Siddaramaih vs DK Shivakumar: ಮುಂದುವರಿದ ಗೊಂದಲ, ಕುತೂಹಲ ಹೆಚ್ಚಿಸಿದ ಹೈಕಮಾಂಡ್ ಕುರಿತ ಸಿದ್ದರಾಮಯ್ಯ ಹೊಸ ಹೇಳಿಕೆ
Apr 04, 2023 08:50 AM IST
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
- Karnataka Politics: ಕಾಂಗ್ರೆಸ್‌ಗೆ ಗೆಲುವಿನ ಆಸೆ ಇರುವ ರಾಜ್ಯ ಕರ್ನಾಟಕ. ಆದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಮುಂಚೂಣಿ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಣ ಮೇಲಾಟ ಮುಂದುವರಿದಿದೆ. ಈ ನಡುವೆ ಸಿದ್ದರಾಮಯ್ಯ ನೀಡಿರುವ ಹೊಸ ಹೇಳಿಕೆ ಕುತೂಹಲ ಹೆಚ್ಚಿಸಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ದಿನಗಣನೆ ಆರಂಭವಾಗಿದೆ. ದೇಶದಲ್ಲಿ ಕಾಂಗ್ರೆಸ್ (INC) ಪ್ರಬಲವಾಗಿರುವ, ಗೆಲುವಿನ ಆಸೆ ಜೀವಂತವಾಗಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಬಿಜೆಪಿಗೆ (BJP) ಪ್ರಬಲ ಸ್ಪರ್ಧೆ ಒಡ್ಡಬಹುದಾದ ಕಾಂಗ್ರೆಸ್ ಹಲವು ಬಾರಿ ಒಳಜಗಳಗಳ ಕಾರಣಕ್ಕೆ ಸುದ್ದಿಯಾಗಿದೆ. ಚುನಾವಣೆ ನಡೆಯುವ ಮೊದಲೇ ಮುಂದಿನ ಮುಖ್ಯಮಂತ್ರಿಯ ಗೊಂದಲ ಉದ್ಭವಿಸಿರುವುದು ಕಾರ್ಯಕರ್ತರಲ್ಲಿ ಇರಿಸುಮುರಿಸು ಉಂಟು ಮಾಡಿದೆ. ಚುನಾವಣೆಯಲ್ಲಿ ಪಕ್ಷದ ಸಾಧನೆಯ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಬಹುದು ಎಂಬ ಆತಂಕವಿದ್ದರೂ ಕಾಂಗ್ರೆಸ್‌ನ ಮುಂಚೂಣಿ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ (DK Shivakumar vs Shiddaramaiah) ನಡುವಣ ಮೇಲಾಟ ಶಮನವಾಗಿಲ್ಲ. ಸಮಯ ಬಂದಾಗಲೆಲ್ಲಾ ಇಬ್ಬರೂ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿಕೊಳ್ಳುತ್ತಾ ಗೊಂದಲ ಹೆಚ್ಚಿಸುತ್ತಿದ್ದಾರೆ. ಈ ನಡುವೆ ರಾಷ್ಟ್ರೀಯ ಸುದ್ದಿವಾಹಿನಿಗೆ ಸಿದ್ದರಾಮಯ್ಯ ನೀಡಿರುವ ಹೇಳಿಕೆಯೊಂದು ಕುತೂಹಲ ಹುಟ್ಟಿಸಿದೆ.
'ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಹೈಕಮಾಂಡ್ ಸಕಾಲದಲ್ಲಿ ನಿರ್ಧಾರ ಪ್ರಕಟಿಸಲಿದೆ. ಗೆದ್ದ ಶಾಸಕರು ಮುಂದಿನ ಮುಖ್ಯಮಂತ್ರಿಯ ಆಯ್ಕೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಲಿದ್ದಾರೆ' ಎಂದು 'ಎನ್‌ಡಿಟಿವಿ'ಗೆ ನೀಡಿರುವ ಸಂದರ್ಶನದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
'ನಮ್ಮದು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುವ ಪಕ್ಷ. ಹೈಕಮಾಂಡ್‌ಗೆ ಉನ್ನತಾಧಿಕಾರವಿದೆ. ಹಾಗೆಂದು ಅದು ತನ್ನಷ್ಟಕ್ಕೆ ತಾನೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಇತರರ ಅಭಿಪ್ರಾಯಗಳನ್ನು, ಮುಖ್ಯವಾಗಿ ನೂತನ ಶಾಸಕರು ಏನು ಹೇಳುತ್ತಾರೆ ಎಂದು ಕೇಳುತ್ತದೆ' ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ. 'ಮುಖ್ಯಮಂತ್ರಿ ಗಾದಿಯನ್ನು ಯುವಕರಿಗೆ ಬಿಟ್ಟುಕೊಡುಬಹುದಿತ್ತು ಅಲ್ಲವೇ' ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 'ಇದು ನನ್ನ ಕೊನೆಯ ಚುನಾವಣೆ. ಇನ್ನು ಮುಂದೆ ನಾನು ಸ್ಪರ್ಧಿಸುವುದಿಲ್ಲ' ಎಂದು ಉತ್ತರಿಸಿದ್ದಾರೆ.
