logo
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ತುಮಕೂರು ಜಿಲ್ಲೆಯಲ್ಲಿ ಜಾಲಿ ಮುಳ್ಳಿನ ಮೇಲೆ ಕುಣಿಯುವ ದೇವರನ್ನು ರೇಗಿಸಿ ಚಾಟಿ ಏಟು ತಿನ್ನುವ ಮಜಾ !

Tumkur News: ತುಮಕೂರು ಜಿಲ್ಲೆಯಲ್ಲಿ ಜಾಲಿ ಮುಳ್ಳಿನ ಮೇಲೆ ಕುಣಿಯುವ ದೇವರನ್ನು ರೇಗಿಸಿ ಚಾಟಿ ಏಟು ತಿನ್ನುವ ಮಜಾ !

Umesha Bhatta P H HT Kannada

May 06, 2024 04:53 PM IST

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತೊರೆಹಳ್ಳಿಯ ಜಾಲಿಮುಳ್ಳಿನ ಸೇವೆ.

    • ಒಂದೊಂದು ಊರಲ್ಲಿ ದೇವರ ಸಂಪ್ರದಾಯಗಳು ಒಂದು ರೀತಿ ಇರುತ್ತದೆ. ಆದರೆ ಆಶಯ ಮಾತ್ರ ಒಂದೇ. ಅದು ಭಕ್ತಿಯ ಪರಾಕಾಷ್ಠೆ. ತುಮಕೂರು ಜಿಲ್ಲೆಯ ಈ ವಿಶಿಷ್ಟ ಆಚರಣೆಯೂ ಗಮನ ಸೆಳೆಯುತ್ತದೆ.
    • ವರದಿ: ಈಶ್ವರ್‌, ತುಮಕೂರು
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತೊರೆಹಳ್ಳಿಯ ಜಾಲಿಮುಳ್ಳಿನ ಸೇವೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತೊರೆಹಳ್ಳಿಯ ಜಾಲಿಮುಳ್ಳಿನ ಸೇವೆ.

ತುಮಕೂರು: ಭಕ್ತರ ಹರಕೆ ಈಡೇರಿಕೆಗೆ ಜಾಲಿ ಮುಳ್ಳಿನ ಗದ್ದುಗೆಯಲ್ಲಿ ಮಲಗುವ ರಾಮಪ್ಪ ದೇವರು ಸಾವಿರಾರು ಭಕ್ತರ ಆರಾಧ್ಯ ದೈವವಾಗಿದೆ. ಜಿಲ್ಲೆ ಗುಬ್ಬಿ ತಾಲೂಕಿನ ಕಸಬಾ ಹೋಬಳಿ ತೊರೇಹಳ್ಳಿ ಗ್ರಾಮದಲ್ಲಿರುವ ರಾಮ ದೇವರ ದೇಗುಲದಲ್ಲಿ ಹರಕೆ ಹೊತ್ತ ಭಕ್ತರು ಮುಳ್ಳಿನ ಗದ್ದುಗೆ ಸಿದ್ಧ ಪಡಿಸಿರುತ್ತಾರೆ, ರಾಮಪ್ಪ ದೇವರು ಮುಖವಾಡ ಹೊತ್ತ ಅರ್ಚಕರ ಕೈಯಲ್ಲಿ ಬೆತ್ತ ಹಾಗೂ ಚಾಟಿ ಹಿಡಿದು ದೇವರು ಆಡಿಸುವಾಗ ಗ್ರಾಮಸ್ಥರಿಗೆ ಚುರುಕು ಮುಟ್ಟಿಸುವುದು ಉಂಟು. ದೇಗುಲದಿಂದ ಮೆರವಣಿಗೆ ಮೂಲಕ ಹಾದು ಹೋಗುವ ರಾಮಪ್ಪ ದೇವರ ಮುಖವಾಡ ಧರಿಸಿದ ಅರ್ಚಕರು ಮಾರ್ಗ ಮಧ್ಯೆ ಹಲವು ಭಕ್ತರ ಮನೆಯಲ್ಲಿ ವಿಶೇಷ ಪೂಜೆ ಸ್ವೀಕರಿಸುತ್ತಾರೆ, ದಾರಿಯುದ್ದಕ್ಕೂ ಅರೇವಾದ್ಯ, ಡೋಲು ವಾದ್ಯಕ್ಕೆ ತಕ್ಕಂತೆ ನರ್ತಿಸುತ್ತಾ ಸಾಗುವ ದೇವರನ್ನು ರೇಗಿಸುವ ಯುವಕ ಪಡೆ ಚಾಟಿ ಏಟಿಗೆ ಮೈವೊಡ್ಡಿ ನಿಲ್ಲುವರು.

