Mysore Dasara 2023: ಮೈಸೂರು ದಸರಾ ವಸ್ತು ಪ್ರದರ್ಶನ: ನೋಡಿ ಸವಿಯಲು ಏನುಂಟು ಏನಿಲ್ಲ
Oct 17, 2023 02:08 PM IST
ಈ ಬಾರಿಯ ಮೈಸೂರು ದಸರಾ ವಸ್ತು ಪ್ರದರ್ಶನ ಉದ್ಘಾಟನೆಗೊಂಡಿದ್ದು ಬಗೆಬಗೆಯ ಅಲಂಕಾರ, ಮಳಿಗೆಗಳಿಂದ ಗಮನ ಸೆಳೆಯುತ್ತಿದೆ
- Mysuru Dasara Exhibition ಮೈಸೂರಿನ ಪ್ರಮುಖ ಪ್ರವಾಸಿ ಆಕರ್ಷಣೆಯ ಕೇಂದ್ರಗಳಲ್ಲಿ ವಸ್ತುಪ್ರದರ್ಶನವೂ( Exhibition) ಕೂಡ ಒಂದು. ಈ ವರ್ಷದ ದಸರಾ ವಸ್ತುಪ್ರದರ್ಶನ ಉದ್ಘಾಟನೆಗೊಂಡಿದೆ. ಇನ್ನೂ ಪೂರ್ಣಗೊಳ್ಳುವ ಹಂತದಲ್ಲಿದೆ.
ಮೈಸೂರು: ದಿಲ್ಲಿಯ ಪ್ರಗತಿ ಮೈದಾನ ನೀವು ನೋಡಿರಬಹುದು. ಅದೇ ಮಾದರಿಯಲ್ಲಿ ಒಂದೇ ಸೂರಿನಡಿ ಮಾಹಿತಿ, ಮನರಂಜನೆ ನೀಡುವ ಮೈಸೂರು ದಸರಾ ವಸ್ತು ಪ್ರದರ್ಶನ ಈ ಬಾರಿ ವಿಭಿನ್ನ ಚಟುವಟಿಕೆಗಳೊಂದಿಗೆ ಆರಂಭಗೊಂಡಿದೆ.
ಕರ್ನಾಟಕ ವಸ್ತು ಪ್ರದರ್ಶನ ರೂಪಿಸುವ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದಸರಾ ವಸ್ತುಪ್ರದರ್ಶನ ಎಲ್ಲರಿಗೂ ಅಚ್ಚುಮೆಚ್ಚು. ಹಬ್ಬ ಮುಗಿದ ಮೇಲೂ ಹಬ್ಬದ ಕಳೆ ನಗರದಲ್ಲಿ ಉಳಿಯುವಂತೆ ಮಾಡುವುದು ವಸ್ತುಪ್ರದರ್ಶನ.
ಸಂಜೆ ವೇಳೆಗೆ ನಗರದ ಜನರೆಲ್ಲರೂ ವಸ್ತು ಪ್ರದರ್ಶನಕ್ಕೆ ತೆರಳಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಆಟವಾಡಿ ಊಟ ಮಾಡಿ ನಲಿಯುತ್ತಾರೆ. ಮಾಹಿತಿ ನೀಡುವ ಮಳಿಗೆಗಳಿಗೆ ತೆರಳುತ್ತಾರೆ. ತಮೆ ಬೇಕಾದ್ದನ್ನು ಖರೀದಿಸಿ ಸಂತಸಪಡುತ್ತಾರೆ. ಕನಿಷ್ಟ ಮೂರ್ನಾಲ್ಕು ಗಂಟೆ ಕಳೆಬಯಬಲ್ಲ ಇಡೀ ಮೈದಾನವು ದೊಡ್ಡ ವಹಿವಾಟು ಕೇಂದ್ರವೂ ಹೌದು.
