹೃದಯಾಘಾತ
ಪುತ್ತೂರು ಸಮೀಪ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಭಗವಂತಕೋಡಿ ಎದುರು-ಬದುರು ಮನೆಯ ನಿವಾಸಿಗಳಿಬ್ಬರು ಗುರುವಾರ (ಅಕ್ಟೋಬರ್ 10) ಬೆಳಗ್ಗೆ (ಒಂದೇ ದಿನ) ನಿಧನರಾದರು. ಅಬ್ದುರ್ ರೆಹ್ಮಾನ್ ಮೇಸ್ತ್ರಿ (54) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರೆ, ಅವರ ಮೃತದೇಹವನ್ನು ನೋಡಿ ಸ್ವಗೃಹಕ್ಕೆ ಬಂದ ಎದುರು ಮನೆಯ ಹನೀಫ್ ಸಾಹೇಬ್ (65) ಹೃದಯಾಘಾತದಿಂದ ನಿಧನ ಹೊಂದಿದರು.
ಅಬ್ದುರ್ ರೆಹ್ಮಾನ್ ಮೇಸ್ತ್ರಿ ಅವರು ಮೂಲತಃ ವಿಟ್ಲ ಸಮೀಪದ ಒಕ್ಕೆತ್ತೂರು - ಕೊಡಂಗೆ ನಿವಾಸಿಯಾಗಿದ್ದು ಇತ್ತೀಚೆಗೆ ಭಗವಂತಕೋಡಿ ಯಲ್ಲಿ ಮನೆ ಖರೀದಿಸಿ ವಾಸವಾಗಿದ್ದರು. ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹನೀಫ್ ಸಾಹೇಬ್ ಅವರು ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದು, ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.