Karnataka Elections: ಉತ್ತರ ಕನ್ನಡದ ಕರಾವಳಿ ಜಿಲ್ಲೆಯಲ್ಲಿ ಬಂದರು, ಪ್ರತಿಭಟನೆ ಪ್ರಮುಖ ವಿಷಯ, ರಿಡ್ಲೆ ಆಮೆಗಳ ನೋವು ಕೇಳುವವರಿಲ್ಲ
May 07, 2023 10:30 AM IST
Karnataka elections: ಉತ್ತರ ಕನ್ನಡದ ಕರಾವಳಿ ಜಿಲ್ಲೆಯಲ್ಲಿ ಬಂದರು, ಪ್ರತಿಭಟನೆ ಪ್ರಮುಖ ವಿಷಯ, ರಿಡ್ಲೆ ಆಮೆಗಳ ನೋವು ಕೇಳುವವರಿಲ್ಲ
ಉತ್ತರ ಕನ್ನಡದ (Uttara Kannada District) ಬಂದರು ಅಭಿವೃದ್ಧಿ ಯೋಜನೆಗಳು, ಬೆಸ್ತರ ಪ್ರತಿಭಟನೆಗಳು ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಬೀರಬಹುದಾದ ಪರಿಣಾಮಗಳ ಜತೆಗೆ ಹೊನ್ನಾವರದ ಮೀನುಗಾರರ ಬದುಕು, ರಿಡ್ಲೆ ಆಮೆಗಳ ಜೀವಜಗತ್ತು, ಪರಿಸರ ವ್ಯವಸ್ಥೆಯ ಚಿತ್ರಣವನ್ನು ಹಿಂದೂಸ್ತಾನ್ ಟೈಮ್ಸ್‌ನ ವರದಿಗಾರ ಗೆರಾರ್ಡ್ ಡಿಸೋಜಾ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಹೊನ್ನಾವರ (ಉತ್ತರ ಕನ್ನಡ): ಸಮುದ್ರದ ತಂಗಾಳಿಯು ಕಡಲ ತೀರದ ಮರಳನ್ನು ಸರಿಸಿ ಕಂಬಗಳ ಮೇಲೆ ಕಟ್ಟಿರುವ ಮೀನುಗಾರಿಕಾ ಬಲೆಗಳ ಮೇಲೆ ಬೀಳುವುದನ್ನು ಕರಾವಳಿ ಕರ್ನಾಟಕದ ಹೊನ್ನಾವರ ತಾಲೂಕಿನ ಕಾಸರಕೋಡು ಎಂಬ ಹಳ್ಳಿಯ ತನ್ನ ಮನೆಯಾಚೆಯ ಕಡಲತೀರದಲ್ಲಿ ಕುಳಿತ ರಾಜೇಶ್ ತಾಂಡಲ್ ನಿರ್ಲಕ್ಷದಿಂದ ನೋಡುತ್ತಿದ್ದಾನೆ.
ಕಳೆದ ಕೆಲವು ವಾರಗಳಿಂದ ಪ್ರತಿ ಬಲೆಯೊಳಗೆ ಆಲೀವ್ ರಿಡ್ಲೆ ಆಮೆಗಳು ನೂರಾರು ಮೊಟ್ಟೆಗಳನ್ನು ಇಡುತ್ತಿವೆ. ಇನ್ನೂ ಉಳಿದಿರುವ 49 ಸಂರಕ್ಷಿತ ಗೂಡುಗಳಿಂದ ರಿಡ್ಲೆ ಆಮೆ ಮರಿಗಳು ಹೊರಬರಬೇಕಿದೆ. ಇವುಗಳ ಕಷ್ಟ ರಾಜೇಶ್ ತಾಂಡೇಲ್‌ಗೆ ಬೇಸರವುಂಟು ಮಾಡಿದೆ.
30 ಮಧ್ಯವಯಸ್ಸಿನ ರಾಜೇಶ್ ಅಲೆಗಳ ಉಬ್ಬರವಿಳಿತ, ದಡಕ್ಕೆ ಅಲೆಗಳ ಅಪ್ಪಳಿಸುವಿಕೆ ನೋಡುತ್ತ ಬೆಳೆದವನು. ಅವನು ಅಥವಾ ಅವನ ಬೆಸ್ತ ಸಮುದಾಯದ ಸದಸ್ಯರು ಪ್ರತಿಬಾರಿಯೂ ಮೀನು ಹಿಡಿಯುವ ರಾಂಪಾನ್ ಬಲೆಯೊಂದಿಗೆ ಸಮುದ್ರಕ್ಕೆ ಹೋಗುತ್ತಾರೆ. ಅಲ್ಲಿ ಸಾರ್ಡೀನ್ ಸಮೂಹವನ್ನು ಗಮನಿಸುತ್ತಾರೆ. ಒಂದೊಂದು ಋತು ಕಳೆಯುವಾಗ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆಗಳನ್ನು ಇಡುತ್ತವೆ. ಆ ಆಮೆ ಮರಿಗಳು ಸಮುದ್ರಕ್ಕೆ ತೆರಳುತ್ತವೆ. ಬೆಸ್ತರ ಕಣ್ಣಮುಂದೆಯೇ ನಡೆಯುವ ಘಟನೆಗಳಿವು.
