CM Bommai: ರಾಜ್ಯ ವಿಧಾನಸಭೆ ಚುನಾವಣೆಗೆ ಎರಡೇ ದಿನ ಬಾಕಿ; ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪರ ಸಿಎಂ ಬೊಮ್ಮಾಯಿ ಭರ್ಜರಿ ಪ್ರಚಾರ
May 07, 2023 03:37 PM IST
ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪರ ಸಿಎಂ ಬೊಮ್ಮಾಯಿ ಪ್ರಚಾರ ನಡೆಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಇವತ್ತು ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ವಿರುದ್ಧ ಅಬ್ಬರದ ಪ್ರಚಾರ ಮಾಡಿ ಮತಯಾಚನೆ ಮಾಡಿದ್ದಾರೆ.
ಕನಕಪುರ (ರಾಮನಗರ): ಈ ಬಾರಿಯ ವಿಧಾನಸಭೆ ಚನಾವಣೆಯಲ್ಲಿ (Assembly Elections) ತುಂಬಾ ಗಮನ ಸೆಳೆದಿರುವಂತಹ ಕ್ಷೇತ್ರ ಕನಕಪುರ (Kanakapura). ಇದಕ್ಕೆ ಕಾರಣ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕಂದಾಯ ಸಚಿವ ಆರ್ ಅಶೋಕ್ (R Ashok) ಅವರನ್ನು ಬಿಜೆಪಿ (BJP) ಹೈಕಮಾಂಡ್ ಕಣಕ್ಕಿಳಿಸಿರುವುದು.
ಶತಾಯ ಗತಾಯವಾಗಿ ಕಾಂಗ್ರೆಸ್‌ನ (Congress) ಡಿಕೆಶಿ ಅವರನ್ನು ಮಣಿಸಲೇಬೇಕೆಂದು ಪಣತೊಟ್ಟಿರುವ ಕೇಸರಿ ನಾಯಕರು ಆರ್ ಅಶೋಕ್ ವಿರುದ್ಧ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆಗೆ ಇನ್ನ ಎರಡೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇವತ್ತು (ಮೇ 7, ಭಾನುವಾರ) ಅಶೋಕ್ ಪರ ಅಬ್ಬರದ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ನಿಮ್ಮ ಉತ್ಸಾಹ ನೋಡಿದರೆ ಕನಕಪುರದಲ್ಲಿ ಬಿಜೆಪಿಯ ಕಮಲ ಅರಳಲಿದೆ ಎಂದು ಹೇಳಿದ್ದಾರೆ. ಇದು ಕನ್ನಡ ನಾಡಿನ ಭವಿಷ್ಯ ನಿರ್ಧರಿಸುವ ಚುನಾವಣೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಅಶ್ವತ್ಥ್ ನಾರಾಯಣ ಅವರು ಈ ಭಾಗದಲ್ಲಿ ಸಾಕಷ್ಟು ಸಂಘಟನೆ ಮಾಡಿದ್ದಾರೆ. ಇಲ್ಲಿ ಶಕ್ತಿ ಬರಬೇಕಾದರೆ ಸಾಮ್ರಾಟ್ ಅಶೊಕ್ ಅವರೇ ಬರಬೇಕು ಅಂತ ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ಮೋದಿಯವರು ವ್ಯಾಕ್ಸಿನೇಷನ್ ಕೊಟ್ಟಿದ್ದರಿಂದ ನಾವೆಲ್ಲ ಕೋವಿಡ್ ಮುಕ್ತರಾಗಿದ್ದೇವೆ. ಕಾಂಗ್ರೆಸ್‌ನವರು ಲಸಿಕೆ ವಿರುದ್ಧ ಅಪ ಪ್ರಚಾರ ಮಾಡಿದ್ದರು. ಪ್ರವಾಹ ಬಂದಾಗ ಬೆಳೆ ಪರಿಹಾರ ಡಬಲ್ ಪರಿಹಾರ ಕೊಟ್ಟಿದ್ದೇವೆ ಎಂದರು.
ಕಾಂಗ್ರೆಸ್‌ನವರು ಗ್ಯಾರಂಟಿ ಅಂತ ಬರುತ್ತಿದ್ದಾರೆ
ಕಾಂಗ್ರೆಸ್‌ನವರು ಗ್ಯಾರಂಟಿ ಅಂತ ಬರುತ್ತಿದ್ದಾರೆ. ಯಾವುದು ಮಾರಾಟವಾಗುವುದಿಲ್ಲವೋ, ಅದಕ್ಕೆ ಗ್ಯಾರಂಟಿ ಕೊಡುತ್ತಾರೆ. ಕಾಂಗ್ರೆಸ್‌ಗೆ ಈಗ ಗ್ಯಾರಂಟಿ ಇಲ್ಲ. ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಈಗ ಹೇಳುತ್ತಿದ್ದಾರೆ. ನಾವು 2013 ರಲ್ಲಿಯೇ ಕೊಡುತ್ತಿದ್ದೇವೆ. ಅದನ್ನು ಕಡಿಮೆ ಮಾಡಿದವರು ಇವರೇ ಎಂದು ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಂದರೆ ಭ್ರಷ್ಟಾಚಾರ. ಅವರು ಭ್ರಷ್ಟಾಚಾರ ಮಾಡಿ ನಮ್ಮ ಕಡೆ ಬೆರಳು ತೋರುತ್ತಿದ್ದಾರೆ. ಆದರೆ ಮೂರು ಬೆರಳು ಅವರ ಕಡೆ ತೋರಿಸುತ್ತವೆ. ಕಾಂಗ್ರೆಸ್ ಸಮಾಜ ಒಡೆಯುವ ಪಕ್ಷ. ಸಮುದಾಯಗಳನ್ನು ಒಡೆದು ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಸಮಾಜ ಒಡೆಯುವವರು ಬೇಕೊ, ಸಮಾಜ ಒಗ್ಗೂಡಿಸುವ ಬಿಜೆಪಿ ಬೇಕೋ ನೀವೇ ನಿರ್ಧರಿಸಿ ಎಂದಿದ್ದಾರೆ.
ಸಮಾಜವನ್ನೂ ಒಗ್ಗೂಡಿಸುವುದು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಕನಕಪುರದಲ್ಲಿ ಅಶೋಕ್ ಅವರ ಕೈ ಬಲ ಪಡಿಸಿ, ಅಶೋಕ್ ಅವರನ್ನು ಗೆಲ್ಲಿಸಿಕೊಂಡು ಬನ್ನಿ, ಕನಕಪುರ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕೋ, ಅಷ್ಟು ನಾನು ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅಶೋಕ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದೇವೆ. ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮಗಳಲ್ಲಿನ ಜನರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಇಂತಹ ವ್ಯಕ್ತಿ ಇಲ್ಲಿ ಶಾಸಕರಾಗಬೇಕೊ? ಬೇಡ್ವೊ. ನಾನು ಸಿಎಂ ಆದ ತಕ್ಷಣ ವಿದ್ಯಾನಿಧಿ ಯೋಜನೆ ಕೊಟ್ಟಿದ್ದೇನೆ. ಇದರಿಂದ 11 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನ ಎರಡು ದಿನಗಳು ಮಾತ್ರ ಬಾಕಿ ಇದ್ದು, ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೇ 10 ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ.