Mandya News: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬರೀ ಮೆರವಣಿಗೆಗೆ ಒಂದು ಕೋಟಿ ರೂ. ಪ್ರಸ್ತಾವನೆ !
Oct 22, 2024 11:08 AM IST
ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಖರ್ಚಿನ ಪಟ್ಟಿ ಸಿದ್ದವಾಗಿದೆ.
- ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಒಂದು ಕೋಟಿ ರೂ. ಖರ್ಚಾಗುವ ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಎರಡು ಗಂಟೆಯ ಮೆರವಣಿಗೆಗೆ ಇಷ್ಟು ಖರ್ಚಾಗಬಹುಗುದೇ ಎನ್ನುವ ಚರ್ಚೆಗಳೂ ನಡೆದಿವೆ.
ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆ ಆಯೋಜಿಸಲು ಎಷ್ಟು ಖರ್ಚಾಗಬಹುದು. ಅದು ಕೋಟಿ ರೂ.ತಲುಪಬಹುದು ಎಂದರೆ ನಂಬುತ್ತೀರಾ? ಸತತ ಮೂರು ಬಾರಿ ಮುಂದೆ ಹೋಗಿ ಈ ವರ್ಷಾಂತ್ಯಕ್ಕೆ ಮಂಡ್ಯದಲ್ಲಿ ನಿಗದಿಯಾಗಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಭರದಿಂದ ನಡೆದಿವೆ. ಇನ್ನು ಎರಡು ತಿಂಗಳು ಮಾತ್ರ ಸಮ್ಮೇಳನಕ್ಕೆ ಬಾಕಿಯಿದ್ದು, ಹತ್ತಕ್ಕೂ ಹೆಚ್ಚು ಸಮಿತಿಗಳು ಸಮ್ಮೇಳನ ಆಯೋಜನೆಗೆ ಕಾರ್ಯೋನ್ಮುಖವಾಗಿವೆ. ಈ ಬಾರಿ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 30 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅದರಂತೆಯೇ ಆಹಾರ, ಆತಿಥ್ಯ, ವೇದಿಕೆ, ಸ್ವಾಗತ, ಮೆರವಣಿಗೆ ಸಹಿತ ನಾನಾ ಸಮಿತಿಗಳು ಪ್ರಸ್ತಾವನೆಯನ್ನು ಸಿದ್ದಪಡಿಸುತ್ತಿವೆ. ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆಯೂ ಪ್ರಮುಖವಾಗಿದ್ದು, ಇದಕ್ಕಾಗಿ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ದವಾಗಿದೆ. ಎರಡು ಗಂಟೆಗಳ ಮೆರವಣಿಗೆಗೆ ಒಂದು ಕೋಟಿ ರೂ. ವೆಚ್ಚವಾಗಬಹುದೇ ಎನ್ನುವ ಚರ್ಚೆಗಳು ನಡೆದಿವೆ.
2024ರ ಡಿಸೆಂಬರ್ 20 ರಿಂದ ಮೂರು ದಿನ ಮಂಡ್ಯದಲ್ಲಿ ನಡೆಯಲಿರುವ ಮೆರವಣಿಗೆಯನ್ನು ವ್ಯವಸ್ಥಿತಿ ಮತ್ತು ವರ್ಣರಂಜಿತವಾಗಿ ಸಂಘಟಿಸಲು ಒಟ್ಟು 95 ಲಕ್ಷ ರೂಪಾಯಿಗಳ ತಾತ್ಕಾಲಿಕ ಅಂದಾಜು ವೆಚ್ಚದ ಬಜೆಟ್ ಅನ್ನು ಮೆರವಣಿಗೆ ಸಮಿತಿಯ ಉಪ ಸಮಿತಿಗಳು ಮಂಡಿಸಿದವು.
ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಅ. 23ರಂದು ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಭೆಯ ಹಿನ್ನೆಲೆಯಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ಶಾಸಕ ಮಧು ಜಿ.ಮಾದೇಗೌಡ ಅವರು ಸಮಿತಿಗೆ ಬೇಕಾಗಬಹುದಾದ ಅನುದಾನ ಕೋರಲು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉಪ ಸಮಿತಿಗಳ ಸಂಚಾಲಕರ ಸಭೆ ನಡೆಸಿದರು.
ಈ ವೇಳೆ 10 ವಿವಿಧ ಉಪ ಸಮಿತಿಗಳ ಸಂಚಾಲಕರು ವಿವಿಧ ಚಟುವಟಿಕೆಗಳನ್ನು ನಿರ್ವಹಿಸಲು ತಮ್ಮ ಸಮಿತಿಗಳಿಗೆ ಬೇಕಾಗಬಹುದಾದ ಅಂದಾಜು ವೆಚ್ಚದ ಮಾಹಿತಿಯನ್ನು ಮಂಡಿಸಿದರು.
ಕಲಾತಂಡ ಆಯ್ಕೆ ಉಪ ಸಮಿತಿ ರೂ. 31.45 ಲಕ್ಷ; ಸ್ತಬ್ಧಚಿತ್ರ ಉಪ ಸಮಿತಿ ರೂ. 21 ಲಕ್ಷ; ಪೂರ್ಣಕುಂಭ ಉಪ ಸಮಿತಿ ರೂ. 1 ಲಕ್ಷ; ಸ್ಕೌಟ್ಸ್ ಮತ್ತು ಗೈಡ್ಸ್ ಉಪ ಸಮಿತಿ ರೂ. 1.30 ಲಕ್ಷ; ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ಎನ್.ಸಿ.ಸಿ. ತಂಡಗಳ ಸಂಯೋಜನಾ ಉಪ ಸಮಿತಿ ರೂ.1.50 ಲಕ್ಷ; ಎತ್ತಿನಗಾಡಿ ಮತ್ತು ಆನೆಗಳ ಸಂಯೋಜನಾ ಉಪ ಸಮಿತಿ ರೂ. 6 ಲಕ್ಷ; ಆಟೋರಿಕ್ಷಾ ಮೆರವಣಿಗೆ ಉಪ ಸಮಿತಿ ರೂ. 1.75 ಲಕ್ಷ; ಸಂಘ-ಸಂಸ್ಥೆಗಳ ಸಂಯೋಜನಾ ಉಪ ಸಮಿತಿ ರೂ. 50 ಸಾವಿರ; ಶಾಲಾ-ಕಾಲೇಜುಗಳ ಸಂಯೋಜನಾ ಉಪ ಸಮಿತಿ ರೂ. 50 ಸಾವಿರ ಹಾಗೂ ಸಮ್ಮೇಳನ ಅಧ್ಯಕ್ಷರ ರಥ, ಜಿಲ್ಲಾ ಅಧ್ಯಕ್ಷರ ರಥ ಸೇರಿದಂತೆ ಇನ್ನಿತರೆ ವೆಚ್ಚ ಸೇರಿ ರೂ. 30 ಲಕ್ಷ ಸೇರಿದಂತೆ ಒಟ್ಟು 95 ಲಕ್ಷ ರೂಪಾಯಿಗಳ ತಾತ್ಕಾಲಿಕ ಅಂದಾಜು ವೆಚ್ಚದ ಮಾಹಿತಿಯನ್ನು ಉಪ ಸಮಿತಿಗಳ ಸಂಚಾಲಕರು ಮಂಡಿಸಿದರು.
ಸಮಿತಿಯ ಅಧ್ಯಕ್ಷ, ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಸಾಕಷ್ಟು ಬಾರಿ ಚರ್ಚಿಸಿ, ಪರಿಷ್ಕರಿಸಿ ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿದೆ. ನಮ್ಮ ಸಮಿತಿಗೆ ಎಷ್ಟು ಅನುದಾನವನ್ನು ನೀಡುತ್ತಾರೆ ಎನ್ನುವ ಮಾಹಿತಿಯಿಲ್ಲ. ಆದಾಗ್ಯೂ, ಸಭೆಯು ಅನುಮೋದಿಸಿರುವ ಅಂದಾಜು ಮೊತ್ತದ ಮಾಹಿತಿಯನ್ನು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಿ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಲಾಗುವುದು ಎಂದು ಹೇಳಿದರು.