"ಇತ್ತೀಚಿನ ದಿನಗಳಲ್ಲಿ ಇಡೀ ಕಡಲತೀರವು ಆಳವಿಲ್ಲದ ನೀರಿನಲ್ಲಿ ಸಾರ್ಡೀನ್ (ಬೂತಾಯಿ ಅಥವಾ ಮತ್ತಿ ಮೀನು) ಗಳಿಂದ ತುಂಬಿದ ದಿನಗಳನ್ನು ನಾನು ನೋಡಿದ್ದೇನೆ. ಅವುಗಳನ್ನು ಹೆಚ್ಚು ಕಷ್ಟವಿಲ್ಲದೆ ಬುಟ್ಟಿಯಿಂದ ಬಾಚಿಕೊಳ್ಳಬಹುದು" ಎಂದು ರಾಜೇಶ್ ಹೇಳುತ್ತಾರೆ.
30 ವರ್ಷಗಳ ಹಿಂದೆ ಅರಣ್ಯ ಇಲಾಖೆಯ ಆಮೆ ಸಂರಕ್ಷಣಾ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ಖಾರ್ವಿಗಳ ಸಮುದಾಯವನ್ನು ಅಧಿಕೃತವಾಗಿ ಸಹ ರಕ್ಷಕರು ಎಂದು ಹೆಸರಿಸಲಾಗಿತ್ತು. ಅವರಿಗೆ ಸಮುದ್ರದ ಕುರಿತು ಇರುವ ಜ್ಞಾನ, ರಿಡ್ಲೆ ಆಮೆಗಳ ಕುರಿತು ಇರುವ ಮಾಹಿತಿಯಿಂದಾಗಿ ಅರಣ್ಯ ಇಲಾಖೆ ಇವರನ್ನೂ ಸಂರಕ್ಷಣೆಯ ಸಹ ರಕ್ಷಕರನ್ನಾಗಿ ಮಾಡಿತ್ತು.
ಈಗ ಇವೆಲ್ಲವೂ ಅಪಾಯದಲ್ಲಿದೆ. ಶರಾವತಿ ನದಿಗೆ ಹೊಸ ಬಂದರಿನ ನಿರ್ಮಾಣಕ್ಕಾಗಿ ನಾಲ್ಕು ಕಿ.ಮೀ. ರಸ್ತೆ ನಿರ್ಮಿಸಿರುವುದು ರಿಡ್ಲೆ ಆಮೆಗಳಿಗೆ ಮತ್ತು ಅಲ್ಲಿನ ಪರಿಸರ ವ್ಯವಸ್ಥೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕೆಂಪು ಲ್ಯಾಟರೈಟ್ ಬಂಡೆಗಳ ರಾಶಿಗಳು, ಮಣ್ಣು, ಜಲ್ಲಿಕಲ್ಲುಗಳನ್ನು ಮರಳಿನ ಮೇಲೆ ಅವಸರದಲ್ಲಿ ಸುರಿಯಲಾಗಿದೆ. ಹೈದರಾಬಾದ್‌ನ ಕಂಪನಿಯೊಂದು ಕಾಸರಕೋಡು ಬೀಚ್ ಅನ್ನು ಬಂದರಾಗಿ ಪರಿವರ್ತಿಸಲು ಅರ್ಜಿ ಸಲ್ಲಿಸಿತ್ತು. 2018ರಲ್ಲಿ ಈ ಕಂಪನಿಯ ಮಾಲೀಕರು ಟೊಂಕಾ ಬೀಚಿನ ಹೊರವಲಯದ ಬೆಸ್ತರನ್ನು ಅಲ್ಲಿಂದ ಓಡಿಸುವ ಪ್ರಯತ್ನ ನಡೆಸಿದ್ದರು. ಜನವರಿ 2022 ರಲ್ಲಿ ನೂರಾರು ಟ್ರಕ್‌ಗಳು ಇಲ್ಲಿ ಕಲ್ಲು ಮಣ್ಣು ಸುರಿದವು. ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವುದನ್ನು ವಿರೋಧಿಸಿದ ಗ್ರಾಮಸ್ಥರನ್ನು ಬಂಧಿಸಿ ಕಾಮಗಾರಿ ಪೂರ್ಣಗೊಂಡ ಬಳಿಕ ಬಿಡುಗಡೆ ಮಾಡಲಾಯಿತು.
