logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Politics: ವಿಲೀನ Vs ಹೊಂದಾಣಿಕೆ; ಬಿಜೆಪಿ, ಜೆಡಿಎಸ್‌ ನಡುವೆ ದಡಮುಟ್ಟದ ಮಾತುಕತೆ, ತಂತ್ರಗಾರಿಕೆ

Karnataka Politics: ವಿಲೀನ vs ಹೊಂದಾಣಿಕೆ; ಬಿಜೆಪಿ, ಜೆಡಿಎಸ್‌ ನಡುವೆ ದಡಮುಟ್ಟದ ಮಾತುಕತೆ, ತಂತ್ರಗಾರಿಕೆ

HT Kannada Desk HT Kannada

Jul 25, 2023 09:00 AM IST

google News

ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)

    • ಕರ್ನಾಟಕದಲ್ಲಿ ಬಿಜೆಪಿ ವರ್ಚಸ್ಸು ಕುಸಿಯುತ್ತಿರುವುದನ್ನು ಗಮನಿಸಿರುವ ರಾಷ್ಟ್ರೀಯ ನಾಯಕರು ಮತ್ತೊಂದು ತಂತ್ರಗಾರಿಕೆಗೆ ಮುಂದಾಗಿದ್ದಾರೆ. ಆದರೆ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಮಾತ್ರ ಬಿಜೆಪಿ ಪಟ್ಟುಗಳಿಗೆ ಸುಲಭವಾಗಿ ಮಣಿಯುತ್ತಿಲ್ಲ. ರಾಜ್ಯ ರಾಜಕಾರಣದಲ್ಲಿ ಮುಂದೇನಾಗಬಹುದು ಎಂದು ವಿಶ್ಲೇಷಿಸಿದ್ದಾರೆ ಎಚ್.ಮಾರುತಿ.
ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)
ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ)

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಿ ಈ ಹೊತ್ತಿಗೆ ಜೆಡಿಎಸ್ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಬಿಜೆಪಿ ವರಿಷ್ಠರಾದ ಅಮಿತ್ ಶಾ ಇಲ್ಲವೇ ಜೆ.ಪಿ.ನಡ್ಡಾ ದೆಹಲಿಯಿಂದ ಘೋಷಣೆ ಮಾಡಬೇಕಿತ್ತು. ಆದರೆ ಸಾಧ್ಯವಾಗುತ್ತಿಲ್ಲ. ವಿಲೀನಕ್ಕೆ ಒಪ್ಪದ ಕುಮಾರಸ್ವಾಮಿ ಹೊಂದಾಣಿಕೆಗೆ ಮಾತ್ರ ಸಮ್ಮತಿ ಸೂಚಿಸಿದ್ದಾರೆ.

ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ಕಾಂಗ್ರೆಸ್ ಪಕ್ಷದ ಮೇಲೆ ಕುಮಾರಸ್ವಾಮಿ ಅವರಿಗೆ ಅಂತಹ ದ್ವೇಷವೇನೂ ಇಲ್ಲ. ಅವರ ದ್ವೇಷವೇನಿದ್ದರೂ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರ ಮೇಲೆ. ಇದೇ ಕಾರಣಕ್ಕಾಗಿ ಅವರು ಸಿದ್ದರಾಮಯ್ಯ ಅವರನ್ನು ಪ್ರತಿ ದಿನ ಪ್ರ’ಸಿದ್ಧ’ ಹೇಳಿಕೆಗಳಿಂದ ತಿವಿಯುತ್ತಲೇ ಇದ್ದಾರೆ. ಶತ್ರುವಿನ ಶತ್ರು ಮಿತ್ರ ಎಂಬ ನಾಣ್ಣುಡಿಗೆ ತಕ್ಕಂತೆ ಸಿದ್ದರಾಮಯ್ಯ ಅವರ ರಾಜಕೀಯ ಶತ್ರುಗಳಾದ ಜೆಡಿಎಸ್ ಮತ್ತು ಬಿಜೆಪಿ ಈಗ ಕೈ ಜೋಡಿಸಿವೆ.

