ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ ಅವರು 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ
Nov 20, 2024 04:05 PM IST
ಹಿರಿಯ ಸಾಹಿತಿ ಗೊ ರು ಚನ್ನಬಸಪ್ಪ ಅವರು 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ನಾಡೋಜ ಗೊ ರು ಚನ್ನಬಸಪ್ಪ ಅವರು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಂಡ್ಯದಲ್ಲಿ ಡಿಸೆಂಬರ್ 20, 21, ಹಾಗೂ 23 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಬೆಂಗಳೂರು: ಮಂಡ್ಯದಲ್ಲಿ ಡಿಸೆಂಬರ್ ಕೊನೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪನವರು ಆಯ್ಕೆಯಾಗಿದ್ದಾರೆ. ಮಂಡ್ಯದಲ್ಲಿ ಡಿಸೆಂಬರ್. 20, 21, ಹಾಗೂ 23 ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈಗಾಗಲೇ ಇದಕ್ಕೆ ಸಿದ್ಧತೆ ನಡೆದಿದ್ದು, ಸಮ್ಮೇಳನಾಧ್ಯಕ್ಷ ಆಯ್ಕೆಗೆ ಸಭೆಯೂ ನಡೆದಿತ್ತು. ಮಹಿಳಾ ಸಾಹಿತಿಗಳನ್ನು ಈ ಬಾರಿ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಆಗ್ರಹವೂ ಇತ್ತು. ಆದರೆ, ಈ ಸಲ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ನಾಡೋಜ ಗೊ ರು ಚನ್ನಬಸಪ್ಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಆಪ್ತ ವಲಯದಲ್ಲಿ ಮತ್ತು ಸಾಹಿತ್ಯ ವಲಯದಲ್ಲಿ ಗೊರುಚ ಎಂದೇ ಜನಪ್ರಿಯರಾಗಿರುವ ಗೊ.ರು.ಚನ್ನಬಸಪ್ಪ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಗೊಂಡೇದಹಳ್ಳಿಯವರು. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಅಷ್ಟೇ ಅಲ್ಲ, ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವಲ್ಲಿ ನಿರ್ವಹಿಸಿದ ಪಾತ್ರ ಮುಖ್ಯವಾದುದು. ಅವರು ಕರ್ನಾಟಕ ಜನಪದ ಕಲೆಗಳು ಎಂಬ ಕೃತಿಯನ್ನು ಸಂಪಾದಿಸಿದ್ದು, ಕರ್ನಾಟಕ ಪ್ರಗತಿಪಥ, ಸಾಕ್ಷಿಕಲ್ಲು, ಬಾಗೂರು ನಾಗಮ್ಮ, ಗ್ರಾಮಗೀತೆಗಳು, ಹೊನ್ನ ಬಿತ್ತೇವು ನೆಲಕೆಲ್ಲ, ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಪತ್ರಿಕಾವೃತ್ತಿಯನ್ನೂ ಮಾಡಿರುವ ಗೊರುಚ ಅವರು, ‘ಜಾನಪದ ಜಗತ್ತು’, `ಪಂಚಾಯತ್ ರಾಜ್ಯ’, `ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಮೊದಲಾದ ಪತ್ರಿಕೆಗಳ ಸಂಪಾದಕರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ೧೯೯೨ ರಿಂದ ೧೯೯೫ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ೧೮ನೇ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ (೧೯೯೩), ಮಂಡ್ಯ (೧೯೯೪), ಮುಧೋಳಗಳಲ್ಲಿ (೧೯೯೫) ೬೨, ೬೩, ೬೪ನೇ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದು, ಅನೇಕ ಮೌಲಿಕ ಗ್ರಂಥಗಳನ್ನೂ ಪ್ರಕಟಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು.
ಮಂಡ್ಯ ಸಾಹಿತ್ಯ ಸಮ್ಮೇಳ ಪೂರ್ವಭಾವಿ ಸಭೆ; ಸಾಹಿತ್ಯ ಪರಿಷತ್, ಸರ್ಕಾರದ ವಿರುದ್ಧ ಅಸಮಾಧಾನ
ಸಕ್ಕರೆ ನಾಡು ಮಂಡ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನ ಎಣಿಕೆ ಶುರುವಾಗಿದೆ. ಈ ನಡುವೆ, ಪೂರ್ವ ಭಾವಿ ತಯಾರಿ ಸಭೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸರ್ಕಾರದ ವಿರುದ್ಧ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸತೊಡಗಿದ್ದಾರೆ. ಅನೇಕ ಸಮಿತಿಗಳ ಸದಸ್ಯರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳತೊಡಗಿರುವುದಾಗಿ ಟಿವಿ9 ಕನ್ನಡ ವರದಿ ಮಾಡಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಮಹೇಶ್ ಜೋಷಿ ಅವರ ನಡೆ, ಕಾರ್ಯವೈಖರಿ ಬಗ್ಗೆ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ನೇರಾ ನೇರ ವಿರೋಧ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದ್ದಾರೆ. ಇದರೊಂದಿಗೆ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಮತ್ತು ಸಾಹಿತಿಗಳ ನಡುವಿನ ಭಿನ್ನಾಭಿಪ್ರಾಯಗಳು ಸ್ಪೋಟಗೊಂಡಂತಾಗಿದೆ ಎಂದು ವರದಿ ವಿವರಿಸಿದೆ. ಸುದ್ದಿಗೋಷ್ಠಿ ನಡೆಸಿದಾಗಲೂ ಹೈಡ್ರಾಮಾ ಸೃಷ್ಟಿಯಾಗಿದ್ದು, ಅಲ್ಲಿ ಮೊದಲು ಯಾರು ಮಾತನಾಡಬೇಕು ಎಂಬ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಮತ್ತು ಹಿರಿಯ ಸಾಹಿತಿ ಪ್ರೊ ಮುದ್ದೇಗೌಡ ಅವರು ಪರಸ್ಪರ ವಾಕ್ಸಮರಕ್ಕಿಳಿದುದು ಕಂಡುಬಂತು ಎಂದು ವರದಿ ಹೇಳಿದೆ.
ಸಾಹಿತ್ಯ ಸಮ್ಮೇಳನ ಪ್ರತಿನಿಧಿ ನೋಂದಣಿ ಶುರು
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿಗೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಶನಿವಾರ (ನವೆಂಬರ್ 16) ಚಾಲನೆ ನೀಡಿದರು. ಪ್ರತಿನಿಧಿಗಳ ನೋಂದಣಿಗೆ 600 ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಗಿದ್ದು, 20 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.