ಈ ಕಡಲತೀರದಲ್ಲಿ 49 ಆಮೆ ಗೂಡುಕಟ್ಟುವ ತಾಣಗಳಿವೆ. HPPL ಯಾವುದೇ ಅನುಮತಿಗಳಿಲ್ಲದೆ ರಸ್ತೆಯನ್ನು ನಿರ್ಮಿಸಿದೆ. CRZ (ಕರಾವಳಿ ನಿಯಂತ್ರಣ ವಲಯ), ಅಥವಾ ಯಾವುದೇ ಇತರ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ. ಇದರಿಂದ ಆಮೆ ಗೂಡುಗಳ ನಾಶವಾಗಿವೆ. ಆಮೆ ಗೂಡುಗಳು ಕೆಸರು ಮತ್ತು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಅರಣ್ಯ ಇಲಾಖೆ ಮೌನ ವಹಿಸಿದೆ’ ಎಂದು ಹೊನ್ನಾವರದ ನಿವಾಸಿ ಸಾಗರ ಜೀವಶಾಸ್ತ್ರಜ್ಞ ಪ್ರಕಾಶ ಮೇಸ್ತಾ ಹೇಳಿದ್ದಾರೆ.
ಗ್ರಾಮಸ್ಥರ ಕಾಳಜಿಯಿಂದಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಅವರು ಸಲ್ಲಿಸಿದ ಅರ್ಜಿಗಳು ಕೆಲಸ ಮಾಡಿವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಮಗಾರಿಗೆ ತಡೆ ನೀಡಿದೆ.
ಕರಾವಳಿ ಅಭಿವೃದ್ಧಿ
ಇದು ಕಾಸರಕೋಡಿನ ಕತೆಯಲ್ಲ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ -- ಉತ್ತರದ ಕಾರವಾರದಿಂದ ದಕ್ಷಿಣದ ಭಟ್ಕಳದವರೆಗೆ - ರಾಜ್ಯದ ಕರಾವಳಿ ಯೋಜನೆಗಳ ವಿರುದ್ಧ ಮೀನುಗಾರರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. 2015 ರಲ್ಲಿ ಸ್ಥಾಪಿಸಲಾದ ಕರ್ನಾಟಕ ಮಾರಿಟೈಮ್ ಬೋರ್ಡ್ ಹಲವು ಯೋಜನೆಗಳನ್ನು ಮಾಡಿವೆ. ವಿವಿಧ ಹಂತಗಳಲ್ಲಿ ಏಳು ಸಣ್ಣ ಬಂದರುಗಳಿವೆ. ಕಾರವಾರದಲ್ಲಿ ದೊಡ್ಡ ಬಂದರು ಮತ್ತು ಬೇಲೇಕೇರಿ, ತಾದ್ರಿ, ಪಾವಿನಕುರುವ, ಹೊನ್ನಾವರ, ಮಂಕಿಯಲ್ಲಿ ಹೊಸ ಸಣ್ಣ ಬಂದರುಗಳಿವೆ.
ಕಾರವಾರದ ದಕ್ಷಿಣದಲ್ಲಿರುವ ಹುಬ್ಬಳ್ಳಿ ಮತ್ತು ಅಂಕೋಲಾ ನಡುವಿನ ರೈಲು ಮಾರ್ಗವು ಪರಿಸರ ಕಾಳಜಿಯ ಕಾರಣದಿಂದಾಗಿ ಸ್ಥಗಿತಗೊಂಡಿದೆ. ಮುಂಬರುವ ಬಂದರುಗಳು ಮತ್ತು ರಾಜ್ಯದ ಒಳಭಾಗ ಮತ್ತು ಅದರಾಚೆಗಿನ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡಲು ಈ ರೈಲು ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿತ್ತು. ಜೀವವೈವಿಧ್ಯ ತಾಣ ಪಶ್ಚಿಮ ಘಟ್ಟಗಳನ್ನು ರೈಲು ರಸ್ತೆ ಕತ್ತರಿಸುವ ಕಾರಣ ಈ ಹಳಿ ಯೋಜನೆಗೆ ಅನುಮತಿ ನೀಡಲಾಗಿಲ್ಲ.
