Karnataka Mining: ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಖನಿಜ ರಕ್ಷಣಾ ಪಡೆ ಸ್ಥಾಪನೆ, ಅಕ್ರಮ ಗಣಿಗಾರಿಕೆಗೆ ಬೀಳುವುದೇ ಬ್ರೇಕ್?
Dec 28, 2022 06:57 AM IST
ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಖನಿಜ ರಕ್ಷಣಾ ಪಡೆ ಸ್ಥಾಪನೆ, ಅಕ್ರಮ ಗಣಿಗಾರಿಕೆಗೆ ಬೀಳುವುದೇ ಬ್ರೇಕ್?
- ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕುವ ಸಲುವಾಗಿ ಇದೇ ಮೊದಲ ಬಾರಿಗೆ ಖನಿಜ ರಕ್ಷಣಾ ಪಡೆ ಸ್ಥಾಪನೆ ಮಾಡಲಾಗಿದೆ. ಪ್ರತಿಜಿಲ್ಲೆಯಲ್ಲೂ ಇರುವ ಈ ರಕ್ಷಣಾ ಪಡೆಗೆ ನಿವೃತ್ತ ಸೈನಿಕರನ್ನು ನೇಮಕ ಮಾಡಲಾಗುತ್ತದೆ.
ಬೆಳಗಾವಿ: ರಾಜ್ಯದ ಖನಿಜ ಮತ್ತು ಉಪಖನಿಜ ಅನಧಿಕೃತ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು ಹಾಗೂ ರಾಜ್ಯದ ಖನಿಜ ಸಂಪತ್ತನ್ನ ಸಂರಕ್ಷಿಸಿ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ. ಪ್ರಪ್ರಥಮ ಬಾರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧೀನದಲ್ಲಿ ಪ್ರತಿ ಜಿಲ್ಲೆಯಲ್ಲಿ ಖನಿಜ ರಕ್ಷಣಾ ಪಡೆಯನ್ನು ಸ್ಥಾಪಿಸಲಾಗಿದ್ದು, ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗಸ್ತು ವಾಹನಗಳಿಗೆ ಚಾಲನೆ ನೀಡಲಾಗಿದೆ ಎಂದು ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ "ಖನಿಜ ರಕ್ಷಣಾ ಪಡೆ" ಯ ಗಸ್ತುವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಂತೆ ಪೋಲೀಸ್ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಖನಿಜ ಮತ್ತು ಉಪಖನಿಜಗಳ ಅನಧಿಕೃತ ಗಣಿಗಾರಿಕೆ, ದಾಸ್ತಾನು ಮತ್ತು ಸಾಗಾಣಿಕೆ ವಿರುದ್ದ ಕ್ರಮಕೈಗೊಳ್ಳಲು ಅಧಿಕಾರ ನೀಡಲಾಗಿದೆ. ಹೀಗಿದ್ದರೂ, ಈ ಇಲಾಖೆಗಳಿಂದ ಅಕ್ರಮ ಖನಿಜ ಮತ್ತು ಉಪಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟುವ ಕ್ರಮಗಳು ಹೆಚ್ಚಿನ ಪರಿಣಾಮಕಾರಿಯಾಗಿರುವುದಿಲ್ಲ. ಹೀಗಾಗಿ ವಿಶೇಷ ಖನಿಜ ರಕ್ಷಣಾ ಪಡೆ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಕ್ರಮ ಖನಿಜ ಮತ್ತು ಉಪಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟಲು, ಸಂಬಂಧಿಸಿದ ಇಲಾಖೆಗಳಲ್ಲಿನ ಕೆಲಸದ ಒತ್ತಡಗಳಿಂದ ಹೆಚ್ಚಿನ ಯಶಸ್ಸು ಸಾಧ್ಯವಾಗಿರುವುದಿಲ್ಲ. 2020ರ ಏಪ್ರಿಲ್ 30ರಂದು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧೀನದಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಖನಿಜ ರಕ್ಷಣಾ ಪಡೆಯನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಇಂದು ಬೆಳಗಾವಿಯಲ್ಲಿ ಗಸ್ತುವಾಹನಗಳಿಗೆ ಚಾಲನೆ ನೀಡುವ ಮೂಲಕ ಖನಿಜ ರಕ್ಷಣಾ ಪಡೆಗೆ ಚಾಲನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ನಿವೃತ್ತ ಸೈನಿಕರ ನೇಮಕ
ಮೊದಲ ಹಂತದಲ್ಲಿ ಖನಿಜ ರಕ್ಷಣಾ ಪಡೆ ಯನ್ನು ಹೆಚ್ಚಿನ ಖನಿಜ/ ಉಪಖನಿಜ ಗಣಿಗಾರಿಕೆ ಇರುವ 08 ಜಿಲ್ಲೆಗಳಾದ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಹಾವೇರಿ, ಬೆಳಗಾವಿ, ಕಲಬುರಗಿ, ಕೊಪ್ಪಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖನಿಜ ರಕ್ಷಣಾ ಪಡೆ ಸ್ಥಾಪಿಸಲು ಕ್ರಮವಹಿಸಲಾಗಿದೆ. ಖನಿಜ ರಕ್ಷಣಾ ಪಡೆ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಪ್ರತಿ ಜಿಲ್ಲೆಗೆ ಹವಾಲ್ದಾರ್ ದರ್ಜೆಯ 03 ನಿವೃತ್ತ ಸೈನಿಕರನ್ನು (Ex-service man) ನೇಮಕಮಾಡಿಕೊಳ್ಳಲಾಗಿದೆ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ 44 ಹೊಸ ವಾಹನವನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಖನಿಜ ಮತ್ತು ಉಪಖನಿಜ ಅನಧಿಕೃತ ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟಲು ಹಾಗೂ ರಾಜ್ಯದ ಖನಿಜ ಸಂಪತ್ತನ್ನು ಸಂರಕ್ಷಿಸಿ ಆದಾಯವನ್ನು ಹೆಚ್ಚಿಸಲು ಖನಿಜ ರಕ್ಷಣಾ ಪಡೆ ಸಮರ್ಥವಾಗಿ ಕಾರ್ಯ ನಿರ್ವಹಿಸಲು ವಿದ್ಯಕ್ತವಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಾಲನೆ ನೀಡಲಾಗಿದೆ. ಅನಧಿಕೃತ ಗಣಿಗಾರಿಕೆ ಹಾಗೂ ಸಾಗಾಣಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಖನಿಜ ರಕ್ಷಣಾ ಪಡೆಯನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.