Udupi News: 6 ಶತಮಾನದ ಹಳೆಯ ವೀರಗಲ್ಲು ಕುಂದಾಪುರ ಸಮೀಪ ಉಳ್ತೂರಿನಲ್ಲಿ ಪತ್ತೆ, ಶಾಸನದಲ್ಲಿ ಏನಿದೆ
Jan 25, 2024 12:36 PM IST
ಉಡುಪಿ ಜಿಲ್ಲೆ ಉಳ್ತೂರಿನಲ್ಲಿ ಕಂಡು ವೀರಗಲ್ಲು.
- Hero Stone ಕರಾವಳಿಯ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಉಳ್ತೂರಿನಲ್ಲಿ ದೊರೆತ ವೀರಗಲ್ಲು ಹಾಗೂ ಶಾಸನ ಅಲ್ಲಿನ ಮಹತ್ವವನ್ನು ತಿಳಿಸುತ್ತವೆ.
- (ವರದಿ: ಹರೀಶ್ ಮಾಂಬಾಡಿ. ಮಂಗಳೂರು)
ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ, ಉಳ್ತೂರು ಕಟ್ಟೆಮನೆಯ ಬೊಬ್ಬರ್ಯ ದೈವಸ್ಥಾನದ ಹಾಡಿಯಲ್ಲಿ ಶಾಸನ ಸಹಿತವಾದ ಒಂದು ವೀರಗಲ್ಲು ಕಂಡುಬಂದಿದೆ ̤ಶಾಸನದಲ್ಲಿ ನೀಡಿರುವ ಕಾಲದ ವಿವರಗಳು, ಕಾಲಮಾನವನ್ನು ನಿರ್ಧರಿಸಲು ಸಾಕಾಗುವುದಿಲ್ಲ. ಶಾಸನದ ಲಿಪಿ ಲಕ್ಷಣದ ಆಧಾರದ ಮೇಲೆ 15-16 ನೇ ಶತಮಾನದ ಶಾಸನವೆಂದು ನಿರ್ಧರಿಸ ಬಹುದಾಗಿದೆ.
ಶಾಸನವನ್ನು ಒಂದು ಆಯತಾಕಾರದ ಶಿಲೆಯ ಮೇಲೆ ಚಿತ್ರಪಟ್ಟಿಕೆ ಸಹಿತವಾಗಿ ಚಿತ್ರಿಸಲಾಗಿದೆ. ಶಾಸನದ ಮೇಲ್ಭಾಗದಲ್ಲಿ ಚಿತ್ರಪಟ್ಟಿಕೆ ಇದ್ದು, ಅದರ ಕೆಳಭಾಗದಲ್ಲಿ ನಾಲ್ಕು ಸಾಲಿನ ಬರಹವನ್ನು ಕಂಡರಿಸಲಾಗಿದೆ. ಶಾಸನವನ್ನು ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಬರೆಯಲಾಗಿದೆ.
ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿ ಅವರು ನೀಡುವ ಮಾಹಿತಿ ಪ್ರಕಾರ, ಶಾಸನ ಶ್ರೀ ಗಣಾಧಿಪತಯೇ ನಮಃ ಎಂದು ಆರಂಭವಾಗಿದ್ದು, ಪ್ರಜೋತ್ಪತ್ತಿ ಸಂವತ್ಸರದ ಶು ೧೦ ಲೂ ಲವಮಾಳುವನ ವಾಳೆಯ (ಹೆಸರು ನಷ್ಟವಾಗಿದೆ) ಹತನಾದ, ಮೃತ ವಾಳೆಯನ ನೆನಪಿಗೆ ಯಾರೋ (ಹೆಸರು ನಷ್ಟವಾಗಿದೆ) ಈ ವೀರಗಲ್ಲನ್ನು ಹಾಕಿಸಿದರು, ಶಾಸನ ಶುಭಮಸ್ತು ಎಂದು ಕೊನೆಯಾಗಿದೆ.
ಶತಮಾನಗಳ ಹಿಂದೆ ಯಾವುದಾದರೂ ಹೊಸತನ್ನು ಇಲ್ಲವೇ ಆ ಭಾಗದ ವಿಶೇಷವನ್ನು ಗುರುತಿಸಲು ವೀರಗಲ್ಲು ಬಳಸಲಾಗುತ್ತಿತ್ತು. ಇದು ಕೂಡ ಆ ಭಾಗದ ಇತಿಹಾಸ, ಮಹತ್ವವನ್ನು ತಿಳಿಸುವ ದಾಖಲೆಯೂ ಹೌದು. ಉತ್ಖನನ ಕಾರ್ಯ ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಕರಾವಳಿ ಭಾಗದಲ್ಲೂ ಮುಂದುವರಿದಿದೆ.
