ನಂಜನಗೂಡು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಂದ ಪತ್ನಿ; ವಾಮಾಚಾರವೆಂಬಂತೆ ಬಿಂಬಿಸಿದರೂ ಸಿಕ್ಕಿಬಿದ್ದಳು
Nov 05, 2024 05:56 PM IST
ನಂಜನಗೂಡು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಂದ ಪತ್ನಿ
- Nanjangudu Crime: ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು ವಿವಾಹಿತೆಯೊಬ್ಬಳು ತನ್ನ ಗಂಡನನ್ನೇ ಕೊಂದಿರುವ ಘಟನೆ ನಂಜನಗೂಡು ಬಳಿ ನಡೆದಿದೆ. ಇಬ್ಬರೊಂದಿಗೆ ಸೇರಿಕೊಂಡು ಕತ್ತು ಕೊಯ್ದು ಕೊಲೆ ಮಾಡಿ ವಾಮಾಚಾರವೆಂಬಂತೆ ಬಿಂಬಿಸಿದರೂ, ಕೊಲೆ ಮಾಡಿದ ಪತ್ನಿ ಸಿಕ್ಕಿಬಿದ್ದಿದ್ದಾಳೆ.
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯ ಕತ್ತು ಕೊಯ್ದು ಕೊಲೆ ಮಾಡಿ ಪ್ರಕರಣದ ನಿಜಗುಟ್ಟು ಬಹಿರಂಗವಾಗಿದೆ. ವಾಮಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಬಿಂಬಿತವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿಯಾಗಿದ್ದಾನೆ.
ನಂಜನಗೂಡು ತಾಲ್ಲೂಕಿನ ಮಡುವಿಹಳ್ಳಿಯಲ್ಲಿ ಕೊಲೆ ನಡೆದಿದ್ದು, ಸರ್ಕಾರಿ ಶಾಲೆಯ ಬಳಿ ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಸದಾಶಿವ (43) ಕೊಲೆಯಾದ ವ್ಯಕ್ತಿ. ಈತನ ಪತ್ನಿಯೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕತೆ ಮುಗಿಸಲಾಗಿದೆ. ಹೀಗಾಗಿ ಸದಾಶಿವನ ಪತ್ನಿ ರಾಜೇಶ್ವರಿ, ರಂಗಸ್ವಾಮಿ, ಶಿವಯ್ಯ ಅವರನ್ನು ಬಂಧಿಸಲಾಗಿದೆ.
ಕಳೆದ ಅಕ್ಟೋಬರ್ 18ರಂದು ಹುಣ್ಣಿಮೆಯ ದಿನ ಕೊಲೆ ಮಾಡಿ, ವಾಮಾಚಾರದ ಸಾಮಗ್ರಿಗಳನ್ನು ಸದಾಶಿವನ ಕೊಲೆಯಾದ ಸ್ಥಳದಲ್ಲಿ ಇರಿಸಲಾಗಿತ್ತು. ವಾಮಾಚಾರಕ್ಕಾಗಿ ಕೊಲೆ ಮಾಡಲಾಗಿದೆ ಎಂಬಂತೆ ಬಿಂಬಿಸಲಾಗಿತ್ತು. ಪ್ರಕರಣ ಸಂಬಂಧ ನವೆಂಬರ್ 02ರಂದು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.
ಅಕ್ರಮ ಸಂಬಂಧ
ಮೃತ ಸದಾಶಿವನ ಹೆಂಡತಿ, ಇತರ ಇಬ್ಬರು ಆರೋಪಿಗಳ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಳೆ. ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಇಬ್ಬರ ಜೊತೆ ಸೇರಿಕೊಂಡು ಗಂಡನ ಊಸಿರನ್ನೇ ನಿಲ್ಲಿಸಿದ್ದಾಳೆ. ಸದಾಶಿವನನ್ನು ವಾಮಾಚಾರ ಮಾಡಿ ಬಲಿ ಕೊಟ್ಟಿರುವಂತೆ ಬಿಂಬಿಸಿ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.
ಕತ್ತು ಕೊಯ್ದಿದ್ದ ಪರಿಣಾಮ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದ. ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿವೈಎಸ್‌ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಹುಲ್ಲಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Dakshina Kannada Crime: ಬೆಂಗಳೂರು ಮಂಗಳೂರು ಹೆದ್ದಾರಿ ಬದಿಯ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ; ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಕಳವು