logo
ಕನ್ನಡ ಸುದ್ದಿ  /  ಕರ್ನಾಟಕ  /  Kumaraswamy On Siddaramaiah: ಜೆಪಿ ಸಿದ್ಧಾಂತವನ್ನ ಗಾಳಿಗೆ ತೂರಿದ ಅವಕಾಶವಾದಿ ರಾಜಕಾರಣಿ ಸಿದ್ದರಾಮಯ್ಯ: ಹೆಚ್ಡಿಕೆ ಟೀಕೆ

Kumaraswamy on Siddaramaiah: ಜೆಪಿ ಸಿದ್ಧಾಂತವನ್ನ ಗಾಳಿಗೆ ತೂರಿದ ಅವಕಾಶವಾದಿ ರಾಜಕಾರಣಿ ಸಿದ್ದರಾಮಯ್ಯ: ಹೆಚ್ಡಿಕೆ ಟೀಕೆ

HT Kannada Desk HT Kannada

Jan 22, 2023 04:03 PM IST

ಮುದ್ದೇಬಿಹಾಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

  • ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಂಚರತ್ನ ರಥಯಾತ್ರೆ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಹೆಚ್ಡಿಕೆ, ಜಯಪ್ರಕಾಶ್ ನಾರಾಯಣ್ ಸಿದ್ದಾಂತವನ್ನ ಗಾಳಿಗೆ ತೂರಿದ್ದ ಸಿದ್ದರಾಮಯ್ಯ ಅವರು ಅವಕಾಶವಾದಿ ರಾಜಕಾರಣಿ ಎಂದು ಟೀಕಿಸಿದ್ದಾರೆ.

ಮುದ್ದೇಬಿಹಾಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಮುದ್ದೇಬಿಹಾಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಮುದ್ದೇಬಿಹಾಳ(ವಿಜಯಪುರ): ರಾಜ್ಯ ವಿಧಾನಸಭೆ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ.

ಟ್ರೆಂಡಿಂಗ್​ ಸುದ್ದಿ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

Hassan Scandal: 4 ದಿನ ಎಸ್‌ಐಟಿ ವಶಕ್ಕೆ ಮಾಜಿ ಸಚಿವ ರೇವಣ್ಣ, ತೀವ್ರ ವಿಚಾರಣೆ ಸಾಧ್ಯತೆ

Bangalore Metro:ಮೆಟ್ರೋದಲ್ಲೇ ಬೆಂಗಳೂರು ಸುತ್ತುವ ಅವಕಾಶ, 5 ವರ್ಷದಲ್ಲಿ ನಮ್ಮ ಮೆಟ್ರೋ ಜಾಲಕ್ಕೆ 16 ಇಂಟರ್‌ಚೇಂಜ್‌ ನಿಲ್ದಾಣಗಳ ಸೇರ್ಪಡೆ

ಪಂಚರತ್ನ ರಥಯಾತ್ರೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಲಘುವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಬಳವಾಟ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ನಿಮಿತ್ತ ಗ್ರಾಮ ವಾಸ್ತವ್ಯ ಹೂಡಿದ್ದ ಮಾಜಿ ಸಿಎಂ ಹೆಚ್ಡಿಕೆ ಇಂದು ಬೆಳಗ್ಗೆ (ಜ.22, ಭಾನುವಾರ) ಮಾಧ್ಯಮಗಳ ಜತೆ ಮಾತನಾಡಿ, ಜಯಪ್ರಕಾಶ್ ನಾರಾಯಣ್ ಸಿದ್ಧಾಂತವನ್ನು ಗಾಳಿಗೆ ತೂರಿದ ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ ಎಂದು ಟೀಕಿಸಿದ್ದಾರೆ.

ಜೆಡಿಎಸ್ ಪಕ್ಷದ ಬಗ್ಗೆ ಹಾಗೂ ಪಂಚರತ್ನ ರಥಯಾತ್ರೆ ಕುರಿತು ಸಿದ್ದರಾಮಯ್ಯ ಅವರು ಹಾಸನದಲ್ಲಿ ಅನಗತ್ಯ ಟೀಕೆ ಮಾಡಿದ್ದಾರೆ. ನನ್ನ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವಲು ಧರ್ಮಸ್ಥಳದ ಸಿದ್ದವನದಲ್ಲಿ ನಡೆಸಿದ ಷಡ್ಯಂತ್ರವನ್ನು ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ಯೋಗ್ಯತೆ ಏನು ಅಂತಾ ಗೊತ್ತಿದೆ

ಮುಖ್ಯಮಂತ್ರಿ ಆಸೆಗಾಗಿ ಪಕ್ಷ ಬಿಟ್ಟು ಹೋಗಿದ್ದು ನೆನಪು ಇದೇಯಾ ನಿಮಗೆ? ನಿಮ್ಮಿಂದ ನಾನು ಪಾಠವನ್ನು ಹೇಳಿಸಿಕೊಳ್ಳುವ ಅಗತ್ಯ ನನಗೆ ಇಲ್ಲ. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷ ಉಳಿಸಿಕೊಂಡು ಹೊರಟಿದ್ದೇವೆ. ಅಂಥ ಪಕ್ಷವನ್ನು, ಅವರ ಸಿದ್ಧಾಂತವನ್ನು ಗಾಳಿಗೆ ತೂರಿ ಸಿಎಂ ಕುರ್ಚಿ ಹಿಂದೆ ಓಡಿ ಹೋದವರು ಯಾರು? ನಿಮ್ಮ ಯೋಗ್ಯತೆ ಏನು ಅಂತಾ ಗೊತ್ತಿದೆ ಎಂದು ಹೆಚ್​ಡಿಕೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ನೀವ್ ಏನು ಮಾಡಿದಿರಿ ಎನ್ನುವುದು ಗೊತ್ತಿದೆ. ಎಲ್ಲಿ ಕೂತು, ಯಾರ ಜತೆ ಕೂಡಿ ಕುತಂತ್ರ ಮಾಡಿದ್ದೀರಿ ಎನ್ನುವುದು ನನಗೆ ತಿಳಿದಿದೆ. ಬಿಜೆಪಿಗೆ ಅಧಿಕಾರ ಹೋಗಬಾರದು ಎಂದು ನಿಮ್ಮ ಪಕ್ಷದ ವರಿಷ್ಠರು ನಮ್ಮ ಬಾಗಿಲಿಗೆ ಬಂದಿದ್ದರು. ಖರ್ಗೆ, ಪರಮೇಶ್ವರ್, ಡಿಕೆ ಶಿವಕುಮಾರ್ ಇದ್ದಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ಲವೆ? ಆಗ ನೀವು ಎಲ್ಲಿದ್ರಿ? ಎಂದು ಪ್ರಶ್ನಿಸಿದ್ದಾರೆ.

ನನ್ನ ಸರ್ಕಾರ ಹೇಗೆ ಹೋಯಿತು? ಅದನ್ನು ತೆಗೆಯಲು ನಿಮ್ಮ ಕಾಣಿಕೆ ಏನು? ಬಿಜೆಪಿಯವರ ಜತೆ ಹೇಗೆಲ್ಲಾ ಕುಮ್ಮಕ್ಕಾಗಿದ್ದಿರಿ? ಯಾರನ್ನೆಲ್ಲ ಎಲ್ಲೆಲ್ಲಿಗೆ ಕಲಿಸಿದಿರಿ ಎನ್ನುವುದು ನನಗೆ ಮಾಹಿತಿ ಇದೆ. ಆದರೆ, ಜಾತ್ಯತೀತ ತತ್ವ ಆಸ್ತಿ ಎನ್ನುವ ರೀತಿ ವರ್ತಿಸುತ್ತಿದ್ದೀರಿ. ಜಯಪ್ರಕಾಶ್ ನಾರಾಯಣ್ ಅವರ ಸಿದ್ಧಾಂತಕ್ಕೆ ನೀವು ಬದ್ಧರಾಗಿ ಇದ್ದಿದರೆ ನೀವು ಅಧಿಕಾರಕ್ಕಾಗಿ ಮಾತೃಪಕ್ಷವನ್ನು ಕಾಲಿನಲ್ಲಿ ಒದ್ದು ಹೋಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ನಾನು ಹೋಟೆಲ್ ನಲ್ಲಿ ಇದ್ದೆ ಎಂದು ಹೇಳುತ್ತಿರಲ್ಲ, ನಿಮ್ಮ ಸರ್ಕಾರ ಹೋದ ಕೂಡಲೇ ಸರ್ಕಾರಿ ಮನೆ ಖಾಲಿ ಮಾಡಿಕೊಡಬೇಕಿತ್ತು. ನೀವು ಹಾಗೆ ಮಾಡಲಿಲ್ಲ. ನಾನು ಹೋಟೆಲ್ ನಲ್ಲಿಯೇ ಇದ್ದಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೂರಾರು ಕೋಟಿ ಹಣ ಹೇಗೆ ಬಿಡುಗಡೆ ಆಯಿತು? ನಿಮ್ಮ ಪಕ್ಷದ ಶಾಸಕರಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹೇಗೆ ಬಿಡುಗಡೆ ಆಯಿತು? ಎಂದು ಹೇಳಿ ಎಂದು ಪ್ರಶ್ನಿಸಿದ್ದಾರೆ.

ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ಕಾಂಗ್ರೆಸ್ ಧ್ವನಿ:

ಪಂಚರತ್ನ ರಥಯಾತ್ರೆ ಬಗ್ಗೆ ಮಾತನಾಡಿದ್ದೀರಿ. ಹಾಗಾದರೆ ನಿಮ್ಮದೇನು? ನಿಮ್ಮದು ಪ್ರಜಾಧ್ವನಿ ಅಲ್ಲ, ಅಧಿಕಾರಕ್ಕಾಗಿ ನಡೆಸುತ್ತಿರುವ ಧ್ವನಿ ಎಂದು ಚಾಟಿ ಬೀಸಿದ್ದಾರೆ. ಪಂಚರತ್ನ ರಥಯಾತ್ರೆ 50 ದಿನ ದಾಟಿ ಮುನ್ನಡೆಯುತ್ತಿದೆ. ಅದು ಇವರೆಲ್ಲರ ನಿದ್ದೆಗೆಡಿಸಿದೆ. ಹೋದ ಕಡೆ ಎಲ್ಲಾ ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಹಿಸಿಕೊಳ್ಳುವುದು ಅವರಿಗೆ ಆಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು