logo
ಕನ್ನಡ ಸುದ್ದಿ  /  ಕರ್ನಾಟಕ  /  Cm Bommai: ತರೀಕೆರೆ ಭಾಗದಲ್ಲಿ ಬಿಜೆಪಿ ಸರ್ಕಾರದಿಂದ 150ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಆಗಿದೆ: ಸಿಎಂ ಬೊಮ್ಮಾಯಿ

CM Bommai: ತರೀಕೆರೆ ಭಾಗದಲ್ಲಿ ಬಿಜೆಪಿ ಸರ್ಕಾರದಿಂದ 150ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಆಗಿದೆ: ಸಿಎಂ ಬೊಮ್ಮಾಯಿ

HT Kannada Desk HT Kannada

Nov 16, 2022 07:30 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    • ತರೀಕೆರೆ ಭಾಗದಲ್ಲಿ ಒಟ್ಟು 150ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಚಿಕ್ಕಮಗಳೂರು: ತರೀಕೆರೆ ಭಾಗದಲ್ಲಿ ಒಟ್ಟು 150ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

Mysuru News: ಬಿಸಿಲಬೇಗೆ ನಾಗರಹೊಳೆಯಿಂದ ಹೊರ ಬಂದು ತೋಟದ ಮನೆಯಲ್ಲಿ ಗಡದ್ದಾಗಿ ಮಲಗಿದ ಹುಲಿರಾಯ

ಬೆಂಗಳೂರು: ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ, ವಿದ್ಯಾರ್ಥಿ ಕೇಳದ ಕೋರ್ಸ್‌ಗೆ ಸೇರಿಸಿದ ಪ್ರಕರಣ

ಲೋಕಸಭಾ ಚುನಾವಣೆ ನಾಳೆ ಮತದಾನ, ಬೆಂಗಳೂರಲ್ಲಿ ಇಂದು ಸಂಚಾರ ದಟ್ಟಣೆ, ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗ ಸಲಹೆ ನೀಡಿದ ಪೊಲೀಸರು

Mangaluru News: ಬಂಟ್ವಾಳ ಸಮೀಪ ನೇತ್ರಾವತಿ ನದಿ ಬದಿ ಆಟವಾಡುತ್ತಿದ್ದ 10 ಮತ್ತು 14 ವರ್ಷದ ಬಾಲಕಿಯರು ನೀರುಪಾಲು

ತರೀಕೆರೆ ತಾಲ್ಲೂಕಿನಲ್ಲಿ ಮಂಗಳವಾರ ಚಿಕ್ಕಮಗಳೂರು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬೊಮ್ಮಾಯಿ, ಈಗ ಕಾಲ ಬದಲಾವಣೆಯಾಗಿದೆ. ಜನ ಜಾಗೃತರಾಗಿ ತಮ್ಮ ಹಕ್ಕಿನ ಅರಿವು ಪಡೆದುಕೊಂಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ನಿಜಲಿಂಗಪ್ಪನವರ ಕಾಲದಿಂದ ಮಾಡಬೇಕೆಂದಿದ್ದರೂ ಯಾರೂ ಮಾಡಲಾಗಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಯೋಜನೆಯನ್ನು ಪ್ರಾರಂಭಿಸಿದರು. ಕಾಂಗ್ರೆಸ್ ಪಕ್ಷ ಇದಕ್ಕೆ ಅಡ್ಡಿಪಡಿಸಿದ್ದರು. ಈಗ ಕೆರೆಗಳನ್ನು ತುಂಬಿಸಿ ಎಂದು ಒತ್ತಾಯಿಸುತ್ತಾರೆ. ನೀರು ಅಜ್ಜಂಪುರಕ್ಕೆ ಬಂದರೆ ತಾನೆ ಕೆರೆ ತುಂಬಿಸಲು ಸಾಧ್ಯ ಎಂದರು.

