ಮಣಿಪಾಲ ಸಮೀಪ ಪೆರಂಪಳ್ಳಿಯಲ್ಲಿ ಡ್ರೈವಿಂಗ್‌ನಲ್ಲಿದ್ದಾಗಲೇ ಚಾಲಕನಿಗೆ ದಿಢೀರ್ ಹೃದಯಾಘಾತ, ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್
Jun 06, 2024 09:48 AM IST
ಮಣಿಪಾಲ ಸಮೀಪ ಪರೆಂಪಳ್ಳಿಯಲ್ಲಿ ಡ್ರೈವಿಂಗ್‌ನಲ್ಲಿದ್ದಾಗಲೇ ಚಾಲಕನಿಗೆ ದಿಢೀರ್ ಹೃದಯಾಘಾತ, ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್ (ಸಾಂಕೇತಿಕ ಚಿತ್ರ)
ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಪೆರಂಪಳ್ಳಿಯಲ್ಲಿ ಡ್ರೈವಿಂಗ್‌ನಲ್ಲಿದ್ದಾಗಲೇ ಚಾಲಕನಿಗೆ ದಿಢೀರ್ ಹೃದಯಾಘಾತವಾಗಿದೆ. ಆತನ ಸಮಯಪ್ರಜ್ಞೆಯಿಂದ ಸಂಭಾವ್ಯ ಭಾರಿ ದುರಂತ ತಪ್ಪಿದ್ದು, ಕಂಬಕ್ಕೆ ಡಿಕ್ಕಿ ಹೊಡೆದ ಶಾಲಾ ಬಸ್‌ನಲ್ಲಿದ್ದ ಮಕ್ಕಳು ಸುರಕ್ಷಿತವಾಗಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಉಡುಪಿ: ಡ್ರೈವಿಂಗ್‌ನಲ್ಲಿದ್ದಾಗಲೇ ಶಾಲಾ ಬಸ್ ಚಾಲಕ ಪೇತ್ರಿ ನಿವಾಸಿ ಆಲ್ವಿನ್ ಡಿಸೋಜ (53) ಅವರಿಗೆ ದಿಢೀರನೆ ಹೃದಯಾಘಾತವಾಗಿದ್ದು, ಕೂಡಲೇ ಅವರು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಲು ಪ್ರಯತ್ನಿಸಿದ್ದರು. ಆಗ ಕಂಬವೊಂದಕ್ಕೆ ಬಸ್ ಡಿಕ್ಕಿಯಾಗಿದೆ. ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬಸ್ ಚಾಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿಯ ಹೊರವಲಯದ ಮಣಿಪಾಲ ಸಮೀಪ ಪೆರಂಪಳ್ಳಿಯಲ್ಲಿ ಈ ಘಟನೆ ನಡೆದಿದೆ. ಬ್ರಹ್ಮಾವರದ ಖಾಸಗಿ ಶಾಲೆಯಿಂದ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲದತ್ತ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತದ್ದ ವೇಳೆ ಈ ಘಟನೆ ನಡೆದಿದೆ. ಚಾಲನೆಯಲ್ಲಿದ್ದಾಗ ಆಲ್ವಿನ್ ಅವರಿಗೆ ಲಘು ಹೃದಯಾಘಾತವಾಗಿದೆ. ಕೂಡಲೇ ಅವರು ವಾಹನವನ್ನು ರಸ್ತೆ ಬದಿ ತಂದಿದ್ದಾರೆ. ಆಗ ಕಂಬವೊಂದಕ್ಕೆ ಬಸ್ ಡಿಕ್ಕಿಯಾಗಿದೆ, ಬಸ್ ನ ಎದುರು ಭಾಗ ಮತ್ತು ಗ್ಲಾಸ್ ಗೆ ಹಾನಿ ಉಂಟಾಗಿದೆ.
ಬಸ್ಸಿನಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರು. ಬಸ್ ಚಾಲಕ ಕೂಡಲೇ ನಿಲ್ಲಿಸಿದ ಪರಿಣಾಮ ಈ ಮಕ್ಕಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ ದೊಡ್ಡ ಅವಘಡವೂ ಸಂಭವಿಸುವ ಸಾಧ್ಯತೆ ಇತ್ತು. ಕೂಡಲೇ ಬಸ್ ನಲ್ಲಿದ್ದ ಸಹಾಯಕರು, ಶಾಲಾ ಮುಖ್ಯಸ್ಥರು, ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಸಹಕಾರದಿಂದ ಬಸ್ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಸಂಸ್ಥೆಯ ಮತ್ತೊಂದು ಬಸ್ ಆಗಮಿಸಿ, ವಿದ್ಯಾರ್ಥಿಗಳನ್ನು ಅವರ ಮನೆಗೆ ತಲುಪಿಸಲಾಗಿದೆ.
ಸುಮಾರು ನಾಲ್ಕು ವರ್ಷಗಳಿಂದ ಚಾಲಕರಾಗಿದ್ದ ಆಲ್ವಿನ್ ಅವರ ಸಮಯಪ್ರಜ್ಞೆಯಿಂದ ದೊಡ್ಡ ಅಪಘಾತವೊಂದು ತಪ್ಪಿದೆ. ಶಾಲಾ ವಾಹನ ಚಾಲಕರಲ್ಲೂ ಹೃದಯಾಘಾತದಂಥ ಸಮಸ್ಯೆಗಳು ತಲೆದೋರುತ್ತಿದ್ದು, ಈ ಕುರಿತು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗಳನ್ನು ನಡೆಸಬೇಕು ಹಾಗೂ ಶಾಲಾ ವಾಹನ ಚಾಲಕರಿಗೆ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ, ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಮಣಿಪಾಲದ ಮನೆಯೊಂದರಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
ಮಣಿಪಾಲದ ಮನೆಯೊಂದರಲ್ಲಿ ಮನೆಯವರು ಇಲ್ಲದಿದ್ದ ವೇಳೆ ಸುಮಾರು 2.8 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಸೂಟ್ ಕೇಸ್ ನಲ್ಲಿಟ್ಟಿದ್ದ ಚಿನ್ನವನ್ನು ಯಾರೋ ಕಳ್ಳರು ಕದ್ದೊಯ್ದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮೀನುಗಾರಿಕೆ ವೇಳೆ ಹೊಳೆಗೆ ಬಿದ್ದು ಮೀನುಗಾರ ಸಾವು
ಮೀನುಗಾರಿಕೆ ವೇಳೆ ಹೊಳೆಗೆ ಬಿದ್ದು ಉದ್ಯಾವರ ಪಿತ್ರೋಡಿ ನಿವಾಸಿ ಗೋವರ್ಧನ (62) ಸಾವನ್ನಪ್ಪಿದ ಘಟನೆ ಉದ್ಯಾವರ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ನಡೆದಿದೆ. ನಾಡದೋಣಿಯಲ್ಲಿ ಲೀಲಾಧರ ಎಂಬವರ ಜತೆ ಅವರು ಹೊಳೆಗೆ ಮೀನು ಹಿಡಿಯಲು ತೆರಳಿದ್ದರು. ನದಿಯಲ್ಲಿ ಕಂತುಬಲೆಯನ್ನು ಹೊಳೆ ನೀರಿಗೆ ಹಾಕಿ, ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಜೋರಾದ ಗಾಳಿ, ಅಲೆಗಳ ಒತ್ತಡದಿಂದ ದೋಣಿ ಅಲುಗಾಡಿದ್ದು, ಗೋವರ್ಧನ ನದಿಗೆ ಬಿದ್ದಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.