ಚಿತ್ರಪಟ್ಟಿಕೆ ಹೀಗಿದೆ
ಶಾಸನದ ಚಿತ್ರಪಟ್ಟಿಕೆಯ ಮಧ್ಯಭಾಗದಲ್ಲಿ ಒಬ್ಬ ವೀರ ವೀರಭಂಗಿಯಲ್ಲಿ, ತನ್ನ ಬಲಗೈಯಲ್ಲಿ ಖಡ್ಗವನ್ನು ಎತ್ತಿಹಿಡಿದಿದ್ದು, ಎಡಗೈಯಲ್ಲಿ ಗುರಾಣಿಯನ್ನು ಹಿಡಿದು ನಿಂತಿರುವಂತೆ ಪ್ರಧಾನವಾಗಿ ಚಿತ್ರಿಸಲಾಗಿದೆ. ವೀರನ ಎಡಭಾಗದಲ್ಲಿ ಛತ್ರವನ್ನು ಹಿಡಿದು ನಿಂತಿರುವ ವ್ಯಕ್ತಿಯೊಬ್ಬನ ಶಿಲ್ಪವಿದೆ. ಬಲಭಾಗದಲ್ಲಿ ನಿಂತಿರುವ ವ್ಯಕ್ತಿ ತನ್ನ ಎಡಗೈಯ ಕತ್ತಿಯಿಂದ ತನ್ನ ಹೊಟ್ಟೆಯನ್ನು ಇರಿದುಕೊಂಡಿದ್ದು, ಬಲಗೈಯಲ್ಲಿ ಗುರಾಣಿಯಿದೆ. ಈ ಶಿಲ್ಪಗಳ ಮೇಲ್ಭಾಗದಲ್ಲಿ ಚಂದ್ರ ಮತ್ತು ಸೂರ್ಯರ ಉಬ್ಬು ಶಿಲ್ಪಗಳಿವೆ. ಚಿತ್ರಪಟ್ಟಿಕೆ ಒಂದು ನಿರೂಪಣಾತ್ಮಕ ಶಿಲ್ಪವಾಗಿದ್ದು, ಚರಿತ್ರೆಯ ಘಟನಾವಳಿಯೊಂದನ್ನು ಸುಂದರವಾಗಿ ನಿರೂಪಿಸಿದೆ.
ಶಾಸನದ ಮಹತ್ವ
ಶಾಸನದಲ್ಲಿ ನೀಡಿರುವ ಕಾಲದ ವಿವರಗಳು, ಕಾಲಮಾನವನ್ನು ನಿರ್ಧರಿಸಲು ಸಾಕಾಗುವುದಿಲ್ಲ. ಶಾಸನದ ಲಿಪಿ ಲಕ್ಷಣದ ಆಧಾರದ ಮೇಲೆ ೧೫-೧೬ ನೇ ಶತಮಾನದ ಶಾಸನವೆಂದು ನಿರ್ಧರಿಸ ಬಹುದಾಗಿದೆ.
ಶಾಸನೋಕ್ತ ವಿವರಗಳು ಮತ್ತು ಚಿತ್ರಿತ ಶಿಲ್ಪಗಳ ಅಧ್ಯಯನದಿಂದ, ಶಾಸನೋಕ್ತ ಲವ ಆಳುವ ಯಾವುದೋ ಘಟನೆಯಲ್ಲಿ ಮರಣ ಹೊಂದಿದ್ದು, ಆತನ ವಾಳೆರ ಅಥವಾ ವೇಳೆವಾಳಿ ತನ್ನ ಯಜಮಾನನ ಮರಣಾನಂತರ ತನ್ನನ್ನು ತಾನೆ ಇರಿದುಕೊಂಡು ಮರಣ ಹೊಂದಿದ್ದಾನೆಂದು ತಿಳಿಯ ಬಹುದಾಗಿದೆ.
ಹೊಯ್ಸಳ ವೀರಬಲ್ಲಾಳನ ಪಟ್ಟದರಸಿ ಉಳ್ತೂರು ಮೂಲದವಳೇ
ಶಾಸನವು ಗುಳ್ಳಾಡಿಯ ಕೋಟೆಯ ಹೊರಭಾಗದ ಹಾಡಿಯಲ್ಲಿದೆ. ಗುಳ್ಳಾಡಿಯಲ್ಲಿ ಆಳುಪ ರಾಣಿ ಹಾಗೂ ಹೊಯ್ಸಳ 3ನೇ ವೀರ ಬಲ್ಲಾಳನ ಪಟ್ಟದರಸಿ ಚಿಕ್ಕಾಯಿ ತಾಯಿಯ ಶಾಸನವಿದೆ. ಗುಳ್ಳಾಡಿ ಕೋಟೆಯಿಂದ ಆವೃತ್ತವಾದ ಒಂದು ಹಳ್ಳಿಯಾಗಿದ್ದು, ಚಿಕ್ಕಾಯಿ ತಾಯಿಯ ಮಾತೃಮೂಲ ಮನೆಯಾಗಿದ್ದಂತೆ ಕಂಡುಬರುತ್ತದೆ. ಆಳುಪ ಅರಸಿಯರು ತಮ್ಮ ಮಾತೃಮೂಲ ಮನೆಗಳಲ್ಲಿಯೇ ಇದ್ದ ಬಗ್ಗೆ ಆಳುಪ ಶಾಸನಗಳಲ್ಲಿ ಮಾಹಿತಿ ಲಭ್ಯವಿದೆ. ಆದ್ದರಿಂದ, ಶಾಸನೋಕ್ತ ಲವ ಆಳುವ ಈ ರಾಜ ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿದ್ದು ಆತನ ಮರಣಾ ನಂತರ ಆತನ ವೇಳೆವಾಳಿ ತಾನೆ ಇರಿದುಕೊಂಡು ಮೃತಪಟ್ಟಿದ್ದಾನೆ. ಈ ವೀರಗಲ್ಲನ್ನು ಸ್ಥಳೀಯರು ಬೊಬ್ಬರ್ಯನ ಕಲ್ಲು ಎಂದು ಆರಾಧಿಸುತ್ತಿರುವುದು ಅತ್ಯಂತ ಕುತೂಹಲದ ಸಂಗತಿಯಾಗಿದೆ.