ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ: 25ಕ್ಕೂ ಅಧಿಕ ದ್ವಿಚಕ್ರ ವಾಹನಗಳ ಅಪಘಾತ - Oil Spill Case
Sep 08, 2024 02:52 PM IST
ರಾಷ್ಟ್ರೀಯ ಹೆದ್ದಾರಿಯಲ್ಲಿ ತೈಲ ಸೋರಿಕೆ: 25ಕ್ಕೂ ಅಧಿಕ ದ್ವಿಚಕ್ರ ವಾಹನಗಳ ಅಪಘಾತ
- Road Accident in Udupi: ಉಡುಪಿಯ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಯಿಲ್ ಸೋರಿಕೆಯಾಗಿದ್ದು, ಸುಮಾರು 25ಕ್ಕೂ ಅಧಿಕ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳ ಸವಾರರು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.
ಉಡುಪಿ: ಉಡುಪಿಯಿಂದ ಬೈಂದೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ಎನ್ನಲಾದ ಘನವಾಹನದಲ್ಲಿದ್ದ ಆಯಿಲ್ ಮಾದರಿ ವಸ್ತು ಸೋರಿಕೆಯಾದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ಗೌರಿ ಗಣೇಶ ಹಬ್ಬದ ದಿನ ರಾತ್ರಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೈಲ ಸೋರಿಕೆಯಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸುಮಾರು 25ಕ್ಕೂ ಅಧಿಕ ಬೈಕುಗಳು ಮತ್ತು ಚತುಷ್ಚಕ್ರ ವಾಹನಗಳ ಸವಾರರು ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ.
ಶುಕ್ರವಾರ ತಡರಾತ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೆಕ್ಕಟ್ಟೆಯಿಂದ ಸಂಗಮವರೆಗೆ ಆಯಿಲ್ ಟ್ಯಾಂಕರ್ನಿಂದ ಆಯಿಲ್ ಸೋರಿಕೆಯಾಗಿದೆ. ಆಯಿಲ್ ಸೋರಿಕೆಯಾದ ಪರಿಣಾಮ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಸಂಚರಿಸಿದ ವಾಹನಗಳ ಸವಾರರಿಗೆ ಆಯಿಲ್ ಬಿದ್ದಿರುವುದು ಗಮನಕ್ಕೆ ಬಾರದೆ ಅದರ ಮೇಲೆ ಚಲಿಸಿದ ಪರಿಣಾಮ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸುಮಾರು ಆರು ಏಳು ಜನ ಅಪಘಾತಕ್ಕೆ ಇದಾಗಿದ್ದು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬಳಿಕ ಎಚ್ಚೆತ್ತುಕೊಂಡ ಸ್ಥಳೀಯರು ಹಾಗೂ ಪೊಲೀಸರು ಮತ್ತು ಅಗ್ನಿಶಾಮಕ ದಳ ಉಡುಪಿಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುವ ಹೆದ್ದಾರಿಯನ್ನು ಬಂದ್ ಮಾಡಿ ಆಯಿಲ್ ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾದರು. ಘಟನೆಗೆ ಸಂಬಂಧಪಟ್ಟಂತೆ ಆಯಿಲ್ ಚೆಲ್ಲಿರುವುದು ಆಯಿಲ್ ಟ್ಯಾಂಕರ್ ನ ಚಾಲಕನ ಗಮನಕ್ಕೂ ಬಂದಿಲ್ಲ ಎನ್ನಲಾಗುತ್ತಿದೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಚಾಲಕರು ಚೇತರಿಸಿಕೊಳ್ಳುತ್ತಿದ್ದಾರೆ.
