ಭಾರಿ ಗಾಳಿ ಮಳೆಗೆ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಹಾನಿ; ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯಗಳದ್ದೇ ರಾಶಿ
Oct 22, 2024 03:22 PM IST
ಭಾರಿ ಗಾಳಿ ಮಳೆಗೆ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಹಾನಿ
- ಮಳೆಯಿಂದಾಗಿ ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಅಡ್ಡಿಯಾಗಿದೆ. ಕೆಲವು ಸ್ಟಾಲ್‌ಗಳು ಗಾಳಿಗೆ ಹಾರಿಹೋಗಿದ್ದು, ಮತ್ತೆ ರಿಪೇರಿ ಕೆಲಸ ನಡೆದಿದೆ. ಈ ನಡುವೆ ವಸ್ತು ಪ್ರದರ್ಶನ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಹಾಗೂ ಪ್ಲಾಸ್ಟಿಕ್‌ಗಳ ರಾಶಿ ಕಂಡುಬರುತ್ತಿದೆ. ಜನರು ಸ್ವಚ್ಛತೆ ಮರೆತು ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆದಿದ್ದಾರೆ.
ಭಾರಿ ಗಾಳಿ ಮಳೆಯಿಂದಾಗಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಹಲವು ಮಳಿಗೆಗಳಿಗೆ ಹಾನಿಯಾಗಿದೆ. ಸೋಮವಾರ ಸಂಜೆ ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಕೆಲವು ಮಳಿಗೆಗಳು ತರಗೆಲೆಯಂತೆ ಹಾರಿ ಬಿದ್ದಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮಳಿಗೆದಾರರು ಅಳಲು ತೋಡಿಕೊಂಡಿದ್ದಾರೆ. ಸಣ್ಣ ಪುಟ್ಟ ಮಳಿಗೆಗಳಿಗೆ ಹಾನಿಯಾಗಿದೆ. ಹೀಗಾಗಿ ನಿನ್ನೆ ವಸ್ತು ಪ್ರದರ್ಶನವನ್ನು ಸಂಪೂರ್ಣವಾಗಿ ಬಂದ್ ಮಾಡಿ ಅಗತ್ಯ ದುರಸ್ತಿ ಕೆಲಸ ಮಾಡಲಾಗಿದೆ. ಇಂದಿನಿಂದ ಮತ್ತೆ ಎಂದಿನಂತೆ ಸಂಜೆ 3 ಗಂಟೆಗೆ ವಸ್ತು ಪ್ರದರ್ಶನ ಆರಂಭವಾಗಲಿದೆ.
ಮಲ್ಲಿಗೆ ಇಡ್ಲಿ ಸ್ಟಾಲ್ ಒಂದಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹಾಗೂ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ಹೇಳಿದ್ದಾರೆ.
ದಸರಾ ಮಹೋತ್ಸವ ಅದ್ದೂರಿಯಾಗಿ ಜರುಗಿದ ಕಾರಣ ವಸ್ತು ಪ್ರದರ್ಶನಕ್ಕೂ ಹೆಚ್ಚಿನ ಜನರು ಆಗಮಿಸಿದ್ದಾರೆ. ಇದುವರೆಗೆ ಸುಮಾರು 8ರಿಂದ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿರುವ ಅಂದಾಜು ಇದೆ. ಈ ಬಾರಿ ದಸರಾ ವಸ್ತು ಪ್ರದರ್ಶನದಲ್ಲಿ ವಿಶೇಷವಾಗಿ ಮೈಸೂರು ಬ್ರಾಂಡ್ ಪರಿಚಯಿಸಿದ್ದೇವೆ. ಜೊತೆಗೆ ಈ ಬಾರಿಯ ದಸರಾ ವಸ್ತು ಪ್ರದರ್ಶನದಲ್ಲಿ ಹೆಚ್ಚಿನ ದೀಪಾಲಂಕಾರ ಮಾಡಲಾಗಿದ್ದು, ಜನರ ಆಕರ್ಷಣೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. 33 ಸರ್ಕಾರಿ ಮಳಿಗೆಗಳು, 120 ವಾಣಿಜ್ಯ ಮಳಿಗೆಗಳು ಮತ್ತು 50 ಆಹಾರ ಮಳಿಗೆಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಬಹುತೇಕ ಎಲ್ಲಾ ಮಳಿಗೆಗಳು ತುಂಬಿವೆ. ಕಳೆದ ಬಾರಿ ಸಾಕಷ್ಟು ಮಳಿಗೆಗಳು ಖಾಲಿ ಉಳಿದಿದ್ದವು. ಈ ಬಾರಿ ಎಲ್ಲಾ ಮಳಿಗೆಗಳು ಭರ್ತಿಯಾಗಿರುವುದು ಖುಷಿಯ ವಿಚಾರ ಎಂದು ರುದ್ರೇಶ್ ಹೇಳಿದ್ದಾರೆ.
ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯ
ಮೈಸೂರು ದಸರಾ ವಸ್ತು ಪ್ರದರ್ಶನದ ಆವರಣ ಪ್ಲಾಸ್ಟಿಕ್‌ನಿಂದ ತುಂಬಿ ಹೋಗಿದೆ. ಮೈಸೈರು ನಗರವು ಕರ್ನಾಟಕದ ಅತ್ಯಂತ ಸ್ವಚ್ಛ ನಗರವಾಗಿದ್ದು, ಸ್ವಚ್ಛತೆ ವಿಚಾರದಲ್ಲಿ ದೇಶದಲ್ಲಿ ಗಮನ ಸೆಳೆದಿದೆ. ಆದರೆ, ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದ ಚರಂಡಿಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು ತೇಲಾಡುತ್ತಿವೆ. ನೀರು ಕುಡಿದ ನಂತರ ಖಾಲಿಯಾದ ಬಾಟಲಿಗಳನ್ನು ಸಾರ್ವಜನಿಕರು ತೆರೆದ ಚರಂಡಿಗೆ ಎಸೆದಿದ್ದಾರೆ. ಪರಿಣಾಮ ಮಳೆ ನೀರು ಕೂಡ ಸರಾಗವಾಗಿ ಹರಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿಯ ವಸ್ತು ಪ್ರದರ್ಶನವನ್ನು ಪ್ಲಾಸ್ಟಿಕ್ ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಆದರೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಜನರು ಎಸೆದು, ಅವ್ಯವಸ್ಥೆಗೆ ಕಾರಣರಾಗಿದ್ದಾರೆ. ಈ ಕುರಿತು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂನ್ ಖಾನ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ವಸ್ತು ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ನೀರಿನ ಬಾಟಲಿ ಮಾರಾಟ ವಿಚಾರದಲ್ಲಿ ಅಂಗಡಿ ಮಳಿಗೆದಾರರು ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಬ್ಬಂದಿ ನಡುವೆ ಸಂಘರ್ಷ ನಡೆದಿದೆ. ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿಷೇಧ ಎಲ್ಲಿದೆ ಎಂಬ ದಾಖಲೆ ತೋರಿಸಿ ಎಂದು ಮಳಿಗೆದಾರರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಜನರು ಕೂಡ ಜಾಗ್ರತೆ ವಹಿಸಬೇಕು. ಜನರು ನಿರ್ಲಕ್ಷ್ಯ ಮಾಡಬಾರದು. ಪ್ಲಾಸ್ಟಿಕ್ ಪದಾರ್ಥಗಳ ವಿಲೇವಾರಿಗಾಗಿ ಯಂತ್ರವೊಂದನ್ನು ತರಲು ಚಿಂತನೆ ನಡೆಸಿದ್ದೇವೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಸ್ಪಷ್ಟನೆ ನೀಡಿದ್ದಾರೆ.