ಬಗೆಬಗೆಯ ಶಾಪಿಂಗ್
ಈ ಬಾರಿ ದಸರಾ ವಸ್ತುಪ್ರದರ್ಶನ ಮೂರು ತಿಂಗಳ ಕಾಲ ನಡೆಯಲಿದ್ದು, ಈ ವಸ್ತುಪ್ರದರ್ಶನಕ್ಕೆ ದಸರಾ ಆರಂಭದ ದಿನವಾದ ಭಾನುವಾರವೇ ಚಾಲನೆ ದೊರೆತಿದೆ. ಇನ್ನು 90 ದಿನಗಳ ಕಾಲ ದಸರಾ ವಸ್ತು ಪ್ರದರ್ಶನ ನಡೆಯಲಿದ್ದು, ಮೈಸೂರು ನಗರ ಸೇರಿದಂತೆ ಸುತ್ತಲಿನ ಜನರು ತೆರಳಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ವಸ್ತು ಪ್ರದರ್ಶನದಲ್ಲಿ ಹಲವು ಮಳಿಗೆಗಳು ಜನರನ್ನು ಆಕರ್ಷಿಸಲು ಸಿದ್ದವಾಗಿವೆ.
ದೂರದಿಂದ ಆಗಮಿಸಿದ ಪ್ರವಾಸಿಗರು ಎಲ್ಲೆಡೆ ಸುತ್ತಾಡಿ ಸಂಜೆ ಹೊತ್ತಿಗೆ ವಸ್ತು ಪ್ರದರ್ಶನಕ್ಕೆ ತೆರಳಿ ಭರಪೂರ ಮನರಂಜನೆ ಪಡೆದು ಭರ್ಜರಿ ಶಾಪಿಂಗ್ ನಡೆಸುವುದರೊಂದಿಗೆ ವೈವಿಧ್ಯಮಯ ಆಹಾರ ತಿನಿಸುಗಳ ಸವಿ ಸವಿಯಲು ಅನುಕೂಲ ಮಾಡಿಕೊಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ವೈವಿಧ್ಯವೂ ಇರಲಿದೆ.
ಸೆಲ್ಫಿ ಪಾಯಿಂಟ್
ಐ ಲವ್ ಮೈಸೂರು ದಸರಾ ಎಕ್ಸ್ಪೋ ಸೆಲ್ಫೀ ಪಾಯಿಂಟ್ ಅನ್ನು ವಸ್ತು ಪ್ರದರ್ಶನದ ಪ್ರವೇಶ ದ್ವಾರದಲ್ಲಿ ನಿರ್ಮಿಸಲಾಗಿದೆ. ವಸ್ತು ಪ್ರದರ್ಶನಕ್ಕೆ ಬರುವ ಪ್ರವಾಸಿಗರ ಲಗೇಜ್‌ಗಳನ್ನು ಪ್ರತ್ಯೇಕವಾಗಿ ಇರಿಸಲು ಪ್ರಾಧಿಕಾರದಿಂದ ರೈಲ್ವೆ ನಿಲ್ದಾಣದಲ್ಲಿ ಲಗೇಜ್ ರೂಂ ನಿರ್ಮಿಸಿರುವಂತೆ ವಸ್ತು ಪ್ರದರ್ಶನ ಆವರಣದಲ್ಲೂ ಲಗೇಜ್ ರೂಂ ನಿರ್ಮಿಸಲಾಗಿದೆ. ಜೊತೆಗೆ ಪ್ರದರ್ಶನದ ಆವರಣಕ್ಕೆ ಬರಲು ಆವರಣದ ಮುಂದಿರುವ ಅಂಡರ್ ಪಾಸ್ ಅನ್ನು ಬಳಕೆಗೆ ಮುಕ್ತಗೊಳಿಸಲಾಗಿದೆ.
ಮರಳಿನಲ್ಲಿ ಅರಳಿದ ಅಪ್ಪು
ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ಅಪ್ಪುವಿನ ಮರಳು ಕಲಾಕೃತಿಗೆ ಬಣ್ಣದ ಸ್ಪರ್ಶ ನೀಡಲಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ರಂಗದ ಹಾದಿಯಲ್ಲಿನ 5 ಮರಳು ಶಿಲ್ಪಕಲಾಕೃತಿಗಳೊಂದಿಗೆ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಕಲಾಕೃತಿಗಳನ್ನು ಮೈಸೂರಿನ ಮರಳು ಶಿಲ್ಪ ಕಲಾವಿದೆ ಎಂ.ಗೌರಿ ರಚಿಸಿದ್ದು, ಈ ಬಾರಿ ಆ ಕಲಾಕೃತಿಗಳಿಗೆ ಬಣ್ಣದ ಲೇಪನ ನೀಡಿದ್ದಾರೆ.
