logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ; ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ; ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Jayaraj HT Kannada

Sep 14, 2024 08:07 PM IST

google News

ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

    • ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆಯಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ ಈ ಪ್ರಶಸ್ತಿಯು ಒಂದು ಲಕ್ಷ ರೂ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ. (ವರದಿ: ಹರೀಶ ಮಾಂಬಾಡಿ)
ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ
ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

ಉಡುಪಿ: 2023ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ. ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆಯಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಸೆಪ್ಟೆಂಬರ್‌ 14ರ ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಪ್ರಶಸ್ತಿ ಪುರಸ್ಕೃತರ ವಿವರಗಳನ್ನು ನೀಡಿದರು. ನವೆಂಬರ್ ತಿಂಗಳಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಯು ಒಂದು ಲಕ್ಷ ರೂ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ ಎಂದು ಶಿವರಾಮ ಶೆಟ್ಟಿ ಹೇಳಿದ್ದಾರೆ.

2023ನೇ ಸಾಲಿನ ಗೌರವ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ, ಮೂಡಲಪಾಯ ಯಕ್ಷಗಾನ ಭಾಗವತ ನಾರಾಯಣಪ್ಪ ಎಆರ್, ಅರ್ಥಧಾರಿ ಜಬ್ಬಾರ್ ಸಮೋ, ತೆಂಕು ಹಾಗೂ ಬಡಗಿನ ಪ್ರಸಿದ್ಧ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ತೆಂಕುತಿಟ್ಟಿನ ವೇಷಧಾರಿ ಚೆನ್ನಪ್ಪ ಗೌಡ ಸಜೀಪ ಅವರು ಆಯ್ಕೆಗೊಂಡಿದ್ದಾರೆ.

2023ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಹಿರಿಯ ವೇಷಧಾರಿ ರಘುನಾಥ ಶೆಟ್ಟಿ ಬಾಯಾರು, ಪ್ರಸಾದನ ಕಲಾವಿದ ಹಾಗೂ ವೇಷಧಾರಿ ದಿವಾಕರ ದಾಸ ಕಾವಳಕಟ್ಟೆ, ಬಣ್ಣದ ವೇಷಧಾರಿ ಸುಬ್ರಾಯ ಪಾಟಾಳಿ ಸಂಪಾಜೆ, ಬಡಗುತಿಟ್ಟಿನ ವೇಷಧಾರಿ ನರಾಡಿ ಭೋಜರಾಜ ಶೆಟ್ಟಿ, ಬಡಗುತಿಟ್ಟಿನ ಚೆಂಡೆ ವಾದಕ ಸದಾನಂದ ಪ್ರಭು, ಬಡಗುತಿಟ್ಟಿನ ಹಾಸ್ಯಗಾರ ಹೊಳೆಮಗೆ ನಾಗಪ್ಪ ಮರಕಾಲ, ಬಡಗುತಿಟ್ಟಿನ ವೇಷಧಾರಿ ಶಿರಳಗಿ ತಿಮ್ಮಪ್ಪ ಹೆಗಡೆ, ತೆಂಕು - ಬಡಗಿನ ಸ್ತ್ರೀವೇಷಧಾರಿ ಬಾಬು ಕುಲಾಲ್ ಹಳ್ಳಾಡಿ, ಮೂಡಲಪಾಯ ಭಾಗವತ ಶಿವಯ್ಯ, ಮೂಡಲಪಾಯ ಭಾಗವತ ಜೀಯಪ್ಪ ಆಯ್ಕೆಗೊಂಡಿದ್ದಾರೆ.

ದತ್ತಿನಿದಿ ಪ್ರಶಸ್ತಿ

2023ನೇ ಸಾಲಿನ ದತ್ತಿನಿದಿ ಪ್ರಶಸ್ತಿಯೂ ಪ್ರಕಟವಾಗಿದ್ದು, ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಯು ಹೊನ್ನಾವರದ ಭಾಗವತ ಗೋಪಾಲಕೃಷ್ಣ ಶಂಕರ ಭಟ್ ಜೋಗಿಮನೆ ಅವರಿಗೆ ಘೋಷಣೆಯಾಗಿದೆ. 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನವನ್ನು ವಿದ್ವಾನ್ ಗಣಪತಿ ಭಟ್, ಡಾ. ಮನೋರಮಾ ಬಿಎನ್, ಡಾ. ಸತೀಶ್ ಜಿ ನಾಯ್ಕ, ಎಚ್ ಸುಜಯೀಂದ್ರ ಹಂದೆ ಅವರಿಗೆ ಘೋಷಣೆಯಾಗಿದೆ.

ಗೌರವ ಪ್ರಶಸ್ತಿಯು 50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಯಕ್ಷಸಿರಿ ಪ್ರಶಸ್ತಿ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತ ಎನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಕಾಡೆಮಿ ಸದಸ್ಯರಾದ ಸುಧಾಕರ್ ಶೆಟ್ಟಿ ಉಳ್ಳಾಲ್, ವಿದ್ಯಾಧರ ಜಲವಳ್ಳಿ ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