Dakshina Kannada Crime: ಬೆಂಗಳೂರು ಮಂಗಳೂರು ಹೆದ್ದಾರಿ ಬದಿಯ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ; ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಕಳವು
ಕನ್ನಡ ಸುದ್ದಿ  /  ಕರ್ನಾಟಕ  /  Dakshina Kannada Crime: ಬೆಂಗಳೂರು ಮಂಗಳೂರು ಹೆದ್ದಾರಿ ಬದಿಯ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ; ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಕಳವು

Dakshina Kannada Crime: ಬೆಂಗಳೂರು ಮಂಗಳೂರು ಹೆದ್ದಾರಿ ಬದಿಯ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ; ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಕಳವು

ಬೆಂಗಳೂರು- ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂದಿಕೊಂಡಂತೆ ಇರುವ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆದಿದ್ದು. ಭಾರೀ ಪ್ರಮಾಣದಲ್ಲಿ ಹಣ ಹಾಗೂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ದಕ್ಷಿಣ ಕನ್ನಡದ ಬಂಟ್ವಾಳ ಬಳಿಯ ಬೆಂಗಳೂರು ಮಂಗಳೂರು ಹೆದ್ದಾರಿಯ ದೇಗುಲಗಳಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳತನ ನಡೆದಿದ್ದು ಬೆರಳಚ್ಚು ಪೊಲೀಸರು ಮಾಹಿತಿ ಕಲೆ ಹಾಕಿದರು.
ದಕ್ಷಿಣ ಕನ್ನಡದ ಬಂಟ್ವಾಳ ಬಳಿಯ ಬೆಂಗಳೂರು ಮಂಗಳೂರು ಹೆದ್ದಾರಿಯ ದೇಗುಲಗಳಲ್ಲಿ ಭಾರೀ ಪ್ರಮಾಣದಲ್ಲಿ ಕಳ್ಳತನ ನಡೆದಿದ್ದು ಬೆರಳಚ್ಚು ಪೊಲೀಸರು ಮಾಹಿತಿ ಕಲೆ ಹಾಕಿದರು.

ಮಂಗಳೂರು: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಮಂಗಳೂರು ಹೊರವಲಯದ ಸುಜೀರು ಮತ್ತು ತುಂಬೆ ಎಂಬಲ್ಲಿರುವ ಎರಡು ದೇವಸ್ಥಾನಗಳಿಗೆ ಕಳ್ಳರು ನುಗ್ಗಿದ್ದಾರೆ. ಸೋಮವಾರ ಮುಂಜಾನೆ ಸುಜೀರು ಎಂಬಲ್ಲಿರುವ ರವಳನಾಥ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದರೆ, ಮಂಗಳವಾರ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳವು ನಡೆದಿದೆ. ಮೊದಲ ದಿನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾದರೆ, ಎರಡನೇ ದಿನ ಕ್ಯಾಮರಾ ಮತ್ತು ಡಿವಿಆರ್ ಅನ್ನೂ ಕಳ್ಳರು ಹೊತ್ತೊಯ್ದಿದ್ದಾರೆ.ಸಿ.ಸಿ.ಕ್ಯಾಮರಾ ಪರಿಶೀಲಿಸಿದಾಗ ಕಳ್ಳರು ಚಪ್ಪಲಿ ಧರಿಸದೆ ಗರ್ಭಗುಡಿಯೊಳಗೆ ಪ್ರವೇಶ ಮಾಡಿ,ಅಲ್ಲಿಂದ ಚಿನ್ನಾಭರಣಗಳನ್ನು ಕಳವು ಮಾಡುವ ದೃಶ್ಯ ಕಂಡು ಬಂತು, ಇದನ್ನು ಖಚಿತಪಡಿಸಿಕೊಂಡ ಬಳಿಕ ಗ್ರಾಮಾಂತರ ಪೋಲೀಸರಿಗೆ ದೂರು ನೀಡಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ಹರೀಶ್ ಮತ್ತು ಮೂರ್ತಿ ಬೇಟಿ ನೀಡಿದ್ದಾರೆ. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚುತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.

ಪ್ರಕರಣ 1

ಫರಂಗಿಪೇಟೆ ಸಮೀಪ ಸುಜೀರ್ ಎಂಬಲ್ಲಿ,ನೂರಾರು ವರ್ಷಗಳ ಇತಿಹಾಸವಿದ್ದ ದೇವರಿಗೆ ಸಂಬಂಧಿಸಿದ ಲಕ್ಷಾಂತರ ರೂ ಮೌಲ್ಯ ಬೆಲೆಬಾಳುವ ಚಿನ್ನಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿಕೊಂಡು ಹೋಗಿದ್ದು, ಎಲ್ಲಾ ದೃಶ್ಯಾವಳಿಗಳು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಸಮೀಪದ ಸುಜೀರು ಎಂಬಲ್ಲಿರುವ ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಸೋಮವಾರ ಮುಂಜಾನೆ ಸುಮಾರು 4 ಗಂಟೆಗೆ 2.30 ಲಕ್ಷದ ಮೌಲ್ಯದ ನಗನಗದುಗಳನ್ನು ಕಳ್ಳರು ಎಗರಿಸಿದ್ದಾರೆ.

