Karnataka Reservoirs: ಲಿಂಗನಮಕ್ಕಿ, ಕೆಆರ್‌ಎಸ್, ಸೂಪಾ ಜಲಾಶಯಗಳ ನೀರಿನ ಒಳಹರಿವಿನಲ್ಲಿ ಏರಿಕೆ, ಆಲಮಟ್ಟಿಯಿಂದ ಭಾರೀ ನೀರು ಹೊರಕ್ಕೆ
Aug 29, 2024 09:51 AM IST
ಆಲಮಟ್ಟಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹೊರ ಹರಿಸಲಾಗುತ್ತಿದೆ.
- Karnataka Dams level ಕರ್ನಾಟಕದಲ್ಲಿ ಬಹುತೇಕ ಜಲಾಶಯಗಳು ತುಂಬಿದ್ದು, ಮತ್ತೆ ಮಳೆಯಾಗುತ್ತಿರುವುದರಿಂದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಳೆ( Karnataka Rains) ಚುರುಕಾಗಿರುವುದಿಂದ ಕೆಲವು ಜಲಾಶಯಗಳ ನೀರಿನ ಒಳಹರಿವಿನಲ್ಲಿ( Karnataka Reservoirs Level) ಏರಿಕೆ ಕಂಡು ಬರುತ್ತಿದೆ. ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕರ್ನಾಟಕದ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿಗೆ( Lingana makki Dam) ಹೆಚ್ಚಿನ ಒಳ ಹರಿವು ಬರುತ್ತಿದೆ. ಜಲಾಶಯದಿಂದಲೂ ಹೆಚ್ಚಿನ ನೀರನ್ನು ಹರಿ ಬಿಡಲಾಗುತ್ತಿದೆ. ಕೊಡಗಿನಲ್ಲೂ ಮಳೆಯಾಗಿರುವುದರಿಂದ ಕೃಷ್ಣರಾಜ ಸಾಗರ ಜಲಾಶಯದ ( KRS Dam) ಒಳ ಹರಿವಿನ ಪ್ರಮಾಣದಲ್ಲಿ ನಿಧಾನವಾಗಿ ಏರಿಕೆ ಕಂಡು ಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆ ಕಾರಣಕ್ಕೆ ಸೂಪಾ ಜಲಾಶಯಕ್ಕೂ( Supa Dam) ನೀರು ಬರುತ್ತಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ( Almatti Dam) ಹೆಚ್ಚಿನ ನೀರು ಬರುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿಯೇ ನೀರು ಹರಿ ಬಿಡಲಾಗುತ್ತಿದೆ.
ಆಲಮಟ್ಟಿ ಜಲಾಶಯ
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಮತ್ತೆ ಭಾರೀ ನೀರು ಹರಿದು ಬರುತ್ತಿದೆ.ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯದ ಒಳ ಹರಿವು 1,55,917 ಕ್ಯೂಸೆಕ್‌ನಷ್ಟಿದೆ. ಒಳ ಹರಿವು ಹೆಚ್ಚಾಗಿರುವುದರಿಂದ ಹೊರ ಹರಿವಿನ ಪ್ರಮಾಣವನ್ನೂ ಗಣನೀಯವಾಗಿ ಏರಿಕೆ ಮಾಡಲಾಗಿದೆ. ಸದ್ಯ 1,75,000 ಕ್ಯೂಸೆಕ್ ನೀರನ್ನು ಕೃಷ್ಣಾ ನದಿ ಮೂಲಕ ಹರಿ ಬಿಡಲಾಗುತ್ತಿದೆ. ಇದರಿಂದ ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಆಲಮಟ್ಟಿಯಲ್ಲಿ ಸದ್ಯ 519.38 ಮೀಟರ್ ನೀರಿದೆ. ಈಗ 119.234 ಟಿಎಂಸಿ ನೀರಿದ್ದು ಜಲಾಶಯವು ಶೇ. 96.87 ರಷ್ಟು ಭರ್ತೀಯಾಗಿದೆ.
ಕೆಆರ್‌ಎಸ್ ಜಲಾಶಯ
ಕೊಡಗಿನಲ್ಲೂ ಕೆಲ ದಿನಗಳಿಂದ ಮಳೆಯಾಗುತ್ತಲೇ ಇದೆ. ಇದರಿಂದ ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಜಲಾಶಯಕ್ಕೆ ನೀರಿನ ಮಟ್ಟ ಏರಿಕೆಯಾಗಿದೆ. ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 7250 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವಿನ ಪ್ರಮಾಣವು 4214 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 124 ಅಡಿಗೆ ತಲುಪಿದೆ. ಜಲಾಶಯದಲ್ಲಿ 48.336 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಗರಿಷ್ಠ ಮಟ್ಟ124.80 ಅಡಿ ಹಾಗೂ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ.
ಲಿಂಗನಮಕ್ಕಿ ಜಲಾಶಯ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯಕ್ಕೂ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜಲಾಶಯಕ್ಕೆ 221 62 ಕ್ಯೂಸೆಕ್ ಒಳ ಹರಿವು ಇದ್ದು. ಹೊರ ಹರಿವಿನ ಪ್ರಮಾಣವನ್ನು 39897 ಕ್ಯೂಸೆಕ್‌ಗೆ ಏರಿಸಲಾಗಿದೆ. ಜಲಾಶಯದ ನೀರಿ ಮಟ್ಟವು 1817.12 ಅಡಿ ಇದೆ.145.75 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಮಲೆನಾಡು ಭಾಗದಲ್ಲಿ ಮಳೆ ನಿರಂತರವಾಗಿ ಆಗುತ್ತಿರುವುದರಿಂದ ಶರಾವತಿ ನದಿ ಮೂಲಕ ಹೆಚ್ಚಿನ ನೀರು ಹರಿದು ಬರುತ್ತಿದೆ.
ಸೂಪಾ ಜಲಾಶಯ
ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಕಾಳಿ ನದಿ ತುಂಬಿ ಹರಿಯುತ್ತಿದೆ. ಸೂಪಾ ಜಲಾಶಯಕ್ಕೆ 23261 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 8357 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 1837.59 ಅಡಿ ಇದ್ದು, 128. 92 ಟಿಎಂಸಿ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯ
ಕೇರಳದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಕಬಿನಿ ಜಲಾಶಯಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿಲ್ಲ. ಕಬಿನಿ ಜಲಾಶಯಕ್ಕೆ ಗುರುವಾರ ಬೆಳಿಗ್ಗೆ 4,919 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು. ಹೊರ ಹರಿವಿನ ಪ್ರಮಾಣವು 3,850 ಕ್ಯೂಸೆಕ್ ಇದೆ. ಜಲಾಶಯದ ನೀರಿನ ಮಟ್ಟವು 2282.97 ಅಡಿಯಷ್ಟಿದ್ದು, 18.84 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟವು 2284 ಅಡಿ ಹಾಗೂ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ.