logo
ಕನ್ನಡ ಸುದ್ದಿ  /  ಕರ್ನಾಟಕ  /  Pralhad Joshi: ಗರೀಬಿ ಹಠಾವೋ ಎಂದಿದ್ದ ಕಾಂಗ್ರೆಸ್ಸಿಗರು ಇಷ್ಟು ದಿನ ಕತ್ತೆ ಕಾಯ್ತಿದ್ರಾ?: 10 ಕೆ.ಜಿ ಉಚಿತ ಅಕ್ಕಿ ಗ್ಯಾರಂಟೀ ಟೀಕಿಸಿದ ಜೋಶಿ

Pralhad Joshi: ಗರೀಬಿ ಹಠಾವೋ ಎಂದಿದ್ದ ಕಾಂಗ್ರೆಸ್ಸಿಗರು ಇಷ್ಟು ದಿನ ಕತ್ತೆ ಕಾಯ್ತಿದ್ರಾ?: 10 ಕೆ.ಜಿ ಉಚಿತ ಅಕ್ಕಿ ಗ್ಯಾರಂಟೀ ಟೀಕಿಸಿದ ಜೋಶಿ

HT Kannada Desk HT Kannada

Feb 24, 2023 04:41 PM IST

ಪ್ರಹ್ಲಾದ್‌ ಜೋಶಿ (ಸಂಗ್ರಹ ಚಿತ್ರ)

    • ಗ್ಯಾರಂಟಿ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಬಡ ಕುಟುಂಬದ ಪ್ರತಿ ಸದಸ್ಯನಿಗೆ, ಪ್ರತಿ ತಿಂಗಳು 10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿರುವ ಪ್ರತಿಪಕ್ಷ ಕಾಂಗ್ರೆಸ್‌ನ್ನು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ ಎಂದು ಜೋಶಿ ಆರೋಪಿಸಿದ್ದಾರೆ.
ಪ್ರಹ್ಲಾದ್‌ ಜೋಶಿ (ಸಂಗ್ರಹ ಚಿತ್ರ)
ಪ್ರಹ್ಲಾದ್‌ ಜೋಶಿ (ಸಂಗ್ರಹ ಚಿತ್ರ) (ANI)

ಹುಬ್ಬಳ್ಳಿ: ಗ್ಯಾರಂಟಿ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಬಡ ಕುಟುಂಬದ ಪ್ರತಿ ಸದಸ್ಯನಿಗೆ, ಪ್ರತಿ ತಿಂಗಳು 10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಘೋಷಿಸಿರುವ ಪ್ರತಿಪಕ್ಷ ಕಾಂಗ್ರೆಸ್‌ನ್ನು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಂಗಳೂರು: ಕಸಾಪ ಮನುಶ್ರೀ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕ ಪ.ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಆಯ್ಕೆ

ಕರ್ನಾಟಕ ಹವಾಮಾನ ಮೇ 7; ಬೆಂಗಳೂರು, ಮೈಸೂರು ಸೇರಿ 18 ಜಿಲ್ಲೆಗಳಲ್ಲಿ ಮಳೆ, ಬೀದರ್, ಕೊಪ್ಪಳ ಸೇರಿ 9 ಜಿಲ್ಲೆಗಳಲ್ಲಿ ಶಾಖದ ಅಲೆ

ಕರ್ನಾಟಕದ ಎರಡನೇ ಹಂತದ ಮತದಾನ, 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆ

108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಒಂದು ದಿನ ಮುಂದೂಡಿಕೆ; ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವರು

ಧಾರವಾಡದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಹ್ಲಾದ್‌ ಜೋಶಿ, ಇಂದಿರಾ ಗಾಂಧಿ ಕಾಲದಲ್ಲಿ ಗರೀಬಿ ಹಠಾವೋ ಎಂದು ಹೇಳಿದ್ದ ಕಾಂಗ್ರೆಸ್‌, ಈಗಲೂ ಜನರಿಗೆ ಉಚಿತ ಅಕ್ಕಿ ನೀಡುವುದಾಗಿ ಹೇಳುತ್ತಿರುವುದು ಅದರ ವೈಫಲ್ಯಕ್ಕೆ ಸಾಕ್ಷಿ ಎಂದು ಗುಡುಗಿದರು.

