School Reopen: ಮೇ 29ರಿಂದ ಶಾಲೆ ಪುನಾರಂಭ, ನಾಳೆಯಿಂದ ಬೇಗ ಎದ್ದೇಳಬೇಕು, ಪೋಷಕರಿಗೆ ಅಮೂಲ್ಯ ಸಲಹೆಗಳು ಇಲ್ಲಿವೆ
May 28, 2023 08:05 PM IST
ಮೇ 29ರಿಂದ ಶಾಲೆ ಪುನಾರಂಭ
- Karnataka school reopening: ಮೇ 29ರಿಂದ ಶಾಲೆಗಳು ಪುನಾರಂಭಗೊಳ್ಳಲಿದೆ. ಶಾಲೆಗಳ ಪುನಾರಂಭವೆಂದರೆ ಮಕ್ಕಳಿಗೆ ಮತ್ತು ಪೋಷಕರಿಗೆ ಏನೋ ಖುಷಿ ಮತ್ತು ಆತಂಕ ಜತೆಯಾಗಬಹುದು. ನಾಳೆ ಸ್ಕೂಲ್‌ಗೆ ಹೋಗುವ ಮಕ್ಕಳಿರುವ ಮನೆಯ ಪೋಷಕರಿಗೆ ಅಮೂಲ್ಯ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ನಾಳೆ ಅಂದರೆ ಮೇ 29ರಿಂದ ಶಾಲೆಗಳು ಪುನಾರಂಭಗೊಳ್ಳಲಿದೆ. ಶಾಲೆಗಳ ಪುನಾರಂಭವೆಂದರೆ ಮಕ್ಕಳಿಗೆ ಮತ್ತು ಪೋಷಕರಿಗೆ ಏನೋ ಖುಷಿ ಮತ್ತು ಆತಂಕ ಜತೆಯಾಗಬಹುದು. ಇಷ್ಟು ದಿನ ಮನೆಯನ್ನು ಲಗಾಡಿ ತೆಗೆಯುತ್ತಿದ್ದ ಮಕ್ಕಳು ಶಾಲೆಗೆ ಹೋದರೆ ತುಸು ನೆಮ್ಮದಿ ಎಂದುಕೊಳ್ಳುವವರೂ ಇದ್ದಾರೆ. ಆದರೆ, ಶಾಲೆಯ ಪುನಾರಂಭವೆಂದರೆ ಮತ್ತೆ ಹೊಸ ಆರಂಭ. ಮನೆಯ ಟೈಂಟೇಬಲ್ ಅನ್ನೇ ಬದಲಾಯಿಸುವ ಶಕ್ತಿ ಇದಕ್ಕಿದೆ. ಇಷ್ಟು ದಿನ ಮಕ್ಕಳಿಗೆ ಸ್ಕೂಲ್‌ಗೆ ರಜೆ, ಟಿಫಿನ್ ಚಿಂತೆಯಿಲ್ಲವೆಂದುಕೊಳ್ಳುತ್ತಿದ್ದವರು ನಾಳೆಯಿಂದ ಮತ್ತೆ ಮಕ್ಕಳ ಟಿಫಿನ್‌ಗೆ ಏನು ಎಂದು ಯೋಚಿಸಬೇಕು. ರಜೆಯೆಂದು ಲೇಟಾಗಿ ಮಲಗುತ್ತಿದ್ದ ಮಕ್ಕಳನ್ನು ಬೆಳಗ್ಗೆ ಎದ್ದೇಳಿಸಿ ರೆಡಿಯಾಗಿಸುವ ಸಾಹಸ ಮಾಡಬೇಕು. ನಾಳೆ ಬಹುತೇಕ ಕಡೆಗಳಲ್ಲಿ ಸ್ಕೂಲ್ ಬಸ್, ವ್ಯಾನ್ ಇಲ್ಲದೆ ಇರುವುದರಿಂದ ತಾವೇ ಸ್ಕೂಲ್ ತಲುಪಿಸುವ ಹೊಣೆಗಾರಿಕೆಯೂ ಪೋಷಕರಿಗಿದೆ.