ದೆಹಲಿಯಲ್ಲಿ ನಡೆದ 38 ಪಕ್ಷಗಳ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ಇರಲಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ರಾಜ್ಯ ಬಿಜೆಪಿ ಘಟಕದ ಒಂದು ಗುಂಪು ಕುಮಾರಸ್ವಾಮಿ ಅವರೊಂದಿಗೆ ಮೈತ್ರಿ ಸಾಧಿಸಲು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪ್ರಕ್ರಿಯೆಗಳು ತಡವಾಗುತ್ತಿವೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸುತ್ತವೆ. ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್, ಜೆಡಿಎಸ್ ಜತೆಯಲ್ಲಿ ಹೊಂದಾಣಿಕೆ ಸಾಧಿಸಿಕೊಂಡೇ ಲೋಕಸಭಾ ಚುನಾವಣೆ ಎದುರಿಸಬೇಕು ಎಂದು ಸ್ಪಷ್ಟ ನಿರ್ಧಾರ ಕೈಗೊಂಡಿದೆ. ಎಲ್ಲ ಸ್ಥಳಿಯ ನಾಯಕರ ಸಮ್ಮತಿ ಇರಲಿ ಎಂಬ ಕಾರಣಕ್ಕೆ ವರಿಷ್ಠರು ನಿಧಾನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೈತ್ರಿಕೂಟದ ಹೆಸರಿನಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಕುಮಾರಸ್ವಾಮಿ ಮಾನಸಿಕವಾಗಿ ಸಿದ್ಧವಾಗಿದ್ದಾರೆ ಎಂದು ಅವರ ಆಪ್ತ ವಲಯ ಹೇಳುತ್ತದೆ. ಏಕಾಂಗಿಯಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಎದುರಿಸುವುದಕ್ಕಿಂತ ಒಂದು ಪಕ್ಷ ಜತೆ ಹೊಂದಾಣಿಕೆ ಮಾಡಿಕೊಂಡರೆ ಗೆಲುವು ಸುಲಭ ಎನ್ನುವುದು ಅವರ ಅಭಿಪ್ರಾಯವಾಗಿದೆ ಎಂದು ಮೂಲಗಳು ಹೇಳುತ್ತವೆ.

ಬಿಜೆಪಿಗೆ ಜೆಡಿಎಸ್ ಸಖ್ಯ ಅನಿವಾರ್ಯವೇ?

ಕಳೆದ ಎರಡು ವರ್ಷಗಳ ವಿವಿಧ ಫಲಿತಾಂಶಗಳನ್ನು ಅವಲೋಕಿಸಿದರೆ ಇಡೀ ದೇಶದಲ್ಲಿ ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟದ ಶಕ್ತಿ ಕುಗ್ಗಿದೆ ಎನ್ನುವುದು ಗೋಚರವಾಗುತ್ತದೆ. ಅದರಲ್ಲೂ ಕರ್ನಾಟಕದ ಹೀನಾಯ ಸೋಲು ಬಿಜೆಪಿಯ ನೈತಿಕ ಸ್ಥೈರ್ಯವನ್ನು ಕುಗ್ಗಿಸಿದೆ. ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಮತ್ತೆ 25 ಸ್ಥಾನಗಳನ್ನು ಗೆಲ್ಲುವುದು ಅಸಾಧ್ಯ ಎನ್ನುವ ಗಣಿತ ಅವರಿಗೆ ಅರ್ಥವಾಗದೆ ಇಲ್ಲ. ಏಕಾಂಗಿಯಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನು ಎದುರಿಸುವ ಬದಲು ಕೆಲವು ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ತನ್ನ ಹೊರೆಯನ್ನು ಇಳಿಸಿಕೊಂಡರೆ ಕಾಂಗ್ರೆಸ್ ಪಕ್ಷವನ್ನು ಎದುರಿಸುವುದು ಸುಲಭ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಎನ್‌ಡಿಎ ಮತ್ತು 'ಇಂಡಿಯಾ" ಮೈತ್ರಿಕೂಟಗಳೆರಡಕ್ಕೂ ಪ್ರತಿಯೊಂದು ಸ್ಥಾನದ ಗೆಲುವೂ ಸಹ ಮಹತ್ವದ್ದಾಗಿರುತ್ತದೆ.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೀಟುಗಳು ಕಡಿಮೆಯಾಗಿದ್ದರೂ ಅದರ ಪ್ರಭಾವವನ್ನು ಕಡೆಗಣಿಸುವಂತಿಲ್ಲ. ವಿಶೇಷವಾಗಿ ಒಕ್ಕಲಿಗರ ಪ್ರಾಬಲ್ಯ ಇರುವ ಮೈಸೂರು, ಹಾಸನ, ಮಂಡ್ಯ, ರಾಮನಗರ, ಕೋಲಾರ, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೆಡಿಎಸ್ ತನ್ನದೇ ಆದ ಪ್ರಾಬಲ್ಯ ಹೊಂದಿದೆ. ಈ ಕ್ಷೇತ್ರಗಳಲ್ಲಿ ಕೆಲವು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ತನಗೆ ಯಾವುದೇ ನಷ್ಟ ಆಗುವುದಿಲ್ಲ, ಬದಲಾಗಿ ಕಾಂಗ್ರೆಸ್ ಎದುರಿಸಿ ಜೆಡಿಎಸ್ ಗೆದ್ದರೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಹಾಯಕವಾಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ.

ಈ ಹಿನ್ನೆಲೆಯಲ್ಲಿಯೇ ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷಗಳೆರಡೂ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಕುಮಾರಸ್ವಾಮಿ ಅವರು ಪ್ರತಿಪಕ್ಷದ ಅಘೋಷಿತ ನಾಯಕರಾಗಿ ತಮ್ಮ ಕೆಲಸ ನಿಭಾಯಿಸಿದ್ದಾರೆ.

