logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka High Court On Petanimal: ಸಾಕು ಪ್ರಾಣಿಗೆ ವಾಹನ ಡಿಕ್ಕಿಯಾದರೆ ಮೋಟಾರು ವಾಹನ ಕಾಯಿದೆ ಅನ್ವಯಿಸಲ್ಲ: ಕರ್ನಾಟಕ ಹೈಕೋರ್ಟ್‌

Karnataka High Court on Petanimal: ಸಾಕು ಪ್ರಾಣಿಗೆ ವಾಹನ ಡಿಕ್ಕಿಯಾದರೆ ಮೋಟಾರು ವಾಹನ ಕಾಯಿದೆ ಅನ್ವಯಿಸಲ್ಲ: ಕರ್ನಾಟಕ ಹೈಕೋರ್ಟ್‌

HT Kannada Desk HT Kannada

Oct 30, 2022 09:18 AM IST

google News

ಕರ್ನಾಟಕ ಹೈಕೋರ್ಟ್ (ಫೋಟೋ-File)

  • ಅಪಘಾತದಲ್ಲಿ ಜನರಿಗೆ ಗಾಯವಾದರೆ ಮಾತ್ರ ಮೋಟಾರು ವಾಹನ ಕಾಯಿದೆ ಅನ್ವಯಿಸುತ್ತದೆಯೇ ವಿನಾ ಸಾಕು ಪ್ರಾಣಿ ಅಥವಾ ಪ್ರಾಣಿಗೆ ಅದು ಅನ್ವಯಿಸುವುದಿಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್‌, ಪ್ರಕರಣ ರದ್ದುಪಡಿಸಿದೆ.

ಕರ್ನಾಟಕ ಹೈಕೋರ್ಟ್ (ಫೋಟೋ-File)
ಕರ್ನಾಟಕ ಹೈಕೋರ್ಟ್ (ಫೋಟೋ-File)

ಬೆಂಗಳೂರು: ಕಾರು ಡಿಕ್ಕಿಯಾಗಿ ಶ್ವಾನ ಸಾವು ಪ್ರಕರಣವೊಂದರಲ್ಲಿ ಚಾಲಕನ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.

ಕೊಲೆಗಾರರನ್ನು ಶಿಕ್ಷಿಸಲು ಅನ್ವಯವಾಗುವ ಕ್ರಿಮಿನಲ್ ಕಾನೂನುಗಳನ್ನು ಪ್ರಾಣಿಹಂತಕರ ವಿಚಾರಣೆಗೆ ಅನ್ವಯಿಸಬೇಕು ಎಂಬ ವಾದವನ್ನು ಹೈಕೋರ್ಟ್ ತಿರಸ್ಕರಿಸಿ ಈ ನಿರ್ಧಾರಕ್ಕೆ ಬಂದಿದೆ.

ಕೆಳ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಪೀಠ, ಅಕ್ಟೋಬರ್ 21 ರ ತೀರ್ಪಿನಲ್ಲಿ ಎಂವಿ ಕಾಯಿದೆಯ ಸೆಕ್ಷನ್ 134 (ಎ) ಮತ್ತು (ಬಿ), ಎಂವಿ ಸೆಕ್ಷನ್ 187 ರ ಅಡಿಯಲ್ಲಿ ಆರೋಪಿ ಯಾವುದೇ ಅಪರಾಧ ಮಾಡಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.

ಐಪಿಸಿಯ ಸೆಕ್ಷನ್ 279 ಮತ್ತು ಐಪಿಸಿಯ ಸೆಕ್ಷನ್ 428 ಮತ್ತು 429 ರ ಅಡಿಯಲ್ಲಿ, ಕ್ರಿಮಿನಲ್ ಪ್ರಕ್ರಿಯೆಗಳ ಮುಂದುವರಿಕೆಯು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗಿದೆ. ಅರ್ಜಿದಾರರಿಗೆ ಅನ್ಯಾಯ ಉಂಟುಮಾಡುತ್ತದೆ ಎಂದು ನಾನು ಪರಿಗಣಿಸುತ್ತೇನೆ ಎಂದು ಹೇಳಿ ನ್ಯಾಯಮೂರ್ತಿ ಗೋವಿಂದರಾಜ್ ಅರ್ಜಿ ರದ್ದು ಮಾಡಿದ್ದಾರೆ.

