logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election: ತುಮಕೂರು ಗ್ರಾಮಾಂತರದಲ್ಲಿ ನಾನಾ ನೀನಾ ಫೈಟ್; ಚುನಾವಣಾ ಕಣದಲ್ಲಿ ಬದ್ಧ ವೈರಿಗಳ ಕದನ

Karnataka Election: ತುಮಕೂರು ಗ್ರಾಮಾಂತರದಲ್ಲಿ ನಾನಾ ನೀನಾ ಫೈಟ್; ಚುನಾವಣಾ ಕಣದಲ್ಲಿ ಬದ್ಧ ವೈರಿಗಳ ಕದನ

HT Kannada Desk HT Kannada

Apr 28, 2023 12:38 PM IST

google News

ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳು

    • ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಮಧ್ಯೆ ನೇರ ಹಣಾಹಣಿ ನಿರೀಕ್ಷೆ ಇದೆ. ಅಲ್ಲದೆ ಗೆಲುವಿನ ಮತಗಳ ಅಂತರ ತೀರ ದೊಡ್ಡ ಸಂಖ್ಯೆಯಲ್ಲಿ ಇರುವುದಿಲ್ಲ ಎಂಬ ಲೆಕ್ಕಾಚಾರವಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳು
ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳು

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರವು (Tumkur Rural Assembly constituency) ರಾಜ್ಯ ಮಟ್ಟದಲ್ಲಿ ಆಗಾಗ ಸುದ್ದಿಯಾಗುತ್ತಾ ಇರುತ್ತದೆ. ಇಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾನಾ-ನೀನಾ ಎಂಬಂತೆ ಜಿದ್ದಿಗೆ ಬೀಳುತ್ತಾರೆ. ಹೀಗಾಗಿಯೇ ತುಮಕೂರಿನ ಚುನಾವಣಾ ಕಣ ರಣ ರೋಚಕ ಎನಿಸಿದೆ.

ಜೆಡಿಎಸ್ (JDS) ಅಭ್ಯರ್ಥಿ ಡಿಸಿ ಗೌರಿಶಂಕರ್ (DC Gowrishankar) ಮತ್ತು ಬಿಜೆಪಿ ಅಭ್ಯರ್ಥಿ ಬಿ ಸುರೇಶ್ ಗೌಡ (B Suresh Gowda) ಅವರು ಹಣ ಬಲ ಮತ್ತು ಜನಬಲ ಎರಡರಲ್ಲೂ ಒಬ್ಬರಿಗಿಂತ ಒಬ್ಬರು ಕಡಿಮೆ ಇಲ್ಲ. ಆರೋಪ-ಪತ್ಯಾರೋಪ ಮಾಡುತ್ತಾ ಮಾತಿನ ಯುದ್ಧವನ್ನೇ ನಡೆಸುವ ಇಬ್ಬರ ಮಧ್ಯೆ ಈ ಬಾರಿ ಚುನಾವಣಾ ಕಣದಲ್ಲಿ ರಣರೋಚಕ ಕದನ ಏರ್ಪಡುವುದರಲ್ಲಿ ಅನುಮಾನವಿಲ್ಲ.

ಡಿಸಿ ಗೌರಿಶಂಕರ್ (ಜೆಡಿಎಸ್‌ ಅಭ್ಯರ್ಥಿ)