ಈ ಯೋಜನೆಯ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ತೋಟವುಳ್ಳ ರೈತರಿಗೆ ಅತ್ಯಧಿಕ ಮೊತ್ತವನ್ನು ಪರಿಹಾರ ನೀಡಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಮಾಡಲಾಗಿದೆ. ಅಜ್ಜಂಪುರ ಟನಲ್ ಸುತ್ತಮುತ್ತ 14 ಕೆರೆಗಳನ್ನು ತುಂಬಿಸಲು ಅನುಮತಿ ನೀಡಿದೆವು. ಉಮ್ರಾಣಿ ಅಮೃತಪುರ ಯೋಜನೆಯಡಿ 79 ಕೆರೆಗಳನ್ನು ತುಂಬಿಸಲು ಅನುಮತಿ ನೀಡಿ ಕೆಲಸ ಪ್ರಾರಂಭಿಸಿದೆವು. ಉಪ ಕಣಿವೆಯಲ್ಲಿ 55 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಕೆಲವೇ ದಿನಗಳಲ್ಲಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೆಲವೇ ದಿನಗಳಲ್ಲಿ ಘೋಷಣೆಯನ್ನು ಮಾಡಲಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅನುಮತಿ ದೊರೆತರೆ ಕೇಂದ್ರ ಸರ್ಕಾರದಿಂದ 16 ಸಾವಿರ ಕೋಟಿ ರೂ.ಗಳು ರಾಜ್ಯಕ್ಕೆ ದೊರೆಯಲಿದೆ. ನಮ್ಮ ರಾಜ್ಯದ ಸಂಸದರು 3 ನೇ ಹಂತಕ್ಕೆ ಅನುಮತಿ ನೀಡಬೇಕೆಂದು ಬೇಡಿಕೆಯನ್ನು ಇಟ್ಟಿದ್ದಾರೆ. ರಾಜ್ಯ ಬಜೆಟ್ಟಿನಲ್ಲಿ ಈಗಾಗಲೇ 3 ಸಾವಿರ ಕೋಟಿ ರೂ.ಗಳನ್ನು ಈ ಯೋಜನೆಗೆ ಮೀಸಲಿರಿಸಿದೆ. ಬರುವ ದಿನಗಳಲ್ಲಿ ಮೂರನೇ ಹಂತಕ್ಕೂ ಅನುಮತಿ ನೀಡಲಾಗುವುದು ಎಂದರು.

650 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರು

ಈ ಭಾಗದ ಫಲವತ್ತಾದ ಮಣ್ಣಿಗೆ ಹೆಚ್ಚಿನ ಬೆಲೆ ಬರಬೇಕೆಂಬ ಉದ್ದೇಶದಿಂದ ಈ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 5 ವರ್ಷ ಕಾಲ ಈ ಕಡೆ ತಿರುಗಿಯೂ ನೋಡಿಲ್ಲ. ಯಾವುದೇ ಕಳಕಳಿಯನ್ನು ತೋರಿಸಿಲ್ಲ. ಆದರೆ ಈಗ ಅಭಿವೃದ್ದಿಯ ದಿನಗಳು ಪ್ರಾರಂಭವಾಗಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಅಜ್ಜಂಪುರ ಹಾಗೂ ತರೀಕೆರೆ ತಾಲ್ಲೂಕಿಗೆ 650 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲಿದ್ದೇವೆ. ಅಭಿವೃದ್ಧಿಗೆ ನಿಮ್ಮ ಮತ ಹಾಕಿ ಎಂದು ಹೇಳಿದರು.

ಕಾಂಗ್ರೆಸ್ಸಿಗರು ಕಚ್ಚಾಟದಲ್ಲಿ ಉಪಯುಕ್ತ ಯೋಜನೆಗಳನ್ನು ವಿರೋಧಿಸಿದರು. 2600 ಕೋಟಿ ರೂ.ಗಳಿಗಿಂತಲೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್. ಸುರೇಶ್ ಮಾಡಿದ್ದಾರೆ. ವಿವಿಧ ಶಾಸಕರು ಕೇವಲ ಕಚ್ಚಾಟದಲ್ಲಿ ಉಪಯುಕ್ತ ಯೋಜನೆಗಳನ್ನು ವಿರೋಧಿಸಿಕೊಂಡು ಬಂದು ತರೀಕೆರೆಯ ಅಭಿವೃದ್ಧಿಗೆ ವಂಚನೆಯನ್ನು ಮಾಡಿ ಈ ಭಾಗದ ರೈತರಿಗೆ ನೀರು ಸಿಗದಂತೆ ಸುಮಾರು ಇಪ್ಪತ್ತು ವರ್ಷಗಳ ಕಾಲ ತರೀಕೆರೆಯನ್ನು ಬರಡು ಭೂಮಿಯನ್ನಾಗಿ ಮಾಡಿದವರು ಈ ಕ್ಷೇತ್ರದ ಹಿಂದಿನ ಶಾಸಕರು ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ

