ವೇಶ್ಯಾವಾಟಿಕೆಗೆ ದೂಡಲು ಕಳ್ಳ ಸಾಗಾಣೆ, 12 ಬಾಲಕಿಯರ ರಕ್ಷಣೆ; ಮೂವರು ವಿದೇಶಿ ಡ್ರಗ್ ಪೆಡ್ಲರ್ಗಳ ಬಂಧನ
Oct 23, 2024 05:26 PM IST
ವೇಶ್ಯಾವಾಟಿಕೆಗೆ ದೂಡಲು ಕಳ್ಳ ಸಾಗಾಣೆ, 12 ಅಪ್ರಾಪ್ತ ಬಾಲಕಿಯರ ರಕ್ಷಣೆ; ಮೂವರು ವಿದೇಶಿ ಡ್ರಗ್ ಪೆಡ್ಲರ್ಗಳ ಬಂಧನ
- Bengaluru Crime: ಬೆಂಗಳೂರು ನಗರದಲ್ಲಿ ವೇಶ್ಯಾವಾಟಿಕೆಗೆ ದೂಡಲು ಬಾಲಕಿಯರನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪತ್ತೆ ಮಾಡಿದೆ. ಮತ್ತೆ ಪ್ರತ್ಯೇಕ ಪ್ರಕರಣದಲ್ಲಿ ಮೂವರು ವಿದೇಶಿ ಡ್ರಗ್ ಪೆಡ್ಲರ್ಗಳ ಬಂಧನವಾಗಿದೆ. (ವರದಿ-ಎಚ್.ಮಾರುತಿ)
ಬೆಂಗಳೂರು: ವೇಶ್ಯಾವಾಟಿಕೆಗೆ ದೂಡಲು ಬಾಲಕಿಯರನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮತ್ತು ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಮೇ ತಿಂಗಳಿಂದ 12 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದಾರೆ. ಈ ಬಾಲಕಿಯರು ತ್ರಿಪುರಾ, ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದವರಾಗಿದ್ದು, ಬಾಂಗ್ಲಾದೇಶಕ್ಕೆ ಸೇರಿದ ಮೂವರು ಬಾಲಕಿಯರೂ ಇದ್ದಾರೆ. ಸುಮಾರು 26 ಮಧ್ಯವರ್ತಿಗಳ ತಂಡ ಈ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದರು. ಎಲ್ಲ ಮಧ್ಯವರ್ತಿಗಳು ಹಾಗೂ ಐವರು ಗ್ರಾಹಕರನ್ನು ಬಂಧಿಸಲಾಗಿದೆ.
ಆರೋಪಿಗಳು ಈ ಬಾಲಕಿಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಕರೆದುಕೊಂಡು ಬರುತ್ತಿದ್ದರು. ನಂತರ ಬಾಲಕಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾನವ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಕಳೆದ ಕೆಲವು ತಿಂಗಳಿನಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ನೀಡಿದ ಮಾಹಿತಿಯನ್ನಾಧರಿಸಿ 14 ರಿಂದ 17 ವರ್ಷದೊಳಗಿನ ಬಾಲಕಿಯರನ್ನು ರಕ್ಷಿಸಲಾಗಿದೆ. ಪ್ರಕರಣದ ಸಂಬಂಧ ಬಂಧಿಸಲ್ಪಟ್ಟಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ವಿದೇಶಿ ಡ್ರಗ್ ಪೆಡ್ಲರ್ಗಳ ಬಂಧನ
ಬಲ್ಲ ಗ್ರಾಹಕರು ಮತ್ತು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಮೂವರು ವಿದೇಶಿ ಡ್ರಗ್ಸ್ ಪೆಡ್ಲರ್ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಎಮೆಕಾ ಹೆನಿರ ಅನುಸಿ, ಫ್ರೈಡೇ ಒಕೊರೊ ಜೋಸೆಫ್ ಮತ್ತು ಇಮ್ಯಾನ್ಯುಯಲ್ ಕೋಪಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 9 ಲಕ್ಷ ರೂ ಮೌಲ್ಯದ 82 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಡ್ರಗ್ಸ್ ವ್ಯಾಪಾರ ಮಾಡುತ್ತಿದ್ದರು.
ಮೂವರೂ ವೈದ್ಯಕೀಯ ವೀಸಾ ಮತ್ತು ಪ್ರವಾಸಿ ವೀಸಾದ ಮೇಲೆ ದೆಹಲಿಗೆ ಬಂದು ನಂತರ ಬೆಂಗಳೂರಿಗೆ ಆಗಮಿಸಿ ನೆಲೆಸಿದ್ದರು. ಇವರು ಬೆಂಗಳೂರಿನಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದವರಿಂದ ಮಾದಕ ವಸ್ತು ಖರೀದಿಸಿ ಪರಿಚಯಸ್ಥ ಗ್ರಾಹಕರು ಮತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಹಿಂದೆಯೂ ಇವರನ್ನು ಬಂಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ ಮತ್ತೆ ಡ್ರಗ್ಸ್ ದಂಧೆ ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಡೆಲಿವರಿ ಯುವಕನ ಬಂಧನ
ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಫುಡ್ ಡೆಲಿವರಿ ಯುವಕನೊಬ್ಬನನ್ನು ಅಮೃತಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅತ್ತಿಬೆಲೆ ನಿವಾಸಿ ಫೈಯೂಮ್ ಬಂಧಿತ ಆರೋಪಿ. ಈತನಿಂದ 2 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವೆಂಕಟೇಗೌಡ ಲೇ ಔಟ್ ನಿವಾಸಿಯೊಬ್ಬರು ಕುಟುಂಬದ ಸದಸ್ಯರೊಂದಿಗೆ ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದರು. ಆ ಸಂದರ್ಭದಲ್ಲಿ ಫೈಯೂಮ್ ಮನೆಯ ಮುಂಬಾಗಿಲು ಮುರಿದು ಒಳಗೆ ನುಗ್ಗಿ ಕಳ್ಳತನ ನಡೆಸಿದ್ದ.
ಈ ಸಂಬಂಧ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ. ಆರೋಪಿ ಫುಡ್ ಡೆಲಿವರಿ ಮಾಡುವಾಗ ಒಂದೆರಡು ದಿನಗಳ ಕಾಲ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ. ನಂತರ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಆರೋಪಿ, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇದೇ ರೀತಿ ಕಳ್ಳತನ ನಡೆಸಿ ಜೈಲು ಶಿಕ್ಷೆ ಅನುಭವಿಸಿದ್ದ. 8 ತಿಂಗಳ ಹಿಂದೆ ಜಾಮೀನು ಪಡೆದುಕೊಂಡಿದ್ದ ಈತ ಮತ್ತೆ ಕಳ್ಳತನಕ್ಕಿಳಿದಿದ್ದ ಎಂದು ತಿಳಿದು ಬಂದಿದೆ.