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಪಾರ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಹೊಂದಿರುವ ನಾಯಕ ಡಿಸಿ ಗೌರಿಶಂಕರ್. ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಕ್ಷೇತ್ರದ ಮನೆ ಮಗ ಎಂದೇ ಕರೆಸಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಕ್ಷೇತ್ರದ ಪ್ರತಿ ಮನೆಗೆ ಎರಡು ಬಾರಿ ಆಹಾರ ಕಿಟ್ ಹಾಗೂ ತರಕಾರಿ ಹಂಚಿ ಗಮನ ಸೆಳೆದಿದ್ದಾರೆ. ತಮ್ಮದೇ ಹಣದಲ್ಲಿ ಆಸ್ಪತ್ರೆ ತೆರೆದು ಕ್ಷೇತ್ರದ ಜನರ ಆರೋಗ್ಯ ಕಾಪಾಡುವ ಕೆಲಸ ಮಾಡಿದ್ದಾರೆ. ಈ ಎಲ್ಲಾ ಅಂಗಳನ್ನು ಮುಂದಿಟ್ಟುಕೊಂಡು ಭರ್ಜರಿ ಪ್ರಚಾರ ನಡೆಸುತ್ತಿರುವ ಗೌರಿಶಂಕರ್, ಮತ್ತೊಮ್ಮ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ.

ಬಿ ಸುರೇಶ್ ಗೌಡ (ಬಿಜೆಪಿ ಅಭ್ಯರ್ಥಿ)

ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ತೆರಳುತ್ತಿರುವ ಸುರೇಶ್ ಗೌಡ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಆಗಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುತ್ತಾ, ಗೆದ್ದರೆ ಮುಂದೆ ಮಾಡುವ ಕೆಲಸಗಳ ಬಗ್ಗೆ ಹೇಳುತ್ತಾ ಮತಯಾಚನೆ ಮಾಡುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ನಾಯಕರನ್ನು ಕ್ಷೇತ್ರಕ್ಕೆ ಕರೆಸಿ ಭರ್ಜರಿ ರೋಡ್ ಶೋ ನಡೆಸಿ ಮತದಾರರ ಮನ ಗೆಲ್ಲುವ ಕೆಲಸ ಮಾಡಿದ್ದಾರೆ. ಜಾತಿವಾರು ಸಭೆ ಸಮಾರಂಭ ನಡೆಸಿ ಎಲ್ಲಾ ವರ್ಗದ ಮತ ಸೆಳೆಯುವ ಪ್ರಯತ್ನವೂ ನಡೆದಿದೆ. ಈ ಬಾರಿ ನಾನು ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ ಸುರೇಶ್ ಗೌಡರದ್ದು.

ಷಣ್ಮುಖಪ್ಪ (ಕಾಂಗ್ರೆಸ್‌ ಅಭ್ಯರ್ಥಿ)

ಇನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಷಣ್ಮುಖಪ್ಪ ಗ್ರಾಮಾಂತರ ಕ್ಷೇತ್ರಕ್ಕೆ ಹೊಸ ಮುಖ. ಯಾವುದೇ ರಾಜಕೀಯ ಅನುಭವ ಇಲ್ಲದ ಷಣ್ಮುಖಪ್ಪ ಘಟಾನುಘಟಿ ನಾಯಕರಿಬ್ಬರ ಮಧ್ಯೆ ಅದೆಷ್ಟು ಮತ ಗಳಿಸಲಿದ್ದಾರೆ ಎಂಬುದೇ ಈಗಿನ ಪ್ರಶ್ನೆ.

ಒಟ್ಟಾರೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಮಧ್ಯೆ ನೇರ ಹಣಾಹಣಿ ನಡೆಯಲಿದ್ದು, ಗೆಲುವಿನ ಮತಗಳ ಅಂತರ ತೀರ ದೊಡ್ಡ ಸಂಖ್ಯೆಯಲ್ಲಿ ಇರುವುದಿಲ್ಲ ಎಂಬ ಲೆಕ್ಕಾಚಾರವಿದೆ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಪ್ರಾಬಲ್ಯ‌ ಕಡಿಮೆ. ಹೀಗಾಗಿ ಇದು ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಕದನ ಎನಿಸಿಕೊಂಡಿದೆ. ಆದರೆ, ಅಂತಿಮವಾಗಿ ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಎಂಬುದಕ್ಕೆ ಮತ ಎಣಿಕೆಯವರೆಗೂ ಕಾಯಬೇಕಾಗಿದೆ.

ವರದಿ: ಈಶ್ವರ್ ಎಂ, ತುಮಕೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