ಟ್ರೆಂಡಿಂಗ್​ ಸುದ್ದಿ

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

ಏನಿದರ ವಿಶೇಷ

ಮುಳ್ಳನ್ನು ಬಳಸಿ ದೇವರಿಗೆ ಪೂಜೆ ಮಾಡುವ ಸಂಪ್ರದಾಯ ಹಲವು ಕಡೆಗಳಲ್ಲಿ ಇದೆ. ಕಾರೇಮುಳ್ಳನ್ನು ಹಾಕಿ ಅದನ್ನು ತುಳಿಯುವ ಸಂಪ್ರದಾಯಗಳೂ ಇವೆ. ಅಂದರೆ ಕಾರೆಮುಳ್ಳು ತುಳಿದರೆ ಆರೋಗ್ಯಕ್ಕೆ ಒಳ್ಳೆಯದು. ಅದು ಆಯುರ್ವೇದದಂತೆ ಕೆಲಸ ಮಾಡುತ್ತದೆ. ಭಕ್ತಿಯನ್ನೂ ಸಮರ್ಪಿಸದ ಹಾಗಾಗುತ್ತದೆ ಎನ್ನುವುದು ಭಕ್ತರು ರೂಢಿಸಿಕೊಂಡಿರುವ ನಂಬಿಕೆ.

ಇಲ್ಲಿ ಮೈ ಮೇಲೆ ಬಾಸುಂಡೆ ಬಂದರೂ ಲೆಕ್ಕಿಸದೆ ರಾಮಪ್ಪ ದೇವರನ್ನು ದಾರಿಯುದ್ದಕ್ಕೂ ರೇಗಿಸುವ, ಸಿಟ್ಟಿಗೆಬ್ಬಿಸುವ ಕಾಯಕವನ್ನು ಯುವಕರು ನಿರಂತರವಾಗಿ ಮಾಡುತ್ತಾರೆ. ಈ ರೀತಿ ಮಾಡುವುದು ಒಳಿತನ್ನು ಬಯಸಿದಂತೆ ಎನ್ನುವ ಯುವಕರು ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ, ಮುಳ್ಳಿನ ಗದ್ದುಗೆ ವರೆಗೆ ಮೆರವಣಿಗೆ ಮೂಲಕ ಬರುವ ದೇವರ ಸುತ್ತುಗಟ್ಟುವ ಗ್ರಾಮಸ್ಥರ ಪೈಕಿ ಮಹಿಳೆಯರು ಸಹ ರಾಮಪ್ಪ ದೇವರನ್ನು ರೇಗಿಸುವ ಕೆಲಸ ಮಾಡುವರು.