ನಾಳೆ ರಜೆ ಬೇಡ
ಶಾಲೆ ಆರಂಭದ ದಿನ ಮಕ್ಕಳು ಕಲಿಯಲು ಏನೂ ಇರುವುದಿಲ್ಲ. ಜೂನ್ ಒಂದರ ಬಳಿಕ ಸ್ಕೂಲ್‌ಗೆ ಕಳುಹಿಸಿದರೆ ಸಾಕು ಎಂಬ ಮನೋಸ್ಥಿತಿ ಬೇಡ. ಮೊದಲ ದಿನವೇ ಮಕ್ಕಳನ್ನು ಸ್ಕೂಲ್‌ಗೆ ಕಳುಹಿಸಿ. ತರಗತಿ ಆರಂಭವಾಗುವ ಮೊದಲ ದಿನದ ಚಟುವಟಿಕೆಗಳಲ್ಲಿ ತಪ್ಪದೇ ವಿದ್ಯಾರ್ಥಿಗಳು ಭಾಗವಹಿಸಲಿ. ಕರ್ನಾಟಕದಲ್ಲಿ ಸರಕಾರಿ ಶಾಲೆಯಲ್ಲಿ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ರೆಡಿಯಾಗಿದ್ದಾರೆ. ಸ್ವಾಗತ ಕಾರ್ಯಕ್ರಮಗಳೂ ಭರ್ಜರಿಯಾಗಿ ನಡೆಯಲಿವೆ. ಮಕ್ಕಳಿಗೆ ದೊರಕುವ ಇಂತಹ ಖುಷಿಯನ್ನು ತಪ್ಪಿಸುವುದು ಬೇಡ. ಜೂನ್ ಒಂದರಿಂದ ಸ್ಕೂಲ್‌ಗೆ ಕಳುಹಿಸುವ ಬದಲು ನಾಳೆಯಿಂದಲೇ ಕಳುಹಿಸಿ.
ಮಕ್ಕಳ ನಿದ್ದೆ ಕುರಿತು ಗಮನವಿರಲಿ
ಇಷ್ಟು ದಿನ ರಜೆಯೆಂದು ಮಕ್ಕಳು ಆಟೋಟದಲ್ಲಿ, ಮೊಬೈಲ್‌ನಲ್ಲಿ ಹೊತ್ತುಗೊತ್ತಿನ ಪರಿವೆ ಇಲ್ಲದೆ ಕಾಲ ಕಳೆಯುತ್ತಿರಬಹುದು. ಇಂದಿನಿಂದ ಮಕ್ಕಳು ಚೆನ್ನಾಗಿ ಸರಿಯಾದ ಸಮಯದಲ್ಲಿ ನಿದ್ದೆ ಮಾಡುವಂತೆ ಇರಬೇಕು. ನಾಳೆ ಸ್ಕೂಲ್ ಇದೆ, ಈಗಲೇ ಮಲಗು ಎಂದು ತಿಳಿಸಿ ಮಕ್ಕಳನ್ನು ಶಾಲೆಗೆ ಹೋಗಲು ಮಾನಸಿಕವಾಗಿ ಸಿದ್ಧವಾಗಿಸಿ. ಮಕ್ಕಳ ನಿದ್ದೆಗೆ ಸರಿಯಾದ ವೇಳಾಪಟ್ಟಿ ಮಾಡಿ.
ತಂತ್ರಜ್ಞಾನದ ಕಡಿಮೆ ಬಳಕೆ
ನಾಳೆಯಿಂದ ಮಕ್ಕಳು ಟೀವಿ ನೋಡುವುದು ಕಡಿಮೆ ಮಾಡಲಿ. ಮೊಬೈಲ್ ಅಗತ್ಯವಿದ್ದರೆ ಮಾತ್ರ ನೀಡಿ. ಮಕ್ಕಳು ಇನ್ಮುಂದೆ ಸ್ಕ್ರೀನ್ ಅವರ್ ಕಡಿಮೆ ಮಾಡಬೇಕು. ಓದು ಮತ್ತು ಆಟಗಳಲ್ಲಿ ಭಾಗಿಯಾಗಲು ಪ್ರೋತ್ಸಾಹಿಸಿ.
ಆಹಾರದ ಬಗ್ಗೆ ಚರ್ಚೆ
ನಿಮಗಿಷ್ಟವಾದ ಆಹಾರವನ್ನು ಮಾಡುವುದು ಬೇಡ. ಪ್ರತಿದಿನ ನಾಳೆಗೆ ಟಿಫಿನ್‌ಗೆ ಏನು ಬೇಕು ಎಂದು ಮಕ್ಕಳಲ್ಲಿ ಕೇಳಿ. ನೀವು ಪ್ಲ್ಯಾನ್ ಮಾಡಿರುವ ಅಡುಗೆಯಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಸಿ. ಜಂಕ್ ಫುಡ್‌ಗಳಿಂದ ಆಗುವ ತೊಂದರೆಗಳ ಬಗ್ಗೆ ತಿಳಿಸಿ. ನಾಳೆಯ ಟಿಫಿನ್ ಬಗ್ಗೆ ಇಂದೇ ಮಕ್ಕಳಲ್ಲಿ ಪ್ರತಿದಿನ ಚರ್ಚಿಸುವುದರಿಂದ ಮಕ್ಕಳಿಗೆ ಟಿಫಿನ್ ಬಗ್ಗೆ ವಿಶೇಷ ಪ್ರೀತಿ ಉಂಟಾಗುತ್ತದೆ.
