DK Shivakumar: ಸಿದ್ದರಾಮಯ್ಯಗೆ 2 ಕಡೆ ಟಿಕೆಟ್ ವಿಚಾರ: ಕೇಳುವವರನ್ನ ಬೇಡ ಎನ್ನಲು ಸಾಧ್ಯವೇ? ನೀವು ಕೂಡ ಕೇಳಬಹುದು: ಡಿಕೆಶಿ
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲಿ ಅಂತ ಅಭಿಮಾನಿಗಳು ಬಹಳ ಆಸೆಯಿಂದ ಕೇಳುತ್ತಾರೆ. ಅದರಲ್ಲಿ ತಪ್ಪಿಲ್ಲ. ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ವರುಣಾದಿಂದ ಸ್ಪರ್ಧಿಸುವುದು ಗೊತ್ತಿರುವಂತ ವಿಚಾರ. ಆದರೆ ಅವರು ಕೋಲಾರದಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ಅಂತಿಮವಾಗಿ ಇಲ್ಲಿ ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಅಂತ ಹೇಳ್ತಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಬೇಕು ಎಂದು ಸರ್ಜೇವಾಲ ಅವರ ಭಾಷಣಕ್ಕೆ ಅಡ್ಡಿ ಮಾಡಿದ ಬಗ್ಗೆ ಹಾಗೂ 2 ಕಡೆ ಸ್ಪರ್ಧೆಗೆ ಟಿಕೆಟ್ ಕೇಳಿರುವ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಕೇಳುವವರನ್ನು ಬೇಡ ಎನ್ನಲು ಸಾಧ್ಯವೇ? ನೀವು ಕೂಡ ಕೇಳಬಹುದು. ಅಭಿಮಾನಿಗಳು ಬಹಳ ಆಸೆಯಿಂದ ಕೇಳುತ್ತಾರೆ. ಅದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ರಾಜ್ಯದ ಜನರನ್ನ ಮೂರ್ಖರನ್ನಾಗಿಸುವ ಪ್ರಯತ್ನ
ಬಿಜೆಪಿ ಸರ್ಕಾರ ರಾಜ್ಯದ ಜನರನ್ನ ಫೂಲ್ ಮಾಡುತ್ತಲೇ ಬಂದಿದೆ. ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಮಾತ್ರವಲ್ಲ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಅಷ್ಟೂ ಭರವಸೆಗಳು ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೋವಿ ಸಮಾಜದವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲಾಗುವುದು ಎಂದು ಚುನಾವಣೆ ಸಮಯದಲ್ಲಿ ಭರವಸೆ ನೀಡಿದ್ದರು. ಆದರೆ ಮಾಡಲಿಲ್ಲ. ಈ ಕಾರಣಕ್ಕೆ ಬಾಬುರಾವ್ ಚಿಂಚನಸೂರ್ ಅವರು ಬಿಜೆಪಿಯಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಮತ್ತೆ ನಮ್ಮ ಪಕ್ಷಕ್ಕೆ ಮರಳಿದ್ದಾರೆ.
ಇನ್ನು ಒಕ್ಕಲಿಗರು ಹಾಗೂ ಲಿಂಗಾಯತರು ಕೂಡ ಕ್ರಮವಾಗಿ ಶೇ. 12 ಹಾಗೂ ಶೇ. 15 ರಷ್ಟು ಮೀಸಲಾತಿ ಹೆಚ್ಚಳಕ್ಕೆ ಆಗ್ರಹ ಮಾಡಿದ್ದು, ಕೇವಲ 2 ಪರ್ಸೆಂಟ್ ನೀಡುವುದಾಗಿ ಸರ್ಕಾರ ಹೇಳಿದೆ. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ಬೇರೆಯವರಿಗೆ ಕೊಟ್ಟಿದ್ದಾರೆ. ಶೇ. 2 ರಷ್ಟು ಮೀಸಲಾತಿ ಹೆಚ್ಚಳ ನಾವು ಒಪ್ಪುವುದಿಲ್ಲ. ನಮಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಆದೇಶ ವಜಾ ಮಾಡುತ್ತೇವೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿಯವರ ಕ್ಷೇತ್ರದಲ್ಲಿ ಜನ ಗಲಾಟೆ ಮಾಡುತ್ತಿದ್ದಾರೆ ಎಂದರೆ ಸರ್ಕಾರದ ಈ ನಿರ್ಧಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅರ್ಥ. ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿರುವ ಎಲ್ಲಾ ನಿರ್ಧಾರಗಳು ಜನರನ್ನ ಮೂರ್ಖರನ್ನಾಗಿಸುವ ಕ್ರಮ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ತಿಳಿಯಲಿದೆ. ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಸರ್ಕಾರದ ತಪ್ಪುಗಳನ್ನು ನಮ್ಮ ಸರ್ಕಾರ ಸರಿಪಡಿಸಿ, ಎಲ್ಲರಿಗೂ ನ್ಯಾಯ ಒದಗಿಸಲಿದೆ.
ನಾಳೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ
ಏಪ್ರಿಲ್ 4 ರಂದು ಸಿಇಸಿ ಸಭೆ ನಡೆಯಲಿದ್ದು, ನಾವು ಕೂಡ ದೆಹಲಿಗೆ ತೆರಳುತ್ತೇವೆ. 2ನೇ ಪಟ್ಟಿಯನ್ನು ನಾನು ಪ್ರಕಟಿಸುವುದಿಲ್ಲ. ಸಭೆಯಲ್ಲಿ ಚರ್ಚೆ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ಮಾಡಲಿದ್ದಾರೆ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ, ಜೆಡಿಎಸ್ ನಲ್ಲಿ ಆಂತರಿಕ ಸಮಸ್ಯೆ
ಕೆಲವು ಕಡೆ ಗೊಂದಲ, ಸಾಮೂಹಿಕ ರಾಜೀನಾಮೆ ಕೊಡುವ ಬಗ್ಗೆ ಕೇಳಿದಾಗ, 'ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಯಾವುದೇ ಗೊಂದಲ ಇಲ್ಲ. ಬೇರೆ ಪಕ್ಷಗಳಲ್ಲಿ ಬೆದರಿಕೆ ತಂತ್ರ ನಡೆಯಬಹುದು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುವುದಿಲ್ಲ. ಬಿಜೆಪಿಯಲ್ಲಿ ಬೆದರಿಕೆ ಇಲ್ಲವೇ? ಅವರು ಪಟ್ಟಿ ಪ್ರಕಟಿಸದಿರುವುದೇಕೆ? ದಿನಾಂಕ ಮುಂದೂಡುತ್ತಿರುವುದೇಕೆ? ಅವರ ಪಕ್ಷದಲ್ಲಿ ಆಂತರಿಕ ಸಮಸ್ಯೆ ಇದೆ. ಜೆಡಿಎಸ್ ನಲ್ಲೂ ಆಂತರಿಕ ಸಮಸ್ಯೆ ಇದೇ ಕಾರಣಕ್ಕೆ ಅನೇಕ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಎಂದು ತಿಳಿಸಿದರು.
ಸಚಿವ ಮುನಿರತ್ನ ಅವರ ಹೊಡೀರಿ ಬಡೀರಿ ಹೇಳಿಕೆ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಪಕ್ಷದಿಂದ ಯಾರೇ ಮತ ಕೇಳಲು ಬಂದರೂ ಹೊಡೆದು ಓಡಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಸದರು ದೂರು ನೀಡಿದ್ದು, ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡೋಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.