ಎರಡು ಬಾರಿ ಹೊರಕ್ಕೆ

ನಿಟ್ಟೂರು ಹೋಬಳಿಯ ಪತ್ರೆ ಮತ್ತಿಘಟ್ಟ ಗ್ರಾಮದಲ್ಲಿ ರಾಮದೇವರ ಮೂಲ ದೇಗುಲವಿದ್ದು ಇಲ್ಲಿ ಹರಕೆ ಕೊಟ್ಟಿರುವ ಭಕ್ತರು ದಾಸೋಹ ವ್ಯವಸ್ಥೆ ಮಾಡುತ್ತಾರೆ, ಆದರೆ ತೊರೇಹಳ್ಳಿಯಲ್ಲಿರುವ ರಾಮಪ್ಪ ದೇವರ ದೇಗುಲದಲ್ಲಿ ಮುಖವಾಡವೇ ಮೂಲ ವಿಗ್ರಹವಾಗಿದೆ, ಪೆಟ್ಟಿಗೆಯಲ್ಲಿರಿಸುವ ರಾಮಪ್ಪ ಮುಖವಾಡವನ್ನು ವರ್ಷದಲ್ಲಿ ಎರಡು ಬಾರಿ ಅಂದರೆ ಗೌರಿಹಬ್ಬ ಮತ್ತು ಮಾರಮ್ಮನ ಹಬ್ಬದಲ್ಲಿ ಮಾತ್ರ ಹೊರ ತೆಗೆಯಲಾಗುತ್ತದೆ. ನಾಯಕ ಸಮುದಾಯದವರ ಸಾವಿನ ಮನೆಯಲ್ಲಿ ಸೂತಕ ಕಳೆಯಲು ಮತ್ತು ಹೆಣ್ಣು ಮಕ್ಕಳ ವಸಗೆ ಕಾರ್ಯಕ್ರಮದಲ್ಲಿ ಪೂಜೆಗೆ ಕೂಡ ರಾಮಪ್ಪ ದೇವರನ್ನು ಪೆಟ್ಟಿಗೆಯಿಂದ ಹೊರ ತರುವುದು ವಿಶೇಷ.

ಈ ಜಾತ್ರೆಯಲ್ಲಿ ಮುಳ್ಳಿನ ಮೇಲೆ ದೇವರು ಕುಣಿಯುವುದು ನೋಡುವುದೇ ಬಹಳ ಸೊಬಗು, ಸಾವಿರಾರು ಭಕ್ತರು ಆಗಮಿಸಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಹರಕೆ ಕಟ್ಟಿಕೊಳ್ಳುವ ಮೂಲಕ ದೇವರಿಗೆ ಭಕ್ತ ಸಮರ್ಪಿಸುತ್ತಾರೆ.

ಭಕ್ತರು ಕೂಡ ಇದೆಲ್ಲವನ್ನೂ ನೋಡಿ ದೇವರಿಗೆ ಭಕ್ತಿಯಿಂದ ನಮಸ್ಕರಿಸಿ ಪೂಜೆ ಸಲ್ಲಿಸುವುದು ನಡೆದುಕೊಂಡು ಬಂದಿದೆ.

ಊರಿನವರು ಹೇಳೋದೇನು

ನಮ್ಮೂರು ರಾಮಪ್ಪ ದೇವರ ಆಚರಣೆಗಳು ಹಾಗೂ ಇಲ್ಲಿನ ಸಂಪ್ರದಾಯಗಳಿಗೆ ಶತಮಾನದ ಇತಿಹಾಸವಿದೆ. ಊರಿನವರು ಇದನ್ನು ಪ್ರತಿ ವರ್ಷ ತಪ್ಪದಂತೆ ಆಚರಿಸಿಕೊಂಡು ಬರುತ್ತಾರೆ. ಇದರಿಂದ ಒಳ್ಳೆಯದು ಆಗಲಿದೆ ಎನ್ನುವ ನಂಬಿಕೆಯಿಂದ ಹಿರಿಯ ಕಾಲದಿಂದಲೂ ತಪ್ಪದೇ ಎಲ್ಲಾ ಸಂಪ್ರದಾಯ ನಡೆಸಿಕೊಂಡು ಹೋಗಲಾಗುತ್ತಿದೆ. ಹೊಸ ಪೀಳಿಗೆಯವರೂ ಇದನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಒಮ್ಮೆಯೂ ಇದನ್ನು ನಿಲ್ಲಿಸಿದ ಉದಾಹರಣೆ ಇಲ್ಲವೇ ಇಲ್ಲ. ಆ ಮಟ್ಟಿಗಿನ ಭಕ್ತಿ ಎಲ್ಲರಲ್ಲೂ ಇದೆ. ಇವೆಲ್ಲವೂ ನಮ್ಮ ಭಕ್ತಿ ಹಾಗೂ ನಂಬಿಕೆಯ ಭಾಗ ಎಂದು ಗ್ರಾಮದ ಹಲವರು ನೆನಪಿಸಿಕೊಳ್ಳುತ್ತಾರೆ.

(ವರದಿ: ಈಶ್ವರ್‌, ತುಮಕೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