ಅಹಿಂದ ನಾಯಕ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಇಕ್ಕಟ್ಟಿನಲ್ಲಿ ಹೈಕಮಾಂಡ್‌; ವರಿಷ್ಠರಿಗೆ ಯಾರು ಹಿತವರು ಈ ನಾಲ್ವರೊಳಗೆ?-political news if siddaramaiah resigns who among these four will become the chief minister dk shivakumar mb patil mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅಹಿಂದ ನಾಯಕ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಇಕ್ಕಟ್ಟಿನಲ್ಲಿ ಹೈಕಮಾಂಡ್‌; ವರಿಷ್ಠರಿಗೆ ಯಾರು ಹಿತವರು ಈ ನಾಲ್ವರೊಳಗೆ?

ಅಹಿಂದ ನಾಯಕ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಇಕ್ಕಟ್ಟಿನಲ್ಲಿ ಹೈಕಮಾಂಡ್‌; ವರಿಷ್ಠರಿಗೆ ಯಾರು ಹಿತವರು ಈ ನಾಲ್ವರೊಳಗೆ?

Siddaramaiah: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಒಳಪಟ್ಟಿರುವ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವ ಇಕ್ಕಟ್ಟಿನಲ್ಲಿ ಹೈಕಮಾಂಡ್‌ ಸಿಲುಕಿದೆ. ಅದಕ್ಕೆ ಕಾರಣ ಅಹಿಂದ ಬೆಂಬಲ ಕಳೆದುಕೊಳ್ಳುವ ಭೀತಿ. ಆದರೆ, ಒಂದು ವೇಳೆ ರಾಜೀನಾಮೆ ಪಡೆದರೆ ವರಿಷ್ಠರಿಗೆ ಯಾರು ಹಿತವರು ಈ ನಾಲ್ವರೊಳಗೆ? ಇಲ್ಲಿದೆ ಮಾಹಿತಿ. (ವರದಿ-ಎಚ್. ಮಾರುತಿ)

ಅಹಿಂದ ನಾಯಕ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಇಕ್ಕಟ್ಟಿನಲ್ಲಿ ಹೈಕಮಾಂಡ್‌
ಅಹಿಂದ ನಾಯಕ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಇಕ್ಕಟ್ಟಿನಲ್ಲಿ ಹೈಕಮಾಂಡ್‌ (HT_PRINT)

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಮೂಲ ಕಾರಣ ಎನ್ನುವುದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. 136 ಸ್ಥಾನಗಳಲ್ಲಿ ಗೆಲುವು ದಾಖಲಿಸಲು ಸಿದ್ದರಾಮಯ್ಯ ವರ್ಚಸ್ವಿ ನಾಯಕತ್ವ ಕಾರಣ ಎನ್ನುವುದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಎಫ್​ಐಆರ್‌ ದಾಖಲಿಸಿ ತನಿಖೆ ನಡೆಸಲು ವಿಶೇಷ ನ್ಯಾಯಾಲಯ ಅಸ್ತು ಎಂದ ನಂತರ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌, ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯದ ಉದ್ದಗಲಕ್ಕೂ ಒತ್ತಡ ಹೇರುತ್ತಿವೆ. ಬಿಜೆಪಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರು ಮತ್ತು ಮೈಸೂರಿನಲ್ಲಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಿದೆ.

ಈ ಎಲ್ಲ ಒತ್ತಡ ತಂತ್ರಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಳೆದುಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ ಸಿದ್ಧವಿಲ್ಲ. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳ ಅದ್ವಿತೀಯ ನಾಯಕ, ಆಡಳಿತದಲ್ಲಿ ಮಾಗಿದ ಅನುಭವಿ ಎಂಬ ಕಾರಣಕ್ಕಾಗಿಯೇ ಅವರನ್ನು ಬಿಟ್ಟುಕೊಡುತ್ತಿಲ್ಲ ಎನ್ನುವುದು ರಹಸ್ಯವೇನೂ ಅಲ್ಲ. ಪರ್ಯಾಯ ನಾಯಕನ ಕೊರತೆ, ರಾಜೀನಾಮೆ ಕೇಳಲು ಹಿಂದೇಟು: ಅಹಿಂದ ನಾಯಕ ಎಂಬ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರನ್ನು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೇಳುವ ಧೈರ್ಯವನ್ನೂ ಕಾಂಗ್ರೆಸ್‌ ಮಾಡುತ್ತಿಲ್ಲ. ಒಂದು ವೇಳೆ ಅವರ ರಾಜೀನಾಮೆ ಪಡೆದರೆ ಅದು ಬಿಜೆಪಿ ಗೆಲುವಾಗಲಿದೆ.

ಸದ್ಯಕ್ಕೆ ಅವರನ್ನು ಬದಲಾಯಿಸುವ ತುರ್ತು ಅಗತ್ಯ ಇಲ್ಲವಾದರೂ ಪ್ರಕರಣದ ತನಿಖೆ ಸಿದ್ದರಾಮಯ್ಯ ಅವರತ್ತ ಬೊಟ್ಟು ಮಾಡಿದರೆ ಅನಿವಾರ್ಯವಾಗಿ ರಾಜೀನಾಮೆ ಕೇಳಲೂಬಹುದು. ಇದನ್ನು ಕಾಲವೇ ನಿರ್ಣಯಿಸಬೇಕು. ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕ ಇಲ್ಲದೇ ಇರುವುದು ಅವರ ರಾಜೀನಾಮೆ ಕೇಳದಿರಲು ಮತ್ತೊಂದು ಕಾರಣ. ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸ್ವಾಭಾವಿಕ ಆಯ್ಕೆಯಾದರೂ ಅವರನ್ನು ಮುನ್ನೆಲೆಗೆ ತರುವ ಧೈರ್ಯ ಹೈಕಮಾಂಡ್‌ ಗೆ ಇಲ್ಲ. ಸ್ವತಃ ಶಿವಕುಮಾರ್‌ ಅವರೇ ಹಲವಾರು ಪ್ರಕರಣಗಳಲ್ಲಿ ಸಲುಕಿಕೊಂಡಿದ್ದು ತನಿಖೆ ಎದುರಿಸುತ್ತಿದ್ದಾರೆ.

ನಾಲ್ಕು ದಶಕಗಳ ಕಾಲ ಮಸಿ ಮೆತ್ತಿಕೊಳ್ಳದೆ ರಾಜಕಾರಣದ ಎಲ್ಲ ಪಟ್ಟುಗಳನ್ನು ಕಲಿತಿದ್ದ ಸಿದ್ದರಾಮಯ್ಯ ಅವರನ್ನೇ ರಾಜಕೀಯವಾಗಿ ಮುಗಿಸುತ್ತಿರುವ ಬಿಜೆಪಿಗೆ ಶಿವಕುಮಾರ್‌ ಸುಲಭದ ದಾಳವಾಗುವುದರಲ್ಲಿ ಅಚ್ಚರಿ ಇಲ್ಲ. ನಾಳೆಯೇ ಅವರ ವಿರುದ್ಧ ಐಟಿ, ಇಡಿ, ಸಿಬಿಐ ಹೀಗೆ ಯಾವುದೇ ತನಿಖೆ ನಡೆಸುವಷ್ಟು ಸರಕು ಬಿಜೆಪಿ ಬಳಿ ಇದೆ. ಮೇಲಾಗಿ ಶಿವಕುಮಾರ್‌ ಒಕ್ಕಲಿಗ ನಾಯಕ ಎಂದು ಬಿಂಬಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಇತರೆ ಸಮುದಾಯ ಮತ್ತು ಜಿಲ್ಲೆಗಳಲ್ಲಿ ಅವರ ಪ್ರಬಾವ ಕಡಿಮೆ. ಸಿದ್ದರಾಮಯ್ಯ ಅವರನ್ನು ಒಪ್ಪಿಕೊಂಡ ಹಾಗೆ ಶಿವಕುಮಾರ್‌ ಅವರನ್ನು ಎಲ್ಲ ಶಾಸಕರೂ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ.

ಯಾರು ಹಿತವರು ಈ ನಾಲ್ವರೊಳಗೆ?

ಇನ್ನು ಮುಖ್ಯಮಂತ್ರಿ ಹುದ್ದೆಯೆ ಪ್ರಬಲ ಆಕಾಂಕ್ಷಿಗಳೆಂದರೆ ಒಕ್ಕಲಿಗ ಸಮುದಾಯದ ಶಿವಕುಮಾರ್‌, ದಲಿತ ಸಮುದಾಯದ ಗೃಹ ಸಚಿವ ಡಾ. ಜಿ ಪರಮೇಶ್ವರ, ಲಿಂಗಾಯತ ಸಮುದಾಯದ ಎಂಬಿ ಪಾಟೀಲ ಮತ್ತು ಎಸ್​ಟಿ ಸಮುದಾಯಕ್ಕೆ ಸೇರಿರುವ ಸತೀಶ್‌ ಜಾರಕಿಹೊಳಿ. ಅವರವರ ಸಮುದಾಯಗಳಲ್ಲಿ ಇವರು ಓಕೆ ಎಂದು ಹೇಳಬಹುದಷ್ಟೇ. ಆದರೆ ಇವರಲ್ಲಿ ಯಾರೊಬ್ಬರೂ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಅಲ್ಲ ಎನ್ನುವುದನ್ನು ಮನಗಾಣಬೇಕು. ಸಿದ್ದರಾಮಯ್ಯ ಅವರಂತೆ ಇವರಾರೂ ಸಮುದಾಯ ಅಥವಾ ಮಾಸ್‌ ಲೀಡರ್​​ಗಳಲ್ಲ.

ಎಲ್ಲ 224 ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನೂ ಹೊಂದಿಲ್ಲ. ಹೆಚ್ಚೆಂದರೆ ತಮ್ಮ ತಮ್ಮಕ್ಷೇತ್ರಗಳಿಗೆ ಸೀಮಿತವಾದ ನಾಯಕರು ಅಷ್ಟೇ. ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಕೆಳಗಿಳಿಸಿದರೆ ರಾಜ್ಯದ ಅರ್ಧದಷ್ಟು ಮತದಾರರ ಬೆಂಬಲ ಕಳೆದುಕೊಳ್ಳುವ ಭೀತಿ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿದೆ. ಈ ಹಿಂದೆ 90ರ ದಶಕದಲ್ಲಿ ವೀರೇಂದ್ರ ಪಾಟೀಲರನ್ನು ಅಮಾನವೀಯವಾಗಿ ಕೆಳಗಿಳಿಸಿ ಲಿಂಗಾಯತ ಸಮುದಾಯದ ಬೆಂಬಲ ಕಳೆದುಕೊಂಡಿದ್ದಲ್ಲದೆ ಉತ್ತರ ಕರ್ನಾಟಕದಲ್ಲಿ ನೆಲ ಕಚ್ಚಿದ ಅನುಭವ ಕಾಂಗ್ರೆಸ್‌ ಮರೆತಿಲ್ಲ. ಇದೇ ಮಾದರಿಯಲ್ಲಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಮತ್ತೊಮ್ಮೆ ಇಂತಹುದೇ ಕಳಂಕ ಹೊತ್ತುಕೊಂಡು ಅಹಿಂದ ವರ್ಗಗಳ ಬೆಂಬಲವನ್ನು ಕಳೆದುಕೊಳ್ಳುವ ಭೀತಿ ಕಾಡುತ್ತಿದೆ.

ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿರುವುದಾಗಿ ಶಿವಕುಮಾರ್‌ ಘೋಷಿಸಿದ್ದರೂ ಅವಕಾಶ ಬಂದಾಗ ನಾನೇ ಸಿಎಂ ಎಂದು ಅವರು ಭಾವಿಸಿದ್ದಾರೆ. ಒಂದು ವೇಳೆ ಹೈಕಮಾಂಡ್‌ ಬೇರೊಬ್ಬರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದರೆ ಶಿವಕುಮಾರ್‌ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಆ ಭೀತಿಯೂ ಹೈಕಮಾಂಡ್‌ ಗೆ ಇಲ್ಲದಿಲ್ಲ. ಅಡಕತ್ತರಿಯಲ್ಲಿ ಸಿಲುಕಿರುವುದು ಸಿದ್ದರಾಮಯ್ಯ ಮಾತ್ರವಲ್ಲ, ಶಿವಕುಮಾರ್‌, ಹೈಕಮಾಂಡ್‌ ಕೂಡಾ ಇಕ್ಕಟ್ಟಿಗೆ ಸಿಲುಕಿದೆ.

mysore-dasara_Entry_Point