ದರ್ಶನ್ ಕ್ರೂರ ವ್ಯಕ್ತಿತ್ವ ಬಿಚ್ಚಿಟ್ಟ ಪಬ್ಲಿಕ್ ಪ್ರಾಸಿಕ್ಯೂಟರ್; ಇಂದು ಜಾಮೀನು ಅರ್ಜಿ ವಿಚಾರಣೆ, ನಟನಿಗೆ ಜೈಲಾ, ಬೇಲಾ?
Oct 09, 2024 06:00 AM IST
ದರ್ಶನ್ ಕ್ರೂರ ವ್ಯಕ್ತಿತ್ವ ಬಿಚ್ಚಿಟ್ಟ ಪಬ್ಲಿಕ್ ಪ್ರಾಸಿಕ್ಯೂಟರ್
- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಜಾಮೀನು ಅರ್ಜಿ ಭವಿಷ್ಯ ಬುಧವಾರ (ಅಕ್ಟೋಬರ್ 9) ಮಧ್ಯಾಹ್ನ ನಿರ್ಧಾರವಾಗಲಿದೆ. ಮಂಗಳವಾರ (ಅಕ್ಟೋಬರ್ 8) ನಡೆದ ವಿಚಾರಣೆಯಲ್ಲಿ ಸಮರ್ಥವಾಗಿ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಯಾವುದೇ ಕಾರಣಕ್ಕೂ ಬೇಲ್ ಕೊಡಬೇಡಿ ಎಂದಿದ್ದಾರೆ. (ವರದಿ: ಎಚ್.ಮಾರುತಿ)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ಭವಿಷ್ಯ ಇಂದು (ಅಕ್ಟೋಬರ್ 9ರ ಬುಧವಾರ) ನಿರ್ಧಾರವಾಗಲಿದೆ. ಅಕ್ಟೋಬರ್ 8, ಮಂಗಳವಾರ ಜಾಮೀನು ಅರ್ಜಿ ವಿರೋಧಿಸಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದರು. ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ತಮ್ಮ ವಾದ ಮಂಡಿಸಿ ರೇಣುಕಾಸ್ವಾಮಿ ಹತ್ಯೆಗೆ ಹೇಗೆ ಸಂಚು ರೂಪಿಸಲಾಗಿತ್ತು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ದರ್ಶನ್, ಪವಿತ್ರಾಗೌಡ ಮೊದಲಾದ ಆರೋಪಿಗಳು ರೇಣುಕಾಸ್ವಾಮಿ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವುದು ತನಿಖೆಯಿಂದ ಸಾಬೀತಾಗಿದ್ದು, ಇವರಾರಿಗೂ ಜಾಮೀನು ನೀಡಬಾರದು ಎಂದರು. ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದದ್ದು ನಿಜ. ಪವಿತ್ರಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಬ್ಲಾಕ್ ಮಾಡಿ ಪೊಲೀಸರಿಗೆ ದೂರು ನೀಡಬಹುದಾಗಿತ್ತು. ಆದರೆ ಅವರು ಕೊಲೆಗೆ ಸಂಚು ರೂಪಿಸಿದ್ದಾರೆ ಎಂದರು. ಹತ್ಯೆಗೂ ಮುನ್ನ ಮತ್ತು ನಂತರ ಆರೋಪಿಗಳು ಪರಸ್ಪರ ಮೊಬೈಲ್ ಮೂಲಕ ಚಾಟ್ ನಡೆಸಿದ್ದಾರೆ. ಕರೆಗಳ ಎಲ್ಲ ವಿವಿರಗಳೂ ಲಭ್ಯವಾಗಿವೆ. ಕೊಲೆ ನಡೆದ ದಿನ ಅಲ್ಲಿಯೇ ಎಲ್ಲ ಆರೋಪಿಗಳು ಹಾಜರಿದ್ದರು ಎನ್ನುವುದು ಸಾಬೀತಾಗಿದೆ.
