logo
ಕನ್ನಡ ಸುದ್ದಿ  /  ಕರ್ನಾಟಕ  /  Sandur Assembly Elections: ಸಂಡೂರು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸಿದ ಸಿಎಂ ಸಿದ್ದರಾಮಯ್ಯ

Sandur Assembly Elections: ಸಂಡೂರು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸಿದ ಸಿಎಂ ಸಿದ್ದರಾಮಯ್ಯ

Umesha Bhatta P H HT Kannada

Oct 22, 2024 11:35 AM IST

google News

ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಅವಕಾಶ ನೀಡಲಾಗಿದೆ.

    • ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ ತನ್ನ ಮೊದಲ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಸಂಡೂರಿನ ಅಭ್ಯರ್ಥಿಯನ್ನು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಅವಕಾಶ ನೀಡಲಾಗಿದೆ.
ಬಳ್ಳಾರಿ ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಅವಕಾಶ ನೀಡಲಾಗಿದೆ.

ಮೈಸೂರು: ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕದ ವಿಧಾನಸಭೆಯ ಮೂರು ಕ್ಷೇತ್ರಗಳ ಉಪ ಚುನಾವಣೆ ಕಣ ನಿಧಾನಕ್ಕೆ ರಂಗೇರುತ್ತಿರುವ ನಡುವೆ ಟಿಕೆಟ್‌ ಭರಾಟೆಯೂ ಜೋರಾಗಿದೆ. ಬಿಜೆಪಿ ಈಗಾಗಲೇ ಎರಡು ಕ್ಷೇತ್ರಗಳ ಟಿಕೆಟ್‌ ಘೋಷಿಸಿದ್ದರೆ, ಕಾಂಗ್ರೆಸ್‌ನ ಸಂಡೂರು ಅಭ್ಯರ್ಥಿಯನ್ನು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಘೋಷಿಸಿದ್ದಾರೆ. ಬಳ್ಳಾರಿ ಸಂಸದರಾಗಿರುವ ಇ. ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಂ ಅವರಿಗೆ ಟಿಕೆಟ್‌ ನೀಡಲಾಗುವುದು. ಅವರೇ ಸಂಡೂರಿನಲ್ಲಿ ನಮ್ಮ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಪ್ರಕಟಿಸಿದರು.ತುಕಾರಾಂ ಅವರ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಅವಕಾಶ ನೀಡಿ ಎಂದು ಸಂಡೂರಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒತ್ತಾಯಿಸಿ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಘೋಷಣೆಯಾಗಿದೆ.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಂಡೂರಿನಿಂದ ತುಕಾರಾಮ್ ಪತ್ನಿಗೆ ಟಿಕೆಟ್ ನೀಡುತ್ತೇವೆ. ಅನ್ನಪೂರ್ಣ ಅವರೇ ಪಕ್ಷದ ಅಭ್ಯರ್ಥಿಯಾಗಲಿದ್ದು, ಈ ಕುರಿತು ಪಕ್ಷದಿಂದ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ ಎಂದು ಹೇಳಿದರು.

ಇಂದು ಚನ್ನಪಟ್ಟಣ ಮತ್ತು ಶಿಗ್ಗಾವಿ ಕ್ಷೇತ್ರಗಳ ಟಿಕೆಟ್ ವಿಚಾರ ತೀರ್ಮಾನ ಆಗುತ್ತದೆ. ಸಂಜೆಯ ವೇಳೆಗೆ ಮೂರು ಕ್ಷೇತ್ರಗಳ ಟಿಕೆಟ್ ಘೋಷಣೆ ಆಗುತ್ತದೆ‌ ಎಂದು ಸಿಎಂ ವಿವರಣೆ ನೀಡಿದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ ಎನ್ನುವ ಮೂಲಕ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬರುವ ಮುನ್ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ.ಚನ್ನಪಟ್ಟಣ ಕ್ಷೇತ್ರಕ್ಕೆ ಡಿ ಕೆ ಸುರೇಶ್ ಹೆಸರು ಕೂಡ ಕೇಳಿ ಬಂದಿದೆ. ನಮ್ಮ ಪಕ್ಷದ ಅಧ್ಯಕ್ಷರೇ ಅಲ್ಲಿ ಇರುವ ಕಾರಣ, ಅವರೇ ಸೂಕ್ತ ಅಭ್ಯರ್ಥಿ ಆಯ್ಕೆಯ ಬಗ್ಗೆ ತೀರ್ಮಾನ ಮಾಡುತ್ತಾರೆ. ಒಳ್ಳೆಯ ಅಭ್ಯರ್ಥಿ ಹಾಕಬೇಕು ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಸಂಡೂರಲ್ಲೂ ಕುಟುಂಬ ರಾಜಕಾರಣ