ಕಾಂಗ್ರೆಸ್‌ನ ಮುಂಚೂಣಿ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ಇರುವುದು ಹಳೆಯ ವಿಚಾರ. ಹಲವು ವರ್ಷಗಳ ಇವರ ವೈಮನಸ್ಸಿಗೆ ರಾಹುಲ್ ಗಾಂಧಿ ಅವರು 'ಭಾರತ್ ಜೋಡೋ' ಯಾತ್ರೆಯ ಅವಧಿಯಲ್ಲಿ ಅಲ್ಪವಿರಾಮ ಬಿದ್ದಿತ್ತು. ಆದರೆ ಕಳೆದ ಫೆಬ್ರುವರಿಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ಬಸ್ ಯಾತ್ರೆಗಳನ್ನು ನಡೆಸಿದ್ದರು. 2019ರಲ್ಲಿ ಕಾಂಗ್ರೆಸ್ ತೊರೆದಿದ್ದ ಆನಂದ್ ಸಿಂಗ್ ಮತ್ತೆ ಪಕ್ಷದ ಕದ ತಟ್ಟಿದಾಗ ಇಬ್ಬರೂ ನಾಯಕರ ಭಿನ್ನಾಭಿಪ್ರಾಯ ಮತ್ತೆ ತಲೆಎತ್ತಿತ್ತು. ಶಿವಕುಮಾರ್ ಅವರನ್ನು ಭೇಟಿಯಾಗಿದ್ದ ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆಗೆ ಅವಕಾಶ ಕೋರಿದ್ದರು. ಆದರೆ ಸಿದ್ದರಾಮಯ್ಯ ಈ ಪ್ರಸ್ತಾವವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು.
ಬಿಜೆಪಿಯನ್ನು ಎದುರಿಸಲು ಒಂದಾಗಿ ಹೋರಾಡಬೇಕು ಎನ್ನುವ ಹೈಕಮಾಂಡ್ ನಿರ್ದೇಶನದ ನಂತರ ಇಬ್ಬರೂ ನಾಯಕರು ಹಲವು ವಿಚಾರಗಳಲ್ಲಿ ಸಹಮತಕ್ಕೆ ಬಂದಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ಮುಖ್ಯಮಂತ್ರಿಯಾಗುವ ಆಸೆ ಈಡೇರಲು ಬೆಂಬಲಿಗ ಶಾಸಕರನ್ನು ಗಣನೀಯ ಸಂಖ್ಯೆಯಲ್ಲಿ ಹೊಂದಿರುವುದು ಅಗತ್ಯ. ಹೀಗಾಗಿ ಇಬ್ಬರೂ ನಾಯಕರು ತಮ್ಮ ಬೆಂಬಲಿಗರಿಗೆ ಗರಿಷ್ಠ ಪ್ರಮಾಣದ ಟಿಕೆಟ್ ಕೊಡಿಸಲು ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಕರ್ನಾಟಕ ವಿಧಾನಸಭೆ ಚುನಾವಣೆ ಮಾರ್ಚ್ 29ರಂದು ಘೋಷಣೆಯಾಗಿದ್ದು ಏಪ್ರಿಲ್ 13ಕ್ಕೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನ, 21ಕ್ಕೆ ನಾಮಪತ್ರ ಪರಿಶೀಲನೆ, 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು. ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆಯು ಒಟ್ಟು 225 ಸ್ಥಾನಗಳನ್ನು ಹೊಂದಿದೆ. ಸ್ಪೀಕರ್ ಸ್ಥಾನವನ್ನು ಲೆಕ್ಕದಿಂದ ಹೊರಗಿಟ್ಟರೆ ಇದು 224 ಸ್ಥಾನವಾಗುತ್ತದೆ. 113 ಮ್ಯಾಜಿಕ್ ನಂಬರ್ ಎನಿಸಿದೆ. ಅಷ್ಟು ಸದಸ್ಯ ಬಲ ಹೊಂದಿರುವ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ಸಿಗುತ್ತದೆ.
2018ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಜಯಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 80. ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಬಹುಮತ ಸಾಬೀತುಪಡಿಸಲು ಬೇಕಿದ್ದ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.
ಕರ್ನಾಟಕ ವಿಧಾನಸಭೆಯ ಮತ್ತಷ್ಟು ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
HT ಕನ್ನಡ ವಾಟ್ಸಾಪ್ ಕಮ್ಯುನಿಟಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