ಜೈ ಶ್ರೀಕೃಷ್ಣ: ಬಂದೇ ಬಿಡ್ತು ಕೃಷ್ಣಾಷ್ಟಮಿ; ದಿನಾಂಕ, ಮುಹೂರ್ತ, ಆಚರಣೆ ವಿಧಾನ, ಕಥೆಯ ವಿವರ ಇಲ್ಲಿದೆ
ಕೃಷ್ಣ ಜನ್ಮಾಷ್ಠಮಿ 2024: ಪ್ರತಿ ವರ್ಷ ಕೃಷ್ಣನ ಭಕ್ತರು ಜನ್ಮಾಷ್ಟಮಿ ಆಚರಿಸಲು ಕಾಯುತ್ತಿರುತ್ತಾರೆ. ಈ ಬಾರಿ ಆಗಸ್ಟ್ 26ರಂದು ಗೋಕುಲಾಷ್ಟಮಿ ಆಚರಣೆ ಮಾಡಲಾಗುತ್ತಿದೆ. ಕೃಷ್ಣ ಜನಿಸಿದ್ದು ರಾತ್ರಿ ಆದ್ದರಿಂದ ಭಕ್ತರು ಬಾಲ ಗೋಪಾಲನ ರೂಪದಲ್ಲಿ ರಾತ್ರಿ ವೇಳೆ ಕೃಷ್ಣನಿಗೆ ಪೂಜೆ ಮಾಡುತ್ತಾರೆ. ಅವನಿಗೆ ಇಷ್ಟವಾದ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ.
ಕೃಷ್ಣ ಜನ್ಮಾಷ್ಟಮಿ 2024: ಹಿಂದೂಗಳು ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಕೂಡಾ ಒಂದು. ಪ್ರತಿ ವರ್ಷ ಭಕ್ತರು ಬಹಳ ಅದ್ಧೂರಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಾರೆ. ಕೃಷ್ಣನ ಜನ್ಮದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಶ್ರೀಕೃಷ್ಣನು ವಿಷ್ಣುವಿನ ಎಂಟನೇ ಅವತಾರವಾಗಿ ಜನಿಸಿದನೆಂದು ನಂಬಲಾಗಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣನ ಮಗುವಿನ ರೂಪವನ್ನು ಅಂದರೆ ಲಡ್ಡು ಗೋಪಾಲನನ್ನು ಪೂಜಿಸಲಾಗುತ್ತದೆ. ಈ ದಿನ ಉಪವಾಸ ಆಚರಿಸಲಾಗುತ್ತದೆ. ವಿಧ ವಿಧವಾದ ತಿಂಡಿಗಳನ್ನು ತಯಾರಿಸಿ, ಕೃಷ್ಣನಿಗೆ ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಈ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಯಾವಾಗ ? ಪೂಜೆಯ ವಿಧಾನ ಮತ್ತು ಮಹತ್ವ ತಿಳಿಯೋಣ.
ಈ ಬಾರಿಯ ಶುಭ ಮುಹೂರ್ತ ಯಾವಾಗ?
ಈ ಬಾರಿ 26 ಆಗಸ್ಟ್ 2024, ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. 26 ಆಗಸ್ಟ್ ಬೆಳಗ್ಗೆ03:39 ರಿಂದ ಅಷ್ಟಮಿ ತಿಥಿ ಆರಂಭವಾಗುತ್ತದೆ. ಮರುದಿನ, ಅಂದರೆ 27 ಆಗಸ್ಟ್ ಮಧ್ಯಾಹ್ನ 02:19 ಕ್ಕೆ ಅಷ್ಟಮಿ ತಿಥಿ ಕೊನೆಗೊಳ್ಳುತ್ತದೆ. 26 ಆಗಸ್ಟ್ ಮಧ್ಯಾಹ್ನ 03:55 ರಿಂದ ರೋಹಿಣಿ ನಕ್ಷತ್ರ ಆರಂಭವಾಗುತ್ತದೆ. 27 ಆಗಸ್ಟ್ ಮಧ್ಯಾಹ್ನ 03:38 ಗಂಟೆಗೆ ರೋಹಿಣಿ ನಕ್ಷತ್ರ ಮುಕ್ತಾಯವಾಗುತ್ತದೆ. ಅಂದು ರಾತ್ರಿ 11:41ಕ್ಕೆ ಚಂದ್ರೋದಯವಾಗಲಿದೆ. 27 ಆಗಸ್ಟ್ 27 ಮಧ್ಯರಾತ್ರಿ 12:06 ನಿಂದ 12:51 ವರೆಗೆ ಒಟ್ಟು 45 ನಿಮಿಷಗಳು ನಿಶಿತಾ ಪೂಜಾ ಸಮಯವಿದೆ.