ಶರಾವತಿಯ ದಂಡೆಯ ಮೇಲಿರುವ ಹೊನ್ನಾವರ ಪಟ್ಟಣವು ಒಂದು ಐತಿಹಾಸಿಕ ಬಂದರು ಆಗಿದ್ದು, ಅರಬ್ಬರಿಂದ, ಪೋರ್ಚುಗೀಸರು, ಡಚ್ಚರು ಮತ್ತು ನಂತರ ಬ್ರಿಟಿಷರಿಂದ ಮಸಾಲೆ ವ್ಯಾಪಾರವು ಉತ್ತುಂಗದಲ್ಲಿದ್ದಾಗ ವ್ಯಾಪಾರ ಅಭಿವೃದ್ಧಿಯ ಕೇಂದ್ರವಾಗಿತ್ತು. ಪೋರ್ಚುಗೀಸ್ ಅಡ್ಮಿರಲ್ ಅಫೊನ್ಸೊ ಡಿ ಅಲ್ಬುಕರ್ಕ್ ಅವರಿಗೆ ಬಂದರು ನಗರವಾದ ಗೋವಾವನ್ನು ಆಕ್ರಮಿಸಲು ಮತ್ತು ವಶಪಡಿಸಿಕೊಳ್ಳಲು ಪ್ರೇರೇಪಿಸಿದ ಪ್ರಿವಟಿರ್ ತಿಮೋಜಾ ನಾಯಕ್ ಹೊನ್ನಾವರದಿಂದ ಬಂದವರು. ಹೊನ್ನಾವರದ ಅವರ ಕೋಟೆಗಳ ಅವಶೇಷಗಳು ಈಗಲೂ ಇವೆ.
"ಹಲವು ವರ್ಷಗಳು ಕಳೆದಿವೆ. ಪೋರ್ಚುಗೀಸ್ ಮತ್ತು ಬ್ರಿಟಿಷರು ಮತ್ತು ನಂತರ ಜಪಾನಿನ ಕಂಪನಿಯ ಪ್ರಯತ್ನಗಳ ಹೊರತಾಗಿಯೂ, ಹೊನ್ನಾವರವು ಎಂದಿಗೂ ಯಶಸ್ವಿ ಬಂದರು ಆಗಲಿಲ್ಲ. ಏಕೆಂದರೆ ಇದು ಹೆಚ್ಚು ಸವೆತದ ಪ್ರದೇಶವಾಗಿದೆ. ಇಲ್ಲಿ ಬಂದರು ಸ್ಥಾಪಿಸಿದ ಪ್ರತಿಯೊಬ್ಬರಿಗೂ ನಷ್ಟವಾಗಿದೆ. ಕರಾವಳಿಯ ಮರಳು ಗಂಟೆಗಟ್ಟಲೆ ಚಲಿಸುತ್ತವೆ. ಮರಳಿನ ದಂಡೆಗಳು ಎಲ್ಲಿವೆ ಎಂದು ಯಾವುದೇ ನ್ಯಾವಿಗೇಟರ್ ಹೇಳಲು ಸಾಧ್ಯವಿಲ್ಲ" ಎಂದು ಮೇಸ್ತಾ ಹೇಳಿದರು.
ಹೊನ್ನಾವರದಲ್ಲಿ, ಮೂರು ಬಂದರುಗಳನ್ನು(ಪಾವಿನ ಕುರ್ವಾ, ಹೊನ್ನಾವರ ಮತ್ತು ಮಂಕಿ ) ನಿರ್ಮಿಸುವ ಪ್ರಸ್ತಾಪವಿದೆ. ಇದರಿಂದ ನೊಂದ ಬೆಸ್ತರು ಕರ್ನಾಟಕದ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಮೀನುಗಾರರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೊರೆ ಹೋಗಿದ್ದರು. ಆಮೆ ಗೂಡುಕಟ್ಟುವ ಸ್ಥಳಗಳ ಮೇಲೆ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಯನ್ನು ನಿಲ್ಲಿಸುವಮತೆ ನ್ಯಾಯಮಂಡಳಿ ಆದೇಶ ನೀಡಿದೆ. ಬಂದರು ಯೋಜನೆಯು ಈಗ ಸಂಖ್ಯೆಯ ದೃಷ್ಟಿಯಿಂದ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಮೀನುಗಾರ ಸಮುದಾಯದ ನಡುವಿನ ವಿವಾದದ ಕೇಂದ್ರಬಿಂದುವೂ ಹೌದು.