ದೇವಳಕ್ಕೆ ಸಂಬಂಧಿಸಿದಂತೆ ನೂರಾರು ವರ್ಷಗಳ ಹಳೆಯದಾದ ಹಿರಿಯರು ಮಾಡಿಸಿದ ಸುಮಾರು ಒಂದುವರೆ ಕೆ.ಜಿ‌.ತೂಕದ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ದೇವರ ಮೂಗುತಿ ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವಾಗಿದೆ. ಇದರ ಜೊತೆಗೆ ಕಾಣಿಕೆ ಹುಂಡಿಯಲ್ಲಿರುವ ನಗದನ್ನು ಕೊಂಡುಹೋಗಿದ್ದಾರೆ.

ಭಾನುವಾರ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವಿದ್ದ ಕಾರಣ ಕಾಣಿಕೆ ಹುಂಡಿಯಲ್ಲಿ ಸುಮಾರು ಹತ್ತು ಸಾವಿರ ರೂಗಳಿಗೂ ಅಧಿಕ ಹಣವಿರಬಹುದು ಎಂದು ಹೇಳಲಾಗುತ್ತಿದೆ.

ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ

ಇದೊಂದು ನುರಿತ ಕಳ್ಳರು ಮಾಡಿದರುವಂತಹ ಕಳ್ಳತನಎಂಬುದು ಸಿ.ಸಿ.ಕ್ಯಾಮರಾದ ಪೂಟೇಜ್ ಗಳು ಮೇಲ್ನೋಟಕ್ಕೆ ಸಾಬೀತುಪಡಿಸುತ್ತದೆ. ಸುಮಾರು 5 ಜನರ ತಂಡ ಈ ಕಳ್ಳತನದಲ್ಲಿ ಭಾಗಿಯಾಗಿರುವುದನ್ನು ಸಿ.ಸಿ.ಕ್ಯಾಮರಾ ದ ವಿಡಿಯೋ ಸಾಕ್ಷಿ ಹೇಳುತ್ತದೆ. ವಾಹನದ ಮೂಲಕ ಬಂದ ಕಳ್ಳರ ತಂಡ ಸುಮಾರು 3.30 ರ ಸಮಯದಲ್ಲಿ ದೇವಸ್ಥಾನದ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶ ಮಾಡಿದ್ದಾರೆ.

ಬಳಿಕ ದೇವಸ್ಥಾನದ ಸುತ್ತಲೂ ತಿರುಗಾಡಿ ಮಾಹಿತಿ ಪಡೆದುಕೊಂಡು, ಗರ್ಭಗುಡಿಯ ಒಳಗೆ ಪ್ರವೇಶ ಮಾಡುತ್ತಾರೆ. ಅಲ್ಲಿ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬರುತ್ತಾರೆ. ಗೋಪುರದಲ್ಲಿ ಕಳ್ಳತನ ಮಾಡಿದ ಎಲ್ಲಾ ಬೆಳೆಬಾಳುವ ವಸ್ತುಗಳನ್ನು ಒಂದೇ ಚೀಲದಲ್ಲಿ ಭದ್ರಗೊಳಿಸಿ ವಾಪಸು ಹೋಗುವ ದೃಶ್ಯ ಕಂಡು ಬಂದಿದೆ.

ಕಳ್ಳರ ಕೈಯಲ್ಲಿ ಮಾರಕಾಸ್ರ್ತಗಳನ್ನು ಹಿಡಿದುಕೊಂಡು ತಿರುಗಾಡುವುದು ಕೂಡ ಕಂಡು ಬಂದಿದೆ. ಕಳ್ಳತನ ಮಾಡಿದ ಬಳಿಕ ಸುಮಾರು 4 ಗಂಟೆ ಅಂದಾಜಿಗೆ ದೇವಸ್ಥಾನದಿಂದ ಹೊರಗೆ ಹೋಗಿದ್ದಾರೆ.