ಪೊಲೀಸರಿಂದ ಲೋಪವಾಗಿಲ್ಲ ಎಂದ ಪ್ರಸನ್ನ ಕುಮಾರ್
ಆರೋಪಿಗಳು ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರುತ್ತಿರುವುದಕ್ಕೆ ಸಿಸಿಟಿವಿ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಜೂನ್ 8 ರಂದು 1.32ರ ಸಮಯಕ್ಕೆ ಆರೋಪಿಗಳು ರಾಜರಾಜೇಶ್ವರಿ ನಗರದ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಆತನ ಪೋಟೊವನ್ನು ಸ್ಟೋನಿಬ್ರೂಕ್ ಬಾರ್ನಲ್ಲಿ ಪಾರ್ಟಿ ಮಾಡುತ್ತಿದ್ದವರಿಗೆ ಕಳುಹಿಸಲಾಗಿತ್ತು ಎಂದು ತಿಳಿಸಿದರು. ಆರೋಪಿ ನಂ.3ರ ಸೂಚನೆ ಮೇರೆಗೆ ಆರೋಪಿ ನಂ. 5 ಮತ್ತು 9 ಶೆಡ್ಗೆ ಬರುತ್ತಾರೆ. ಆಗ ರೇಣುಕಾಸ್ವಾಮಿ ಮೇಲೆ ಎಲ್ಲರೂ ಹಲ್ಲೆ ನಡೆಸುತ್ತಾರೆ. ಪೊಲೀಸರು ಸಮರ್ಥವಾಗಿ ತನಿಖೆ ನಡೆಸಿದ್ದಾರೆ. ಎಲ್ಲಿಯೂ ಲೋಪವಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಎದೆಮೇಲೆ ಕಾಲಿಟ್ಟಿದ್ದ ದರ್ಶನ್
ರೇಣುಕಾಸ್ವಾಮಿ ಅಳುತ್ತಿರುವ ಮತ್ತು ಬಿಟ್ಟುಬಿಡುವಂತೆ ಬೇಡಿಕೊಳ್ಳುತ್ತಿರುವ ಭಾವಚಿತ್ರಗಳು ಲಭ್ಯವಾಗಿವೆ. ಸ್ಟೋನಿಬ್ರೂಕ್ನಲ್ಲಿ ಆರೋಪಿಗಳಾದ ನಂ. 2, 3,10, 11 ಇದ್ದರು. ನಂದೀಶ್ ಎಂಬ ಆರೋಪಿ ರೇಣುಕಾಸ್ವಾಮಿಯನ್ನು ನೆಲಕ್ಕೆ ಕುಕ್ಕಿದ್ದಾನೆ. ಧನರಾಜ್ ಎಂಬ ಆರೋಪಿ ಶಾಕ್ ಟ್ರೀಟ್ಮೆಂಟ್ ನೀಡಿದ್ದಾನೆ. ಶೆಡ್ಗೆ ದರ್ಶನ್ ಕಪ್ಪು ಬಣ್ಣದ ಕಾರಿನಲ್ಲಿ ಆಗಮಿಸಿರುವ ಸಿಸಿಟಿವಿ ದೃಶ್ಯಗಳು ಸಿಕ್ಕಿವೆ ಎಂದು ವಿವರಿಸಿದರು. ಧನರಾಜ್, ನಂದೀಶ್, ಪವನ್ ಕಟ್ಟಿಗೆಯಿಂದ ಹೊಡೆದಿದ್ದಾರೆ. ಮರ್ಮಾಂಗಕ್ಕೆ ಒದ್ದಿದ್ದಾರೆ. ಬಾಸ್ ಹೊಡೆದ ಜಾಗದಲ್ಲಿ ರಕ್ತ ಬಂದಿದೆ ಎಂದು ಒಬ್ಬ ಆರೋಪಿ ಹೇಳಿದ್ದಾನೆ. ರೇಣುಕಾಸ್ವಾಮಿ ಎದೆಮೇಲೆ ದರ್ಶನ್ ಕಾಲಿಟ್ಟಿರುವುದು ಸಾಬೀತಾಗಿದೆ.
ಇದರಿಂದ ರೇಣುಕಾಸ್ವಾಮಿ ಎದೆಗೂಡಿನ ಮೂಳೆ ಮುರಿದಿದೆ. ರೇಣುಕಾಸ್ವಾಮಿ ದೇಹದ 17 ಭಾಗದಲ್ಲಿ ಮೂಳೆ ಮುರಿದಿದೆ ಎಂಬ ಭೀಕರ ಸತ್ಯವನ್ನು ನ್ಯಾಯಾಲಯದ ಮುಂದೆ ಬಿಚ್ಚಿಟ್ಟರು. ಈ ಹಿಂದೆ ದರ್ಶನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ ನಾಗೇಶ್ ಸುದೀರ್ಘ ವಾದ ಮಂಡಿಸಿ ಜಾಮೀನು ನೀಡುವಂತೆ ವಾದಿಸಿ ಪೊಲೀಸರ ತನಿಖೆ ಸರಿಯಾಗಿ ನಡೆದಿಲ್ಲ ಎಂದು ವಾದಿಸಿದ್ದರು. ದರ್ಶನ್ ಜಾಮೀನು ಅರ್ಜಿ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ.
ಇದನ್ನೂ ಓದಿ: