logo
ಕನ್ನಡ ಸುದ್ದಿ  /  ಕರ್ನಾಟಕ  /  ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ: ಡಾ.ವಡ್ಡಗೆರೆ ನಾಗರಾಜಯ್ಯ

ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ: ಡಾ.ವಡ್ಡಗೆರೆ ನಾಗರಾಜಯ್ಯ

Umesh Kumar S HT Kannada

Oct 31, 2024 10:08 AM IST

google News

ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ ಎಂದು ಲೇಖಕ, ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದಾರೆ. (ಸಾಂಕೇತಿಕ ಚಿತ್ರ)

  • ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ 12ನೇ ಕದಳಿ ಮಹಿಳಾ ಸಮಾವೇಶದಲ್ಲಿ ಚಿಂತಕಿ ವಿನಯಾ ಒಕ್ಕುಂದ ಅವರು ವಿಷಯ ಮಂಡನೆ ಮಾಡುತ್ತ, “ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ” ಎಂದು ಹೇಳಿದ್ದರು. ಅದು ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ ಎಂದು ಸಾಮಾಜಿಕ ಕಾರ್ಯಕರ್ತ, ಲೇಖಕ ಡಾ.ವಡ್ಡಗೆರೆ ನಾಗರಾಜಯ್ಯ ಪ್ರತಿಪಾದಿಸಿದ್ದಾರೆ. ಅದರ ವಿವರ ಇಲ್ಲಿದೆ.

ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ ಎಂದು ಲೇಖಕ, ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದಾರೆ. (ಸಾಂಕೇತಿಕ ಚಿತ್ರ)
ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ ಎಂದು ಲೇಖಕ, ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದಾರೆ. (ಸಾಂಕೇತಿಕ ಚಿತ್ರ) (HTK)

ಚಿಂತಕಿ ವಿನಯಾ ಒಕ್ಕುಂದ ಅವರು ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ 12ನೇ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು, “ಒಳಗೆ ಸುಳಿವ ಆತ್ಮ” ಎಂಬ ವಿಷಯದ ಬಗ್ಗೆ ಮಾತನಾಡಿದ್ದರು. ಅಲ್ಲಿ ಅವರು ಮಾತಿನ ನಡುವೆ, ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂದು ಹೇಳಿದ್ದರು. ಇದು ಈಗ ಟೀಕೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಲೇಖಕ, ಸಾಮಾಜಿಕ ಕಾರ್ಯಕರ್ತ ಡಾ ವಡ್ಡಗೆರೆ ನಾಗರಾಜಯ್ಯ ಅವರು ಪ್ರತಿಕ್ರಿಯಿಸಿದ್ದು, “ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ” ಎಂಬುದನ್ನು ಮನಗಾಣಬೇಕು ಎಂದು ಹೇಳಿದ್ದಾರೆ. ಮೂದಲಿಕೆಗೂ, ವಿಮರ್ಶೆಗೂ ಇರುವ ವ್ಯತ್ಯಾಸವನ್ನು ಹೇಳುವುದಕ್ಕಾಗಿ ವಡ್ಡಗೆರೆ ನಾಗರಾಜಯ್ಯ ಅವರು, ಸಾಮಾಜಿಕ ಹೋರಾಟಗಾರ್ತಿ ಅಖಿಲಾ ವಿದ್ಯಾಸಂದ್ರ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಅಖಿಲಾ ವಿದ್ಯಾಸಂದ್ರ ಅಂಬೇಡ್ಕರ್ ಬಗ್ಗೆ ಹೇಳಿದ ಮಾತುಗಳನ್ನು ನಾಗರಾಜಯ್ಯ ಅವರು ಪ್ರಸ್ತಾಪಿಸಿದ್ದಾರೆ.

ವಿನಯಾ ಅವರ ಅಭಿಪ್ರಾಯಕ್ಕೆ ಪೂರಕವಾಗಿ ನನ್ನದೂ ಒಂದು ಪ್ರಶ್ನೆ

ಲೇಖಕ, ಸಾಮಾಜಿಕ ಕಾರ್ಯಕರ್ತ ಡಾ ವಡ್ಡಗೆರೆ ನಾಗರಾಜಯ್ಯ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿರುವುದು ಇಷ್ಟು-

ಹೆಣ್ಣಿಗೆ ಜನಿವಾರ ಧರಿಸುವ ಧಾರ್ಮಿಕ ಸ್ವಾತಂತ್ರ್ಯವಿಲ್ಲದ ಹೊರತು ತನಗೂ ಜನಿವಾರ ಧಾರಣೆ ಬೇಕಿಲ್ಲವೆಂದು ಸ್ತ್ರೀ ಪುರುಷರಿಬ್ಬರಿಗೂ ಸಮಾನವಾದ ಲಿಂಗವನ್ನು ನೀಡಿ ಲಿಂಗಾಯತ ಧರ್ಮವನ್ನು ಸ್ಥಾಪಿಸುವ ಮೂಲಕ ಹೆಣ್ಣಿಗೆ ಸಮಾನವಾದ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದು ಬಸವಣ್ಣ. ಇಂತಹ ಬಸವಣ್ಣನಿಗೆ ಪುರುಷಾಹಂಕಾರವನ್ನು ಮೀರಲಾಗಿಲ್ಲ ಎಂದು ಚಿಂತಕಿ ವಿನಯಾ ಒಕ್ಕುಂದ ಆಡಿರುವ ಮಾತು ಈಗ ಟೀಕೆಗೆ ಗುರಿಯಾಗಿದೆ.

ವಿನಯಾ ಒಕ್ಕುಂದ ಅವರ ವಿಮರ್ಶೆಯನ್ನು ಮೊದಲು ಗೌರವದಿಂದ ಸ್ವೀಕರಿಸಿ... ಆನಂತರದಲ್ಲಿ ಸಂವಾದಿಸಿರಿ. ಅಭಿಪ್ರಾಯ ಭೇದಗಳು ಆರೋಗ್ಯಕರ ಸಂವಾದಕ್ಕೆ ದಾರಿ ತೆರೆಯಬೇಕೇ ಹೊರತು ಸಂವಾದದ ಸಾಧ್ಯತೆಯನ್ನು ಮೊಟುಕುಗೊಳಿಸಬಾರದು.

ವಿನಯಾ ಅವರ ಅಭಿಪ್ರಾಯಕ್ಕೆ ಪೂರಕವಾಗಿ ನನ್ನದೂ ಒಂದು ಪ್ರಶ್ನೆ ಇದೆ : ಯಾವ ವಚನಕಾರ/ ವಚನಕಾರ್ತಿ ಮಹಿಳಾ ಅಂಕಿತ ನಾಮದಲ್ಲಿ ವಚನಗಳನ್ನು ಬರೆದಿದ್ದಾರೆ ಹೇಳಿ ? ಪುರುಷ ಅಂಕಿತ ನಾಮಗಳೇ ಯಾಕೆ ಬೇಕಿತ್ತು ? ಹೀಗಿದ್ದೂ ಬಸವಣ್ಣ ಸ್ತ್ತೀ ಸಮಾನತೆಯ ವಿರೋಧಿಯಾಗಿರಲಿಲ್ಲ ಎಂಬುದನ್ನು ಮೊದಲಿಗೆ ಮನಗಾಣೋಣ.

''ಅಂಬೇಡ್ಕರ್ ತಮ್ಮ ಹೆಂಡತಿಯಾದ ರಮಾಬಾಯಿ ಅವರನ್ನು ತಮಗಾಗಿ ಉಪಯೋಗಿಸಿಕೊಂಡು, ಒಂದಾದ ಮೇಲೊಂದರಂತೆ ಮಕ್ಕಳನ್ನು ಹುಟ್ಟಿಸಿ, ಬಿಟ್ಟು ವಿದೇಶಕ್ಕೆ ಹೋದರು" ಎಂದು ಅಖಿಲಾ ವಿದ್ಯಾಸಂದ್ರ ಎಂಬುವವರು ಕೀಳುಮಟ್ಟದಲ್ಲಿ ಟೀಕಿಸಿ ಅವಿವೇಕ ಪ್ರದರ್ಶನ ಮಾಡಿದ್ದರು. ಅಂತಹ ಕೀಳುಮಟ್ಟದ ಟೀಕೆಯನ್ನು ಬಸವಣ್ಣನವರನ್ನು ಕುರಿತು ವಿನಯಾ ಒಕ್ಕುಂದ ಮಾಡಿರುವುದಿಲ್ಲ ಎಂಬುದನ್ನು ಕೂಡಾ ಇದೇ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳೋಣ. ವಿನಯಾ ಒಕ್ಕುಂದ ಅವರು ಬಸವಣ್ಣನವರನ್ನು ಕುರಿತು ಚರ್ಚಿಸಲು ತೊಡಗಿರುವರೇ ಹೊರತು ಅಖಿಲಾ ವಿದ್ಯಾಸಂದ್ರರು ಮಾಡಿದಂತೆ ಅಂಬೇಡ್ಕರ್ ಅವರನ್ನು ಕುರಿತು ಹೀಗಳಿಕೆ ಅಥವಾ ಮೂದಲಿಕೆ ಮಾಡಿಲ್ಲದಿರುವುದು ಸಮಾಧಾನಕರ ಸಂಗತಿ.