ದೇವಸ್ಥಾನದ ಕಂಪೌಂಡ್ ನ ಒಳಗಡೆಯೇ ಅರ್ಚಕರ ಮನೆಯಿದೆ. ಆದರೂ ಕಳ್ಳರು ಧೈರ್ಯದಿಂದ ಕಳ್ಳತನ ಮಾಡಿದ್ದಾರೆ. ಕಳ್ಳರು ದೇವಸ್ಥಾನದ ಒಳಗೆ ಪ್ರವೇಶ ಮಾಡುವುದನ್ನು ಇವರ ಸಾಕು ನಾಯಿ ಗಮನಿಸಿ ಜೋರಾಗಿ ಬೊಗಳಲು ಆರಂಭಿಸಿದೆ. ನಾಯಿಯ ಬೊಗಳಿದ್ದರಿಂದ ಅರ್ಚಕರಿಗೆ ಎಚ್ಚರವಾಗಿದೆ. ನಾಯಿ ಯಾಕೆ ಬೊಗಳುತ್ತಿದೆ ಎಂದು ಸಿ.ಸಿ.ಕ್ಯಾಮರಾವನ್ನು ನೋಡಿದಾಗ ದೇವಸ್ಥಾನದ ಒಳಗೆ ಮೂವರು ಕಂಡುಬಂದಿದ್ದಾರೆ.ಕೂಡಲೇ ಅರ್ಚಕರು ದೇವಸ್ಥಾನದ ಮ್ಯಾನೇಜರ್ ಅವರಿಗೆ ವಿಚಾರ ತಿಳಿಸಿದ್ದಾರೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮೂವರು ದೇವಸ್ಥಾನದ ಒಳಗೆ ಇದ್ದು,ನನಗೆ ಒಬ್ಬನಿಗೆ ಹೋಗಲು ಹೆದರಿಕೆ ಆಗುತ್ತಿದ್ದು ಅವರನ್ನು ಬರುವಂತೆ ತಿಳಿಸಿದ್ದಾರೆ. ಕೂಡಲೇ ಅವರು ಇಲ್ಲಿಗೆ ಬಂದರಾದರೂ ಅದಾಗಲೇ ಕೈ ಕಳ್ಳರು ತನ್ನ ಕೈಚಳಕದಿಂದ ಕಳವು ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಪ್ರಕರಣ 2

ಮಂಗಳವಾರ ತಡರಾತ್ರಿಗೆ ತುಂಬೆಯ ದೇವಸ್ಥಾನವೊಂದಕ್ಕೆ ನುಗ್ಗಿದ್ದು, ಲಕ್ಷಾಂತರ ರೂ ಮೌಲ್ಯದ ನಗನಗದು ಕಳವು ಮಾಡಿದ ಬಗ್ಗೆ ವರದಿಯಾಗಿದೆ.

ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗಿಲಿನ ಚಿಲಕ ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಹೇಳಲಾಗಿದೆ.

ದೇವಸ್ಥಾನದ ಕಚೇರಿಯಲ್ಲಿರಿಸಿದ್ದ ಸುಮಾರು ಒಂದುವರೆ ಕೆ.ಜಿ ತೂಕದ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಜಲದ್ರೋಣವನ್ನು ಕಳ್ಳತನ ಮಾಡಲಾಗಿದೆ. ಇದರ ಜೊತೆಗೆ ಗೊದ್ರೇಜ್ , ಕ್ಯಾಸ್ ಡ್ರಾಯರ್ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 50 ಸಾವಿರದಷ್ಟು ಹಣವನ್ನು ಕೂಡ ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ.

ದೇವಸ್ಥಾನದ ಸುತ್ತ ಮುಂಜಾಗ್ರತಾ ಕ್ರಮವಾಗಿ ಸಿ.ಸಿ‌.ಕ್ಯಾಮರಾ ಅಳವಡಿಸಲಾಗಿದೆಯಾದರೂ ಕಳ್ಳರ ತಂಡ ಕ್ಯಾಮರಾ ಡಿ.ವಿ‌ಆರ್ ನ್ನು ಕೂಡ ಬಿಡದೆ ಎಗರಿಸಿದ್ದಾರೆ.

ಸೋಮವಾರ ಮುಂಜಾನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ದೇವಸ್ಥಾನವೊಂದರ ಕಳವು ನಡೆಯುವುದನ್ನು ಸ್ವತಃ ಅಲ್ಲಿನ ಅರ್ಚಕರು ಸಿ.ಸಿ.ಕ್ಯಾಮರಾ ದ ಮೂಲಕ ನೋಡಿದ್ದಾರೆ ಆದರೂ ಕಳ್ಳರ ಬಳಿ ಮಾರಕಾಸ್ತ್ರಗಳು ಇರುವುದು ಕಂಡು ಬಂದದ್ದರಿಂದ ತಡೆಯಲು ಅಸಾಧ್ಯವಾಗಿತ್ತು. ಮತ್ತು ಈ ಕಳ್ಳತನದ ವಿಡಿಯೋ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿರುವುದು ಸುದ್ದಿಯಾಗಿತ್ತು. ಅಂತಹ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಕಳ್ಳರು ಯೋಚಿಸಿಯಾಗಿರಬೇಕು,ಇಲ್ಲಿನ ಸಿ.ಸಿ.ಕ್ಯಾಮರಾ ದ ಪೂಟೇಜ್ ಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಿಗ್ಗೆ ದೇವಸ್ಥಾನದ ಸಿಬ್ಬಂದಿಯೊರ್ವರು 6 ಗಂಟೆಗೆ ಬಂದಾಗ ಮುಂಬಾಗಿಲು ಚಿಲಕ ಮುರಿದಿದ್ದು ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ದೇವಸ್ಥಾನದ ಸೇವಾ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆಯವರಿಗೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ‌.ಹರೀಶ್, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿದ್ದು ತನಿಖೆ ನಡೆಯುತ್ತಿದೆ.

Whats_app_banner