ಚನ್ನಪಟ್ಟಣದಲ್ಲಿ ಐದು ಬಾರಿ ಶಾಸಕ; ಯಾವ ಪಕ್ಷದಿಂದ ಗೆದ್ದಿದ್ದಾರೆ ಸಿಪಿ ಯೋಗೇಶ್ವರ್, 4 ಬಾರಿ ಪಕ್ಷಾಂತರ ನಂತರ ಬಿಜೆಪಿ ಬಿಡುವರೇ?
ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಟಿಕೆಟ್ ಫೈಟ್ ಜೋರಾಗಿದ್ದು, ಸೈನಿಕ ಸಿ.ಪಿ.ಯೋಗೇಶ್ವರ್ ಯುದ್ದ ಎದುರಿಸುವುದಂತೂ ಖಚಿತ ಎನ್ನುವ ಸ್ಥಿತಿಯಿದ್ದು. ಯಾವ ಪಕ್ಷದಿಂದ ಎನ್ನುವ ಕುತೂಹಲ ಮಾತ್ರ ಉಳಿದಿದೆ.
ಬೆಂಗಳೂರು: ಹಿಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ಸದ್ಯ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು, ಸ್ಥಳೀಯವಾಗಿ ಹೆಚ್ಚು ಬಾರಿ ಶಾಸಕರಾಗಿ ಸೋತಿರುವ ಸಿ.ಪಿ.ಯೋಗೇಶ್ವರ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಈ ಬಾರಿ ಉಪ ಚುನಾವಣೆಯಲ್ಲಿ ಟಿಕೆಟ್ ಪಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದು, ಇದು ಜೆಡಿಎಸ್ ಶಾಸಕರು ಗೆದ್ದಿದ್ದ ಕ್ಷೇತ್ರವಾಗಿರುವುದರಿಂದ ಆ ಪಕ್ಷಕ್ಕೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಿ.ಪಿ. ಯೋಗೇಶ್ವರ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್‌ನಿಂದ ಆಫರ್ ನೀಡಿದ್ದರೂ ಅದನ್ನು ಒಪ್ಪದೇ ಕಾಂಗ್ರೆಸ್ ಟಿಕೆಟ್ ಪಡೆದು ಕೊನೆ ಕ್ಷಣದಲ್ಲಿ ಕಣಕ್ಕಿಳಿದರು ಅಚ್ಚರಿಯಿಲ್ಲ ಎನ್ನುವ ರಾಜಕೀಯ ಬೆಳವಣಿಗೆಗಳು ನಡೆದಿವೆ.
ಯೋಗೇಶ್ವರ್ ರಾಜಕೀಯ ನಡೆ ಏನು
ಯೋಗೇಶ್ವರ್ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದಿಂದ ಶಾಸಕರಾಗಿದ್ದಾರೆ. ಎರಡೂ ಪಕ್ಷವನ್ನು ಬಿಟ್ಟು ಹೋಗಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನಿಂದ. ಒಂದು ಬಾರಿ ಬಿಜೆಪಿ ತೊರೆದವರು ಯೋಗೇಶ್ವರ್. ಇದರಿಂದ ಪಕ್ಷಾಂತರ ಅವರಿಗೆ ಹೊಸದೇನೂ ಅಲ್ಲ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ನಂತರ ಸಮಾಜವಾದಿ ಪಕ್ಷ ಸೇರಿ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದರು. ಬಿಜೆಪಿ ಸೇರಿ ಗೆದ್ದು ಸಚಿವರಾದರೂ ಆನಂತರ ಆ ಪಕ್ಷದಲ್ಲೂ ಉಳಿದಿರಲಿಲ್ಲ.