350 ಟನ್ ಸ್ಯಾಂಡ್ ಬಳಸಿ ಕಲಾವಿದೆ ಗೌರಿ ಕಲಾಕೃತಿ ರಚಿಸಿದ್ದಾರೆ. ಪುನೀತ್ ಸೈನಿಕನ ಪಾತ್ರ, ಎರಡು ನಕ್ಷದಲ್ಲಿ ದ್ವಿಪಾತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ ಪುನೀತ್, ಭಕ್ತಪ್ರಹ್ಲಾದ ಸಿನಿಮಾದಲ್ಲಿ ಪಾತ್ರ ಹಾಗೂ ಪುನೀತ್ ಸೂಟ್ ಧರಿಸಿ ಪಾರಿವಾಳ ಜೊತೆಗಿರುವ ಕಲಾಕೃತಿ ರಚಿಸಲಾಗಿದೆ.
ಇನ್ನು ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಾದ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತು ನಿರುದ್ಯೋಗ ಭತ್ಯೆಯ ಯುವ ನಿಧಿ ಯೋಜನೆಗಳು ಈಗಾಗಲೇ ಮರಳಿನಲ್ಲಿ ಅರಳಿದ್ದು, ಬಣ್ಣದ ಲೇಪನ ಮಾಡಲಾಗಿದೆ. ಜೊತೆಗೆ ಚಂದ್ರಯಾನ-3ರ ವಿಕ್ರಮ್, ಪ್ರಗ್ಯಾನ್ ರೋವರ್ ಮರಳಿನ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಚಿಣ್ಣರನ್ನು ಆಕರ್ಷಿಸಲು ವಿಶೇಷವಾದ ಆಟಿಕೆಗಳನ್ನು ಇದೇ ಮೊದಲ ಬಾರಿಗೆ ತರಿಸಿ ವಿಶೇಷವಾಗಿ ಅಮ್ಯೂಸ್‌ಮೆಂಟ್ ನಿರ್ಮಿಸಲಾಗಿದೆ.
ಸಿದ್ದವಾಗುತ್ತಿವೆ ಮಳಿಗೆಗಳು
ವಸ್ತು ಪ್ರದರ್ಶನಕ್ಕೆಂದೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಮಳಿಗೆಗಳು, ನಿಗಮ ಮಂಡಳಿಗಳ ಮಾಹಿತಿ ನೀಡುವ ಸ್ಟಾಲ್‌ಗಳನ್ನು ಇಲ್ಲಿ ತೆರೆಯಲಾಗುತ್ತದೆ. ಅವುಗಳಲ್ಲಿ ಬಹುತೇಕ ಸಿದ್ದವಾಗಿದ್ದು, ಇನ್ನೂ ಕೆಲವು ಮಳಿಗೆಗಳು ಈ ವಾರದಲ್ಲಿ ಪೂರ್ಣಗೊಳ್ಳಲಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಮಿಸಿರುವ ಮಳಿಗೆಯಲ್ಲಿ ಕನಕಗಿರಿಯ ಐತಿಹಾಸಿಕ ವೆಂಕಟಾಪತಿ ಬಾವಿ ಗಮನ ಸೆಳೆಯುತ್ತದೆ
ಈಗಾಗಲೇ ವಸ್ತುಪ್ರದರ್ಶನಕ್ಕೆ ಜನರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಜನ ಖುಷಿ ಖುಷಿಯಾಗಿ ತೆರಳುತ್ತಿದ್ದಾರೆ. ದಸರಾ ಮಾತ್ರವಲ್ಲದೆ, ದಸರಾ ಕಳೆದ ಬಳಿಕವೂ ಜನರು ಇಲ್ಲಿಗೆ ಆಗಮಿಸುವುದರಿಂದ ದಸರಾ ಕಳೆ ಹೊಸವರ್ಷದವರೆಗೂ ಉಳಿಯಲಿದೆ.