ಕಾರವಾರದಲ್ಲಿ, ನ್ಯಾಯಾಲಯ ಮತ್ತು ನ್ಯಾಯಾಧಿಕರಣದ ಮುಂದೆ ಮೀನುಗಾರರು ಮೊದಲು ಮೇಲ್ಮನವಿ ಸಲ್ಲಿಸಿದ್ದು, ಅರಣ್ಯ ತೆರವು ಅಗತ್ಯವಿರುವ ವಿಸ್ತರಣೆ ಯೋಜನೆಗೆ ತಡೆ ನೀಡಲಾಗಿದೆ.
ಸ್ಥಳೀಯರ ಪ್ರತಿಭಟನೆಗಳು
“2019 ರಲ್ಲಿ ಕಾರವಾರ ಬಂದರಿನ ವಿಸ್ತರಣೆಯ ಕೆಲಸವನ್ನು ಸಿಆರ್‌ಝಡ್ ಕ್ಲಿಯರೆನ್ಸ್ ಇಲ್ಲದೆ, ಮಾಲಿನ್ಯ ಮಂಡಳಿಯ ಒಪ್ಪಿಗೆಯಿಲ್ಲದೆ ಪ್ರಾರಂಭಿಸಿದರು. ಸುಮಾರು 10,000 ರಿಂದ 15,000 ಜನರು ಸೇತುವೆಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಆದರೆ ನಮ್ಮ ವಿರೋಧದ ನಡುವೆಯೂ ಅವರು ಕೆಲಸ ಮುಂದುವರೆಸಿದರು' ಎಂದು ಮೀನುಗಾರ ಮತ್ತು ಹೋರಾಟಗಾರ ವಿಕಾಸ್ ತಾಂಡೇಲ್ ಹೇಳಿದರು.
"ನಾವು ಹೈಕೋರ್ಟ್‌ಗೆ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ದಾವೆ) ಸಲ್ಲಿಸಿದೆವು. 2020 ರ ಜನವರಿಯಲ್ಲಿ ಯೋಜನೆಗೆ ತಡೆ ನೀಡಲಾಗಿದೆ. ಈಗ ಕೆಲಸ ನಿಂತಿದೆ. ಕೊರೊನಾ ಸಮಯದಲ್ಲಿಯೂ ಕೆಲಸ ಸ್ಥಗಿತವಾಗಿತ್ತು" ಎಂದು ಅವರು ಮಾಹಿತಿ ನೀಡಿದರು.
ಉತ್ತರ ಕನ್ನಡವು ಪರಿಸರ ಶ್ರೀಮಂತ ಜಿಲ್ಲೆಯಾಗಿದೆ. ಇದು ಉತ್ತರದಲ್ಲಿ ಬೆಳಗಾವಿ, ಪೂರ್ವದಲ್ಲಿಧಾರವಾಡ ಮತ್ತು ಹಾವೇರಿ ಮತ್ತು ಶಿವಮೊಗ್ಗ ಮತ್ತು ದಕ್ಷಿಣದಲ್ಲಿ ಉಡುಪಿಯ ಗಡಿಯನ್ನು ಹೊಂದಿರುವ ಬೃಹತ್ ಭೌಗೋಳಿಕ ಪ್ರದೇಶ ಇದಾಗಿದೆ. ಅರೇಬಿಯನ್ ಸಮುದ್ರದ ಅಲೆಗಳು ಪಶ್ಚಿಮ ಘಟ್ಟಗಳ ಹೊರಭಾಗಕ್ಕೆ ಅಪ್ಪಳಿಸುತ್ತವೆ. ಇದು ಸಸ್ಯ ಮತ್ತು ಪ್ರಾಣಿಗಳ ಸಮೃದ್ಧ ಮತ್ತು ವೈವಿಧ್ಯಮಯ ಲೋಕವಾಗಿದೆ. ಭೌಗೋಳಿಕವಾಗಿ ವಿಶಾಲವಾಗಿದ್ದರೂ, ಜಿಲ್ಲೆಯು ಕೇವಲ ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಸಿರಸಿ ಮತ್ತು ಯಲ್ಲಾಪುರವೆಂಬ ಆರು ವಿಧಾನಸಭಾ ಕ್ಷೇತ್ರ ಹೊಂದಿದೆ.
