Yediyurappa Interview: ಬಿಜೆಪಿ ನಾಯಕರು ಹಿಜಾಬ್, ಹಲಾಲ್ ವಿಚಾರಗಳನ್ನು ಬೆಂಬಲಿಸುವುದು ಸರಿಯಲ್ಲ; ಬಿಎಸ್ ಯಡಿಯೂರಪ್ಪ ವಿಶೇಷ ಸಂದರ್ಶನ
ಕನ್ನಡ ಸುದ್ದಿ  /  ಕರ್ನಾಟಕ  /  Yediyurappa Interview: ಬಿಜೆಪಿ ನಾಯಕರು ಹಿಜಾಬ್, ಹಲಾಲ್ ವಿಚಾರಗಳನ್ನು ಬೆಂಬಲಿಸುವುದು ಸರಿಯಲ್ಲ; ಬಿಎಸ್ ಯಡಿಯೂರಪ್ಪ ವಿಶೇಷ ಸಂದರ್ಶನ

Yediyurappa Interview: ಬಿಜೆಪಿ ನಾಯಕರು ಹಿಜಾಬ್, ಹಲಾಲ್ ವಿಚಾರಗಳನ್ನು ಬೆಂಬಲಿಸುವುದು ಸರಿಯಲ್ಲ; ಬಿಎಸ್ ಯಡಿಯೂರಪ್ಪ ವಿಶೇಷ ಸಂದರ್ಶನ

BS Yediyurappa interview: ಶಿಕಾರಿಪುರಕ್ಕೆ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಸಿದ ದಿನವಾದ ಬುಧವಾರ (ಏ. 19) ಬಿಎಸ್​ವೈ ಅವರು ಹಿಂದೂಸ್ತಾನ್​ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಪ್ರಮುಖ ನಾಯಕರು ಪಕ್ಷ ತೊರೆಯುವುದು, ದಕ್ಷಿಣದ ಏಕೈಕ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆಗಳು, ಹಿಜಾಬ್-ಹಲಾಲ್​ ವಿವಾದದ ಬಗ್ಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ತಮ್ಮ 80ನೇ ವಯಸ್ಸಿನಲ್ಲಿನೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ (BJP) ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪ ಅವರು ಇನ್ನು ಮುಂದೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಲ್ಲದಿದ್ದರೂ 2023ರ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಪಕ್ಷದ ಪರ ಪ್ರಚಾರವನ್ನು ಮುನ್ನಡೆಸುವ ವ್ಯಕ್ತಿಯಾಗಿದ್ದಾರೆ. ಬಿಜೆಪಿಯ ಸ್ಟಾರ್​ ಪ್ರಚಾರಕರಾಗಿದ್ದಾರೆ.

ಶಿಕಾರಿಪುರಕ್ಕೆ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಸಿದ ದಿನವಾದ ಬುಧವಾರ (ಏ. 19) ಬಿಎಸ್​ವೈ ಅವರು ಹಿಂದೂಸ್ತಾನ್​ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಪ್ರಮುಖ ನಾಯಕರು ಪಕ್ಷ ತೊರೆಯುವುದು, ದಕ್ಷಿಣದ ಏಕೈಕ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆಗಳು, ಹಿಜಾಬ್-ಹಲಾಲ್​ ವಿವಾದದ ಬಗ್ಗೆ ಮಾತನಾಡಿದರು.

ವಿಜಯೇಂದ್ರ ಇಂದು ಶಿಕಾರಿಪುರದಿಂದ ನಾಮಪತ್ರ ಸಲ್ಲಿಸಿದರು. ಪ್ರತಿಕ್ರಿಯೆ ಹೇಗಿತ್ತು?

ಪ್ರತಿಕ್ರಿಯೆ ಉತ್ತಮವಾಗಿತ್ತು. 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ. ಎಲ್ಲಾ ಬೂತ್‌ಗಳಿಂದ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರು. ಬೂತ್ ಮಟ್ಟದಲ್ಲಿ ನಾವು ಉತ್ತಮವಾಗಿ ಕೆಲಸ ಮಾಡಿದ್ದೇವೆ. ಆದ್ದರಿಂದ, ನಾವು ಗರಿಷ್ಠ ಸಂಖ್ಯೆಯ ಮತಗಳನ್ನು ಪಡೆಯುತ್ತೇವೆ.

ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ವಿಶ್ವಾಸವಿದೆಯೇ?

ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸ ನಮಗಿದೆ.

ಆದರೆ ಕಳೆದ 30 ವರ್ಷಗಳಲ್ಲಿ ಯಾವ ಆಡಳಿತಾರೂಢ ಸರ್ಕಾರ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ ಮತ್ತೆ ಸರ್ಕಾರ ರಚಿಸುತ್ತದೆ ಎಂದು ನೀವು ಹೇಗೆ ಹೇಳುತ್ತೀರಿ?

ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದೇನೆ. ನನಗೆ ಜನರ ಮೇಲೆ ವಿಶ್ವಾಸವಿದೆ. ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ನೋಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಭೇಟಿ ನೀಡಲಿದ್ದು, ಪರಿಸ್ಥಿತಿ ಸುಧಾರಿಸಲಿದೆ. ನಮ್ಮ ಶಕ್ತಿ ಹೆಚ್ಚುತ್ತದೆ. ನಮ್ಮಲ್ಲಿರುವಂತಹ ನಾಯಕರು ಕಾಂಗ್ರೆಸ್​ನಲ್ಲಿ ಇಲ್ಲ. ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ, ಆದರೆ ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾಗೆ ಸರಿಸಾಟಿಯಲ್ಲ.

ಅಪರೂಪ ಎಂಬಂತೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯ ಸಂದರ್ಭದಲ್ಲಿ ಮೋದಿ ನಿಮ್ಮ ಕೈಗಳನ್ನು ಹಿಡಿದು ನಿಮ್ಮೊಂದಿಗೆ ನಡೆದರು, ಶಾ ಅವರು ಬೆಳಗಿನ ಉಪಾಹಾರಕ್ಕಾಗಿ ಬೆಂಗಳೂರಿನಲ್ಲಿರುವ ನಿಮ್ಮ ನಿವಾಸಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರೊಂದಿಗೆ ನಿಮ್ಮ ಸಂಬಂಧ ಹೇಗಿದೆ?

ನನಗೆ ಮೋದಿಜಿ ಬಗ್ಗೆ ಅಪಾರ ಗೌರವವಿದೆ. ಅವರು ರಾಷ್ಟ್ರೀಯ ನಾಯಕ ಮತ್ತು ಇಡೀ ಜಗತ್ತು ಅವರನ್ನು ಗುರುತಿಸಿದೆ. ನಮ್ಮಲ್ಲಿ ಅಂತಹ ನಾಯಕತ್ವ ಇರುವುದು ಅಪರೂಪ. ಹಾಗಾಗಿ ಅವರ ಮೇಲೆ ನನಗೆ ಅಪಾರ ಗೌರವ ಮತ್ತು ವಿಶ್ವಾಸವಿದೆ. ಅವರು ಕೂಡ ನನ್ನ ಬಗ್ಗೆ ಅದೇ ಗೌರವ ಮತ್ತು ಪ್ರೀತಿಯನ್ನು ತೋರಿಸಿದ್ದಾರೆ. ಅಮಿತ್ ಶಾ ಅವರಿಗೂ ನನ್ನ ಬಗ್ಗೆ ಅದೇ ರೀತಿಯ ಗೌರವವಿದೆ.

ನೀವು ಬಿಜೆಪಿಯ ಅತ್ಯಂತ ಪ್ರಭಾವಿ ಲಿಂಗಾಯತ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದೀರಿ. ನಿಮ್ಮ ಸ್ಥಾನ ತುಂಬಲು ಬಿಜೆಪಿಯಲ್ಲಿ ಯಾರಿದ್ದಾರೆ?

ಚುನಾವಣೆ ನಂತರ ತೀರ್ಮಾನ ಮಾಡುತ್ತೇವೆ. ನನ್ನ ಸಮುದಾಯ ಮತ್ತು ಇತರ ಸಮುದಾಯಗಳ ಅನೇಕ ನಾಯಕರು ಇದ್ದಾರೆ. ಅವರು ಆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ.

ಮುಂಬರುವ ಚುನಾವಣೆಗೆ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದರೂ ಬಸವರಾಜ ಬೊಮ್ಮಾಯಿ ಸಿಎಂ ಫೇಸ್​ ಆಗಿದ್ದಾರೆ. ಈ ಬಗ್ಗೆ ನಿಮ್ಮ ಆಲೋಚನೆಗಳೇನು?

ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯ ನಂತರ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಶಾಸಕಾಂಗ ಪಕ್ಷ ತೀರ್ಮಾನಿಸಲಿದೆ.

ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರ ನಿರ್ಗಮನವು ಚುನಾವಣೆಯಲ್ಲಿ ಬಿಜೆಪಿಯ ಲಿಂಗಾಯತ ಬೆಂಬಲವನ್ನು ತಗ್ಗಿಸಬಹುದು ಎಂದು ನೀವು ಭಾವಿಸುತ್ತೀರಾ?

ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ನಾನು ಅದರ ಬಗ್ಗೆ ಶೇ.100 ರಷ್ಟು ವಿಶ್ವಾಸ ಹೊಂದಿದ್ದೇನೆ. ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಾನು ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ಶೆಟ್ಟರ್ ಅವರಿಗೆ ನಾವು ಯಾವುದೇ ಅನ್ಯಾಯ ಮಾಡಿಲ್ಲ. ನಾವು ಅವರಿಗೆ ಎಲ್ಲಾ ರೀತಿಯ ಭರವಸೆಗಳನ್ನು ನೀಡಿದ್ದೆವು. ಕೇಂದ್ರಕ್ಕೆ ಬರುವಂತೆ ಹೇಳಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದೆವು. ಅವರ ಕುಟುಂಬದ ಯಾರನ್ನಾದರೂ ಕಣಕ್ಕಿಳಿಸುವಂತೆ ಕೇಳಿದ್ದೆವು. ಎಲ್ಲಾ ರೀತಿಯ ಭರವಸೆಗಳನ್ನು ನೀಡಿದ ನಂತರವೂ ಅವರು ಯೋಚಿಸಲಿಲ್ಲ ಮತ್ತು ಇದು ಎಲ್ಲರಿಗೂ ತಿಳಿದಿದೆ. ಅವರು ಇಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು.

ವಿಶೇಷವಾಗಿ ನಿಮ್ಮ ಕ್ಷೇತ್ರವಾದ ಶಿಕಾರಿಪುರದಲ್ಲಿ ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಒಳ ಮೀಸಲಾತಿಗೆ ಸಂಬಂಧಿಸಿದಂತೆ ಹಿನ್ನಡೆಯಾಗಿದೆ. ಮೀಸಲಾತಿ ವಿಚಾರವು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ನೀವು ಭಾವಿಸುತ್ತೀರಾ?

ನಾವು ಎಸ್‌ಸಿಗಳಿಗೆ ನೀಡಿರುವ ಮೀಸಲಾತಿ ಅವರಿಗೆ ಸಹಾಯ ಮಾಡುತ್ತದೆ. ಇದು ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಬಂಜಾರ ಸಮುದಾಯದವರೂ ಖುಷಿಯಾಗಿದ್ದಾರೆ. ಇಂದಿನ ಕಾರ್ಯಕ್ರಮದಲ್ಲೂ ಬಂಜಾರ ಸಮುದಾಯದ ಹಲವು ಮುಖಂಡರು ಪಾಲ್ಗೊಂಡಿದ್ದರು. ಇಡೀ ರಾಜ್ಯ ಪ್ರವಾಸ ಮಾಡಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ.

ಟಿಪ್ಪು ವರ್ಸಸ್ ಸಾವರ್ಕರ್, ಹಿಜಾಬ್, ಹಲಾಲ್ ವಿವಾದಗಳನ್ನು ನೀವು ಒಪ್ಪುವುದಿಲ್ಲ ಎಂದು ನೀವು ಮೊದಲೇ ಹೇಳಿದ್ದೀರಿ. ಆದರೆ ನಿಮ್ಮ ಪಕ್ಷದ ನಾಯಕರು ಈ ವಿಷಯಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಾನು ಅಂತಹ ವಿಷಯಗಳನ್ನು ಬೆಂಬಲಿಸಲು ಹೋಗುವುದಿಲ್ಲ. ಪಕ್ಷದ ಇತರ ನಾಯಕರು ಇಂತಹ ಸಮಸ್ಯೆಗಳನ್ನು ಬೆಂಬಲಿಸಿದರೆ ಅದು ಸರಿಯಲ್ಲ. ನಾನು ಅವರ ಜೊತೆ ಮಾತನಾಡಿ ಆ ರೀತಿ ಮಾತನಾಡದಂತೆ ಎಚ್ಚರಿಕೆ ನೀಡುತ್ತೇನೆ.

ನಿಮ್ಮನ್ನು ಬದಿಗೊತ್ತಲು ಹೈಕಮಾಂಡ್ ಪ್ರಯತ್ನ ನಡೆಸುತ್ತಿದೆ ಎಂಬ ಊಹಾಪೋಹಗಳಿವೆ.

ನನ್ನನ್ನು ಯಾರೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ನಾನೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ನನ್ನ ಪಕ್ಷ ನನ್ನನ್ನು ಬದಿಗಿಟ್ಟಿಲ್ಲ.

ಚುನಾವಣೆಯ ನಿಮ್ಮ ವಾಸ್ತವಿಕ ಮೌಲ್ಯಮಾಪನವೇನು?

ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ. ಅದರಲ್ಲಿ ಯಾವುದೇ ಸಂಶಯವಿಲ್ಲ.

ಬಿಜೆಪಿ ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಮುಂದಿನ ಪಾತ್ರವೇನು?

ಲೋಕಸಭೆಯಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.

Whats_app_banner