ರೋಟಿ, ಕಪಡಾ ಔರ್‌ ಮಕಾನ್(ರೊಟ್ಟಿ, ಬಟ್ಟೆ ಮತ್ತು ಮನೆ) ಎಂದೆಲ್ಲಾ ಪುಂಗಿ ಊದುತ್ತಿದ್ದ ಕಾಂಗ್ರೆಸ್‌, ಅಧಿಕಾರದಲ್ಲಿದ್ದಷ್ಟೂ ದಿನ ಬಡವರಿಗಾಗಿ ಏನೂ ಮಾಡಲಿಲ್ಲ. ಈಗ ತಿಂಗಳಿಗೆ ಹತ್ತು ಕೆ.ಜಿ ಉಚಿತವಾಗಿ ಅಕ್ಕಿ ಕೊಡುವುದಾಗಿ ಹೇಳುತ್ತಿದೆ. ಹಾಗಿದ್ದರೆ ಕಾಂಗ್ರೆಸ್‌ ನಾಯಕರು ಇಷ್ಟು ದಿನ ಕತ್ತೆ ಕಾಯುತ್ತಿದ್ದರಾ ಎಂದು ಪ್ರಹ್ಲಾದ್‌ ಜೋಶಿ ಖಾರವಾಗಿ ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಈಗಾಗಲೇ ಐದು ಕೆ.ಜಿ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ನೀಡುತ್ತಿದೆ. ಒಂದು ವೇಳೆ ನಾವು ಹತ್ತು ಕೆ.ಜಿ ಕೊಡುತ್ತೇವೆ ಎಂದು ಹೇಳಿದರೆ, ಆಗ ಕಾಂಗ್ರೆಸ್‌ನವರು ಸ್ಪರ್ಧೆಗೆ ಬಿದ್ದವರಂತೆ ನಾವು ಇಪ್ಪತ್ತು ಕೆ.ಜಿ ಉಚಿತ ಅಕ್ಕಿ ಕೊಡುತ್ತೇವೆ ಎಂದು ಹೇಳುತ್ತಾರೆ ಎಂದು ಇದೇ ವೇಳೆ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಸುಳ್ಳು ಹೇಳುವ ನಿಸ್ಸೀಮರನ್ನು ಹೊಂದಿರುವಂತಹ ಪಕ್ಷವಾಗಿದೆ. ಈ ಹಿಂದೆ ಪೂರ್ಣ ಬಹುಮತದ ಸರ್ಕಾರ ಇದ್ದಾಗಲೂ ಏನೂ ಮಾಡದ ಅವರು, ಈಗ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನ ಎಚ್ಚೆತ್ತುಕೊಂಡಿದ್ದು, ಸುಳ್ಳು ಹೇಳುವ ಕಾಂಗ್ರೆಸ್‌ ನಾಯಕರನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ಹರಿಹಾಯ್ದರು.

ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಉಚಿತ ಭರವಸೆಗಳಿಗೆ ಅವರು ಮಾರು ಹೋಗುವುದಿಲ್ಲ. ನೈಜ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಗೊತ್ತಿರುವ ಜನತೆ, ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಬಿಜೆಪಿ ಅಧಿಕಾರಕ್ಕಾಗಿ ಜನರಿಗೆ ಸುಳ್ಳು ಹೇಳುವುದಿಲ್ಲ. ಈಡೇರಿಸಲು ಸಾಧ್ಯವಾದ ಭರವಸೆಗಳನ್ನು ಮಾತ್ರ ನಾವು ನೀಡುತ್ತೇವೆ. ರಾಜ್ಯದ ಜನರಿಂದ ಸಂಪೂರ್ಣವಾಗಿ ತಿರಸ್ಕರಿಸಲ್ಪಡುವ ಭಯದಲ್ಲಿ, ಕಾಂಗ್ರೆಸ್‌ ನಾಯಕರು ಬಾಯಿಗೆ ಬಂದಂತೆ ಭರವಸೆಗಳನ್ನು ನೀಡುತ್ತಿದ್ದಾರೆ. ಈ ಭರವಸೆಗಳನ್ನು ಈಡೇರಿಸುವ ಯಾವ ಯೋಜನಯೆಯೂ ಅವರ ಬಳಿ ಇಲ್ಲ ಎಂದು ಪ್ರಹ್ಲಾದ್‌ ಜೋಶಿ ಕಿಡಿಕಾರಿದರು.

ಇನ್ನು ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮತ್ತೊಮ್ಮೆ ರಾಜ್ಯಕ್ಕೆ ಕೊಡುಗೆ ಕೊಟ್ಟಿದೆ. ಇನ್ನು ಸ್ವಲ್ಪ ದಿನದಲ್ಲೇ ನೀರು ಹಂಚಿಕೆ ಆಗುತ್ತದೆ ಅನ್ನುವುದು ಒಳ್ಳೆಯ ಬೆಳವಣಿಗೆ ಎಂದು ಪ್ರಹ್ಲಾದ್‌ ಜೋಶಿ ಸಂತಸ ವ್ಯಕ್ತಪಡಿಸಿದರು.

ಇನ್ನು ಮುಂಬರುವ ಮಾರ್ಚ್ 11ರಂದು, ಪ್ರಧಾನಿ ಮೋದಿ ಅವರು ಧಾರವಾಡದಲ್ಲಿ ಐಐಟಿ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರಹ್ಲಾದ್‌ ಜೋಶಿ ಮಾಹಿತಿ ನೀಡಿದರು. ಪ್ರಧಾನಿ ಮೋದಿ ಅವರ ಆಗಮನಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಐಐಟಿ ಕಟ್ಟಡದ ಉದ್ಘಾಟನೆಗಾಗಿ ಧಾರವಾಡದ ಜನ ಎದುರು ನೋಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

ಅದೇ ರೀತಿ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿದಾಯ ಭಾಷಣದ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್‌ ಜೋಶಿ, ಯಡಿಯೂರಪ್ಪ ನಮ್ಮ ಹಿರಿಯ ನಾಯಕರಾಗಿದ್ದು, ಅವರ ಸುದೀರ್ಘ ರಾಜಕೀಯ ಅನುಭವವನ್ನು ಪಕ್ಷ ಮುಂದಿನ ದಿನಗಳಲ್ಲೂ ಬಳಸಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು