Tumkur News: ತುಮಕೂರಲ್ಲಿ ಕೆಎಸ್‌ಆರ್‌ಟಿಸಿ ವಿಶಾಲ ನಿಲ್ದಾಣ, ಬಸ್‌ಗಳ ಸೇವೆಗೆ ಚಾಲನೆ, ಏನಿದೆ ವಿಶೇಷ
Jul 29, 2024 05:15 PM IST
ತುಮಕೂರಿನಲ್ಲಿ ನಿರ್ಮಿಸಿರುವ ಬಸ್‌ನಿಲ್ದಾಣದಲ್ಲಿ ಸೇವೆ ಆರಂಭಗೊಂಡಿದೆ.
- KSRTC News ತುಮಕೂರಿನಲ್ಲಿ ವಿಶಾಲವಾಗಿ ನಿರ್ಮಿಸಲಾಗಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸೇವೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.
- ವರದಿ: ಈಶ್ವರ್ ತುಮಕೂರು
ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 39817 ಚ.ಮೀ. ಪ್ರದೇಶದಲ್ಲಿ ಅಂದಾಜು 82.89 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಿ.ದೇವರಾಜ ಅರಸು ಬಸ್ ನಿಲ್ದಾಣದಿಂದ ಸಾರಿಗೆ ವಾಹನಗಳ ಕಾರ್ಯಾಚರಣೆಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಚಾಲನೆ ನೀಡಿದರು. ಚಾಲನೆ ನೀಡಿದ ನಂತರ ತಡೆರಹಿತ ತುಮಕೂರು- ಬೆಂಗಳೂರು ಮಾರ್ಗದ 6 ಅಶ್ವಮೇಧ ಬಸ್ಸುಗಳಿಗೆ ಚಾಲನೆ ನೀಡಿ ಸ್ವಲ್ಪ ದೂರ ಪ್ರಯಾಣಿಸಿ ಪ್ರಾಯೋಗಿಕವಾಗಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಚಿವರು ನೂತನ ಬಸ್ ನಿಲ್ದಾಣದ ಕಾರ್ಯಾಚರಣೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾ, ಮಾರ್ಚ್ 29 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈಗಾಗಲೇ ಬಸ್ ನಿಲ್ದಾಣ ಉದ್ಘಾಟಿಸಿದ್ದು, ಬಾಕಿಯಿದ್ದ ಸಣ್ಣ- ಪುಟ್ಟ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಶನಿವಾರದಿಂದ ಬಸ್‌ಗಳ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದರು.
ಬಸ್ ನಿಲ್ದಾಣ ಹೀಗಿದೆ
ನೂತನ ಬಸ್ ನಿಲ್ದಾಣದ ಕಾಮಗಾರಿ 2020ರ ಜನವರಿ ಮಾಹೆಯಲ್ಲಿ ಪ್ರಾರಂಭಿಸಿದ್ದು, ಬಸ್ ನಿಲ್ದಾಣದ ನಿವೇಶನವು 4.17 ಎಕರೆ ಪ್ರದೇಶ ಹೊಂದಿದ್ದು, 39817 ಚ.ಮೀ. ವಿಸ್ತೀರ್ಣದ ನೂತನ ಬಸ್ ನಿಲ್ದಾಣ ಕಟ್ಟಡವು 5 ಅಂತಸ್ತು ಒಳಗೊಂಡಿದೆ, ನಿಲ್ದಾಣದ ತಳ ಅಂತಸ್ತು- 9754.49 ಚ.ಮೀ., ಕೆಳಗಿನ ನೆಲ ಅಂತಸ್ತು 6292.331 ಚ.ಮೀ., ಮೇಲಿನ ನೆಲ ಅಂತಸ್ತು- 5066.08 ಚ.ಮೀ, ಮೊದಲ, ಎರಡನೇ, ಮೂರನೇ ಅಂತಸ್ತು- 3629.16 ಚ.ಮೀ. ವಿಸ್ತೀರ್ಣ ಹೊಂದಿದೆ.
