ಸಾಕಪ್ಪ ಸಾಕು, ಬದಲಾವಣೆ ಬಯಸಿದೆ ಬೆಂಗಳೂರು, ಬಿಬಿಎಂಪಿ ಚುನಾವಣೆ ಯಾವಾಗ ನಡೆಸ್ತೀರಿ ಹೇಳಿ: ಸೋಷಿಯಲ್ ಮೀಡಿಯಾ ಅಭಿಯಾನ
ಕನ್ನಡ ಸುದ್ದಿ  /  ಕರ್ನಾಟಕ  /  ಸಾಕಪ್ಪ ಸಾಕು, ಬದಲಾವಣೆ ಬಯಸಿದೆ ಬೆಂಗಳೂರು, ಬಿಬಿಎಂಪಿ ಚುನಾವಣೆ ಯಾವಾಗ ನಡೆಸ್ತೀರಿ ಹೇಳಿ: ಸೋಷಿಯಲ್ ಮೀಡಿಯಾ ಅಭಿಯಾನ

ಸಾಕಪ್ಪ ಸಾಕು, ಬದಲಾವಣೆ ಬಯಸಿದೆ ಬೆಂಗಳೂರು, ಬಿಬಿಎಂಪಿ ಚುನಾವಣೆ ಯಾವಾಗ ನಡೆಸ್ತೀರಿ ಹೇಳಿ: ಸೋಷಿಯಲ್ ಮೀಡಿಯಾ ಅಭಿಯಾನ

ಬಿಬಿಎಂಪಿ ಚುನಾವಣೆಗೆ ಮೀನ ಮೇಷ ಎಣಿಸುತ್ತಿರುವುದೇಕೆ ಎಂಬುದೇ ಬೆಂಗಳೂರಿಗರನ್ನು ಕಾಡುವ ಯಕ್ಷ ಪ್ರಶ್ನೆ. 2015ರಲ್ಲಿ ಚುನಾವಣೆ ನಡೆದ ಅಧಿಕಾರಕ್ಕೆ ಬಂದ ಕೌನ್ಸಿಲ್ 2020ರಲ್ಲಿ ಕೊನೆಗೊಂಡಿದೆ. ನಂತರ ಚುನಾವಣೆ ನಡೆದಿಲ್ಲ. ಹೀಗಾಗಿ, ಬದಲಾವಣೆ ಬಯಸಿದೆ ಬೆಂಗಳೂರು, BBMP ಚುನಾವಣೆ ಯಾವಾಗ ನಡೆಸ್ತೀರಿ ಹೇಳಿ ಎಂಬ ಸೋಷಿಯಲ್ ಮೀಡಿಯಾ ಅಭಿಯಾನ ನಡೆದಿದೆ. ಅದರ ವಿವರ ಇಲ್ಲಿದೆ.

ಬಿಬಿಎಂಪಿ ಚುನಾವಣೆ ಯಾವಾಗ ಎಂಬ ಅಭಿಯಾನ ಗಮನಸೆಳೆದಿದೆ. (ಬಿಬಿಎಂಪಿ ಕಚೇರಿ ಮತ್ತು ಬೆಂಗಳೂರಿಗರ ನಾಗರಿಕ ಸಮಸ್ಯೆ ಬಿಂಬಿಸಲು ಬಳಸಿದ ಸಾಂಕೇತಿಕ ಚಿತ್ರ)
ಬಿಬಿಎಂಪಿ ಚುನಾವಣೆ ಯಾವಾಗ ಎಂಬ ಅಭಿಯಾನ ಗಮನಸೆಳೆದಿದೆ. (ಬಿಬಿಎಂಪಿ ಕಚೇರಿ ಮತ್ತು ಬೆಂಗಳೂರಿಗರ ನಾಗರಿಕ ಸಮಸ್ಯೆ ಬಿಂಬಿಸಲು ಬಳಸಿದ ಸಾಂಕೇತಿಕ ಚಿತ್ರ)

ಬೆಂಗಳೂರು: ಬಾರಿ ಮಳೆಯನ್ನು ನಿರ್ವಹಿಸುವುದಕ್ಕಾಗದೆ, ಮೂಲ ಸೌಕರ್ಯ ಕೊರತೆ ಎದುರಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ವ್ಯಾಪಕ ಆಕ್ರೋಶ, ಅಸಮಾಧಾನಗಳು ಕಂಡುಬಂದಿವೆ. ಉಪಮುಖ್ಯಮಂತ್ರಿಯೂ ಆಗಿರುವ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರು 2023ರಿಂದ ನೇರವಾಗಿ ಬಿಬಿಎಂಪಿ ಆಡಳಿತ ಗಮನಿಸುತ್ತಿದ್ದಾರೆ. ಆದರೂ ಇಲ್ಲಿ ಚಾಲ್ತಿಯಲ್ಲಿರುವುದು ಅಧಿಕಾರಿಗಳದ್ದೇ ಆಡಳಿತ. 2020ರಲ್ಲಿ ನಡೆಯಬೇಕಾಗಿದ್ದ ಚುನಾವಣೆ ಹತ್ತಾರು ಕಾರಣಗಳಿಂದಾಗಿ ಇದುವರೆಗೂ ನಡೆದಿಲ್ಲ. ಇತ್ತೀಚಿನ ಭಾರಿ ಮಳೆಯ ವೇಳೆ ಬೆಂಗಳೂರು ಮಹಾನಗರದಲ್ಲಿ ಕಂಡು ಬಂದ ಸಮಸ್ಯೆಗಳು ಒಂದೆರಡಲ್ಲ, ರಸ್ತೆ ಗುಂಡಿ, ರಸ್ತೆ ಮೂಲ ಸೌಕರ್ಯ ಸೇರಿ ಹತ್ತಾರು. ಸಿಟಿಜೆನ್ಸ್ ಮೂವ್‌ಮೆಂಟ್‌ ಈಸ್ಟ್ ಬೆಂಗಳೂರು ತಂಡ ಸತತ 100 ದಿನ ಬಿಬಿಎಂಪಿ ಚುನಾವಣೆ ನಡೆಸಿ ಅಭಿಯಾನ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈಗ ಜಟ್ಕಾ ತಾಣದ ಮೂಲಕ 20 ಸಾವಿರ ಬೆಂಗಳೂರಿಗರ ಸಹಿ ಸಂಗ್ರಹಿಸಿ ಬಿಬಿಎಂಪಿ ಚನಾವಣೆ ನಡೆಸಲು ಒತ್ತಡ ಹೇರುವ ಅಭಿಯಾನ ನಡೆಯುತ್ತಿದೆ.

ಬಿಬಿಎಂಪಿ ಚುನಾವಣೆ ನಡೆಸಿ; 100 ದಿನಗಳ ಅಭಿಯಾನದ ಚಿತ್ರಣ

ಬೆಂಗಳೂರಿನ ಉತ್ಸಾಹಿಗಳ ತಂಡ ಒಂದು ಕರ್ನಾಟಕ ಸರ್ಕಾರದ ಬೆನ್ನು ಬಿದ್ದಿದ್ದು, ಬಿಬಿಎಂಪಿ ಚುನಾವಣೆ ನಡೆಸಿ ಎಂದು ಒತ್ತಡ ಹೇರುತ್ತಲೇ ಇದೆ. ಬೆಂಗಳೂರಿನ ಶಾಸಕರು, ಸಂಸದರು ಈ ವಿಚಾರಕ್ಕೆ ಆದ್ಯತೆ ನೀಡದೇ ಇರುವ ಸಂದರ್ಭದಲ್ಲಿ ಜಾಗೃತ ಬೆಂಗಳೂರಿಗರ ತಂಡ ಈ ಕೆಲಸ ಮಾಡುತ್ತ, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಬೆಂಗಳೂರಿನ ಅವ್ಯವಸ್ಥೆಗಳನ್ನು ಬಿಂಬಿಸುತ್ತ ಚುನಾವಣೆ ನಡೆಸಬೇಕು ಎಂಬ ಆಗ್ರಹ ಮಾಡುತ್ತಲೆ ಇತ್ತು, ಈಗ ಆ ಆಗ್ರಹ ಇನ್ನಷ್ಟು ಬಲಗೊಳ್ಳುತ್ತ ಸಾಗಿದೆ.

ಸಿಟಿಜೆನ್ಸ್ ಮೂವ್‌ಮೆಂಟ್‌ ಈಸ್ಟ್ ಬೆಂಗಳೂರು ತಂಡ ಕಳೆದ ತಿಂಗಳು 11 ರಂದು 100 ದಿನಗಳ ಅಭಿಯಾನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತುರ್ತಾಗಿ ಬಿಬಿಎಂಪಿ ಚುನಾವಣೆ ನಡೆಸಲು ಆಗ್ರಹಿಸಿತ್ತು.

ಬಿಬಿಎಂಪಿ ಚುನಾವಣೆಯನ್ನು ಕೂಡಲೇ ನಡೆಸಬೇಕು ಎಂಬ ನಮ್ಮ ಅಖಂಡ ಬೇಡಿಕೆಗೆ ಇಂದು 99ನೇ ದಿನ. 2020ರ ಸೆಪ್ಟೆಂಬರ್ 10 ರಂದು ಕೊನೆಯದಾಗಿ ಚುನಾಯಿತವಾದ ಬಿಬಿಎಂಪಿ ಕೌನ್ಸಿಲ್‌ನ ಅವಧಿ ಮುಗಿದಿದೆ. ಅದಾಗಿ ಈಗ ನಾಲ್ಕು ವರ್ಷಗಳೂ ಆಯಿತು. ಬೆಂಗಳೂರು ಈಗ ಚುನಾಯಿತರಲ್ಲದ ಅಧಿಕಾರಶಾಹಿಗಳ ಕೈಯಲ್ಲಿದೆ. ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯು ಹೊಣೆಗಾರಿಕೆಯ ಕೊರತೆಗೆ ಕಾರಣವಾಗಿದೆ. ಮೂಲಸೌಕರ್ಯ ಹದಗೆಡುತ್ತಿರುವ ನಡುವೆ ನಾಗರಿಕರು ಅಸಹಾಯಕರಾಗಿದ್ದಾರೆ ಎಂಬುದರ ಕಡೆಗೆ ಅಭಿಯಾನ ಗಮನಸೆಳೆದಿದೆ.