ಮೊದಲಿನಿಂದಲೂ ಇಲ್ಲಿ ಅವರಿಗೆ ಜೆಡಿಎಸ್ ಎದುರಾಳಿ. ಎರಡು ಬಾರಿ ಜೆಡಿಎಸ್ ವಿರುದ್ದವೇ ಸೋತಿರುವ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಕುಮಾರಸ್ವಾಮಿ ಸುತಾರಾಂ ಒಪ್ಪುತ್ತಿಲ್ಲ. ತಾವು ಪ್ರತಿನಿಧಿಸಿದ ಕ್ಷೇತ್ರದಲ್ಲಿ ಮಗ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಭವಿಷ್ಯ ಮಾಡಿಕೊಡಬೇಕು ಎನ್ನುವುದು ಕುಮಾರಸ್ವಾಮಿ ಅವರ ರಾಜಕೀಯ ಲೆಕ್ಕಾಚಾರ. ಇದರಿಂದ ಎನ್‌ಡಿಎ ಅಭ್ಯರ್ಥಿ ಎನ್ನುವ ಲೆಕ್ಕದಲ್ಲಿಯೇ ಮಾತನಾಡುತ್ತಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್‌ನಿಂದಲೇ ಬಿಜೆಪಿಗೆ ಕರ್ನಾಟಕದಲ್ಲಿ ಬಲ ಬಂದಿತು ಎನ್ನುವ ಅರಿವು ಹೈಕಮಾಂಡ್‌ಗೆ ಇದೆ. ಈ ಕಾರಣದಿಂದ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ಕುಮಾರಸ್ವಾಮಿ ಅವರದ್ದೇ ಎಂದು ಹೇಳಿದೆ. ಇದರಿಂದಲೇ ಯೋಗೇಶ್ವರ್ ನಾಲ್ಕು ತಿಂಗಳಿನಿಂದಲೂ ಟಿಕೆಟ್ ಪಡೆಯಲು ಪ್ರಯತ್ನಿಸಿದರೂ ಫಲ ಸಿಕ್ಕಿಲ್ಲ. ಈ ಕಾರಣದಿಂದ ಅವರು ಪಕ್ಷೇತರರಾಗಿ ಕಣಕ್ಕಿಳಿಬಹುದು ಎನ್ನುವ ಮಾತುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಆದರೂ ಕಾಂಗ್ರೆಸ್ ಜತೆ ಸಂಪರ್ಕದಲ್ಲೂ ಇರುವುದರಿಂದ ಏನಾದರೂ ಬದಲಾವೆ ಆಗಬಹುದು ಎನ್ನಲಾಗುತ್ತಿದೆ
ಎಚ್‌ಡಿಕೆ ಡಿಕೆಶಿ ಕುಟುಂಬದ ವಿರುದ್ದ ಕದನ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಬಾರಿ ಗೆದ್ದಿರುವವರ ಪಟ್ಟಿಯಲ್ಲಿ ಮೊದಲ ಹೆಸರೇ ಸಿ.ಪಿ.ಯೋಗೇಶ್ವರ್ ಅವರದ್ದು. ಐದು ಬಾರಿ ಇಲ್ಲಿಂದ ಗೆದ್ದಿದ್ದಾರೆ. ಇಲ್ಲಿ ದೇವೇಗೌಡರ ಕುಟುಂಬದರೊಂದಿಗೆ ಚುನಾವಣೆ ಎದುರಿಸಿ ಗೆದ್ದಿದ್ದಾರೆ. ಸೋತಿದ್ದಾರೆ. ಅನಿತಾ ಕುಮಾರಸ್ವಾಮಿ ವಿರುದ್ದ ಗೆದ್ದು, ಕುಮಾರಸ್ವಾಮಿ ವಿರುದ್ದ ಸೋತಿದ್ದಾರೆ.
ಅದೇ ರೀತಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಖ್ಯ ಬೆಳೆಸಿಕೊಂಡು ರಾಜಕೀಯವಾಗಿ ಗುರುತಿಸಿಕೊಂಡರೂ ಆನಂತರ ಕಾಂಗ್ರೆಸ್‌ನಿಂದಲೇ ದೂರವಾದವರು. ಪಕ್ಷೇತರರಾಗಿ ಗೆದ್ದು1999ರಲ್ಲಿ ಗೆದ್ದು ನಂತರ ಕಾಂಗ್ರೆಸ್ ಸೇರಿದವರು.