ಖುಷಿಖುಷಿಯಾಗಿರಲಿ ಮಕ್ಕಳು
ನಾಳೆ ಶಾಲೆ ಎಂದು ಮಕ್ಕಳು ಖುಷಿಯಾಗಿರಬಹುದು. ಆದರೆ, ಕೆಲವು ಮಕ್ಕಳು ಅಯ್ಯೋ ಮತ್ತೆ ಸ್ಕೂಲ್‌ಗೆ ಹೋಗಬೇಕ ಎಂದು ಚಿಂತಿಸುತ್ತಿರಬಹುದು. ಶಾಲೆಯ ಚಟುವಟಿಕೆಗಳನ್ನು ಮಕ್ಕಳಿಗೆ ನೆನಪಿಸಿ, ಖುಷಿಯಾಗಿ ಶಾಲೆಗೆ ಹೋಗುವಂತೆ ಪ್ರೇರೇಪಿಸಿರಿ.
ಸ್ನೇಹದ ಮೌಲ್ಯ ತಿಳಿಸಿ
ಮಕ್ಕಳಿಗೆ ಸಂಘ ಜೀವನದ ಮಹತ್ವ ತಿಳಿಸಿ. ಶಾಲೆಯಲ್ಲಿ ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಲು ತಿಳಿಸಿ. ಒಳ್ಳೆಯವರ ಗೆಳೆತನ ಕಲ್ಲು ಸಕ್ಕರೆ ಹಾಂಗ ಎಂದು ನೆನಪಿಸಿ.
ಸ್ಚಚ್ಚತೆ ನೆನಪಿಸಿ
ರಜಾ ದಿನಗಳಲ್ಲಿ ಮಕ್ಕಳು ಕೆಲವೊಂದು ಶಿಸ್ತಿನ ವಿಚಾರಗಳನ್ನು ಮರೆತಿರಬಹುದು. ಮಕ್ಕಳ ಸ್ಚಚ್ಚತೆಯ ದಿನಚರಿಯನ್ನು ನೆನಪಿಸಿ.
ನರ್ವಸ್ ಬೇಡ
ಬಹುತೇಕ ಮಕ್ಕಳು ಮೊದಲ ದಿನ ಶಾಲೆಗೆ ಹೋಗಲು ಕೊಂಚ ನರ್ವಸ್ ಆಗಬಹುದು. ನಿಮ್ಮ ಮಕ್ಕಳು ಇಂತಹ ನರ್ವಸ್ ತೋರಿದರೆ ಅವರಲ್ಲಿ ಸಕಾರಾತ್ಮಕತೆ ತುಂಬಿ. ವಿಶೇಷವಾಗಿ ಮೊದಲ ಬಾರಿಗೆ ಶಾಲೆಗೆ ಹೋಗುವವರಿಗೆ, ಶಾಲೆ ಬದಲಾಯಿಸಿ ಹೊಸ ಶಾಲೆಗೆ ಹೋಗುವ ಮಕ್ಕಳಲ್ಲಿ ಹೆಚ್ಚಿನ ನರ್ವಸ್ ಇರಬಹುದು. ಎಲ್ಲಾ ಶಾಲೆಗಳೂ ಒಂದೇ ರೀತಿ ಇರುತ್ತವೆ, ನರ್ವಸ್ ಬೇಡವೆಂದು ನಿಮ್ಮದೇ ರೀತಿಯಲ್ಲಿ ಮಕ್ಕಳಿಗೆ ತಿಳಿಸಿ. ಅಕ್ಕಪಕ್ಕದ ವಿದ್ಯಾರ್ಥಿಗಳು ಅದೇ ಸ್ಕೂಲ್‌ಗೆ ಹೋಗುವುದಿದ್ದರೆ ಅವರ ಜತೆಗೆ ಕಳುಹಿಸಬಹುದು.