ಸಿದ್ದರಾಮಯ್ಯನವರು ಅಧಿಕಾರದ 5 ವರ್ಷ ಈ ಭಾಗದ ಅಭಿವೃದ್ಧಿಯ ಚಿಂತೆ ಮಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಏತನೀರಾವರಿಯ ಮೂಲಕ ಬರಡು ಭೂಮಿಗೆ ನೀರು ತರುವ ಕಳಕಳಿಯನ್ನು ತೋರಿಸಲಿಲ್ಲ. ಜಲಜೀವನ ಮಿಷನ್ ಯೋಜನೆಯಡಿ ತರೀಕೆರೆ ಮತ್ತು ಅಜ್ಜಂಪುರದಲ್ಲಿ 650 ಕೋಟಿ ರೂ.ಗಳ ಅನುದಾನದಲ್ಲಿ ಪ್ರತಿ ಮನೆಗೆ ಕುಡಿಯುವ ನೀರನ್ನು ಒದಗಿಸಲಾಗುವುದು. ಭದ್ರಾ ಯೋಜನೆಗೆ ಚಾಲನೆ ನೀಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ ಚಿಕ್ಕಮಗಳೂರು ಜನರ ಹಕ್ಕು. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲಾಗಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಅಭಿವೃದ್ಧಿಗೆ ಮತ ಹಾಕಬೇಕು ಎಂದು ಹೇಳಿದರು.

ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆದ ವಿವೇಕ ಯೋಜನೆ

ಚಿಕ್ಕಮಗಳೂರು ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ರೀತಿಯ ಅಭಿವೃದ್ಧಿಯಾಗುತ್ತಿದೆ. ರಾಜ್ಯದಲ್ಲಿ ಒಂದೇ ವರ್ಷದಲ್ಲಿ 8000 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬರುವ ಜುಲೈ ತಿಂಗಳೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ವಿವೇಕ ಅಂದರೆ ಜ್ಞಾನ, ಸ್ವಾಮಿ ವಿವೇಕಾನಂದರಿಂದ ಪ್ರೇರಣೆ ಪಡೆಯಲು ವಿವೇಕ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಾಂಗ್ರೆಸ್ ಪಕ್ಷ ಟೀಕೆ ಮಾಡುತ್ತದೆ. ಕಾಂಗ್ರೆಸ್ ಕಾಲದಲ್ಲಿ ಶಾಲೆಗಳಿಗೆ ಶೌಚಾಲಯಗಳನ್ನೂ ನಿರ್ಮಿಸಲಿಲ್ಲ. ಸ್ವಾಮಿ ವಿವೇಕಾನಂದರಿಗೆ ಅಪಮಾನ ಮಾಡುವ ರೀತಿಯಲ್ಲಿ ‘ಅವಿವೇಕ ’ ಎಂದು ಹೇಳುತ್ತಾರೆ. ವಿದ್ಯಾನಿಧಿಗೆ 400 ಕೋಟಿ ರೂ. ಅನುದಾನ ನೀಡಲಾಗಿದೆ. ರೈತ ಕೂಲಿಕಾರ್ಮಿಕರು, ಮೀನುಗಾರರು,ನೇಕಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದೆ ಎಂದರು.

ಸಾಮಾಜಿಕ ನ್ಯಾಯದಲ್ಲಿ ಕ್ರಾಂತಿ:

ದುಡಿಮೆಯ ದೊಡ್ಡಪ್ಪ ಎಂಬುದು ನಮ್ಮ ಸರ್ಕಾರದ ನಂಬಿಕೆ. ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳದಿಂದ ಸಾಮಾಜಿಕ ಬದಲಾವಣೆ ಮಾಡಲಾಗಿದ್ದು, ಸಾಮಾಜಿಕ ನ್ಯಾಯದಲ್ಲಿ ಕ್ರಾಂತಿಯನ್ನು ಮಾಡಲಾಗಿದೆ. ಹಾಲುಮತದ ಸಮುದಾಯ, ಕುರಿಗಾಹಿಗಳ ಏಳಿಗೆಗಾಗಿ ಯೋಜನೆ, 50 ಸಾವಿರ ಬಂಜಾರ ಸಮಾಜಗಳಿಗೆ ಹಕ್ಕು ಪತ್ರ ನೀಡಲಾಗುವುದು. ಜನಪರ ಸರ್ಕಾರವನ್ನು ಪುನ: ತರುವ ಆಶಯ ನಮ್ಮದಾಗಿದೆ. ಇದಕ್ಕೆ ಜನರು ಸಹಕಾರ ನೀಡುತ್ತಾರೆಂಬ ವಿಶ್ವಾಸ ನಮ್ಮದು ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಸಚಿವರಾದ ಬೈರತಿ ಬಸವರಾಜ, ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಹಾಗೂ ಮತ್ತಿತರರು ಹಾಜರಿದ್ದರು.

    ಹಂಚಿಕೊಳ್ಳಲು ಲೇಖನಗಳು