2018ರಲ್ಲಿ ಹೊನ್ನಾವರ ತಾಲೂಕಿನ ಮೀನುಗಾರ ಸಮುದಾಯದ ಪರೇಶ್ ಮೇಸ್ತ ಎಂಬ ಯುವಕನ ಕೊಲೆಯಾಗಿತ್ತು. ಇದು ಕೋಮು ಹತ್ಯೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಈ ಘಟನೆ ಹೊನ್ನಾವರ ತಾಲೂಕಿನ ವಾತಾವರಣವನ್ನೇ ಕಲಕಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಕೇಂದ್ರೀಯ ತನಿಖಾ ದಳ, ನಾಲ್ಕು ವರ್ಷಗಳ ತನಿಖೆಯ ನಂತರ ಇದೊಂದು ಆಕಸ್ಮಿಕ ಸಾವು ಎಂದು ಹೇಳಿತ್ತು.
ಆದರೆ ಈ ವಿಷಯವು ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ಗೆಲ್ಲಲು ಭಾರತೀಯ ಜನತಾ ಪಕ್ಷಕ್ಕೆ ಸಹಾಯ ಮಾಡಿತು. ಅವುಗಳಲ್ಲಿ ಕಾರವಾರ, ಕುಮಟಾ ಮತ್ತು ಭಟ್ಕಳ (ಹೊನ್ನಾವರವು ಕುಮಟಾ ಮತ್ತು ಭಟ್ಕಳದಲ್ಲಿ ವಿಭಜನೆಯಾಗಿದೆ) ಕರಾವಳಿ ಕ್ಷೇತ್ರಗಳಾಗಿವೆ.
ಪರೇಶ್ ಮೇಸ್ತಾ ಅವರ ನಿಧನದಿಂದ ಬಿಜೆಪಿಗೆ ಭಾರಿ ಬಹುಮತ ದೊರಕಿತು. ಸಿಬಿಐ ಕೂಡ ಇದೊಂದು ಆಕಸ್ಮಿಕ ಸಾವು, ಯಾರ ಕೈವಾಡವೂ ಇಲ್ಲ ಎಂದು ತಿಳಿಸಿತ್ತು. ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ) ಮೀನುಗಾರರ ಮತಗಳ ಬಲದಿಂದ ಗೆಲ್ಲುತ್ತಿದ್ದರು. ಆದರೆ ಈಗ ಅವರು ನಮ್ಮ ಮೇಲೆ ಆರೋಪ ಹೊರಿಸಿ ದೇಶವಿರೋಧಿ ಹಣೆಪಟ್ಟಿ ಕಟ್ಟಿದ್ದಾರೆ. ನಾವು ಬಂದರು ಯೋಜನೆಗಳನ್ನು ವಿರೋಧಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಹೋರಾಟಗಾರ ವಿಕಾಸ್ ತಾಂಡೇಲ್ ಹೇಳಿದ್ದಾರೆ.
"ಮೀನುಗಾರರು ಬಿಜೆಪಿಯ ಬೆನ್ನೆಲುಬಾಗಿದ್ದರು. ಆದರೆ ಬಂದರು ಯೋಜನೆಯಿಂದಾಗಿ ಜನರು ತಮ್ಮ ಆಯ್ಕೆಯನ್ನು ಬದಲಿಸಿದ್ದಾರೆ. ಬಂದರುಗಳ ಕಾರಣದಿಂದ ಅನೇಕರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ'' ಎಂದು ಅವರು ಹೇಳಿದರು.
ಮೀನುಗಾರ ಗ್ರಾಮಗಳನ್ನು ಒಳಗೊಂಡಿರುವ ಭಟ್ಕಳ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿಯ ಸುನೀಲ್ ನಾಯ್ಕ ಪ್ರತಿನಿಧಿಸುತ್ತಿದ್ದಾರೆ. ಅವರು 2013 ರಿಂದ 2018 ರವರೆಗೆ ಶಾಸಕರಾಗಿದ್ದ ಕಾಂಗ್ರೆಸ್‌ನ ಎಂಎಸ್ ವೈದ್ಯ ವಿರುದ್ಧ ಸುಮಾರು 5,000 ಮತಗಳಿಂದ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. 2018 ರ ಕಚ್ಚಾ ಬಾಂಬ್ ಹತ್ಯೆ ಯತ್ನದಿಂದ ಬದುಕುಳಿದ ವೈದ್ಯ ಈಗ ನಾಯಕ್ ವಿರುದ್ಧ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.
ಕಾರವಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ಎರಡನೇ ಅವಧಿಗೆ ಸ್ಪರ್ಧಿಸಿದ್ದಾರೆ. 2018 ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಬಳಿಕ ಮೂರನೇ ಸ್ಥಾನ ಪಡೆದಿದ್ದ ಸತೀಶ್ ಸೈಲ್ ಅವರು ಇದೀಗ ಕಾಂಗ್ರೆಸ್ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಳ್ಳುವ ಕನಸಿನಲ್ಲಿದ್ದಾರೆ.