ಡಾ.ವಡ್ಡಗೆರೆ ನಾಗರಾಜಯ್ಯ, ಲೇಖಕ, ಸಾಮಾಜಿಕ ಕಾರ್ಯಕರ್ತ

ಡಾ.ವಡ್ಡಗೆರೆ ನಾಗರಾಜಯ್ಯ ಫೇಸ್‌ಬುಕ್‌ ಪೋಸ್ಟ್ ಇಲ್ಲಿದೆ

ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ ಹೀಗಿದೆ..

ಅಳಗುಂಡಿ ಅಂದಾನಯ್ಯ ಅವರು, "ಬಸವಣ್ಣನವರ "ಶರಣಸತಿ" ಎನ್ನುವ ಪರಿಕಲ್ಪನೆಯನ್ನೇ ಅರ್ಥ ಮಾಡಿಕೊಂಡರೆ; ಅವರು ಪುರುಷ ಅಹಂಕಾರ ಮೀರಿದವರು ಹೌದು ಅಲ್ಲವೇ ಎನ್ನುವುದು ಅರಿವಿಗೆ ಬರುತ್ತದೆ. ಶರಣರು; ಹೆಣ್ಣು ಗಂಡಿನ ಗಡಿ ರೇಖೆಯನ್ನೇ ಅಳಿಸಿ ಹಾಕಿ ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ ಗಂಡೂ ಅಲ್ಲ ಎಂದವರು. ಅಷ್ಟು ಉನ್ನತ ನೆಲೆಯಲ್ಲಿ ಮಾನವನಿಂದ ಶರಣರಾದ ಅಂಥವರ ವ್ಯಕ್ತಿತ್ವದ ವಿಮರ್ಶೆಗೆ ಯಾವ ರೀತಿಯ ಮಾನದಂಡಗಳು ಇರಬೇಕು ಎಂಬ ವಿಚಾರ ಹಾಗೂ ಬಳಸುವ ಪರಿಭಾಷೆಯು ಹೇಗಿರಬೇಕು ಎನ್ನುವ ಪ್ರಜ್ಞಾವಂತಿಕೆ ಮುಖ್ಯ ಅಲ್ಲವೇ ಸರ್? ಬಸವಣ್ಣ ಅವರ ಸಮಕಾಲೀನ ವಚನಕಾರ್ತಿಯರಿಗೆ ಅರ್ಥವಾಗಿರುವ ಬಗೆಯ ಬಗ್ಗೆ ಅವರ ವಚನಗಳನ್ನು ಗಮನಿಸಿದರೆ ಖಂಡಿತಾ ಅವರ ಸಂಶಯ ನೀಗೀತು ಎನಿಸುತ್ತದೆ. ನೆಲುವಿಗೆ ಹಾರದ ..ಮುಗಿಲಿಗೆ ಹಾರೀತೆ!? ಎನ್ನುವ ಗಾದೆ ಮಾತು ನೆನಪಿಗೆ ಬರುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಕರ್ನಲ್ ಡಾ. ಶ್ರೀಧರ ಎಂಬುವವರು ಪ್ರತಿಕ್ರಿಯಿಸುತ್ತಾ," 'male ego' ಎಂಬುದನ್ನು 'ಪುರುಷ ಅಹಂಕಾರ' ಎಂದು ಪತ್ರಕರ್ತರು ಅನುವಾದಿಸಿರಬಹುದೇ? ego ಪದಕ್ಕೆ ಸರಿಯಾದ ಕನ್ನಡ ಪದ ಸಿಗದಿರಬಹುದು. ಅದನ್ನು ಕೆಲವೊಮ್ಮೆ 'ಹೆಮ್ಮೆ' ಎನ್ನುವ ಅರ್ಥದಲ್ಲೂ ಉಪಯೋಗ ಮಾಡಿರುವ ಸಂಧರ್ಭಗಳು ಇವೆ. ಏನಿದ್ದರೂ, ಭಾಷಣಕಾರರ ಸಂಪೂರ್ಣ ಭಾಷಣದ ಧ್ವನಿ ದಾಖಲೆ ದೊರೆತರೆ ಮಾತ್ರ ಅವರ ಮಾತಿನ ಅರ್ಥ ಹೇಳಬಹುದೇನೋ." ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