logo
ಕನ್ನಡ ಸುದ್ದಿ  /  ಕರ್ನಾಟಕ  /  Udupi In Charge: ಉಡುಪಿಯಲ್ಲಿ ನೆಲಕಚ್ಚಿದ ಕಾಂಗ್ರೆಸ್​; ಜಿಲ್ಲೆಯಲ್ಲಿ ​ಪಕ್ಷ ಪುನಶ್ಚೇತನ ಮಾಡುವ ಉಸ್ತುವಾರಿ ಸಚಿವರು ಬರ್ತಾರಾ?

Udupi In Charge: ಉಡುಪಿಯಲ್ಲಿ ನೆಲಕಚ್ಚಿದ ಕಾಂಗ್ರೆಸ್​; ಜಿಲ್ಲೆಯಲ್ಲಿ ​ಪಕ್ಷ ಪುನಶ್ಚೇತನ ಮಾಡುವ ಉಸ್ತುವಾರಿ ಸಚಿವರು ಬರ್ತಾರಾ?

HT Kannada Desk HT Kannada

Jun 02, 2023 07:59 PM IST

google News

ಉಡುಪಿ ಹೆಬ್ಬಾಗಿಲು

    • Udupi In Charge Minister: ಈ ಬಾರಿಯೂ ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಐದರಲ್ಲಿಯೂ ಬಿಜೆಪಿ ಜಯಗಳಿಸಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಇಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಸಹಜವಾಗಿಯೇ ಉಡುಪಿ ಜಿಲ್ಲೆಯ ಯಾರೂ ಕೂಡ ಸಚಿವರಾಗಿಲ್ಲ, ಈ ಕಾರಣದಿಂದ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಹೊರ ಜಿಲ್ಲೆಯವರು‌ ಬರಲೇಬೇಕು.
ಉಡುಪಿ ಹೆಬ್ಬಾಗಿಲು
ಉಡುಪಿ ಹೆಬ್ಬಾಗಿಲು

ಉಡುಪಿ: ಕಳೆದ ಬಾರಿ ಬಿಜೆಪಿ ಸರಕಾರವಿದ್ದಾಗಲೂ ಉಡುಪಿ ಜಿಲ್ಲೆಗೆ ಅದೇ ಜಿಲ್ಲೆಯವರು ಉಸ್ತುವಾರಿ ಸಚಿವರಾಗಿರಲಿಲ್ಲ (Udupi In Charge Minister). ಈ ಬಾರಿಯಂತೂ ಕಾಂಗ್ರೆಸ್ ಸರಕಾರ. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಯಾರಾಗ್ತಾರೆ ಎಂಬುದೇ ಸದ್ಯದ ಕುತೂಹಲ.

ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಬಸವರಾಜ ಬೊಮ್ಮಾಯಿ‌ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆ ಎಸ್. ಅಂಗಾರ ಉಸ್ತುವಾರಿ ಸಚಿವರಾಗಿದ್ದರು. ಈ ಇಬ್ಬರೂ ಉಡುಪಿ ಜಿಲ್ಲೆಗೆ ಹೊರಗಿನವರಾಗಿದ್ದರು. ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಔಟ್ ಆಫ್ ಔಟ್ ಎಲ್ಲರೂ ಬಿಜೆಪಿ ಶಾಸಕರಿದ್ದರೂ ಬಿಜೆಪಿ ಸರಕಾರದ ಅವಧಿಯಲ್ಲಿ ಹೊರಗಿನ ಜಿಲ್ಲೆಯವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿತ್ತು.

ಈ ಬಾರಿಯೂ ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಐದರಲ್ಲಿಯೂ ಬಿಜೆಪಿ ಜಯಗಳಿಸಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಇಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಸಹಜವಾಗಿಯೇ ಉಡುಪಿ ಜಿಲ್ಲೆಯ ಯಾರೂ ಕೂಡ ಸಚಿವರಾಗಿಲ್ಲ, ಈ ಕಾರಣದಿಂದ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಹೊರ ಜಿಲ್ಲೆಯವರು‌ ಬರಲೇಬೇಕು.

ಅಭಿವೃದ್ಧಿ ಕಷ್ಟ:

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕಾಗಿದೆ. ಹೊರ ಜಿಲ್ಲೆಯ ಸಚಿವರುಗಳಿಗೆ ತಮ್ಮ ಜಿಲ್ಲೆಯ ಮತ್ತು ಕ್ಷೇತ್ರದ ಬಗ್ಗೆ ಮೋಹ ಇರುವುದರಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೂ ತೊಂದರೆಯಾಗಲಿದೆ ಎಂಬ ವಾದವಿದೆ.

ಕನಿಷ್ಠ ಪಕ್ಷ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರಾದರೆ, ಅಥವಾ ಕರಾವಳಿ ಭಾಗದವರಾದರೆ, ಜಿಲ್ಲೆಯ ಭೌಗೋಳಿಕ ಸಮಸ್ಯೆಯನ್ನು ಅರಿತು ಇಲ್ಲಿಗೇನಾದರೂ ಮಾಡಬಹುದು ಎಂಬ ನಿರೀಕ್ಷೆ ಮಾಡಬಹುದು. ಆದರೆ ಈ ಬಾರಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಬೆಂಗಳೂರು ನಿವಾಸಿಗಳೇನಾದರೂ ಆದರೆ, ಕೇವಲ ಮೀಟಿಂಗ್ ಮಾಡ್ಲಿಕ್ಕಾಗಿಯೇ ಬರ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಅಲ್ಲದೆ, ಎಲ್ಲರೂ ಬಿಜೆಪಿ ಶಾಸಕರಾದ ಕಾರಣ, ಇಲ್ಲಿಗೆ ಅನುದಾನ ಹೆಚ್ಚು ಸಿಗಲಿಕ್ಕಿಲ್ಲ ಎಂಬ ಅನುಮಾನವೂ ಇದೆ. ಇದು ಒಂದು ವಾದ.

ಪಕ್ಷ ಪುನಶ್ಚೇತನ ಮಾಡುವವರು ಬರ್ತಾರಾ?

ಮಂತ್ರಿಮಂಡಲ ಪುನರ್ರಚನೆಗೂ ಮೊದಲು ಚಿಕ್ಕಮಗಳೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಂಟ್ವಾಳ ಮೂಲದ ಮಂಜುನಾಥ ಭಂಡಾರಿ ಅವರಿಗೆ ಮಂತ್ರಿ ಸ್ಥಾನ ಕೊಟ್ಟು ಉಡುಪಿ ಜಿಲ್ಲೆಗೆ ಉಸ್ತುವಾರಿ ಮಂತ್ರಿಗಳನ್ನಾಗಿಸುತ್ತಾರೆ ಎಂಬ ಮಾತು ಕೇಳಿಬರುತ್ತಿತ್ತು. ಅಂಥದ್ದೇ ಮಾತು ಬಿ.ಕೆ.ಹರಿಪ್ರಸಾದ್ ಅವರು ದ.ಕ.ಜಿಲ್ಲೆಗೆ ಬರ್ತಾರೆ ಎಂದಿತ್ತು. ಅದೀಗ ಹುಸಿಯಾಗಿದೆ. ವಿಧಾನಸಭೆ ಸದಸ್ಯರೇ ಬಹುತೇಕ ಮಂತ್ರಿಗಳಾದ ಕಾರಣ, ಇಲ್ಲಿಗೆ ನಿಕಟವಿರುವ ಶಿವಮೊಗ್ಗ ಜಿಲ್ಲೆಯ ಮಧು ಬಂಗಾರಪ್ಪ ಉಸ್ತುವಾರಿ ಸಚಿವರಾಗಿ ಬರಲಿದ್ದಾರೆ ಎಂಬ ಮಾತುಗಳಿವೆ. ಇದು ಹೌದು ಎಂದಾದರೆ, ಉಡುಪಿ ಜಿಲ್ಲೆಯ ಕಾಂಗ್ರೆಸ್ ಪುನಶ್ಚೇತನವನ್ನು ಮಧು ಬಂಗಾರಪ್ಪ ಮಾಡುವರೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮಾಸ್ ಲೀಡರ್ ಗಳು ಅಗತ್ಯ:

ಸತತ ಎರಡು ಬಾರಿ ಉಡುಪಿಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನೂ ಗೆಲ್ಲಲು ವಿಫಲವಾದ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಸೋತು ಮಲಗಿದೆ. ವಿಧಾನಸಭೆ, ಲೋಕಸಭೆಯ ಸೋಲಿನಿಂದ ಜರ್ಝರಿತವಾಗಿದೆ. ಈಗಿರುವ ಜಿಲ್ಲಾ ಮಟ್ಟದ ಮುಖಂಡರು ಇಡೀ ಜಿಲ್ಲೆಯ ರಾಜಕೀಯವನ್ನು ಕಂಟ್ರೋಲ್ ಗೆ ತೆಗೆದುಕೊಳ್ಳಲು ಶಕ್ತರಲ್ಲ ಎಂಬುದು ಸಾಬೀತಾಗಿದೆ. ಇಲ್ಲಿ ಪ್ರಬಲ ನಾಯಕರು ಎನಿಸಿಕೊಂಡಿದ್ದ ಪ್ರಮೋದ್ ಮಧ್ವರಾಜ್ ಬಿಜೆಪಿ ಪಾಳಯ ಸೇರಿದ ಮೇಲೆ, ಕಾಂಗ್ರೆಸ್ ಮತ್ತೆ ಮೇಲೇಳಲಿಲ್ಲ. ಈ ಬಾರಿ ಚುನಾವಣೆಗೆ ಕಣಕ್ಕಿಳಿದ ಹಿರಿತಲೆಗಳಾದ ವಿನಯಕುಮಾರ್ ಸೊರಕೆ, ಗೋಪಾಲ ಪೂಜಾರಿ ಅವರ ಕ್ಷೇತ್ರಗಳಲ್ಲೇ ಗೆಲ್ಲಲಾಗಲಿಲ್ಲ. ದಶಕಗಳ ಹಿಂದೆ ಇದ್ದ ವಸಂತ ಸಾಲಿಯಾನ್ ರಂಥ ವರ್ಚಸ್ವೀ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿದೆ. ಹೀಗಾಗಿ ಉಡುಪಿ ಉಸ್ತುವಾರಿಯಾಗುವವರಿಗೆ ಪಕ್ಷವನ್ನು ಮೇಲಕ್ಕೆತ್ತುವ ಜವಾಬ್ದಾರಿಯೂ ಸಿಗುತ್ತಾ ಅಥವಾ ನಾಮ್ ಕೇ ವಾಸ್ತೇ ಬಂದು ಮೀಟಿಂಗ್ ಮಾಡಿ ಹೋಗುವವರಷ್ಟೇ ಆಗುತ್ತಾರಾ ಎಂಬುದು ಕುತೂಹಲಕಾರಿ.

ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