Upper Bhadra Project: ಭದ್ರಾ ಮೇಲ್ದಂಡೆ ಯೋಜನೆಯ ಅನುದಾನಕ್ಕೆ ಜಲಶಕ್ತಿ ಸಚಿವಾಲಯಕ್ಕೆ ಒತ್ತಾಯಿಸಿದ ಸಿಎಂ ಬೊಮ್ಮಾಯಿ
Jun 18, 2022 09:42 AM IST
ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ವಿವಾದಿತ ಮೇಕೆದಾಟು ಜಲಾಶಯ ಮತ್ತು ಸಮತೋಲನ ಯೋಜನೆಗೆ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ಕೋರಿದರು.
- ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟು ರಾಷ್ಟ್ರೀಯ ಯೋಜನೆಯಾಗಿ ದೊರಕುವ ಅನುದಾನವನ್ನು ಬಿಡುಗಡೆ ಮಾಡಲು ಜಲಶಕ್ತಿ ಮಂತ್ರಾಲಯ ನೇತೃತ್ವ ವಹಿಸಬೇಕೆಂದು ಒತ್ತಾಯಿಸಲಾಗಿದೆ
ನವದೆಹಲಿ: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟು ರಾಷ್ಟ್ರೀಯ ಯೋಜನೆಯಾಗಿ ದೊರಕುವ ಅನುದಾನವನ್ನು ಬಿಡುಗಡೆ ಮಾಡಲು ಜಲಶಕ್ತಿ ಮಂತ್ರಾಲಯ ನೇತೃತ್ವ ವಹಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ನವದೆಹಲಿಯಲ್ಲಿ ಜಿ.ಎಸ್.ಟಿ ಸಚಿವರ ಮಂಡಳಿ ಸಭೆಯ ನಂತರ ಮಾಹಿತಿ ನೀಡಿದ ಸಿಎಂ, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಗೆ ಒಪ್ಪಿಗೆ ನೀಡಲು ಮರು ಒತ್ತಾಯ ಮಾಡಲಾಗಿದೆ ಎಂದರು.
ಸುಪ್ರೀಂ ಕೋರ್ಟ್‌ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಜಲಾಶಯದ ಎತ್ತರದ ಬಗ್ಗೆ ನ್ಯಾಯಮಂಡಳಿ ಆದೇಶದ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಒತ್ತಡ ಹಾಕಬೇಕೆಂಬ ವಿಚಾರಗಳನ್ನು ಸುದೀರ್ಘವಾಗಿ ಚರ್ಚಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸಚಿವರಿಂದಲೂ ಸಕಾರಾತ್ಮಕ ಉತ್ತರ ಸಿಕ್ಕಿದೆ ಎಂದು ಸಿಎಂ ತಿಳಿಸಿದರು.
ಈ ಚರ್ಚೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಹ ಸಿಎಂ ಭೇಟಿ ಮಾಡಿದ್ದಾರೆ. 8,633 ಕೋಟಿ ರೂ.ಗಳನ್ನು ರಾಜ್ಯಕ್ಕೆ 2 ವರ್ಷ ಸಮಯಾವಕಾಶವಿದ್ದರೂ ಬೇಗನೆ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಧನ್ಯವಾದಗಳನ್ನು ಹೇಳಿ ಕೆಲವು ಲೆಕ್ಕಪತ್ರಗಳನ್ನು ಸಮನ್ವಯಗೊಳಿಸಿ ಉಳಿಯುವ ಮೊತ್ತವನ್ನು ಬಿಡುಗಡೆ ಮಾಡಲು ಸಹ ಒತ್ತಾಯಿಸಲಾಗಿದೆ ಎಂದರು.
ಜಿಎಸ್ ಟಿ ಸಚಿವ ಮಂಡಳಿ ಸಭೆಯಲ್ಲಿ 7 ರಾಜ್ಯಗಳ ಮಂತ್ರಿಗಳು ಭಾಗವಹಿಸಿದ್ದಾರೆ. ಇದೆ 27- 28 ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಲಾಗುವುದು. ಆದಷ್ಟೂ ಬೇಗನೆ ಡಿಪಿಆರ್ ಅನುಮೋದನೆಯಾಗಬೇಕೆಂಬ ಕರ್ನಾಟಕದ ನಿಲುವನ್ನು ತಿಳಿಸಿ ಅನುಮೋದನೆ ನೀಡಬೇಕೆಂದು ಮರು ಒತ್ತಾಯಿಸಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆಗೆ ಕ್ರಮ
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಅಗ್ನಿಪಥ್ ಯೋಜನೆ ಕುರಿತು ಪ್ರತಿಭಟನೆ ಗಳಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗುರುವಾರವಷ್ಟೇ, ಡಿಜಿಪಿ, ಎಡಿಜಿಪಿ, ಬೆಂಗಳೂರು ಪೊಲೀಸ್ ಆಯುಕ್ತರು, ಗೃಹ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಗೊಂದಲ, ಗಲಾಟೆಯಾಗಬಾರದು ಎಂದು ಸೂಚನೆ ನೀಡಿದ್ದೇನೆ ಎಂದರು.
ಅಗ್ನಿಪಥ ಯೋಜನೆ ಸದ್ದುದ್ದೇಶದಿಂದ ಆಗಿದೆ. 17 ರಿಂದ 21 ಕಲಿಯುವ ವಯಸ್ಸು. ಮಿಲಿಟರಿ ತರಬೇತಿ ಪಡೆದ ವ್ಯಕ್ತಿತ್ವ ಹೊರಬಂದಾಗ ಅವರಿಗೆ ವಿವಿದೆಡೆ ವಿಫುಲ ಅವಕಾಶ ದೊರೆಯುತ್ತವೆ. ಇಂತಹ ಯಾವುದೇ ರೀತಿಯ ಅವಕಾಶಗಳು ಇರಲಿಲ್ಲ. ಕೇವಲ ಒಂದು ದೃಷ್ಟಿಯಿಂದ ನೋಡದೆ ಒಂದು ದೊಡ್ಡ ತರಬೇತಿ ಪಡೆದ ಯುವ ಸಮೂಹ ಹೊರಬಂದರೆ ಸಮಾಜಕ್ಕೆ ಉಪಯೋಗವಾಗಲಿದೆ ಎಂದರು.