Kannada Jathre: ಹೊಸತೋಟದಲ್ಲಿ ಕನ್ನಡ ನುಡಿ ಜಾತ್ರೆ ನ.10ಕ್ಕೆ, ಮಕ್ಕಳ ಮುಖವಾಣಿ ಪಾಠಪತ್ರಿಕೆ, ಮಕ್ಕಳ ದನಿ ಧ್ವನಿಪತ್ರಿಕೆ ವಿಶೇಷ ಆಕರ್ಷಣೆ
Oct 28, 2023 06:03 PM IST
ತೀರ್ಥಹಳ್ಳಿ ತಾಲೂಕು ಹೊಸತೋಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 10ರಂದು ಕನ್ನಡ ನುಡಿ ಜಾತ್ರೆ ನಡೆಯಲಿದೆ. ಮಕ್ಕಳ ಮುಖವಾಣಿ "ಪಾಠಪತ್ರಿಕೆ" ಮತ್ತು ಮಕ್ಕಳ ದನಿಯಾಗಿ "ಧ್ವನಿಪತ್ರಿಕೆ" ಲೋಕಾರ್ಪಣೆಯಾಗಲಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸತೋಟದಲ್ಲಿ ಕನ್ನಡ ನುಡಿ ಜಾತ್ರೆ ನ.10ಕ್ಕೆ ನಡೆಯಲಿದ್ದು, ಮಕ್ಕಳ ಮುಖವಾಣಿ ಪಾಠಪತ್ರಿಕೆ, ಮಕ್ಕಳ ದನಿ ಧ್ವನಿಪತ್ರಿಕೆ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಈ ವಿಶೇಷ ಕಾರ್ಯಕ್ರಮದ ವಿವರ ಇಲ್ಲಿದೆ ನೋಡಿ.
ಶಿವಮೊಗ್ಗ: ಕರ್ನಾಟಕ ಸಂಭ್ರಮ 50ಕ್ಕೆ ರಾಜ್ಯ ಅಣಿಯಾಗುತ್ತಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿಯ ಹೊಸತೋಟದಲ್ಲಿ “ಕನ್ನಡ ನುಡಿ ಜಾತ್ರೆ” ಇದು ನಮ್ಮೂರ ಹಬ್ಬ ಎಂಬ ಕಾರ್ಯಕ್ರಮ ನವೆಂಬರ್ 10ರಂದು ನಡೆಯಲಿದೆ. ವಿಶೇಷ ಎಂದರೆ ಮಕ್ಕಳ ಮುಖವಾಣಿಯಾಗಿರುವ ಪಾಠಪತ್ರಿಕೆ ಮತ್ತು ಮಕ್ಕಳ ದನಿಯಾಗಿರುವ ಧ್ವನಿಪತ್ರಿಕೆಗಳ ಬಿಡುಗಡೆ ಕೂಡ ಇದೇ ವೇದಿಕೆಯಲ್ಲಿ ಆಗಲಿದೆ.
ಹೌದು, ಕಾಡಮೂಲೆಯ ಗ್ರಾಮ ಒಂದು ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಜ್ಜಾಗುತ್ತಿದೆ. ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮಪಂಚಾಯತಿಯ ಹೊಸತೋಟದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಸರ್ಕಾರಿ ಶಾಲೆಯ ಮಕ್ಕಳನ್ನು ಒಳಗೊಂಡು 'ಕನ್ನಡ ನುಡಿ ಜಾತ್ರೆ' ಇದು ನಮ್ಮೂರ ಹಬ್ಬವನ್ನು ಸಂಘಟಿಸುತ್ತಿದ್ದಾರೆ.
ಅಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಉತ್ಸವ ಸಿರಿ, ಕಲಾ ಸಿರಿ, ನುಡಿ ಸಿರಿ ಹಾಗೂ ಸಂಗೀತ ಸಿರಿ ಹೆಸರಿನೊಂದಿಗೆ ಸ್ಥಳೀಯ ಕಲಾವಿದರಿಂದ, ಶಾಲಾ ಮಕ್ಕಳಿಂದ ವೈವಿಧ್ಯಮಯ ವೇದಿಕೆ ಕಾರ್ಯಕ್ರಮಗಳಿರುತ್ತವೆ. ಶಿಕ್ಷಣ ಇಲಾಖೆಯ ಬಹು ಮಹತ್ವಾಕಾಂಕ್ಷೆಯ ನವೆಂಬರ್ ಮಾಸದ 'ಭಾಷಾಹಬ್ಬ'ವೂ ಇದರೊಂದಿಗೆ ಸೇರ್ಪಡೆಯಾಗಿದೆ. ತನ್ಮೂಲಕ ಕನ್ನಡ ಮಣ್ಣಿನ ಮಕ್ಕಳ ನುಡಿ ಕಾಯಕದ ನಿಜ ಹಬ್ಬ ಇದಾಗಿರಲಿದೆ. ಹತ್ತು ಹಲವು ಬಗೆಯ ಪ್ರದರ್ಶಿನಿಗಳು ಸಮುದಾಯ ಶಿಕ್ಷಣವಾಗಿ ಮಕ್ಕಳಿಗೆ ಪ್ರೇರಣೆಯಾಗಿ ಆಯೋಜನೆಗೊಂಡಿರುತ್ತವೆ.
ಕನ್ನಡ ನುಡಿ ಜಾತ್ರೆಯಲ್ಲಿ ‘ಪಾಠಪತ್ರಿಕೆ ಹಾಗೂ ಧ್ವನಿಪತ್ರಿಕೆ’- ಏನಿದು ವಿಶೇಷ
''ಮಕ್ಕಳ ಪಾಠಪತ್ರಿಕೆ ಒಂದು ಚೆಂದದ ಯೋಚನೆ. ಹಲವು ವಿವಿಧ ಕಲಾ ಪ್ರಕಾರಗಳನ್ನು ನಾವು ಅತೀ ಸುಲಭವಾಗಿ ತಲುಪಿ ಬಿಡುತ್ತೇವೆ ಅಥವಾ ಅವು ನಮ್ಮನ್ನು ತಲುಪುತ್ತವೆ. ಆದರೆ ಪುಸ್ತಕವೆಂಬ ಕಾಗದದ ಗೋಡೆಗಳಿಗೆ ರೆಕ್ಕೆ ಮೂಡಿಸುವುದು ಯಾವಾಗ? ಪಾಠಗಳು ಅವು ಇದ್ದಂತೆಯೇ ಮಕ್ಕಳನ್ನು ತಲುಪಬೇಕೆಂದೇನಿಲ್ಲ. ಮಗು ಅದನ್ನು ತನ್ನ ಅಭಿರುಚಿಗನುಗುಣವಾಗಿ ವಿವಿಧ ಸಾಧ್ಯತೆಗಳ ಮೂಲಕ ತಲುಪುಬಹುದು. ಇದಕ್ಕೆ ಸೂಕ್ತವಾದ ವೇದಿಕೆ ಈ ಪಾಠಪತ್ರಿಕೆ. ಅಂಕಗಳು ಸಧ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಮುಖ ಮಾನದಂಡಗಳಾಗಿವೆ. ಹಲವು ತರಹದ ಪ್ರತಿಭೆಯುಳ್ಳ ಮಕ್ಕಳಿಗೆ ಕೇವಲ ಅಂಕಕ್ಕಾಗಿಯೇ ಓದುವುದು ನೀರಸವೆನಿಸಬಹುದು. ತಮಗಿರುವ ಗದ್ಯವನ್ನು ಪದ್ಯವಾಗಿಸಿ, ಪದ್ಯವನ್ನು ನಾಟಕವಾಗಿಸಿ, ಘಟನೆಯೊಂದನ್ನು ಸುದ್ಧಿಯಾಗಿಸಿ, ಪಾಠದ ಪಾತ್ರಗಳ ಜನನ, ಮರಣ, ಪಲಾಯನ, ಮದುವೆ ಮುಂತಾದವುಗಳನ್ನು ಜಾಹೀರಾತಾಗಿಸಿ, ವಿಜ್ಞಾನಪಾಠವನ್ನು ಬೊಂಬೆಯಾಟವನ್ನಾಗಿಸಿ, ಗಣಿತವನ್ನು ಅಂಕಿಬಂಧವಾಗಿಸಿ, ಮಾಯಾಚೌಕಗಳನ್ನಾಗಿಸಿ... ಹೀಗೆ ನಡೆಯುವ ಹತ್ತು ಹಲವು ಸಾಧ್ಯತೆಗಳಲ್ಲಿ ಮಗು ತಾನು ತೊಡಗಿಕೊಂಡಿರುವುದು ಕೇವಲ ಅಂಕಕ್ಕಾಗಿಯಲ್ಲ... ತನ್ನ ಮನೋಲ್ಲಾಸ, ಕಲಾಭಿವ್ಯಕ್ತಿಯೂ ಆಗಿ ವ್ಯಕ್ತಿ ನಿರ್ಮಾಣದ ಕಾರ್ಯವೂ ಅತ್ಯಂತ ಸಹಜವಾಗಲಿದೆ. ಅದು ಇರಬೇಕಾದುದೂ ಹಾಗೆಯೇ... ಇಂಥ ಪ್ರಯತ್ನಗಳು ನಮ್ಮ ಶಿಕ್ಷಕರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ಅತ್ಯಂತ ಶಿಶುಸ್ನೇಹಿಯಾದ ಈ ಪಾಠಪತ್ರಿಕೆ ನಿರಂತರವಾಗಲೆಂದು ಹಾರೈಸುವೆ...'' ಎಂದು ತೀರ್ಥಹಳ್ಳಿಯ ಕ್ಷೇತ್ರಶಿಕ್ಷಣಾಧಿಕಾರಿ ಗಣೇಶ್ ವೈ ಶುಭ ಕೋರಿದ್ದಾರೆ.