ಪೊಲೀಸರ ಸಮಯ ಪ್ರಜ್ಞೆ
ಘಟನೆ ಬಗ್ಗೆ ಮಾಹಿತಿಯರಿತು ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ವರದಿಯಾದ ತೆಕ್ಕಟ್ಟೆಯಿಂದ ಹೆಮ್ಮಾಡಿಯವರೆಗೆ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿದರು. ಪೊಲೀಸರಿಗೆ ಹಲವೆಡೆ ಸಾರ್ವಜನಿಕರು ಸಹಕಾರ ನೀಡಿದರು. ಶನಿವಾರ ಮಧ್ಯಾಹ್ನ 12 ಗಂಟೆಯವರೆಗೆ 15 ಕಿಮೀ ವ್ಯಾಪ್ತಿಯಲ್ಲಿ ಒನ್ ವೇ ಮಾಡಲಾಗಿದ್ದು, ಸಂಭಾವ್ಯ ಅಪಘಾತ ತಪ್ಪಿಸಲು ಮುಂಜಾಗೃತಾ ಕ್ರಮ ವಹಿಸಲಾಗಿತ್ತು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ದ್ವಿಚಕ್ರ ವಾಹನ ಸವಾರರು ಹಾಗೂ ಲಘು ವಾಹನಕ್ಕೆ ಸಮಸ್ಯೆಯಾಗುತ್ತಿದ್ದಂತೆ ಅಗ್ನಿಶಾಮಕ ದಳದವರು, ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಂಪನಿಗಳು ಸ್ಥಳಕ್ಕೆ ದೌಡಾಯಿಸಿ ನೀರನ್ನು ಹರಿಸಿ ಸೋರಿಕೆಯಾದ ಸೋಪ್ ಆಯಿಲ್‌ನಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ಮಾಡಲು ಹರಸಾಹಸಪಟ್ಟರು.
ವಾಹನ ವಶಕ್ಕೆ
ಮಂಗಳೂರಿನಿಂದ ಉತ್ತರ ಪ್ರದೇಶಕ್ಕೆ 32 ಟನ್ ಸೋಪ್ ಆಯಿಲ್ (ಪಾಮ್ ಪ್ಯಾಟಿ ಆಸಿಡ್ ಡಿಸ್ಟಿಲೇಟ್) ತುಂಬಿದ್ದ ಬೃಹತ್ ಗಾತ್ರದ ಟ್ಯಾಂಕರ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಟ್ಯಾಂಕರ್ ಅಡಿಭಾಗದಲ್ಲಿ ಆಯಿಲ್ ಸೋರಿಕೆಯಾಗುತ್ತಿದ್ದು, ಅದೇ ವೇಳೆ ಮಳೆಯಿದ್ದ ಕಾರಣ ವಾಹನದ ಕನ್ನಡಿಯಲ್ಲಿ ಚಾಲಕನಿಗೆ ಇದು ಗಮನಕ್ಕೆ ಬಂದಿರಲಿಲ್ಲ.
ಹೀಗಾಗಿ ತೆಕ್ಕಟ್ಟೆಯಿಂದ ಹೆಮ್ಮಾಡಿ ತನಕ ಟ್ಯಾಂಕರ್ ಸಾಗಿದ ದಾರಿಯಲ್ಲಿ ಮತ್ತೆ ಪ್ರಯಾಣಿಸಿದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಬೀಳುವಂತಾಗಿದ್ದು ಲಘು ವಾಹನಗಳು ಬ್ರೇಕ್ ತಗುಲದೆ ಸಣ್ಣಪುಟ್ಟ ಅವಘಡ ಸಂಭವಿಸಿತ್ತು. ತ್ರಾಸಿ ಸಮೀಪ ತೆರಳುವಾಗ ಮಳೆ ನಿಂತಿದ್ದರಿಂದ ಚಾಲಕನಿಗೆ ಹಿಂದೆ ಆಯಿಲ್ ಸೋರಿಕೆ ಕಂಡು ಬಂದಿದ್ದು ತ್ರಾಸಿ ಮರವಂತೆ ಬಳಿ ಟ್ಯಾಂಕರ್ ಬದಿಗಿಟ್ಟು ಸಂಬಂದಪಟ್ಟವರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಟ್ಯಾಂಕರ್ ವಶಕ್ಕೆ ಪಡೆದಿದ್ದಾರೆ.