Crime News: ಕಾಣಿಯೂರು ಸಹಕಾರ ಸಂಘದ ಚುನಾವಣೆ ಗಲಾಟೆ, 28 ವರ್ಷದ ದಲಿತ ಯುವಕನ ಮೇಲೆ ಹಲ್ಲೆ, 5 ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್
Dec 21, 2023 10:59 PM IST
ಕಾಣಿಯೂರು ಸಹಕಾರ ಸಂಘದ ಚುನಾವಣೆ ಗಲಾಟೆಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದವರನ್ನು ಪೊಲೀಸರು ಬಂಧಿಸಿದ್ದಾರೆ. (ಸಾಂಕೇತಿಕ ಚಿತ್ರ)
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಗಲಾಟೆಯಲ್ಲಿ 28 ವರ್ಷದ ದಲಿತ ಯುವಕನ ಮೇಲೆ ಹಲ್ಲೆ ಆಗಿರುವ ಕುರಿತು ಪೊಲೀಸ್ ದೂರು ದಾಖಲಾಗಿದೆ. ಈ ಸಂಬಂಧ ಐವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರಿನ ಚಾರ್ವಾಕ ಕೋ ಆಪರೇಟಿವ್ ಸೊಸೈಟಿ ಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿ 28 ವರ್ಷದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದಾಗಿ ಪೊಲೀಸ್ ಕೇಸ್ ದಾಖಲಾಗಿದೆ. ಈ ಸಂಬಂಧ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಒಬ್ಬನನ್ನು ಬಂಧಿಸಿದ್ದಾರೆ.
ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ಜಿಲ್ಲೆಯ ಚಾರ್ವಾಕ ಎಂಬ ಗ್ರಾಮದ ಈ ಕೊ ಆಪರೇಟಿವ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪರ ಪ್ರಚಾರಕ್ಕೆ ಅಗಮಿಸಲಿಲ್ಲ ಎಂಬ ಕಾರಣಕ್ಕೆ ರಾತ್ರಿ ವೇಳೆ ಮನೋಹರ್ (28) ಎಂಬ ದಲಿತ ಯುವಕನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಆರೋಪಿಗಳನ್ನು ಗಣೇಶ ಉದನಡ್ಕ , ರಾಧಾಕೃಷ್ಣ ಮುದ್ವ , ಅಖಿಲ್ ಬೊಮ್ಮಳಿಕೆ, ಉಮೇಶ್ ಬಿರೋಳಿಕೆ, ಯಶೋಧರ ಬಿರೋಳಿಕೆ ಎಂದು ಗುರುತಿಸಲಾಗಿದೆ. ಇವರೆಲ್ಲರೂ 25 ರಿಂದ 35 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ. ಈಗಾಗಲೇ ಅಖಿಲ್ ಬೊಮ್ಮಳಿಕೆ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರಿಗೆ ಶೋಧ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಯುವಕರ ಗುಂಪು ಮನೋಹರ್ ನಿವಾಸಕ್ಕೆ ತೆರಳಿ ಪ್ರಚಾರಕ್ಕೆ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರು. ಈ ಘಟನೆ ನಡೆದ ನಂತರ ಗಾಯಗೊಂಡ ಮನೋಹರ್ ನನ್ನು ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ದಾಖಲಿಸುತ್ತಿದ್ದಂತೆ ಹಲ್ಲೇಕೊರರ ಮೇಲೆ ಸೆ.323(ಸ್ವಯಂ ಪ್ರೇರಿತ ಹಲ್ಲೆ), ಸೆ.324 (ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ದೌರ್ಜನ್ಯ) ಸೆ. 504 (ಉದ್ದೇಶಪೂರಿತ ಅವಮಾನ), ಸೆ.447 (ಕ್ರಿಮಿನಲ್ ಅತಿಕ್ರಮಣ), ಸೆ.143(ಕಾನೂನು ಬಾಹಿರ ಗುಂಪುಗಾರಿಕೆ), ಸೆ.147(ಹಲ್ಲೆ) ಮತ್ತು ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಡಬ ಪೊಲೀಸ್ ಇನ್ ಸ್ಪೆಕ್ಟರ್ ಅಭಿನಂದನ್ ತಿಳಿಸಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹಲ್ಲೆಗೊಳಗಾದ ಮನೋಹರ್ ನಿವಾಸಕ್ಕೆ ಭೇಟಿ ನೀಡಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಹಲ್ಲೆ ರಾಜಕೀಯ ಪ್ರೇರಿತವೇ ಅಥವಾ ವೈಯಕ್ತಿಕ ಕಾರಣಗಳಿಗಾಗಿ ನಡೆದಿದೆಯೇ ಎಂಬ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು ಎಂದು ಶಾಸಕ ರೈ ಆಗ್ರಹಿಸಿದ್ದಾರೆ.
(ವರದಿ - ಎಚ್. ಮಾರುತಿ)