logo
ಕನ್ನಡ ಸುದ್ದಿ  /  ಕರ್ನಾಟಕ  /  Shimoga: ಶಿವಮೊಗ್ಗ ಚೋರಡಿ ಬಳಿ ಎರಡು ಬಸ್‌ಗಳ ಮುಖಾಮುಖಿ ಡಿಕ್ಕಿ; ಹಲವರು ಸ್ಥಳದಲ್ಲೇ ಸಾವು, ಅನೇಕರಿಗೆ ಗಂಭೀರ ಗಾಯ

Shimoga: ಶಿವಮೊಗ್ಗ ಚೋರಡಿ ಬಳಿ ಎರಡು ಬಸ್‌ಗಳ ಮುಖಾಮುಖಿ ಡಿಕ್ಕಿ; ಹಲವರು ಸ್ಥಳದಲ್ಲೇ ಸಾವು, ಅನೇಕರಿಗೆ ಗಂಭೀರ ಗಾಯ

Rakshitha Sowmya HT Kannada

May 11, 2023 11:48 PM IST

google News

ಶಿವಮೊಗ್ಗದಲ್ಲಿ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ

    • ಶಿವಮೊಗ್ಗ ಜಿಲ್ಲೆಯ ಸಾಗರ ರಸ್ತೆಯ ಚೋರಡಿ ಬಳಿ ಇರುವ ಕುಮದ್ವತಿ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 
ಶಿವಮೊಗ್ಗದಲ್ಲಿ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ
ಶಿವಮೊಗ್ಗದಲ್ಲಿ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ

ಶಿವಮೊಗ್ಗ: ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಚೋರಡಿ ಸಮೀಪ ನಡೆದಿದೆ.

ಶಿಕಾರಿಪುರದಿಂದ ಶಿವಮೊಗ್ಗ ಸಿಟಿ ಕಡೆಗೆ ಬರುತ್ತಿದ್ದ ವೆಂಕಟಮಹಾಲಕ್ಷ್ಮಿ ಖಾಸಗಿ ಬಸ್​ ಹಾಗೂ ಶಿವಮೊಗ್ಗದಿಂದ ಶಿಕಾರಿಪುರದ ಕಡೆಗೆ ತೆರಳುತ್ತಿದ್ದ ಶ್ರೀನಿವಾಸ ಹೆಸರಿನ ಬಸ್‌ಗಳು​ ಮುಖಾಮುಖಿ ಡಿಕ್ಕಿ ಆದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ಬಸ್‌ಗಳು ಒಂದರೊಳಗೆ ಒಂದು ಸಿಲುಕಿಕೊಂಡಿವೆ ಈ ದುರ್ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್ ಮಾಹಿತಿ ನೀಡಿದ್ದು,​ ಮೂವರ ಸ್ಥಿತಿ ಗಂಭೀರವಾಗಿದೆ. 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಎಲ್ಲರನ್ನೂ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಜೆಸಿಬಿ ಮೂಲಕ ಬಸ್‌ಗಳ ತೆರವು

ಶಿವಮೊಗ್ಗ ಜಿಲ್ಲೆಯ ಸಾಗರ ರಸ್ತೆಯ ಚೋರಡಿ ಬಳಿ ಇರುವ ಕುಮದ್ವತಿ ಬಳಿ, ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಆಕ್ಸಿಡೆಂಟ್‌ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹೆದ್ದಾರಿಯನ್ನು ಬಂದ್‌ ಮಾಡಿದ್ದು ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಆಯನೂರು ರಿಪ್ಪನ್‌ಪೇಟೆ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಜೆಸಿಬಿ ಮೂಲಕ ಬಸ್‌ಗಳನ್ನು ಸರಿಸುವ ಪ್ರಯತ್ನ ನಡೆದಿದೆ. ಸ್ಥಳಕ್ಕೆ ಸುಮಾರು 10 ಆಂಬುಲೆನ್ಸ್‌ಗಳು ತೆರಳಿದ್ದು ಮೃತದೇಹಗಳು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದೆ.

ಅಪಘಾತದಲ್ಲಿ ಒಬ್ಬರ ಗುರುತು ಪತ್ತೆಯಾಗಿದೆ. ಹೊಸದುರ್ಗ ನಿವಾಸಿ ತಿಪ್ಪೇಸ್ವಾಮಿ ಮೃತ ದುರ್ದೈವಿಯಾಗಿದ್ದು ಇತರರ ಗುರುತು ಪತ್ತೆಯಾಗಿಲ್ಲ. ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಡಿ.ಕೆ. ಶಿವಕುಮಾರ್‌ ಟ್ವೀಟ್‌

ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ. ''ಶಿವಮೊಗ್ಗದ ಚೋರಡಿ ಬಳಿ ನಡೆದ ಖಾಸಗಿ ಬಸ್‌ಗಳ ನಡುವಿನ ಭೀಕರ ಅಪಘಾತದಲ್ಲಿ 10ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವ ಸುದ್ದಿ ತಿಳಿದು ದುಃಖವಾಗಿದೆ. ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸುತ್ತಾ, ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ'' ಎಂದು ಡಿ.ಕೆ. ಶಿವಕುಮಾರ್‌ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