logo
ಕನ್ನಡ ಸುದ್ದಿ  /  ಕರ್ನಾಟಕ  /  Temple Dress Code: ಅಂಗಿ ಬನಿಯನ್‌ ತೆಗೆದು ದೇವರ ದರ್ಶನ ಮಾಡಿ; ಆರೋಗ್ಯ ಸಮಸ್ಯೆ ಇದ್ದವರದೇನು ಕಥೆ? ದ.ಕ. ದೇಗುಲ ನಿಯಮದ ಬಗ್ಗೆ ಆಕ್ಷೇಪ

Temple dress code: ಅಂಗಿ ಬನಿಯನ್‌ ತೆಗೆದು ದೇವರ ದರ್ಶನ ಮಾಡಿ; ಆರೋಗ್ಯ ಸಮಸ್ಯೆ ಇದ್ದವರದೇನು ಕಥೆ? ದ.ಕ. ದೇಗುಲ ನಿಯಮದ ಬಗ್ಗೆ ಆಕ್ಷೇಪ

HT Kannada Desk HT Kannada

Sep 23, 2022 02:55 PM IST

google News

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರು.

    • Temple dress code: ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ದೇವಸ್ಥಾನಗಳಲ್ಲಿ “ಅಂಗಿ ಬನಿಯನ್‌ ತೆಗೆದು ದೇವರ ದರ್ಶನ ಮಾಡಿ” ಎಂಬ ನಿಯಮದ ಬಗ್ಗೆ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ರಿ) ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ಎರಡೇ ಎರಡು ಬೇಡಿಕೆ ಈಡೇರಿಸಿ ಎಂದು ಧಾರ್ಮಿಕ ದತ್ತಿ ಇಲಾಖೆಯನ್ನು ಆಗ್ರಹಿಸಿದೆ. 
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರು. (SM)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲಗಳಲ್ಲಿ ಅಂಗಿ, ಬನಿಯನ್‌ ತೆಗೆದು ದೇವರ ದರ್ಶನ ಮಾಡಬೇಕು ಎಂಬ ನಿಯಮದ ಬಗ್ಗೆ ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ರಿ) ಆಕ್ಷೇಪ ವ್ಯಕ್ತಪಡಿಸಿರುವ ಮನವಿ ಪತ್ರ ಒಂದು ವೈರಲ್‌ ಆಗಿದೆ.

ಈ ಕುರಿತು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಸಲ್ಲಿಸಿರುವ ಮಂಗಳೂರು ಅಶೋಕ ನಗರದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ತನ್ನ ಪದಾಧಿಕಾರಿಗಳು ಅನುಭವಿಸಿದ ಇರಿಸುಮುರಿಸನ್ನು ವಿವರಿಸುತ್ತ ದೇವಸ್ಥಾನಗಳ ವಾಡಿಕೆಯ ನಿಯಮವನ್ನು ಆಕ್ಷೇಪಿಸಿದೆ.

ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳಾದ ನಾವು ಇತ್ತೀಚೆಗೆ ಕೊಲ್ಲೂರು ಮತ್ತು ಸುಬ್ರಹ್ಮಣ್ಯ ದೇಗುಲಗಳಿಗೆ ಭೇಟಿ ನೀಡಿದ್ದೆವು. ಅಲ್ಲಿ ಪುರುಷರು ದೇವರ ದರ್ಶನ ಪಡೆಯಬೇಕಾದರೆ ಅಂಗಿ ಬನಿಯನ್‌ ಕಳಚಿ ಬರಬೇಕು ಎಂಬ ಪುರಾತನ ಕಾಲದ ನಿಯಮವನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ಈ ಕುರಿತು ಸರ್ಕಾರದ ಆದೇಶ, ನಿಯಮ ಏನಾದರೂ ಇದೆಯೇ ಎಂಬ ಕುರಿತು ವಿಚಾರಿಸಿದಾಗ ಅಂಥದ್ದೇನೂ ಇಲ್ಲ ಎಂಬುದು ಗಮನಕ್ಕೆ ಬಂತು. ಇಂತಹ ಆಚರಣೆಗಳಿಂದ ಭಕ್ತಾದಿಗಳಿಗೆ ಇರಿಸುಮುರಿಸು ಉಂಟಾಗುತ್ತದೆ.

ವೈದ್ಯಕೀಯ ನೆಲೆಯಲ್ಲಿ ಗಮನಿಸುವುದಾದರೆ, ಗಂಭೀರ ಚರ್ಮ ರೋಗ ಇರುವಂಥವರು ಅಂಗಿ ಬನಿಯನ್‌ ತೆಗೆದು ದೇವರ ದರ್ಶನ ಮಾಡುವ ಸಂದರ್ಭದಲ್ಲಿ ಅದು ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಇನ್ನು ಶಾರೀರಿಕವಾಗಿ ಅಂಗವೈಕಲ್ಯ ಹೊಂದಿರುವಂಥವರು ಅಂಗಿ ಬನಿಯನ್‌ ತೆಗೆದು ದೇವರ ದರ್ಶನ ಮಾಡುವುದು ಕೂಡ ಕಷ್ಟದ ಕೆಲಸವೇ. ಅದು ಅವರಿಗೆ ಮುಜುಗರ ಉಂಟುಮಾಡಬಹುದು. ಈ ನಿಯಮವು ದೇಶದ ಸಂವಿಧಾನದಲ್ಲಿ ಕೊಡಮಾಡಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ.

ಆದ್ದರಿಂದ ಈ ವಿಚಾರವಾಗಿ ಎರಡೇ ಎರಡು ಬೇಡಿಕೆಗಳನ್ನು ಧಾರ್ಮಿಕ ದತ್ತಿ ಇಲಾಖೆ ಈಡೇರಿಸಬೇಕು. ಮೊದಲನೇಯದು ದೇವಸ್ಥಾನಗಳಲ್ಲಿರುವ “ಅಂಗಿ ಬನಿಯನ್‌ ತೆಗೆದು ದೇಗುಲ ಪ್ರವೇಶಿಸಿ ಅಥವಾ ದೇವರ ದರ್ಶನ ಪಡೆಯಿರಿ” ಎಂಬ ಬೋರ್ಡ್‌ ತೆಗೆಸಬೇಕು. ಎರಡನೇಯದು ಈ ನಿಯಮ ಪಾಲಿಸಬೇಕು ಎಂದು ಬೆತ್ತ ಹಿಡಿದು ನಿಂತ ನೈತಿಕ ಪೊಲೀಸರ ನಿಯೋಜನೆ ತಪ್ಪಿಸಬೇಕು ಎಂಬ ಆಗ್ರಹದ ಬೇಡಿಕೆಯನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ತಿಳಿಸಿದೆ.

<p>ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ರಿ) ದ ಮನವಿ ಪತ್ರ</p>

ಈ ಮನವಿ ಪತ್ರದಲ್ಲಿ ಸೆಪ್ಟೆಂಬರ್‌ 20ರ ದಿನಾಂಕ ಇದ್ದು, ಧಾರ್ಮಿಕ ದತ್ತಿ ಇಲಾಖೆಗೆ ತಲುಪಿದೆಯೋ ಇಲ್ಲವೋ ತಿಳಿಯದು. ಮನವಿ ಪತ್ರದಲ್ಲಿ ಸಹಿ ಇದೆಯೇ ಹೊರತು ಪದಾಧಿಕಾರಿಗಳ ಹೆಸರು ಸಂಪರ್ಕ ಸಂಖ್ಯೆ ಇಲ್ಲ. ಆದರೆ, ಇಮೇಲ್‌ ಅನ್ನು ಕೈಬರಹದಲ್ಲಿ ನಮೂದಿಸಲಾಗಿದೆ. ಧಾರ್ಮಿಕ ಸೂಕ್ಷ್ಮ ವಿಚಾರವಾದ ಕಾರಣ ಇದನ್ನು ಸರ್ಕಾರ ಹೇಗೆ ಪರಿಗಣಿಸುವುದೋ ಎಂಬ ಕುತೂಹಲ ಆಸ್ತಿಕ ಹಿಂದುಗಳದ್ದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