ಐಪಿಸಿಯ 279 ನೇ ವಿಧಿಯನ್ನು (ನಿರ್ಲಕ್ಷ್ಯದ ಚಾಲನೆಯಿಂದ ಮಾನವನ ಜೀವಕ್ಕೆ ಹಾನಿಯುಂಟುಮಾಡುವುದು) ಪ್ರಾಣಿಗಳಿಗೆ ಉಂಟಾಗುವ ಯಾವುದೇ ಗಾಯ ಅಥವಾ ಸಾವಿಗೆ ಅನ್ವಯಿಸಲು ಸಾಧ್ಯವಾಗುವುದಿಲ್ಲ. ದೂರುದಾರರ ಪರ ವಕೀಲರು ಸಲ್ಲಿಸಿರುವ ಮನವಿಯನ್ನು ಅಂಗೀಕರಿಸಿದರೆ ವ್ಯಕ್ತಿ ಎಂಬ ಪದವನ್ನು ಪ್ರಾಣಿ ಎಂದು ಅರ್ಥೈಸಬೇಕಾಗುತ್ತದೆ. ಆಗ ಸಾಕುಪ್ರಾಣಿ ಅಥವಾ ಪ್ರಾಣಿಗಳ ಮರಣದ ಸಂದರ್ಭದಲ್ಲಿ ಐಪಿಸಿಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಬೇಕಾುತ್ತದೆ. ಇದು ಐಪಿಸಿಯ ಗುರಿ ಮತ್ತು ಉದ್ದೇಶಕ್ಕೆ ವಿರುದ್ಧವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಐಪಿಸಿಯ ಸೆಕ್ಷನ್ 428 (ಕಿಡಿಗೇಡಿತನ) ಅಥವಾ ಸೆಕ್ಷನ್ 429 (50 ರೂ.ಗಿಂತ ಹೆಚ್ಚಿನ ಮೌಲ್ಯದ ಪ್ರಾಣಿಯನ್ನು ಕೊಲ್ಲುವ ಕಿಡಿಗೇಡಿತನ) ಅಡಿಯಲ್ಲಿ ಮಾತ್ರ ಅಪರಾಧ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಇದು ಅನ್ವಯಿಸುವುದಿಲ್ಲ. ಅರ್ಜಿದಾರ(ವಾಹನ ಚಾಲಕ) ಇಲ್ಲಿ ಉದ್ದೇಶಪೂರಕವಾಗಿ ಶ್ವಾನ ಸಾವಿಗೆ ಕಾರಣವಾಗಿಲ್ಲ ಎಂಬುದನ್ನು ತಿಳಿಯಲಾಗಿದೆ ಎಂದಿದೆ.

ಪ್ರತಾಪ್ ಕುಮಾರ್ ಜಿ ಎಂಬುವವರು 2018ರ ಫೆಬ್ರವರಿ 24 ರಂದು ಬೆಂಗಳೂರಿನ ವಿಜಯನಗರದಲ್ಲಿ ತಮ್ಮ ಎಸ್‌ಯುವಿ ಕಾರನ್ನು ಚಾಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮೆಂಫಿ ಎಂಬ ಹೆಸರಿನ ಸಾಕು ನಾಯಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಯಿ ಮೃತಪಟ್ಟಿದೆ. ಈ ಸಂಬಂಧ ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದ ಧೀರಜ್ ರಾಖೇಜಾ ಎಂಬುವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿಜಯನಗರ ಪೊಲೀಸ್ ತನಿಖಾಧಿಕಾರಿ ತನಿಖೆ ನಡೆಸಿ ಪ್ರತಾಪ್ ಕುಮಾರ್ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 134 (ಎ & ಬಿ) ಮತ್ತು 187 ಮತ್ತು ಐಪಿಸಿ ಸೆಕ್ಷನ್ 279, 428 ಮತ್ತು 429 ರ ಅಡಿಯಲ್ಲಿ ಅಪರಾಧಗಳಿಗಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣವು ಬೆಂಗಳೂರಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಟ್ರಾಫಿಕ್ ಕೋರ್ಟ್-II ನಲ್ಲಿ ವಿಚಾರಣೆಗೆ ಬಾಕಿ ಇತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