ಜನ್ಮಾಷ್ಟಮಿ ಪೂಜೆಯ ವಿಧಾನ
ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ. ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ ಮತ್ತು ಮನೆಯ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ. ನಂತರ ದೀಪ ಬೆಳಗಬೇಕು. ಈ ದಿನ, ಶ್ರೀಕೃಷ್ಣನ ಮಗುವಿನ ರೂಪವನ್ನು ಅಂದರೆ ಲಡ್ಡು ಗೋಪಾಲನನ್ನು ಪೂಜಿಸಲಾಗುತ್ತದೆ. ಬಾಲ ಗೋಪಾಲವಿಗೆ ಜಲಾಭಿಷೇಕ ಮಾಡಬೇಕು. ಈ ದಿನ ಬಾಲ ಗೋಪಾಲನನ್ನು ತೊಟ್ಟಿಲಲ್ಲಿ ಇಟ್ಟು ತೂಗಲಾಗುತ್ತದೆ. ನಿಮ್ಮ ಶಕ್ತ್ಯಾನುಸಾರ ಗೋಪಾಲನಿಗೆ ಲಡ್ಡುಗಳನ್ನು ಅರ್ಪಿಸಿ ಪೂಜಿಸಬೇಕು.
ಕೃಷ್ಣನು ರಾತ್ರಿ ಜನಿಸಿದ್ದರಿಂದ ಜನ್ಮಾಷ್ಟಮಿಯಂದು ರಾತ್ರಿ ಪೂಜೆ ಬಹಳ ಮುಖ್ಯ. ರಾತ್ರಿ ಕೂಡಾ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಮಾಡಿ ಬಾಲಗೋಪಾಲನಿಗೆ ಸಕ್ಕರೆ ಮಿಠಾಯಿ ಮತ್ತು ಡ್ರೈ ಫ್ರೂಟ್‌ಗಳನ್ನು ಅರ್ಪಿಸಬೇಕು. ಕೊನೆಗೆ ಆರತಿ ಬೆಳಗಬೇಕು. ಇಂದು ಪುಟ್ಟ ಕೃಷ್ಣನನ್ನು ಪಾರಿಜಾತ ಪುಷ್ಪಗಳಿಂದ ಪೂಜಿಸುವುದು ಅತ್ಯಂತ ಮಂಗಳಕರ. ಕೃಷ್ಣಾಷ್ಟಮಿಯ ದಿನ ಉಪವಾಸ ಮಾಡಿ, ಕೃಷ್ಣನನ್ನು ಆರಾಧಿಸಿದರೆ ಪುಣ್ಯ ಫಲ ಲಭಿಸಲಿದೆ. ಈ ದಿನ ಇಸ್ಕಾನ್ ದೇವಾಲಯಗಳಿಗೆ ಭೇಟಿ ನೀಡಿದರೆ ಒಳ್ಳೆಯದು.
ಕೃಷ್ಣ ಜನ್ಮಾಷ್ಟಮಿಯ ಮಹತ್ವ
ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ಶಾಸ್ತ್ರೋಕ್ತವಾಗಿ ಶ್ರೀಕೃಷ್ಣನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ. ಈ ದಿನ ಪೂಜೆ ಮಾಡುವುದರಿಂದ ಮಕ್ಕಳಿಲ್ಲದ ದಂಪತಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಶ್ರೀಕೃಷ್ಣನು ರಾತ್ರಿಯಲ್ಲಿ ಜನಿಸಿದನು. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು, ಶ್ರೀಕೃಷ್ಣನ ಮಗುವಿನ ರೂಪವನ್ನು ರಾತ್ರಿಯಲ್ಲಿ ಮಾತ್ರ ಪೂಜಿಸಲಾಗುತ್ತದೆ. ಕೃಷ್ಣನನ್ನು ಮನೆಗೆ ಆಹ್ವಾನಿಸಲು ಮನೆಯ ಮುಂದೆ ಸಣ್ಣ ಹೆಜ್ಜೆ ಗುರುತುಗಳನ್ನು ಬಿಡಿಸಲಾಗುತ್ತದೆ.
ಈ ದಿನ ಭಕ್ತರು ತಮ್ಮ ಮಕ್ಕಳನ್ನು ಬಾಲ ಗೋಪಾಲರಂತೆ ಸುಂದರವಾಗಿ ಅಲಂಕರಿಸುತ್ತಾರೆ. ಸಂತಾನವಿಲ್ಲದ ದಂಪತಿಗಳು ಕೃಷ್ಣಾಷ್ಟಮಿಯ ದಿನ ಸಂತಾನ ಗೋಪಾಲ ಮಂತ್ರದಿಂದ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಕೃಷ್ಣ ಅಷ್ಟೋತ್ತರ ಪೂಜೆ ಮತ್ತು ಕೃಷ್ಣ ಸಹಸ್ರ ನಾಮ ಪೂಜೆ ಮಾಡುವುದರಿಂದ ಕೌಟುಂಬಿಕ ಅಭಿವೃದ್ಧಿ ಹಾಗೂ ಅಷ್ಟೈಶ್ವರ್ಯವಾಗುತ್ತದೆ. ಕೃಷ್ಣನ ಆರಾಧನೆಯಿಂದ ಸಕಲ ಪಾಪಗಳು ನಿವಾರಣೆಯಾಗುತ್ತದೆ ಎಂದು ಸ್ಕಂದ ಪುರಾಣ ಹೇಳುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವಿಭಾಗ