ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ; ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು 1.25 ಲಕ್ಷ ಚಕ್ಕುಲಿ, 3 ಲಕ್ಷ ಉಂಡೆ ತಯಾರಿ
Aug 25, 2024 09:37 AM IST
ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ
- ಉಡುಪಿ ಶ್ರೀಕೃಷ್ಣನ ಸನ್ನಿಧಾನದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ. ಈಗಾಗಲೇ ವಿವಿಧ ಸಾಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ನಾಡಿನಾದ್ಯಂತ ಹಲವಾರು ಭಕ್ತರು ಅಷ್ಟಮಿಯಂದು ಭೇಟಿ ನೀಡುವ ಸಾಧ್ಯತೆ ಇದ್ದು, ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು 1.5ಲಕ್ಷ ಚಕ್ಕಲಿ ಹಾಗೂ 3 ಲಕ್ಷ ಉಂಡೆಗಳನ್ನು ತಯಾರಿಸಲಾಗುತ್ತಿದೆ. (ವರದಿ: ಹರೀಶ್ ಮಾಂಬಾಡಿ)
ಉಡುಪಿ: ಪೊಡವಿಗೊಡೆಯನ ನಾಡು ಎನ್ನಲಾಗುವ ಉಡುಪಿಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿಗೆ ಸಿದ್ಧತೆಗಳು ಅಂತಿಮಗೊಳ್ಳುತ್ತಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಜೋರಾಗಿದೆ. ಉಡುಪಿ ಕೃಷ್ಣನ ಆಲಯದ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಕೃಷ್ಣಾಷ್ಟಮಿ ಆಚರಣೆ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಸಕಲ ಸಿದ್ಧತಾ ಕಾರ್ಯಗಳು ನಡೆಯುತ್ತಿದೆ. ಆ.26ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ, ರಾತ್ರಿ ಅರ್ಘ್ಯಪ್ರದಾನ ನೆರವೇರಲಿದೆ. ರಥಬೀದಿಯಲ್ಲಿ ಆ. 27ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಉಡುಪಿಯಲ್ಲಿ ಹಬ್ಬದ ಕಳೆ ತಂದಿದೆ. ಇಲ್ಲಿನ ಶ್ರೀ ಕೃಷ್ಣಮಠದಲ್ಲಿ ಸೆಳೆಯುವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಉಡುಪಿಗೆ ಆಗಮಿಸುತ್ತಿದ್ದಾರೆ. ರಾಜಾಂಗಣದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನ, ಮಂಥನಗಳಿದ್ದು, ನೂರಾರು ಮಂದಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅಷ್ಟಮಿ ಪ್ರಸಾದ ರೂಪವಾಗಿ ಮಠದಲ್ಲಿ ಸಹಸ್ರಾರು ಉಂಡೆ, ಚಕ್ಕುಲಿಗಳು ಸಿದ್ಧಗೊಳ್ಳುತ್ತಿವೆ. ನುರಿತ ಪಾಕಶಾಸ್ತ್ರಪಟುಗಳು ಇವುಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆ.26ರಂದು ನಡುರಾತ್ರಿ ಶ್ರೀಕೃಷ್ಣನಿಗೆ ಅರ್ಥ್ಯ ಪ್ರದಾನಕ್ಕೆ ಮೊದಲು ನವ ವಿಧದ ಉಂಡೆ (ಅರಳು, ನೆಲಗಡಲೆ, ಗುಂಡಿಟ್ಟು, ಕಡಲೆ, ಎಳ್ಳು, ಗೋಧಿ, ಗೇರು, ಶುಂಠಿ, ಹೆಸರು ಹಿಟ್ಟು) ಚಕ್ಕುಲಿಯನ್ನು ನೈವೇದ್ಯವಾಗಿ ಅರ್ಪಿಸಿದರೆ ಶುದ್ದ ಉಪವಾಸದಲ್ಲಿರುವ ಮುಖ್ಯಪ್ರಾಣ ದೇವರಿಗೆ ಆ.27ರಂದು ಬೆಳಗ್ಗೆ ನೈವೇದ್ಯ ಸಮರ್ಪಣೆಯಾಗಲಿದೆ. ಭಕ್ತರಿಗೆ ಪ್ರಸಾದವಾಗಿ ನೀಡಲು 3 ಲಕ್ಷ ಉಂಡೆ(ಗೋಧಿ ಹಿಟ್ಟು ಹಾಗೂ ಗುಂಡಿಟ್ಟು), 1.25 ಲಕ್ಷಚಕ್ಕುಲಿ ತಯಾರಿ ಪ್ರಗತಿಯಲ್ಲಿದೆ.