ಹೊಸತೋಟದ ಕನ್ನಡ ನುಡಿ ಜಾತ್ರೆಯ ವಿಶೇಷಗಳಿವು
ಹೊಸತೋಟದ ಕನ್ನಡ ನುಡಿ ಜಾತ್ರೆಯ ವಿಶೇಷ ಎಂದರೆ ಉತ್ಸವ ಸಿರಿ, ಕಲಾ ಸಿರಿ, ನುಡಿ ಸಿರಿ ಮತ್ತು ಸಂಗೀತ ಸಿರಿಗಳೆಂಬ ವರ್ಗೀಕರಣಗಳೊಂದಿಗೆ ನಡೆಯುವ ಕಾರ್ಯಕ್ರಮಗಳು.
ಉತ್ಸವ ಸಿರಿಯಲ್ಲಿ ಏನೇನಿರುತ್ತವೆ
- ಸಾಂಪ್ರದಾಯಿಕ ಎತ್ತಿನಗಾಡಿಯಲ್ಲಿ ಭುವನೇಶ್ವರಿ ಮೆರವಣಿಗೆಯಲ್ಲಿ ಚೆಂಡೆ ವಾದ್ಯ, ಕೋಲಾಟ, ಭಜನೆ, ಮರಗಾಲು, ಬಳೆ ಕೋಲಾಟ, ಸೀರೆ ಕೋಲಾಟವಿರುತ್ತದೆ.
- ವಿವಿಧ ಶಾಲಾ ಮಕ್ಕಳಿಂದ ಪ್ರಸಿದ್ಧ ಕನ್ನಡಿಗರ ವೇಷ, ಸ್ತಬ್ದಚಿತ್ರಗಳು, ವಿವಿಧ ಬೊಂಬೆಪಾತ್ರಧಾರಿಗಳು ರಂಜಿಸಲಿದ್ದಾರೆ.
- ವಿಶೇಷವಾಗಿ ಸ್ಥಳೀಯ ಕಲಾವಿದರ ಪ್ರದರ್ಶಿನಿಗಳಿರುತ್ತವೆ. ಕಲಾವಿದರಾದ ಮಂಜಣ್ಣ ನಾಯಕ್, ಅರವಿಂದ್, ಭಾವನಾ ಹೊಳ್ಳ, ಜಗದೀಶ ಶೀಲವಂತರ್, ಚಂದ್ರಶೇಖರ್ ಟಿ ಎಂ ಭಾಗವಹಿಸಲಿದ್ದಾರೆ.
- ಶ್ರೀನಿವಾಸ್ ಜಿ ಚಿತ್ರದುರ್ಗ ಇವರಿಂದ ದಸರಾ, ಚನ್ನಪಟ್ಟಣ ಬೊಂಬೆಗಳು ಹಾಗೂ ಪುರಾತನ ಲೋಹ ಕಲಾಕುಸುರಿಗಳ ಪ್ರದರ್ಶನ,
- ಮಹಮ್ಮದ್ ನಿವೃತ್ತ ಶಿಕ್ಷಕರಿಂದ ಕನ್ನಡ ಇತಿಹಾಸ ಸಾರುವ ಅಂಚೆಚೀಟಿ ಹಾಗೂ ನಾಣ್ಯಪ್ರದರ್ಶನವಿರಲಿದೆ.
