Tumkur Dasara: ತುಮಕೂರಿನಲ್ಲೂ 10 ದಿನಗಳ ವೈಭವದ ದಸರಾಕ್ಕೆ ಚಾಲನೆ; ಡ್ರೋನ್, ಹೆಲಿಕಾಪ್ಟರ್ ಶೋ ಮೊದಲ ವರ್ಷದ ವಿಶೇಷ
Oct 03, 2024 06:54 PM IST
ತುಮಕೂರಿನಲ್ಲಿ ದಸರಾ ಚಟುವಟಿಕೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.
- ತುಮಕೂರಿನಲ್ಲೂ ಹತ್ತು ದಿನಗಳ ದಸರಾ ಚಟುವಟಿಕೆಗೆ ಮೊದಲ ಬಾರಿಗೆ ಚಾಲನೆ ನೀಡಲಾಗಿದೆ. ವೈವಿಧ್ಯಮಯ ಕಾರ್ಯಕ್ರಮಗಳು ದಸರಾ ಅಂಗವಾಗಿ ಇರಲಿವೆ.
- ವರದಿ: ಈಶ್ವರ್ ತುಮಕೂರು
ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ದಸರಾಗೆ ಚಾಲನೆ ನೀಡಲಾಗಿದೆ. ಮೊದಲ ಬಾರಿಗೆ ಹತ್ತು ದಿನಗಳ ಕಾರ್ಯಕ್ರಮ ತುಮಕೂರು ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದು, ಮೊದಲ ವರ್ಷವೇ ನಾನಾ ಕಾರ್ಯಕ್ರಮಗಳು ಇರಲಿವೆ. ದಸರಾ ಉತ್ಸವದ ಪ್ರಯುಕ್ತ ಮುಂದಿನ 9 ದಿನ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಕ್ಟೋಬರ್ 12 ರಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಅಲಂಕೃತ ಆನೆಗಳು, ಕುದುರೆಗಳು, ವಿವಿಧ ಕಲಾ ತಂಡಗಳು ಮತ್ತು ಜಿಲ್ಲೆಯ 70 ಕ್ಕೂ ಹೆಚ್ಚು ದೇವರ ಉತ್ಸವ ಮೂರ್ತಿಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. ತುಮಕೂರು ದಸರಾ ಆಚರಣೆಗೆ ಮುಖ್ಯಮಂತ್ರಿಯವರು 1 ಕೋಟಿ ರೂ. ಅನುದಾನ ನೀಡಿದ್ದಾರೆ.
ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅದ್ದೂರಿ ಉತ್ಸವಕ್ಕೆ ಚಾಲನೆ ದೊರಕಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಅವರು ಪೂಜೆಯನ್ನು ಶಾಸ್ತ್ರೋಕ್ತವಾಗಿ ಸಲ್ಲಿಸುವ ಮೂಲಕ ದಸರಾಗೆ ಚಾಲನೆ ಕೊಟ್ಟರು.
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ನಮ್ಮ ಧಾರ್ಮಿಕ ಆಚರಣೆ, ವಿಚಾರಧಾರೆ, ಭವ್ಯ ಸಂಸ್ಕೃತಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸಲು ತುಮಕೂರಿನಲ್ಲಿ ಪ್ರಪ್ರಥಮ ಬಾರಿಗೆ ತುಮಕೂರು ದಸರಾ ಉತ್ಸವ ಆಚರಣೆ ಪ್ರಾರಂಭಿಸಲಾಗಿದೆ ಎಂದುತಿಳಿಸಿದರು.
ತುಮಕೂರು ದಸರಾ ಉತ್ಸವ ಪ್ರಾರಂಭಿಸಿರುವುದು ಮೈಸೂರು ದಸರಾಗೆ ಹೋಲಿಕೆ ಮಾಡಲು ಅಲ್ಲ. ತುಮಕೂರು ದಸರಾ ಆಚರಣೆಗೆ ಮುಖ್ಯಮಂತ್ರಿಯವರು 1 ಕೋಟಿ ರೂ. ಅನುದಾನ ನೀಡಿ ಪ್ರೋತ್ಸಾಹಿಸಿದ್ದಾರೆ, ದಸರಾ ಪ್ರಯುಕ್ತ ಮುಂದಿನ 9 ದಿನ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚಾಮುಂಡೇಶ್ವರಿ ದೇವಿ ಕೃಪೆಗೆ ಪಾತ್ರರಾಗಿ ಖ್ಯಾತ ಕಲಾವಿದರಿಂದ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎನ್ನುವುದು ಅವರ ಮನವಿ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಅದ್ದೂರಿಯಾಗಿ 10 ದಿನಗಳ ಕಾಲ ತುಮಕೂರು ದಸರಾ ಉತ್ಸವ ಆಚರಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೊಸ ಚರಿತ್ರೆ ಸೃಷ್ಟಿಯಾಗಿದೆ. ದಸರಾ ಹಬ್ಬದ ಆಚರಣೆಯನ್ನುಭಾರತದಾದ್ಯಂತ ಆಚರಿಸಲಾಗುತ್ತಿದ್ದು, ಮೈಸೂರು ಮಹಾರಾಜರು ಪ್ರಾರಂಭಿಸಿದ ಮೈಸೂರು ದಸರಾ ಉತ್ಸವವು ವಿಶ್ವ ವಿಖ್ಯಾತ ಹೊಂದಿ ಇತಿಹಾಸದ ಪುಟಗಳಲ್ಲಿ ಸೇರಿದ ರೀತಿಯಲ್ಲಿ ಜಿಲ್ಲೆಯಲ್ಲಿ ಪ್ರಾರಂಭಗೊಂಡಿರುವ ತುಮಕೂರು ದಸರಾ ಆಚರಣೆ ಕೂಡ ಇತಿಹಾಸದ ಪುಟಗಳಲ್ಲಿ ಸೇರಲಿದೆ. ತುಮಕೂರು ದಸರಾ ದೇವರ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ರಮವಾಗಿ ಮೂಡಿಬರಲಿದೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ದಸರಾ ಉತ್ಸವಕ್ಕೆ ಅನೇಕ ವಿಚಾರಧಾರೆಗಳಿವೆ, ಈ ವಿಚಾರ ಧಾರೆ ಪ್ರತಿಯೊಬ್ಬ ಭಾರತೀಯನಿಗೆ ತಲುಪಬೇಕು, ಪ್ರತಿಯೊಬ್ಬರಿಗೂ ನನ್ನ ದೇಶ, ನನ್ನ ಸಂಸ್ಕೃತಿ ಎಂಬ ಭಾವನೆ ಬರಬೇಕೆಂದು ತಿಳಿಸಿದರು.