ಕೆಳಹಂತದ ನೆಲಮಹಡಿಯಲ್ಲಿ ಒಟ್ಟು 12 ಅಂಕಣಗಳಿದ್ದು, ಬೆಂಗಳೂರು ತಡೆರಹಿತ, ವೇಗಧೂತ ಹಾಗೂ ನಗರ ಸಾರಿಗೆ ಮತ್ತು ಗ್ರಾಮಾಂತರ ಸಾರಿಗೆಗಳು ಕಾರ್ಯಾಚರಣೆ ಮಾಡಲಿತ್ತವೆ, ಮೊದಲನೆಯ ನೆಲಮಹಡಿಯಲ್ಲಿ ಒಟ್ಟು 13 ಅಂಕಣಗಳಿದ್ದು, ಶಿರಾ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾಂ, ವಿಜಯಪುರ, ಸೊಲ್ಲಾಪುರ, ಹೊಸಪೇಟೆ, ಕೊಪ್ಪಳ, ಬಳ್ಳಾರಿ, ಕಲ್ಬುರ್ಗಿ, ಬೀದರ್, ತಿಪಟೂರು, ತುರುವೇಕರೆ, ಹಾಸನ, ಚಿಕ್ಕಮಂಗಳೂರು, ಹೊಸದುರ್ಗ, ಶಿವಮೊಗ್ಗ, ಶಿರಸಿ, ಸಾಗರ, ನಾಗಮಂಗಲ, ಮೈಸೂರು, ನಂಜನಗೂಡು, ಮಲೈಮಹದೇಶ್ವರ, ಕುಣಿಗಲ್ ಇನ್ನಿತರ ಅಂತರ್ ಜಿಲ್ಲೆಗಳಿಗೆ ಬಸ್‌ಗಳು ಹೊರಡಲಿವೆ.
ಬಸ್ ನಿಲ್ದಾಣದ ಮೂಲಕ 667 ನಗರ, 451 ಸಾಮಾನ್ಯ, 1253 ವೇಗಧೂತ, 129 ಕಲ್ಯಾಣ ಕರ್ನಾಟಕ, 64 ವಾಯುವ್ಯ ಕರ್ನಾಟಕ, 193 ರಾತ್ರಿ ಸಾರಿಗೆ ಸೇರಿದಂತೆ 2757 ಸಾರಿಗೆ ಬಸ್‌ಗಳು ನಿರ್ಗಮನವಾಗುತ್ತವೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಹಂತದಲ್ಲಿ (ಕೆಳಮಹಡಿ ಮೇಲಿನ ಮಹಡಿ) ಬಸ್ ನಿಲುಗಡೆ ಅಂಕಣದ ವ್ಯವಸ್ಥೆ, ಎರಡೂ ಹಂತದ ಬಸ್ ನಿಲುಗಡೆ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಪುರುಷ, ಮಹಿಳೆಯರಿಗೆ ಶೌಚಾಲಯ ಮತ್ತು ಮೂತ್ರಾಲಯದ ವ್ಯವಸ್ಥೆ, ವಿಶೇಷ ಚೇತನರಿಗೆ ಶೌಚಾಲಯ ಮತ್ತು ಇಳಿಜಾರಿನ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕಗಳು, ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, ಎಟಿಎಂ ಕೌಂಟರ್‌ಗಳ ವ್ಯವಸ್ಥೆ, ಸಂಚಾರ, ನಿಲ್ದಾಣಾಧಿಕಾರಿಗಳ ಕೊಠಡಿ, ವಿಚಾರಣಾ ಕೌಂಟರ್, ಮುಂಗಡ ಕಾಯ್ದಿರಿಸುವಿಕೆ ಮತ್ತು ಪಾಸ್ ವಿತರಣಾ ಕೊಠಡಿ, ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಮಕ್ಕಳ ಪೋಷಣೆಗಾಗಿ ತಾಯಂದಿರ ಕೊಠಡಿ, ಪ್ರಯಾಣಿಕರ ಲಗೇಜ್ ಇಡುವ ಕೊಠಡಿ, ಆರಕ್ಷಕರ ಕೊಠಡಿ, ಪಾರ್ಸೆಲ್ ಬುಕಿಂಗ್‌ಗಳಿಗೆ ಕಾರ್ಗೋ ವ್ಯವಸ್ಥೆ, ಎರಡೂ ಹಂತದ ಬಸ್ ನಿಲುಗಡೆ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಎರಡು ಉಪಹಾರ ಗೃಹ ಮತ್ತು ಮೂರು ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳು, ಬಸ್ ನಿಲ್ದಾಣಕ್ಕೆ ಸಿಸಿ ಟಿವಿ ಕಣ್ಣಾವಲು ವ್ಯವಸ್ಥೆ, ವಿದ್ಯುತ್ ಹಾಗೂ ಎಲ್‌ಇಡಿ ಬೆಳಕಿನ ವ್ಯವಸ್ಥೆ, ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ಲಿಫ್ಟ್, ನಾಲ್ಕು ಎಸ್ಕಲೇಟರ್ ಅಳವಡಿಸಲಾಗಿದ್ದು, ನಿರ್ಗಮನದ ಬಗ್ಗೆ ಡಿಜಿಟಲ್ ಉದ್ಘೋಷಣಾ ವ್ಯವಸ್ಥೆ, ಬಸ್ ನಿಲ್ದಾಣದ ಬೇಸ್‌ಮೆಂಟ್‌ನಲ್ಲಿ 1500 ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ತುಮಕೂರು ವಿಭಾಗದ ಸಾರಿಗೆ ಸಂಸ್ಥೆ ಅಧಿಕಾರಿಗಳು.
(ವರದಿ: ಈಶ್ವರ್ ತುಮಕೂರು)