- ವಿನಾಯಕ ಗುಜ್ಜರ್ ಇವರ ಪರಿಸರದ ಚಿತ್ರಗಳು, ಕವಿತಾ ಶ್ರೀಕಾಂತರ ಆರೋಗ್ಯ ಪರಿಸರ ಶಿಕ್ಷಣ ಮಾಹಿತಿ ಕೇಂದ್ರ ಹಾಗೂ ಸ್ಥಳೀಯ ಸಂಗ್ರಹವಾದ ಹಳ್ಳಿ ಸೊಗಡಿನ ಕೃಷಿ ವಸ್ತು ಪ್ರದರ್ಶನ ಗಮನ ಸೆಳೆಯಲಿವೆ.
- ನಮ್ಮ ಶಾಲೆ ನಮ್ಮ ಹೆಮ್ಮೆಯಾಗಿ ಸ.ಕಿ.ಪ್ರಾ.ಶಾಲೆ, ಹೊಸತೋಟವೂ ಸರ್ಕಾರಿ ಕನ್ನಡ ಶಾಲೆಗಳನ್ನು ಪ್ರದರ್ಶಿನಿಯಲ್ಲಿ ಪ್ರತಿನಿಧಿಸಲಿದೆ.
ಕಲಾ ಸಿರಿಯಲ್ಲಿ ವಿವಿಧ ಕಲಾಮೇಳಗಳ ಪ್ರದರ್ಶನ
- ಕನ್ನಡ ಶಾಲೆಯ ಮಕ್ಕಳ ನಾಲಗೆಯ ಮೇಲೆ ಪ್ರಸಿದ್ಧ ಕವಿಗಳ ಪದ್ಯಗಳು ನಲಿದಾಡಿ ಸಹೃದಯರನ್ನು ಸೆಳೆಯಲಿವೆ.
- ಅಂಟಿಗೆ ಪಂಟಿಗೆ, ಜಾನಪದ ಗೀತರೂಪಕದೊಂದಿಗೆ ಸ್ಥಳೀಯ ಕಲಾವಿದರು ನಮ್ಮನ್ನು ಆಕರ್ಷಿಸಲಿದ್ದಾರೆ.
- ಹಳ್ಳಿ ಶಾಲೆಗಳಲ್ಲಿ ಓದಿ ಸಾಧಕರಾದವರನ್ನು, ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರನ್ನು, ಶಾಲಾ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಗುತ್ತಿದೆ.
- ವಿಶೇಷವಾಗಿ ಸರ್ಕಾರಿ ಕನ್ನಡ ಶಾಲೆಗಳ ಸಹಜ ಸಂತಸ ಕಲಿಕೆಗೆ ಪೂರಕವಾದ ಪಾಠಪತ್ರಿಕೆ, ಧ್ವನಿಪತ್ರಿಕೆಗಳು ಅನಾವರಣಗೊಳ್ಳಲಿವೆ.
ನುಡಿಸಿರಿಯಲ್ಲಿ ಹಿರಿ ಕಿರಿಯರ ಸಮಾಗಮ
- ನುಡಿಸಿರಿಯಲ್ಲಿ ಹಿರಿಕಿರಿಯರ ಸಮಾಗಮವಾಗಿ ಕವಿಗೋಷ್ಠಿ
- ದೇಶೀ ಆಟೋಟಗಳ ವಿಜೇತರು ಮತ್ತು ಎಫ್ ಎಲ್ ಎನ್ ಭಾಷಾ ಚಟುವಟಿಕೆಯ ವಿಜೇತ ಮಕ್ಕಳಿಗೆ ವಿಶಿಷ್ಟ ವಿಭಿನ್ನ ಕನ್ನಡ ಪುಸ್ತಕ ಬಹುಮಾನಗಳು ಉಡುಗೊರೆ ವಿತರಣೆ
ಸಂಗೀತ ಸಿರಿಯಲ್ಲಿ ಏನೇನಿರುತ್ತವೆ
ಸಂಜೆಯ ಸಂಗೀತ ಸಿರಿಯಲ್ಲಿ ಮಕ್ಕಳಿಂದ ಕನ್ನಡ ನೃತ್ಯರೂಪಕಗಳು, ಕನ್ನಡ ಭಜನೆಗಳು ನಡೆಯಲಿವೆ. ಇಂಥದ್ದೊಂದು ಸದಭಿರುಚಿಯ ಕಾರ್ಯಕ್ರಮವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊಸತೋಟದ ಶಾಲಾವರಣದಲ್ಲಿ ನಡೆಯಲಿದೆ.