ಬೆಂಗಳೂರು ಸಮಸ್ಯೆಗಳು ಒಂದೆರಡಲ್ಲ

ಬೆಂಗಳೂರಲ್ಲಿ ಸಮಸ್ಯೆಗಳು ಒಂದೆರಡಲ್ಲ. ಕಳಪೆ ನಿರ್ವಹಣೆಯ ರಸ್ತೆಗಳು, ಗುಂಡಿಗಳು, ಸಂಗ್ರಹಿಸದ ಕಸ ಮತ್ತು ಸ್ಥಗಿತಗೊಂಡ ಮೂಲಸೌಕರ್ಯ ಯೋಜನೆಗಳಂತಹ ನಿರ್ಣಾಯಕ ನಾಗರಿಕ ಸಮಸ್ಯೆಗಳು-ಈ ಅಧಿಕಾರಶಾಹಿ ಆಡಳಿತದಲ್ಲಿ ಉಲ್ಬಣಗೊಂಡಿವೆ. ನಾಗರಿಕರ ಅಹವಾಲು ಕೇಳುವ ಸ್ಥಳೀಯ ಪ್ರತಿನಿಧಿಗಳಿಲ್ಲ, ಮತ್ತು ಸರ್ಕಾರದ ಸಿಕ್ಕ ಭರವಸೆ ಪರಿಹಾರಗಳು ಈಡೇರಿಲ್ಲ. ಬೃಹತ್ ಬೆಂಗಳೂರು ಆಡಳಿತ ಮಸೂದೆಯನ್ನು ಅಂಗೀಕರಿಸುವಲ್ಲಿ ಸರ್ಕಾರದ ನಿರಂತರ ವಿಳಂಬವು ಈ ನಾಯಕತ್ವದ ನಿರ್ವಾತವನ್ನು ಇನ್ನಷ್ಟು ಗಾಢಗೊಳಿಸುತ್ತದೆ ಎಂಬುದನ್ನು ಅಭಿಯಾನ ಎತ್ತಿ ತೋರಿಸಿದೆ.

ಚುನಾಯಿತ ಕಾರ್ಪೊರೇಟರ್‌ಗಳು ಇಲ್ಲದಿದ್ದರೆ, ಬೆಂಗಳೂರಿನ ನಿರಂತರ ಸಮಸ್ಯೆಗಳು ಉಲ್ಬಣಗೊಳ್ಳುತ್ತಲೇ ಇರುತ್ತವೆ ಎಂಬುದು ಸ್ಪಷ್ಟವಾಗಿದೆ. ನಗರಕ್ಕೆ ಎಂದಿಗಿಂತಲೂ ಈಗ ಸ್ಥಳೀಯ ಆಡಳಿತದ ಅಗತ್ಯವಿದೆ. ಜನರಿಗೆ ನಾಯಕತ್ವ ಮತ್ತು ಉತ್ತರದಾಯಿತ್ವವನ್ನು ಮರುಸ್ಥಾಪಿಸಲು ಬಿಬಿಎಂಪಿ ಚುನಾವಣೆಗಳನ್ನು ತಕ್ಷಣವೇ ನಿಗದಿಪಡಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಅಭಿಯಾನ ನಡೆಸುತ್ತಿರುವ ತಂಡ ಆಗ್ರಹಿಸಿತ್ತು. ಆ ಪೋಸ್ಟ್ ಇಲ್ಲಿದೆ ಗಮನಿಸಿ.

20 ಸಾವಿರ ಸಹಿ ಅಭಿಯಾನ ಮುಂದುವರಿಸಿದ್ದಾರೆ ನಾಗರಿಕರು

ಬಿಬಿಎಂಪಿ ಚುನಾವಣೆ ನಡೆಸುವಂತೆ ಝಟ್ಕಾ ಎಂಬ ಆನ್‌ಲೈನ್ ಪಿಟಿಷನ್ ತಾಣದ ಮೂಲಕ ಅಭಿಯಾನ ಮುಂದುವರಿದಿದೆ. ನಾಗರಿಕರು ಸ್ವಯಂ ಪ್ರೇರಣೆಯಿಂದ ತಾಣದಲ್ಲಿ ಸಹಿ ಮಾಡಿ, ಅದನ್ನು ಎಕ್ಸ್ ತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಯಾನವನ್ನು ಮುಂದುವರಿಸಿದ್ದಾರೆ.

Whats_app_banner