ಜೆಡಿಎಸ್ ನಂಬುವುದು ಕಷ್ಟ: ಬಿಜೆಪಿ ಗುಂಪಿನ ವಾದ

ಜೆಡಿಎಸ್ ಜೊತೆ ಮೈತ್ರಿಯ ಬಗ್ಗೆ ಹೈಕಮಾಂಡ್‌ನ ಈ ನಿರ್ಧಾರವನ್ನು ವಿರೋಧಿಸುವ ರಾಜ್ಯ ಬಿಜೆಪಿಯ ಒಂದು ಗುಂಪು ಬೇರೆಯದ್ದೇ ಆದ ವಾದ ಮಂಡಿಸುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ಎರಡೂ ಪಕ್ಷಗಳು ಗೆದ್ದಿದ್ದು ತಲಾ ಒಂದು ಸೀಟು. ಮೇಲಾಗಿ ಜೆಡಿಎಸ್ ನಂಬಿಕೆಗೆ ಅರ್ಹವಾದ ಪಕ್ಷ ಅಲ್ಲ. ಆದ್ದರಿಂದ ಜೆಡಿಎಸ್ ಸಹವಾಸ ಬೇಡ ಎಂದು ಈ ಗುಂಪಿನವರು ತಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿದ್ದಾರೆ. ಒಂದು ವೇಳೆ ಮೈತ್ರಿ ಸಾಧಿಸಿದರೆ ಪಕ್ಷದ ಬೆನ್ನೆಲುಬಾದ ತಳಮಟ್ಟದ ಕಾರ್ಯಕರ್ತರ ನೈತಿಕ ಶಕ್ತಿಯನ್ನು ಕುಂದಿಸಿದಂತಾಗುತ್ತದೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಪ್ರಬಲವಾಗಿ ವಿರೋಧಿಸಿದ್ದೇವೆ. ಈಗ ಅವರ ಜೊತೆಯೇ ಹೋಗುವುದು ಸರಿ ಕಾಣದು ಎಂದು ಅಳಲು ತೋಡಿಕೊಂಡಿದ್ದಾರೆ.

ಬಿಜೆಪಿ, ಜೆಡಿಎಸ್ ಪಕ್ಷಗಳ ಲಾಭದ ಲೆಕ್ಕಾಚಾರ

ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಪಡೆದಷ್ಟೂ ಬಿಜೆಪಿಗೆ ಲಾಭ. ಹಾಗೆಯೇ ಜೆಡಿಎಸ್ ಕೂಡಾ ಲಾಭದ ಲೆಕ್ಕಾಚಾರ ಹಾಕಿದೆ. ರಾಜ್ಯದಲ್ಲಿ ಪ್ತತಿಪಕ್ಷದ ನಾಯಕರಾಗುವ ಆಯ್ಕೆಯ ಜತೆಗೆ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಸಚಿವರಾಗಬಹುದು. ಆ ಮೂಲಕ ರಾಜ್ಯದಲ್ಲಿ ಪಕ್ಷದ ನೆಲೆಯನ್ನು ಗಟ್ಟಿಗೊಳಿಸಬಹುದು ಎನ್ನುವ ಲೆಕ್ಕಾಚಾರ ಕುಮಾರಸ್ವಾಮಿ ಅವರದ್ದು. ಸತತ ಎರಡು ಸೋಲುಗಳನ್ನು ಕಂಡಿರುವ ಪುತ್ರ, ಚಿತ್ರನಟ ನಿಖಿಲ್ ಕುಮಾರಸ್ವಾಮಿ ಭವಿಷ್ಯ ಕುಮಾರಸ್ವಾಮಿ ಅವರಿಗೆ ಮುಖ್ಯವಾಗಿದೆ. ಚುನಾವಣೆಯ ವೇಳೆಗೆ ಪರಿಸ್ಥಿತಿ ಜೆಡಿಎಸ್ ಪರವಾಗಿದ್ದರೆ ನಿಖಿಲ್ ಅವರನ್ನು ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವುದು ಅವರ ಲೆಕ್ಕಾಚಾರ.

ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಕುಮಾರಸ್ವಾಮಿ ಬಿಜೆಪಿ ಜತೆ ಹೋಗಲು ಅವರ ಪಕ್ಷದ ಶಾಸಕರೆಲ್ಲರೂ ಸಮ್ಮತಿ ಸೂಚಿಸುತ್ತಾರೆ ಎಂದರ್ಥವಲ್ಲ. 19 ಶಾಸಕರಲ್ಲಿ ಕನಿಷ್ಠ ಅರ್ಧದಷ್ಟು ಶಾಸಕರು ಬಿಜೆಪಿ ಸಖ್ಯವನ್ನು ವಿರೋಧಿಸುತ್ತಾರೆ. ಅವರೆಲ್ಲರೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಜತೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳುತ್ತವೆ. ಲೋಕಸಭಾ ಚುನಾವಣೆ ಹತ್ತಿರ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣ ಯಾವ ಯಾವ ತಿರುವುಗಳನ್ನು ಪಡೆಯುತ್ತದೆ ಎನ್ನುವುದು ಕುತೂಹಲ ಮೂಡಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