ತುಮಕೂರು: ತೋಟದಲ್ಲಿ ಕೂಡಿ ಹಾಕಿ ಹಿರಿಯ ಜೀವಗಳಿಗೆ ಚಿತ್ರಹಿಂಸೆ; ಜೀತಪದ್ಧತಿಯಿಂದ ವೃದ್ಧ ದಂಪತಿ ಮುಕ್ತ
Sep 26, 2024 09:17 PM IST
ಜೀತ ಪದ್ಧತಿಯಿಂದ ವೃದ್ಧ ದಂಪತಿ ಮುಕ್ತ
- Tumakuru News: ತಿಂಗಳಿಗೆ ತಲಾ 14 ಸಾವಿರ ನೀಡುವುದಾಗಿ ಹೇಳಿ ಜೀತಕ್ಕಿಟ್ಟುಕೊಂಡು ವೃದ್ಧ ದಂಪತಿಗೆ ಊಟ ನೀರು ಕೊಡದೆ ಚಿತ್ರ ಹಿಂಸೆ ನೀಡಿದ್ದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ವೃದ್ಧ ದಂಪತಿಯನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ಬಿಡಲಾಗಿದೆ.
ತುಮಕೂರು: ಕೃಷಿ ಕೂಲಿ ಕಾರ್ಮಿಕ ವೃದ್ಧ ದಂಪತಿಯನ್ನ ಜೀತಕ್ಕಿಟ್ಟುಕೊಂಡು ಕಾಡು ಪ್ರಾಣಿಗಳಂತೆ ತೋಟದಲ್ಲಿ ಕೂಡಿ ಹಾಕಿ ದೌರ್ಜನ್ಯ ಮೆರೆದಿರುವ ಘಟನೆ ನಡೆದಿದ್ದು, ಸ್ಥಳಕ್ಕೆ ತಾಲೂಕಿನ ಅಧಿಕಾರಿಗಳು ಭೇಟಿ ನೀಡಿ ಅವರನ್ನು ಬಿಡುಗಡೆಗೊಳಿಸಿರುವ ಘಟನೆ ಬುಧವಾರ (ಸೆಪ್ಟೆಂಬರ್ 25) ರಾತ್ರಿ ನಡೆದಿದೆ. ಜಿಲ್ಲೆಯ ಮಧುಗಿರಿ ತಾಲೂಕಿನ ಕಸಬಾ ವ್ಯಾಪ್ತಿಯ ಬೆಲ್ಲದಮಡಗು ಗ್ರಾಮದ ತೋಟದಲ್ಲಿ ವೃದ್ಧ ದಂಪತಿಯನ್ನು ತೋಟದ ಬೆಂಗಳೂರು ಮೂಲದ ಮಾಲೀಕ ಲಕ್ಷ್ಮೀನಾರಾಯಣ ಎಂಬಾತ ತೋಟದಲ್ಲಿ ಜೀತಕ್ಕಿಟ್ಟುಕೊಂಡು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹನುಮಂತರಾಯಪ್ಪ, ರಾಮಕ್ಕ ಎಂಬ ವೃದ್ಧ ದಂಪತಿಯನ್ನು ಕೆಲಸಕ್ಕೆಂದು ಕರೆತಂದು ತೋಟದಲ್ಲಿ ಕೂಡಿ ಹಾಕಿ ಕುಡಿಯುವ ನೀರಿಗೂ ನಿರ್ಬಂಧ ಹೇರಲಾಗಿತ್ತು. ಜಮೀನಿನ ಮುಖ್ಯ ದ್ವಾರಕ್ಕೂ ಜಮೀನಿನ ಮಾಲೀಕ ಬೀಗ ಜಡಿದು ಹೋಗಿದ್ದ ಕಾರಣ ವೃದ್ಧ ದಂಪತಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತಿಂಗಳಿಗೆ ತಲಾ 14 ಸಾವಿರ ಸಂಬಳ, ವಸತಿ ನೀಡುವುದಾಗಿ ಹೇಳಿದ್ದ ಜಮೀನು ಮಾಲೀಕ ನುಡಿದಂತೆ ನಡೆಯದೆ 2 ತಿಂಗಳಿಂದ ಸಂಬಳ ನೀಡದೆ ವಂಚಿಸಿದ್ದಾನೆ. ದಂಪತಿ ವಾಸವಿದ್ದ ಶೆಡ್‌ಗೂ ಬೀಗ ಹಾಕಿದ್ದ. ಹೀಗಾಗಿ ವೃದ್ಧ ದಂಪತಿ ಊಟ-ನೀರಿಲ್ಲದೆ ನರಳುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.
ನಿರಾಶ್ರಿತರ ಕೇಂದ್ರಕ್ಕೆ ವೃದ್ಧ ದಂಪತಿ
ವಿಷಯ ತಿಳಿದ ಸಾರ್ವಜನಿಕರು ವೃದ್ಧ ದಂಪತಿ ರಕ್ಷಣೆ ಮಾಡುವಂತೆ ಹಾಗೂ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳಿಂದ ಒತ್ತಾಯಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಶರೀನ್ ತಾಜ್ ನೇತೃತ್ವದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ವೃದ್ಧ ದಂಪತಿ ನೆರವಾಗಿದ್ದಾರೆ. ಆ ಮೂಲಕ ಚಿತ್ರಹಿಂಸೆಗೆ ಮುಕ್ತಿ ನೀಡಿದ್ದಾರೆ. ಅವರನ್ನು ಬುಧವಾರ ರಾತ್ರಿ ನಿರಾಶ್ರಿತರ ಕೇಂದ್ರದಲ್ಲಿ ಬಿಟ್ಟಿದ್ದು, ಗುರುವಾರ ಜೀತ ವಿಮುಕ್ತ ಪ್ರಮಾಣ ಪತ್ರ ನೀಡಿ ಮನೆಗೆ ಕಳುಹಿಸಿ ಕೊಡಲಾಗಿದೆ.
ಮಾಲೀಕನ ವಿರುದ್ಧ ಪ್ರಕರಣ ದಾಖಲು
ಈ ಸಂಬಂಧ ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಬೆಲ್ಲದಮಡುಗು ಗ್ರಾಮದಲ್ಲಿ ವೃದ್ಧ ದಂಪತಿಯನ್ನು ತೋಟದಲ್ಲಿ ಅನ್ನ- ನೀರು ನೀಡದೆ ಮತ್ತು ಮೂಲಭೂತ ಸೌಲಭ್ಯ ಒದಗಿಸಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್ ನೇತೃತ್ವದ ತಂಡ ತೆರಳಿ ವೃದ್ಧ ದಂಪತಿ ಬಿಡುಗಡೆಗೊಳಿಸಿ ಕರೆತಂದಿದ್ದು, ಅವರಿಗೆ ಜೀತ ವಿಮುಕ್ತಿ ಪ್ರಮಾಣ ಪತ್ರ ನೀಡಲಾಗಿದೆ. ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಖುದ್ದು ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.