ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ; ಬೆಂಗಳೂರು ಮಲ್ಲಸಂದ್ರದ ವಿದ್ಯಾರ್ಥಿನಿ ಭಾವನಾಗೆ 625ಕ್ಕೆ 625, ಮರುಮೌಲ್ಯಮಾಪನದಲ್ಲಿ ಸಿಕ್ಕಿತು 5 ಅಂಕ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಬಳಿಕ ಮರುಮೌಲ್ಯಮಾಪನಕ್ಕೆ ಹಾಕಿದ್ದ ಬೆಂಗಳೂರು ಮಲ್ಲಸಂದ್ರದ ವಿದ್ಯಾರ್ಥಿನಿ ಭಾವನಾಗೆ 625ಕ್ಕೆ 625 ಅಂಕ ಲಭಿಸಿದೆ. ಇದರೊಂದಿಗೆ ಆಕೆಯೂ ಟಾಪರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಮರುಮೌಲ್ಯಮಾಪನದಲ್ಲಿ 5 ಅಂಕ ಭಾವಾನಾ ಅವರಿಗೆ ಸಿಕ್ಕಿತು.
ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ಮೊದಲ ಫಲಿತಾಂಶ ಬಂದ ಬಳಿಕ ಮರುಮೌಲ್ಯಮಾಪನಕ್ಕೆ ಹಾಕಿದ್ದ ವಿದ್ಯಾರ್ಥಿನಿಗೆ 625ಕ್ಕೆ 625 ಅಂಕ ಸಿಕ್ಕಿದೆ. ಮಲ್ಲಸಂದ್ರದ ಬಿ.ಎನ್.ಆರ್. ಶಾಲೆಯ ವಿದ್ಯಾರ್ಥಿನಿ ಭಾವನಾ ಟಿ.ಎಸ್. ಕೂಡ ಈಗ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ಟಾಪರ್.
2023-24ನೇ ಸಾಲಿಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಯ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಪಡೆದಿದ್ದರು. ಇದನ್ನು ಮೊದಲ ಫಲಿತಾಂಶ ಪ್ರಕಟಿಸುವಾಗಲೇ ಘೋಷಿಸಲಾಗಿತ್ತು.
ಭಾವನಾ ಟಿಎಸ್ ಅವರಿಗೆ ಮೊದಲ ಫಲಿತಾಂಶ ಬಂದಾಗ 625ಕ್ಕೆ 620 ಅಂಕ ಮಾತ್ರ ಬಂದಿತ್ತು. ಮರುಮೌಲ್ಯಮಾಪನಕ್ಕೆ ಹಾಕಿದ ನಂತರದಲ್ಲಿ ಅವರಿಗೆ 625ಕ್ಕೆ 625 ಅಂಕ ಖಾತರಿಯಾಗಿದೆ. ಈ ಸಾಧನೆಗೈದ ರಾಜ್ಯದ ಎರಡನೇ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಈಗ ಭಾವನಾ ಪಾತ್ರರಾಗಿದ್ದಾರೆ.
ಸೂರಜ್ ಫೌಂಡೇಶನ್‌ನಿಂದ ವಿದ್ಯಾರ್ಥಿನಿಗೆ ಸನ್ಮಾನ
ಮಲ್ಲಸಂದ್ರದ ಭಾವನಾ ಅವರನ್ನು ಸೂರಜ್ ಫೌಂಡೇಶನ್ ಸನ್ಮಾನಿಸಿದ್ದು, ಫೌಂಡೇಶನ್ ಪರವಾಗಿ ಶಾಸಕ ಮುನಿರಾಜು ಅವರು ವಿದ್ಯಾರ್ಥಿನಿಗೆ 25,000 ರೂಪಾಯಿ ನಗದು ನೀಡಿ ಅಭಿನಂದಿಸಿದರು.
ರಾಜ್ಯಕ್ಕೆ ಹೆಸರು ತಂದಿರುವ ಈ ವಿದ್ಯಾರ್ಥಿನಿಯ ಪಿಯುಸಿಗೆ ಬೇಕಾದ ಪುಸ್ತಕ, ಸಮವಸ್ತ್ರಗಳಿಗೆ, ಪ್ರತಿ ವರ್ಷ ವಿದ್ಯಾಭ್ಯಾಸಕ್ಕೆ ಫೌಂಡೇಶನ್ ಸಂಸ್ಥಾಪಕಿ ಸುಜಾತಾ ಸೂರಜ್ ಅವರು 25,000 ರೂಪಾಯಿ ನಗದು ಹಣ ನೀಡುತ್ತಾರೆ ಎಂದು ಶಾಸಕ ಎಸ್. ಮುನಿರಾಜು ಘೋಷಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಕೂಡ ಬರೆದಿದ್ದೇನೆ. ಅದಲ್ಲದೆ, ಸ್ನೇಹಿತರಿಗೂ ತಿಳಿಸಿ ಆ ಮಗುವಿನ ಮುಂದಿನ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದೇವೆ. ವಿದ್ಯಾರ್ಥಿನಿಗೆ ಎನ್.ಪ್ಲಸ್ ಅಕಾಡೆಮಿ ಕಾಲೇಜಿಗೆ ಪ್ರವೇಶಾತಿ ಪಡೆಯಲು ಅನುವು ಮಾಡಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಕ್ಯಾಬ್ ಚಾಲಕನಾದರೂ ಕೂಡ ಮಗಳ ವಿದ್ಯಾಭ್ಯಾಸಕ್ಕೆ ಕೊರತೆ ಮಾಡಲಿಲ್ಲ, ಅವಳಿಗೆ ಬೇಕಾದ ಪುಸ್ತಕ, ಬಟ್ಟೆ, ಸಮವಸ್ತ್ರ, ಶುಲ್ಕ ಎಲ್ಲವನ್ನೂ ಪೂರೈಸುತ್ತ ಬಂದಿದ್ದೇನೆ. ಅವಳು ಸಹ ಪ್ರತಿ ವರ್ಷವೂ ಕೂಡ ಚೆನ್ನಾಗಿ ಓದಿ ಹೆಚ್ಚು ಅಂಕ ಪಡೆಯುತ್ತಿದ್ದಳು ಎಂದು ವಿದ್ಯಾರ್ಥಿನಿ ತಂದೆ ಸಿದ್ದೇಗೌಡ ಹರ್ಷ ವ್ಯಕ್ತಪಡಿಸಿದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.