ಮುಡಾದಲ್ಲಿ ಬರೋಬ್ಬರಿ 928 ನಿವೇಶನ ಅಕ್ರಮ; ಮೈಸೂರು ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು
Oct 29, 2024 02:00 PM IST
ಸ್ನೇಹಮಯಿ ಕೃಷ್ಣ
- MUDA Land Site: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ ಅವರು 928 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಮತ್ತೊಂದು ದೂರು ನೀಡಿದ್ದಾರೆ.
ಮೈಸೂರು: ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಮತ್ತೊಂದು ದೂರು ನೀಡಿದ್ದಾರೆ. 50:50 ಅನುಪಾತದ ಅಡಿಯಲ್ಲಿ 928 ನಿವೇಶನಗಳು ಅಕ್ರಮವಾಗಿ ಹಂಚಿಕೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ 14 ನಿವೇಶನಗಳನ್ನು ಉದಾಹರಣೆಯಾಗಿ ಇಟ್ಟುಕೊಂಡು ಉಳಿದ ಎಲ್ಲಾ ಪ್ರಕರಣಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 928 ನಿವೇಶನಗಳ ಹಂಚಿಕೆಯಲ್ಲಿ ಅತಿ ಹೆಚ್ಚು ಅಕ್ರಮ ನಡೆದಿರುವುದು ಹಿಂದೆ ಮುಡಾದ ಆಯುಕ್ತರಾಗಿದ್ದ ಡಿಬಿ ನಟೇಶ್ ಮತ್ತು ದಿನೇಶ್ ಕುಮಾರ್ ಅಧಿಕಾರ ಅವಧಿಯಲ್ಲಿ.
ಅಕ್ರಮವಾಗಿ ನಿವೇಶನ ಪಡೆದವರ ಜೊತೆಗೆ ನಟೇಶ್ ಮತ್ತು ದಿನೇಶ್ ಕುಮಾರ್ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಸ್ನೇಹಮಯಿ ಕೃಷ್ಣ ಮೈಸೂರಿನಲ್ಲಿ ಆಗ್ರಹಿಸಿದ್ದಾರೆ. 928 ನಿವೇಶನಗಳಲ್ಲಿ ಬಿಲ್ಡರ್ ಮಂಜುನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ಸಿ ಮಹದೇವಪ್ಪ ಸಹೋದರನ ಮಗ ನವೀನ್ ಬೋಸ್ ಅವರಿಗೂ ಸೆಟಲ್ಮೆಂಟ್ ಡೀಡ್ ಮಾಡಿಕೊಟ್ಟಿದ್ದಾರೆ. ಅವರ ಮೇಲೂ ಕಾನೂನು ರೀತ್ಯಾ ಕ್ರಮ ಆಗಬೇಕು ಎಂದು ದೂರುದಾರ ಆಗ್ರಹಿಸಿದ್ದಾರೆ.
ಬಿಲ್ಡರ್ ಮಂಜುನಾಥ್ ವಿರುದ್ಧ ದೂರು
ಬಿಲ್ಡರ್ ಮಂಜುನಾಥ್ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು ಸಲ್ಲಿಸಲಾಗಿದೆ. ಇಡಿಗೆ ಹಣ ಎಣಿಸುತ್ತಿರುವ ವಿಡಿಯೋ ಸಹಿತ ದೂರು ನೀಡಿದ್ದಾರೆ. ಬಿಲ್ಡರ್ ಮಂಜುನಾಥ್ ಸಹಾಯಕ ಹಣ ಎಣಿಸುತ್ತಿರುವುದು ವಿಡಿಯೋದಲ್ಲಿದೆ. ಸೆಟಲ್ಮೆಂಟ್ ಡೀಡ್ ಹೆಸರಿನಲ್ಲಿ ಹಣ ಪಡೆದ ಆರೋಪ ಹೊಂದಿದ್ದಾರೆ. ಮೈಸೂರಿನ ಶಿವಣ್ಣ ಎಂಬುವರಿಂದ 25 ಲಕ್ಷ ನಗದು ಪಡೆದು ಹಣ ಎಣಿಸುತ್ತಿರುವ ದೃಶ್ಯ ಇದಾಗಿದೆ. ಮುಡಾ ಹಗರಣಕ್ಕೆ ಸಾಕ್ಷಿಯಾಗಿರುವ ಈ ವೈರಲ್ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಇಡಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಬೆಂಗಳೂರು, ಮಂಡ್ಯ ಸೇರಿ ಹಲವೆಡೆ ಏಕಕಾಲಕ್ಕೆ ಇಡಿ ದಾಳಿ
ಇಡಿ ಅಧಿಕಾರಿಗಳು ಬೆಂಗಳೂರು, ಮಂಡ್ಯ ಸೇರಿ ಹಲವೆಡೆ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ಮಾಡಿ ಕಡತಗಳ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ಬಿಲ್ಡರ್ ಮಂಜುನಾಥ್ ಮನೆ ಮೇಲೆ ದಾಳಿ ಮಾಡಿದ್ದು, ಮನೆಯ ಬಳಿಕ ಮಂಜುನಾಥ್ ಕಚೇರಿಯಲ್ಲೂ ತೀವ್ರ ಶೋಧ ನಡೆಸಿದ್ದಾರೆ. ಮನೆಗೆ ದಾಳಿ ನಡೆಸಿದ ವೇಳೆ ಮಂಜುನಾಥ್, ಎಲ್ಲಾ ದಾಖಲೆಗಳು ಕಚೇರಿಯಲ್ಲಿವೆ ಎಂದಿದ್ದರು. ಹಾಗಾಗಿ ಕಚೇರಿಯಲ್ಲೂ ದಾಖಲೆಗಳನ್ನು ಪರಿಶೀಲಿಸಿದರು.