ಬಳಿಕ ಸತತ ಎರಡು ಬಾರಿ ಕಾಂಗ್ರೆಸ್‌ನಿಂದಲೇ ಗೆದ್ದು ಸೋತರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಯೋಗೇಶ್ವರ್ ನಂತರ ಬಿಜೆಪಿಯಿಂದ ಗೆದ್ದು ಸಚಿವರೂ. ಬಳಿಕ ಸಮಾಜವಾದಿ ಪಕ್ಷ ಸೇರಿ ಆ ಪಕ್ಷದಿಂದಲೂ ಶಾಸಕರಾದರು. ಮತ್ತೆ ಕಾಂಗ್ರೆಸ್‌ಗೆ ಮರಳಿದರು.
ಕಾಂಗ್ರೆಸ್ ಟಿಕೆಟ್ ಸಿಗದೇ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿದರೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಸೋಲು ಅನುಭವಿಸಿದರು. ಹೀಗಿದ್ದರೂ ಬಿ.ಎಸ್.ಯಡಿಯೂರಪ್ಪ ಅವರು ಯೋಗೇಶ್ವರ್ ಅವರನ್ನು ಎಂಎಲ್ಸಿ ಮಾಡಿ ಸಚಿವ ಸ್ಥಾನವನ್ನೂ ನೀಡಿದ್ದರು. ಎರಡನೇ ಬಾರಿ ಬಿಜೆಪಿ ಎಂಎಲ್ಸಿ ಸ್ಥಾನ ನೀಡಿದೆ. ಚನ್ನಪಟ್ಟಣದಲ್ಲಿ ತಮ್ಮದೇ ಹಿಡಿತ ಹೊಂದಿರುವ ಯೋಗೇಶ್ವರ್ ಬಿಜೆಪಿ ತೊರೆದು ಮೂರನೇ ಬಾರಿಗೆ ಕಾಂಗ್ರೆಸ್ ಸೇರಬಹುದೇ ಎನ್ನು ಚರ್ಚೆಗಳು ಕ್ಷೇತ್ರಲ್ಲಿವೆ.
ರಣಧೀರದಿಂದ ಸಿನೆಮಾ ನಂಟು
ರಣಧೀರ ಚಿತ್ರದ ಯಾರೇ ನೀನು ಸುಂದರ ಚಲುವೆ ಒಬ್ಬಳೇ ನಿಂತಿರುವೆ ಎಂದು ರವಿಚಂದ್ರನ್ ಹಾಡುತ್ತಾ ಖುಷ್ಬು ಹಿಂಬಾಲಿಸುತ್ತಿದ್ದರೆ, ರವಿಚಂದ್ರನ್ ಅವರನ್ನು ನಾಲ್ವರು ಹಿಂಬಾಲಿಸುತ್ತಾರೆ. ಅವರಲ್ಲಿ ಒಬ್ಬರು ಯೋಗೇಶ್ವರ್. ಕಾಲೇಜು ದಿನಗಳಲ್ಲಿಯೇ ಸಿನೆಮಾ ಕ್ರೇಜ್ ಬೆಳೆಸಿಕೊಂಡ ಯೋಗೇಶ್ವರ್ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕೂಡ. ಆನಂತರ ತಾವೇ ಹೀರೋ ಆಗಿ ಕೆಲವು ಚಿತ್ರಗಳಲ್ಲಿ ನಿರ್ಮಿಸಿದ ಚಿತ್ರಗಳೂ ಹಲವು.ಆನಂತರ ಸೈನಿಕ ಚಿತ್ರದಲ್ಲಿ ಸೈನಿಕನ ಪಾತ್ರದೊಂದಿಗೆ ಕಾಣಿಸಿಕೊಂಡರು. ಉತ್ತರದೃವದಿಂ ದಕ್ಷಿಣ ದೃವಕ್ಕು, ಬದ್ರಿ, ಪ್ರೀತಿ ನೀ ಇಲ್ಲದೇ ನಾ ಹೇಗಿರಲಿ, ಪಾಂಚಾಲಿ, ಶಿವಪ್ಪನಾಯಕ ಯೋಗೇಶ್ವರ್ ಅಭಿನಯದ ಚಿತ್ರಗಳು. ಈಗಲೂ ಅವರು ಸಿನೆಮಾ ನಂಟನ್ನು ಬಿಟ್ಟಿಲ್ಲ.