ಚಾಮುಂಡಿ ದೇವಿಯು ದುಷ್ಟ ಶಕ್ತಿ ಸಂಹರಿಸಿ ಶಿಷ್ಟರನ್ನು ರಕ್ಷಿಸಿದ ಸ್ಮರಣೆಗಾಗಿ ದಸರಾ ಹಬ್ಬದ ಆಚರಣೆ ನಡೆಸಿಕೊಂಡು ಬರಲಾಗುತ್ತಿದ್ದು, ತಾಯಿಯ ಆಶೀರ್ವಾದದಿಂದ ನಮ್ಮಲ್ಲಿರುವ ಕೆಟ್ಟತನ ಅಳಿಸಿ ಒಳ್ಳೆಯತನ ರೂಢಿಸಿಕೊಳ್ಳೋಣ, ಜಿಲ್ಲೆಯ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆ ಬಿಂಬಿಸುವ ರೀತಿಯಲ್ಲಿ ವೈಭವಯುತವಾಗಿ ಹಾಗೂ ಅರ್ಥಪೂರ್ಣವಾಗಿ ದಸರಾ ಉತ್ಸವ ಆಚರಿಸಲಾಗುತ್ತಿದ್ದು, ಜಿಲ್ಲೆಯ ಜನತೆ ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ದಸರಾ, ಯುವ ದಸರಾ, ರೈತ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ವಿಂಟೇಜ್ ಕಾರ್ ಮೆರವಣಿಗೆ, ಡ್ರೋನ್ ಶೋ, ಹೆಲಿಕಾಪ್ಟರ್ ಶೋ, ಇಸ್ರೋ ಸಂಸ್ಥೆಯಿಂದ ಮಕ್ಕಳ ಜ್ಞಾನ ಹೆಚ್ಚಿಸಲು ಬಾಹ್ಯಾಕಾಶ ಕುರಿತು ವಿಶೇಷ ವಸ್ತು ಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಖ್ಯಾತ ಸಿನಿಮಾ ತಾರೆಯರು, ಗಾಯಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಶ್ರೀಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ದಸರಾ ಉತ್ಸವ ಆಚರಣೆಯಿಂದ ಮೈಸೂರಿನಂತೆ ತುಮಕೂರು ನಗರವೂ ಸಹ ಸಾಂಸ್ಕೃತಿಕ ನಗರವಾಗಿ ರೂಪುಗೊಳ್ಳುತ್ತಿದೆ. ವಿಜಯನಗರ ಅರಸರಿಂದ ಮೈಸೂರು ಅರಸರ ವರೆಗೆ ದಸರಾ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ, ನಮ್ಮಲ್ಲಿರುವ ಕೆಟ್ಟ ಭಾವನೆ ಹೋಗಲಾಡಿಸಿ ಒಳ್ಳೆಯದ್ದನ್ನು ಅಳವಡಿಸಿಕೊಳ್ಳಬೇಕು ಎಂಬ ಪ್ರತೀಕವೇ ದಸರಾ ಆಚರಣೆ ಎಂದರು.
ಕೊರಟಗೆರೆ ತಾಲೂಕು ಎಲೆರಾಂಪುರದ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಹನುಮಂತನಾಥ ಮಹಾ ಸ್ವಾಮೀಜಿ, ಶಾಸಕರಾದ ಟಿ.ಬಿ.ಜಯಚಂದ್ರ, ಜಿ.ಬಿ.ಜ್ಯೋತಿಗಣೇಶ್, ಕೆ.ಷಡಕ್ಷರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್‌ಪಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮತ್ತಿತರರು ದಸರೆಯಲ್ಲಿ ಪಾಲ್ಗೊಂಡರು.
(ವರದಿ: ಈಶ್ವರ್ ತುಮಕೂರು)