ಮೀನುಗಾರರ ಪ್ರತಿಭಟನೆಯ ಪರಿಣಾಮವನ್ನು ಕಡಿಮೆಮಾಡಲು "ಇದು ರಾಜಕೀಯ ಪ್ರೇರಿತ" ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್ ಹಣೆಪಟ್ಟಿ ಕಟ್ಟಿದ್ದರು.
'ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿವೆ. ಈ ಯೋಜನೆಗಳಿಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಡಿಗಲ್ಲು ಹಾಕಲಾಗಿತ್ತು. ಆದರೆ ಈಗ ನಾವು ಅಧಿಕಾರಕ್ಕೆ ಬಂದು ಕಾಮಗಾರಿ ಆರಂಭಿಸಿದಾಗ ಮಾತ್ರ ಪ್ರತಿಭಟನೆ ಆರಂಭಿಸಿದರು. ನಮ್ಮ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪ್ರತಿಭಟನೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ನಾಯಕ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದರು.
"ಐದು ವರ್ಷಗಳ ಬಿಜೆಪಿಯ ದುರಾಡಳಿತದ ನಂತರ ಕಾಂಗ್ರೆಸ್ ಸ್ಥಾನವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅವರ ಸ್ಥಳೀಯ ಶಾಸಕರು ಅಹಂಕಾರಿಗಳು. ಅವರು ಮತದಾರರ ಕುರಿತು ಕಾಳಜಿ ಹೊಂದಿಲ್ಲ ಎಂದು ಸಾಬೀತುಪಡಿಸದ್ದಾರೆ" ಎಂದು ಹೆಸರು ಹೇಳಲು ಇಚ್ಚಿಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಟಿಕೆಟ್ ನೀಡುವ ವಿಚಾರದಲ್ಲಿ ಕೆಲವು ಗೊಂದಲಗಳ ನಡುವೆಯೂ ಬಿಜೆಪಿಯನ್ನು ಸೋಲಿಸಲು ಜನರು ನಮ್ಮ ಅಭ್ಯರ್ಥಿಯ ಬೆನ್ನಿಗೆ ನಿಲ್ಲುವ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರು.
ಬಂದರುಗಳು ತಮ್ಮ ಜೀವನೋಪಾಯದ ದಾರಿಯನ್ನು ಕಸಿದುಕೊಳ್ಳಲಿದೆ ಎಂಬ ಭಯ ಮೀನುಗಾರರದ್ದು.
"ಒಮ್ಮೆ ಬಂದರು ನಿರ್ಮಾಣಕ್ಕೆ ಅನುಮತಿ ದೊರಕಿದರೆ ಅವರು ನಮ್ಮನ್ನು ಸ್ಥಳಾಂತರಿಸುತ್ತಾರೆ. ಮೀನುಗಾರಿಕೆ ಜೆಟ್ಟಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಹೇಳುತ್ತಾರೆ. ಕೆಲವು ಕಿಲೋಮೀಟರ್ ದೂರದಲ್ಲಿರುವ ನೈಸರ್ಗಿಕ ಬಂದರು ಅಲ್ಲದ ಸ್ಥಳದಲ್ಲಿ ನಮ್ಮ ದೋಣಿಗಳು ಅಪಾಯದಲ್ಲಿ ಸಿಲುಕಲಿವೆ" ಎಂದು ಅಲ್ಲಿನ ಸಾಂಪ್ರದಾಯಿಕ ಬೆಸ್ತ ಉದಯ್ ತಾಂಡೇಲ್ ಹೇಳುತ್ತಾರೆ.
ಹೊನ್ನಾವರದಲ್ಲಿ, ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕಾ ಭೂಮಿ ಮತ್ತು ಮೀನು ಒಣಗಿಸುವ ಭೂಮಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ಮೂರ್ಖತನದಿಂದ ಆರೋಪಿಸಲಾಗುತ್ತಿದೆ. ಆದರೆ, ಇದು ಮರಳಿನ ಪ್ರದೇಶಗಳು ಪ್ರವಾಹದಿಂದ ಬದಲಾಗುತ್ತಿರುವುದರಿಂದ ನಡೆಯುವ ವಿದ್ಯಮಾನ.
"ಇದು ದೇಶದ ಶ್ರೀಮಂತ ಮೀನುಗಾರಿಕ ಪ್ರದೇಶ. ಇಲ್ಲಿ ಟ್ರಕ್ ಲೋಡ್ ಮೂಲಕ ಮೀನು ಹಿಡಿಯಬಹುದು. ತೀರಕ್ಕೆ ಬಹಳ ಹತ್ತಿರದಲ್ಲಿದೆ. ಇದು ಸಾವಿರಾರು ಜನರಿಗೆ ಉದ್ಯೋಗ ನೀಡುತ್ತದೆ. ಆದರೆ, ಬಂದರು ಎಷ್ಟು ಜನರಿಗೆ ಉದ್ಯೋಗ ನೀಡುತ್ತದೆ" ಎಂದು ರಾಜೇಶ್ ತಾಂಡೇಲ್ ಪ್ರಶ್ನಿಸುತ್ತಾರೆ.
ಬಿಜೆಪಿಯನ್ನು ಸೋಲಿಸುವುದು ನಮಗೆ ಮುಖ್ಯವಾಗಿದೆ. ಬಿಜೆಪಿಯೇತರ ಸರ್ಕಾರವಿದ್ದರೆ ಯೋಜನೆಗಳ ವಿರುದ್ಧ ಹೋರಾಡಲು ಅವಕಾಶ ನೀಡುತ್ತದೆ. ಈಗಿನ ಆಡಳಿತವು ವಿರೋಧ ಬಂದರು ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ. ಹೀಗಾಗಿ ಈ ನಿಲುವು ನಮಗೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಮೀನುಗಾರರ ಪ್ರತಿಭಟನೆಯು ಮತದಾನದ ಪ್ರವೃತ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆದರೆ, ಇದರ ಪರಿಣಾಮ ಸೀಮಿತವಾಗಿರಬಹುದು. "ಒಂದು ಹಂತದಲ್ಲಿ ಬಿಜೆಪಿ ಹಿಂದೆ ಬಿದ್ದಂತೆ ತೋರುತ್ತಿತ್ತು. ಪ್ರತಿಭಟನೆಗಳು ಹೊನ್ನಾವರದಲ್ಲಿ ಖಂಡಿತಾ ಪರಿಣಾಮ ಬೀರಲಿದೆ. ಆದರೆ, ಕಾರವಾರದಲ್ಲಿ ಮತಗಳು ವಿಭಜನೆಯಾಗಲಿದೆ" ಎಂದು ಸ್ಥಳೀಯ ಪತ್ರಕರ್ತರೊಬ್ಬರು (ಹೆಸರು ಪ್ರಕಟಿಸಲು ನಿರಾಕರಿಸಿದ) ಹೇಳಿದ್ದಾರೆ.
ಕಾರವಾರದಲ್ಲಿ ಮೀನುಗಾರರ 200,000 ಜನಸಂಖ್ಯೆ ಇದೆ. ಇವರಲ್ಲಿ 40,000 ಜನರು ಮತದಾರರು.
"ಬಿಜೆಪಿಯು ವಿರೋಧ ಪಕ್ಷದಲ್ಲಿದ್ದಾಗ ತಮ್ಮನ್ನು ಬೆಂಬಲಿಸಿತು. ಆದರೆ ಅಧಿಕಾರಕ್ಕೆ ಬಂದ ತಕ್ಷಣ ಅಭಿವೃದ್ಧಿ ಪರವಾಗಿದೆ" ಎಂದು ಮೀನುಗಾರರು ಆರೋಪಿಸಿದ್ದಾರೆ. "ವಿರೋಧ ಪಕ್ಷದಲ್ಲಿದ್ದಾಗ ಅವರು (ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ) ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದರು. ಆದರೆ ಅವರು ಸರ್ಕಾರಕ್ಕೆ ಸೇರಿದಾಗ ಅವರು ‘ಅಭಿವೃದ್ಧಿ ಪರ’ರಾದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ, ಈಗಲೂ ನಾವು ಬಂದರು ಯೋಜನೆಯನ್ನು ವಿರೋಧಿಸುತ್ತೇವೆ ಎಂದು ಅವರಿಗೆ ನೆನಪಿಸಿದ್ದೇವೆ" ಎಂದು ವಿಕಾಸ್ ತಾಂಡೇಲ್ ಹೇಳಿದ್ದಾರೆ.
ಮೂಲ ಲೇಖನ: ಗೆರಾರ್ಡ್ ಡಿಸೋಜಾ
ಕನ್ನಡಕ್ಕೆ ಅನುವಾದ: ಪ್ರವೀಣ್ ಚಂದ್ರ ಪುತ್ತೂರು
ಮೂಲ ಲೇಖನ ಓದಲು ಲಿಂಕ್ ಇಲ್ಲಿದೆ.