ಸಂಡೂರು ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಹಲವಾರು ಕಾಂಗ್ರೆಸ್‌ ಮುಖಂಡರು ಒತ್ತಾಯ ಮಾಡುತ್ತಲೇ ಬಂದಿದ್ದರು.ಅದರಲ್ಲೂ ತುಕಾರಾಂ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದರು. ಸಂಡೂರಿನವರೇ ಆಗಿರುವ ಸಚಿವ ಸಂತೋಷ್‌ ಲಾಡ್‌ ಅವರಿಗೆ ಮನವಿ ಮಾಡಿದ್ದರು.

ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವ ಒತ್ತಡ ಕೇಳಿ ಬಂದಾಗ ಇ.ತುಕಾರಾಂ ಅವರು ತಮ್ಮ ಕುಟುಂಬದವರಿಗೆ ಮುಂದೆ ಅವಕಾಶ ಮಾಡಿಕೊಡುವುದಾದರೆ ಸ್ಪರ್ಧಿಸುವೆ. ಇಲ್ಲದೇ ಇದ್ದರೆ ಲೋಕಸಭೆ ಚುನಾವಣೆಯಲ್ಲೇ ನನ್ನ ಪತ್ನಿ ಅಥವಾ ಪುತ್ರಿಗೆ ಟಿಕೆಟ್‌ ಕೊಡಿ ಎಂದು ತುಕಾರಾಂ ಕೇಳಿಕೊಂಡಿದ್ದರು. ಇದಕ್ಕೆ ಒಪ್ಪಿಯೇ ಆಗ ತುಕಾರಾಂ ಸ್ಪರ್ಧೆಗೆ ಸೂಚಿಸಲಾಗಿತ್ತು. ಆನಂತರ ಚುನಾವಣೆಯಲ್ಲಿ ತುಕಾರಾಂ ಗೆದ್ದು ಬಂದಿದ್ದರು.

ಈಗ ಅವರ ಪುತ್ರಿ ಇಲ್ಲವೇ ಪತ್ನಿ ಸ್ಪರ್ಧಿಸಬಹುದು ಎನ್ನುವ ಚರ್ಚೆಗಳು ನಡೆದಿದ್ದವು. ಮಗಳಿಗಿಂತ ಪತ್ನಿಯೇ ಸೂಕ್ತ ಎಂದು ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಪಕ್ಷದ ವರಿಷ್ಠರು, ಸ್ಥಳೀಯ ಕೆಲ ಮುಖಂಡರು ತುಕಾರಾಂ ಕುಟುಂಬಕ್ಕೆ ಟಿಕೆಟ್‌ ನೀಡಿದರೆ ಗೆಲುವು ಸುಲಭ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಮೊದಲು ಘೋರ್ಪಡೆ ಕುಟುಂಬದವರೇ ಹೆಚ್ಚು ಗೆದ್ದು ಬರುತ್ತಿದ್ದ ಸಂಡೂರು ಕ್ಷೇತ್ರ ಹದಿನೈದು ವರ್ಷದ ಹಿಂದೆ ಎಸ್‌ಟಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದೆ. ಆಗಿನಿಂದಲೂ ಸತತ ನಾಲ್ಕು ಬಾರಿ ತುಕಾರಾಂ ಕಾಂಗ್ರೆಸ್‌ನಿಂದ ಇಲ್ಲಿ ಗೆದ್ದು ಬಂದಿದ್ದರು. ಮುಖ್ಯ ಸಚೇತಕ, ಸಚಿವರಾಗಿಯೂ ಕೆಲಸ ಮಾಡಿದ್ದರು. ಈಗ ಬಳ್ಳಾರಿ ಸಂಸದರಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